ತಂಡ ಗೆಲ್ಲಬೇಕು ಎನ್ನುವುದಕ್ಕಿಂತಲೂ ಕ್ರೀಡೆ ಗೆಲ್ಲಬೇಕು ಎನ್ನುವ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ನಾಗೇಶ್ ಹೇಳಿದರು.
ಫರಂಗಿಪೇಟೆಯ ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ಕಿನಾರೆಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಯುನೈಟೆಡ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇರುತ್ತದೆ. ತಂಡದಲ್ಲಿ ಹೊಂದಾಣಿಕೆ ಮತ್ತು ಸಹಕಾರ ಭಾವನೆಯಿಂದ ಆಟವಾಡಿದಾಗ ಗೆಲುವು ತಮ್ಮದಾಗಿಸಿಕೊಳ್ಳಲು ಸಾಧ್ಯವಿದೆ ಎಂದರು.
ಯುನೈಟೆಡ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯಿಂದ ಶಾಂತಿ ಸಾಮರಸ್ಯವನ್ನು ಬೆಳೆಸಲು ಸಾಧ್ಯವಿದೆ. ಈ ಭಾಗದ ಯುವಕರಲ್ಲಿನ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಗುತ್ತಿದೆ ಎಂದರು.
ಅರ್ಜುನ್ ವೆಡ್ಸ್ ಅಮೃತಾ ಚಿತ್ರದ ನಾಯಕ ನಟ ಅನುಪ್ ಸಾಗರ್ ಹಾಗೂ ನಟಿ ಆರಾಧ್ಯ ಶೆಟ್ಟಿ ಉದ್ಘಾಟನಾ ಸಮಾರಂಭದ ಆಕರ್ಷಣೆಯಾಗಿ ಗಮನ ಸೆಳೆದರು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರುಷೋತ್ತಮ ಕೆ. ಭಂಡಾರಿ, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಸೀರ್ ಪೇರಿಮಾರ್, ಸದಸ್ಯ ರಮ್ಲಾನ್, ಕ್ಲಬ್‌ನ ಉಪಾಧ್ಯಕ್ಷ ಆಸೀಫ್ ಮೇಲ್ಮನೆ, ಪ್ರಮುಖರಾದ ನಝೀರ್, ಮುಸ್ತಾಫ, ಇಮ್ತಿಯಾಝ್, ಸಲೀಂ ತೆಲ್ಲಿ, ಲತೀಫ್ ಕುಂಜತ್‌ಕಲ್, ಶಾರುಖ್, ತಾಸೀಲ್‌ವಿ.ಎಚ್., ಮನ್ಸೂರ್ ಮೇಲ್ಮನೆ ಹಾಜರಿದ್ದರು. ಅಶ್ರಫ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.