ನಿಮ್ಮ ಧ್ವನಿ

ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ದ.ಕ. ಜಿಲ್ಲೆ ಚಲನಶೀಲ

ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ದ.ಕ. ಜಿಲ್ಲೆ ಈಗ ಮುಂಚೂಣಿಯತ್ತ ಸಾಗುತ್ತಿದೆ.  ಪಶ್ಚಿಮ ವಾಹಿನಿ ಯೋಜನೆ ಅಭಿವೃದ್ಧಿಯ ಮೌಲ್ಯ ಮಾಪನದಲ್ಲಿ ಜಿಲ್ಲೆಗೆ ಮತ್ತಷ್ಟು ಮೌಲ್ಯವನ್ನು ಒದಗಿಸಲಿದೆ

ಲೇಖನ: ಶಬೀರ್ ಸಿದ್ದಕಟ್ಟೆ

ಅಭಿವೃದ್ಧಿಯ ಮೌಲ್ಯ ಮಾಪನ ಇದು ಒಂದು ಅಭಿವೃದ್ಧಿಯ ಚಲನೆಗೆ ಬಹಳ ಅವಶ್ಯವಾಗಿರುವ ಅಂಶ. ಅಭಿವೃದ್ಧಿಯ ಮೌಲ್ಯ ಮಾಪನ ಇಲ್ಲದೆ ಹೋದಾಗ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿಯುವುದು ಕಷ್ಟವಾಗುತ್ತದೆ.  ಅಭಿವೃದ್ಧಿಯನ್ನು ತಿಳಿದುಕೊಳ್ಳಲು ಮೌಲ್ಯಮಾಪನ ಬಹಳ ಅವಶ್ಯಕವಾಗಿರುತ್ತದೆ.

ಅಭಿವೃದ್ಧಿಯ ಮೌಲ್ಯ ಮಾಪನದ ಅಂಶಗಳಾವುವು? ಈ ಪ್ರಶ್ನೆ ನಮ್ಮ ಮುಂದೆ ಬಂದು  ನಿಲ್ಲುತ್ತದೆ. ಸಹಜವಾಗಿ ಆರ್ಥಿಕತೆ, ಶಕ್ತಿ, ರಸ್ತೆಗಳು ಶಿಕ್ಷಣ ಮತ್ತು ಆರೋಗ್ಯ ಇದು ಅಭಿವೃದ್ಧಿಯ ದ್ಯೋತಕವಾಗಿ ನಮ್ಮ ಮುಂದೆ ಕಾಣ ಸಿಗುತ್ತದೆ.

ಈ ದೃಷ್ಟಿಯಲ್ಲಿ ದ.ಕ. ಜಿಲ್ಲೆಯ ಅಭಿವೃದ್ಧಿಯ ಮೌಲ್ಯ ಮಾಪನ ಮಾಡುವುದಾದರೆ. ಜಿಲ್ಲೆ ಈ ಎಲ್ಲಾ ಕ್ಷೇತ್ರದಲ್ಲಿ ಹೊಸಗತಿಯತ್ತ ಸಾಗುತ್ತಿದೆ.  ಜಿಲ್ಲೆಯ ಆರ್ಥಿಕತೆ  ಇತರ ಎಲ್ಲಾ ಜಿಲ್ಲೆಗಳಿಗಿಂತ ಸಧೃಡವಾಗಿದೆ. ಉತ್ತಮ ರಸ್ತೆಗಳು ನಿರ್ಮಾಣ ಗೊಂಡಿವೆ.  ವೈದ್ಯಕೀಯ ಕ್ಷೇತ್ರದಲ್ಲಿ ಜಿಲ್ಲೆ ರಾಷ್ಟ್ರ, ಅಂತಾರಾಷ್ಟ್ರೀಯ ಮಾನ್ಯತೆಗಳಿಸಿಕೊಂಡಿದೆ ಇನ್ನು ಶಿಕ್ಷಣದ ಹಬ್ ಎಂದು ಎನಿಸಿಕೊಂಡಿರುವ ದ.ಕ. ಜಿಲ್ಲೆ ಶಿಕ್ಷಣದಲ್ಲಿ ಬಹಳ ಮುಂದುವರಿದಿದೆ.

ಇಲ್ಲಿರುವ ಒಂದು ಅಂಶವನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಜಿಲ್ಲೆಯ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ಸರ್ಕಾರದ ನೀತಿ ನಿರೂಪಕರದ್ದು. ಈ ದೆಸೆಯಲ್ಲಿ ಪ್ರಸ್ತುತ ರಾಜ್ಯ ಸರ್ಕಾರದ ನೀತಿ ನಿರೂಪಣೆ ಜಿಲ್ಲೆಯ ಅಭಿವೃದ್ಧಿಗೆ ಬಹಳ ಪೂರಕವಾಗಿದೆ.  ಅದು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಹೊಸ ದಿಕ್ಕಿನಲ್ಲಿ ಯೋಚಿಸುವಂತೆ ಪ್ರೇರೆಪಿಸಿದೆ.  ನೀತಿ ನಿರೂಪಣೆ ಗಳು ತಪ್ಪಿದಾಗ ಅದು ಆಯಾ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಈ ನೆಲೆಯಲ್ಲಿ ಸರ್ಕಾರದ ಪೂರಕ ಕ್ರಮಗಳು ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗೋತ್ಕರ್ಷ ನೀಡಿದೆ ಎನ್ನಬಹುದು.

ನೀರು ಮುಂದಿನ ಅಭಿವೃದ್ಧಿಗೆ ಪೂರಕವಾದ ಅಂಶ. ಈ ದೆಸೆಯಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪಶ್ಚಿಮ ವಾಹಿನಿ ಎಂಬ ಬಹು ಮಹತ್ತ್ವದ ಯೋಜನೆಯನ್ನು  ಫೋಷಿಸಿದೆ.  ಇದಕ್ಕಾಗಿ 100 ಕೋಟಿಯ ಅನುದಾನವನ್ನು ಮೀಸಲು ಇರಿಸಿದೆ.  ಇದು ಜಿಲ್ಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ದೃಷ್ಟಿಯಲ್ಲಿ ಕ್ರಾಂತಿಕಾರಕ ಹೆಜ್ಜೆ. ಇದು ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗವನ್ನು ನೀಡುವುದರಲ್ಲಿ ಸಂಶಯ ಇಲ್ಲ.  ಯಾಕೆಂದರೆ ನೀರು ಭವಿಷ್ಯದ ಬೆಳವಣಿಗೆಗೆ ಬಹಳಷ್ಟು ಅವಶ್ಯಕ.  ಭವಿಷ್ಯದ  ಅಭಿವೃದ್ಧಿ ನೀರಿನ ಮೇಲೆ ನಿಂತಿದೆ.  ಈ ದೃಷ್ಟಿಯಲ್ಲಿ ನೀರಿನ ಕುರಿತಾದ ದೂರದೃಷ್ಟಿಯ ಯೊಜನೆ ಈ ಜಿಲ್ಲೆಯ ಭವಿಷ್ಯವನ್ನು ಬದಲಾಯಿಸಲಿದೆ.

ಪಶ್ಚಿಮ ವಾಹಿನಿ ಯೋಜನೆ ಭವಿಷ್ಯದಲ್ಲಿ ಒಂದು ಬಹುದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಲಿದೆ ಎಂಬ ಅಂದಾಜು ಈಗ ನಮ್ಮಲ್ಲಿ ಇರದೆ ಇರಬಹುದು.  ಆದರೆ ಅದು  ಅನುಷ್ಠಾನಗೊಂಡ ತದನಂತರ, ಭವಿಷ್ಯದ ಈ ಜಿಲ್ಲೆಯ  ಅಭಿವೃದ್ಧಿಯ ಮೇಲೆ ಬಹುದೊಡ್ಡ ಕಾಣಿಕೆಯಾಗಲಿದೆ.  ಅದರ ಅಂದಾಜು ಈಗ ಇರದಿದ್ದರೂ ಅಂತಹ ಕಾಣಿಕೆ ಪಶ್ಚಿಮವಾಹಿನಿ ನೀಡಲಿದೆ.

ಸರಕಾರ ಈ ಜಿಲ್ಲೆಯ ನೀರಿನ ಸಮಸ್ಯೆ ಈ ರೀತಿಯ ಅಭೂತ ಕ್ರಮ ಕೈಗೊಂಡಿರುವುದು ಒಂದು ಐತಿಹಾಸಿಕ ಕ್ರಮ ಎಂದು ವ್ಯಾಖ್ಯಾನಿಸಬಹುದು.  ‘ನೀರಿನ’ ಸಮಸ್ಯೆ ನಮ್ಮನ್ನು ಭವಿಷ್ಯದಲ್ಲಿ ಕಾಡಲಿದೆ. ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ನೀರಿನ ಕುರಿತಾದ ನಮ್ಮ ನಿಲುವುಗಳು ಸಹ ನಮ್ಮ ಅಭಿವೃದ್ಧಿಯ ಮೌಲ್ಯ ಮಾಪನ. ಬಹುಶ: ಇದು ಅಭಿವೃದ್ಧಿಯ ಮೌಲ್ಯ ಮಾಪನದಲ್ಲಿ ಹೊಸ ಸೇರ್ಪಡೆ.  ಆದರೆ ಈ ಸೇರ್ಪಡೆ. ಅಗತ್ಯವೂ ಹೌದು. ನೀರು ಅತ್ಯಮೂಲ್ಯ.  ಆದರೆ ನೀರಿನ ಭವಿಷ್ಯದ ಸವಾಲುಗಳಿಗೆ ಯೋಜನೆಗಳು ಅಗತ್ಯ. ಯೋಜನೆಗಳ ಬಗ್ಗೆ ನಾವು ಇಂದು ಗಂಭೀರವಾಗಿ ಇರದೆ ಇರಬಹುದು.  ಆದರೆ ಅದು ಭವಿಷ್ಯದಲ್ಲಿ ಉಂಟು ಮಾಡುವ ಶಾಶ್ವತ ಪರಿಹಾರದ ಬಗ್ಗೆ ನಾವು ಗಮನಹರಿಸಬೇಕು.

ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ದ.ಕ. ಜಿಲ್ಲೆ ಈಗ ಮುಂಚೂಣಿಯತ್ತ ಸಾಗುತ್ತಿದೆ. ಸಮಗ್ರ ಅಭಿವೃದ್ಧಿ ಕಲ್ಪನೆ  ಕೇವಲ ಶಬ್ಧಗಳಲ್ಲ. ಅದು ನಿಜವಾಗುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಕಳೆದ ಕೆಲವು ಮೂರು ನಾಲ್ಕು ವರ್ಷಗಳಲ್ಲಿ ಹೆಚ್ಚು ಪ್ರಚಾರ ಇಲ್ಲದೆ ಕೈಕೊಂಡ ಪೂರಕ ಕ್ರಮಗಳು ಈಗ ಫಲ ನೀಡುತ್ತಿವೆ.  ಇನ್ನು ಒಂದೆರೆಡು ವರ್ಷದಲ್ಲಿ ಇನ್ನಷ್ಟು ಕ್ರಮಗಳು ಉತ್ತಮ ಫಲ ನೀಡಲಿವೆ.  ಅದರಲ್ಲೂ  ಪಶ್ಚಿಮ ವಾಹಿನಿ ಯೋಜನೆ ಅಭಿವೃದ್ಧಿಯ ಮೌಲ್ಯ ಮಾಪನದಲ್ಲಿ ಜಿಲ್ಲೆಗೆ ಮತ್ತಷ್ಟು ಮೌಲ್ಯವನ್ನು ಇನ್ನಷ್ಟು ಒದಗಿಸಲಿದೆ.  ಈ ದೆಸೆಯಲ್ಲಿ ಆ ಕ್ಷಣಗಳಿಗಾಗಿ ಕಾಯೋಣವೇ?

 (ಲೇಖಕರು ಸಾಮಾಜಿಕ ಕಾರ್ಯಕರ್ತರು)

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ