ಆರಾಧನೆ

ಸಾವಿರ ಸೀಮೆಯ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ

  • ಪ್ರೊ. ರಾಜಮಣಿ ರಾಮಕುಂಜ

ಪೊಳಲಿ ತುಳು ನಾಡಿನ, ಅಷ್ಟೇ ಏಕೆ ಕನ್ನಡ ನಾಡಿನ ಪ್ರಖ್ಯಾತ ಪುಣ್ಯ ಕ್ಷೇತ್ರಗಳಲ್ಲೊಂದು. ಸಾವಿರ ಸೀಮೆಯ ಕ್ಷೇತ್ರವೆಂದೇ ಸುಪ್ರಸಿದ್ಧವಾದ ಈ ಕ್ಷೇತ್ರ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿದೆ. ಬಹು ಪ್ರಾಚೀನವಾದ ಈ ದೇವಾಲಯದ ಅಧಿದೇವತೆ ಶ್ರೀ ರಾಜರಾಜೇಶ್ವರಿ. ಕುದುರೆಮುಖ ಘಟ್ಟದಿಂದ ಹರಿದುಬರುತ್ತಿರುವ ಪವಿತ್ರವಾದ ಫಲ್ಗುಣೀ ನದಿಯು ಪೊಳಲಿ ಕ್ಷೇತ್ರದ ಉತ್ತರ ಪಾರ್ಶ್ವದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಬಂದು, ವಾಯವ್ಯ ದಿಕ್ಕಿನಲ್ಲಿ ತಿರುಗಿ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವುದರಿಂದ ಈ ಕ್ಷೇತ್ರಕ್ಕೆ ಇನ್ನಷ್ಟು ಪಾವಿತ್ರ್ಯತೆಯು ಪ್ರಾಪ್ತವಾಗಿದೆ.


ಈ ಸೀಮೆಯ ಪ್ರಧಾನ ದೇವಾಲಯವಾಗಿರುವ ಶ್ರೀ ಪೊಳಲಿ ತನ್ನ ಕ್ಷೇತ್ರ ಮಹಿಮೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಇಲ್ಲಿ ದೇವಾಲಯಗಳ ಸಮೂಹವೇ ಇತ್ತು. ಶ್ರೀ ರಾಜರಾಜೇಶ್ವರಿ, ಶ್ರೀ ಅಖಿಲೇಶ್ವರ, ಶ್ರೀ ಅಗಸ್ತ್ಯೇಶ್ವರ ಮತ್ತು ಶ್ರೀಕಂಠೇಶ್ವರ ದೇವಾಲಯಗಳು ಹಿಂದೆ ಇದ್ದುವು. ಈಗ ಮೊದಲೆರಡು ಸುಸ್ಥಿಯಲ್ಲಿದ್ದರೆ ಉಳಿದೆರಡು ನಾಮಾವಶೇಷವಾಗಿವೆ.
ಈ ದೇವಾಲಯದ ಐತಿಹ್ಯದ ಕುರಿತು ಮಾರ್ಕಂಡೇಯ ಪುರಾಣ ಮತ್ತು ಸಪ್ತಶತಿಗಳಲ್ಲಿ ವಿವರಣೆಗಳಿವೆಯೆಂದು ಬಲ್ಲವರ ಹೇಳಿಕೆಯಿದೆ. ಅಲ್ಲಿ ವ್ಯಕ್ತವಾಗುವಂತೆ, ರಾಜ್ಯ ಕೋಶಗಳನ್ನೆಲ್ಲಾ ಕಳೆದುಕೊಂಡಿದ್ದ ಸುರಥ ಮಹಾರಾಜ ಮತ್ತು ತನ್ನವರಿಂದಲೇ ದೂರ ಮಾಡಲ್ಪಟ್ಟಿದ್ದ ಸಮಾಧಿಯೆಂಬ ಹೆಸರಿನ ವೈಶ್ಯರು ಕೂಡಿ ಸುಮೇಧಸ ಮುನಿಯ ಬೋಧನೆಯ ಮೇರೆಗೆ ಭವ್ಯವಾದ ಶ್ರೀ ರಾಜರಾಜೇಶ್ವರಿಯ ಮೃಣ್ಮಯ ಮೂರ್ತಿಯನ್ನು ಫಲ್ಗುಣೀ ನದಿಯ ಪುಳಿನ (ಮರಳ ರಾಶಿಯಲ್ಲಿ) ದಲ್ಲಿ ನಿರ್ಮಿಸಿ ಪೂಜಿಸಿದರು. ಅದರ ಫಲವಾಗಿ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಂಡರು. ಕಾಲಾನಂತರ ರಾಜವೈಭವವವನ್ನು ಮರಳಿ ಪಡೆದಿದ್ದ ಸುರಥ ಮಹಾರಾಜರು ತಾವು ನಿರ್ಮಿಸಿ ಪೂಜಿಸಿದ್ದ ದೇವಿಯ ವಿಗ್ರಹಕ್ಕೆ ಅದು ಇದ್ದ ಸ್ಥಳದಲ್ಲೇ ಒಂದು ಆಲಯವನ್ನು ಕಟ್ಟಿಸಿದರು. ತನ್ನ ವಜ್ರಖಚಿತ ರಾಜ ಕಿರೀಟವನ್ನೇ ದೇವಿಗೆ ಅರ್ಪಿಸಿದನು. ಈಗ ದೇವಿಯ ಶಿರವನ್ನು ಅಲಂಕರಿಸಿರುವ ಕಿರೀಟ ಈ ರಾಜನದೇ ಎಂಬ ಭಾವನೆಯಿದೆ.
ಮೈಸೂರಿನ ಹುಲಿ ಟಿಪ್ಪುಸುಲ್ತಾನನು ತುಳು ನಾಡಿಗೆ ಧಾಳಿ ಮಾಡಿಕೊಂಡು ಬಂದ ಸಂಸರ್ಭದಲ್ಲಿ ಈ ದೇವಸ್ಥಾನದ ’ಚೆಂಡಿನ ಉತ್ಸವ’ ದ ವೈಭವದ ವಿಚಾರ ಕೇಳಿ ಅದನ್ನು ನೋಡಲು ಚೆಂಡಿನ ಗದ್ದೆಯ ಉತ್ತರ ದಿಕ್ಕಿನ ಹುಣಿಯ ಹೊರಗೆ ಮಧ್ಯ ಭಾಗದಲ್ಲಿ ಒಂದು ಕಟ್ಟೆಯನ್ನು ಕಟ್ಟಿಸಿ, ಉತ್ಸವದ ಚೆಂಡಾಟವನ್ನು ಆ ಕಟ್ಟೆಯಲ್ಲಿ ಕುಳಿತು ನೋಡಿದನೆಂದು ಐತಿಹ್ಯವಿದೆ. ಈಗಲೂ ಈ ಕಟ್ಟೆಯನ್ನು ’ಸುಲ್ತಾನ ಕಟ್ಟೆ’ ಎಂದೂ ಅವನ ಪರಿವಾರದವರು ನಿಂತ ಗದ್ದೆಗೆ ’ಸುಲ್ತಾನ ಗದ್ದೆ’ ಎಂತಲೂ ಕರೆಯುತ್ತಾರೆ. ಕೆಳದಿಯ ರಾಣಿ ಚೆನ್ನಮ್ಮ ಪೊಳಲಿಗೆ ಬಂದು ಮಹಾರಥವನ್ನು ದೇವಿಗೆ ಅರ್ಪಿಸಿದ್ದಳು. ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ನಾಲ್ಕು ಸಲ ಭೇಟಿಯಿತ್ತು, ಧಾರ್ಮಿಕ ಸೇವಾಕಾರ್ಯಗಳನ್ನು ನಡೆಸಿ, ವಿಗ್ರಹಕ್ಕೆ ತೊಡಿಸಲು ಆಭರಣಗಳನ್ನು ಒಪ್ಪಿಸಿದ್ದಾರೆ. ಕ್ರಿ.ಶ. ೧೪೪೩ರಲ್ಲಿ ವಿಜಯನಗರದ ಅರಸನಾದ ಎರಡನೇ ದೇವರಾಯನ ಆಸ್ಥಾನಕ್ಕೆ ಪರ್ಷಿಯಾ ದೊರೆಯ ರಾಯಭಾರಿ ಅಬ್ದುಲ್ ರಜಾಕನು ಮಂಗಳೂರು ರೇವುಪಟ್ಟಣದ ಮುಖಾಂತರ ಹಂಪಿಗೆ ಭೇಟಿ ನೀಡಿದ್ದನು. ಅವನು ತನ್ನ ಪ್ರವಾಸ ಕಥನದಲ್ಲಿ ಮಂಗಳೂರು ಬಳಿಯ ಪೊಳಲಿಯ ರಾಜರಾಜೇಶ್ವರಿ ದೇವಾಲಯದ ಮೂರ್ತಿಗಳ ವೈಭವವನ್ನು ಹೊಗಳಿ, ಜಗತ್ತಿನಲ್ಲಿ ಇಂತಹ ಶಿಲ್ಪ ಎಲ್ಲಿಯೂ ನೋಡಿಲ್ಲ ಎಂದು ಬರೆದಿದ್ದಾನೆ.


ಸುಮಾರು ಒಂಭತ್ತು ಅಡಿಗಳಿಗೂ ಮೀರಿದ ಈ ಬೃಹದ್ಗಾತ್ರದ ಶ್ರೀ ರಾಜರಾಜೇಶ್ವರಿಯ ಮೂರ್ತಿಯನ್ನು ವಿಶಿಷ್ಠವಾಗಿ ಪರಿಪಾಕಗೊಂಡ ಮಣ್ಣಿನಿಂದ ನಿರ್ಮಿಸಲಾಗಿದೆ. ಶ್ರೀ ರಾಜರಾಜೇಶ್ವರಿಯ ಎಡಬಲದಲ್ಲಿ ಹೆಚ್ಚು ಎತ್ತರವಲ್ಲದಿದ್ದರೂ ಕಿರಿದಲ್ಲದ ಸರಸ್ವತಿ, ಭದ್ರಕಾಳಿ, ಸುಬ್ರಹ್ಮಣ್ಯ, ಮಹಾಗಣಪತಿ ವಿಗ್ರಹಗಳು ಮಣ್ಣಿನಿಂದಲೇ ರೂಪಿಸಲ್ಪಟ್ಟಿವೆ. (ಹನ್ನೆರಡು ವರ್ಷಕ್ಕೊಂದು ಸಲ ನಡೆಯುವ ಲೇಪಾಷ್ಟಗಂಧ ಕ್ರಿಯೆಗಾಗಿ ಮೂಲ ವಿಗ್ರಹವನ್ನು ರಚಿಸುವಾಗ ಉಪಯೋಗಿಸಿದ್ದ, ಕಲ್ಲಿನ ಬಲವಿರುವ ವಿಶಿಷ್ಟ ಪರಿಪಾಕಗೊಂಡ ಮಣ್ಣನ್ನೇ, ಮುಂದಿನ ಹಲವಾರು ಶತಮಾನಗಳಿಗೆಬೇಕಾಗುವಷ್ಟು, ಗರ್ಭಗುಡಿಯ ಒಂದು ಪಾರ್ಶ್ವದಲ್ಲಿ ಶೇಖರಿಸಿಟ್ಟಿದೆ.!!). ಗಣಪತಿ ಪದ್ಮಾಸನದಲ್ಲಿದ್ದರೆ, ಸುಬ್ರಹ್ಮಣ್ಯನು ಬಲ ಮಂಡಿಯನ್ನು ಮಡಚಿ ಪೀಠದ ಮೇಲೆ ಇಟ್ಟು ಎಡಗಾಲನ್ನು ನೀಳವಾಗಿ ಮಯೂರದ ಬೆನ್ನ ಮೇಲಿಟ್ಟಿದ್ದಾನೆ. ಶ್ರೀ ದೇವಿ ಎಡಭಾಗಕ್ಕೆ ಕಾಲುಗಳನ್ನು ನೀಳಾಗಿ ಇಳಿಬಿಟ್ಟು ಶವಾಸನದ ಮೇಲೆ ಸುಖಾಸೀನೆಯಾಗಿದ್ದಾಳೆ. ಶ್ರೀ ಭದ್ರಕಾಳಿಯ ಬಲದ ಕಾಲು ಹೆಣ್ಣು ನರಿಯ ಬೆನ್ನಿನ ಮೇಲಿದೆ. ದ್ವಿಭುಜೆಯಾದ ಈಕೆ ಎಡಗೈಯಲ್ಲಿ ಕಪಾಲ ಮತ್ತು ಬಲಗೈಯಲ್ಲಿ ಖಡ್ಗವನ್ನು ಧರಿಸೀದ್ದಾಳೆ. ಕೊರಳಲ್ಲಿ ರುಂಡ ಮಾಲೆ ಹೊಂದಿದ್ದು ರೌದ್ರರೂಪಿಯಾಗಿದ್ದಾಳೆ. ಈಕೆಯ ಎಡಬಲ ಭಾಗಗಳಲ್ಲಿ ಖಡ್ಗ ಹಿಡಿದಿರುವ ಸೇವಕಿಯರಿದ್ದಾರೆ. ಭದ್ರಕಾಳಿಯ ಹಿಂಭಾಗದಲ್ಲಿ ಮೇಲುಗಡೆ ಅಷ್ಟಭೈರವರ ಪ್ರತೀಕವಾಗಿ ನಾಲ್ಕು ಮಂದಿ ಭೈರವರ ವಿಗ್ರಹಗಳಿವೆ. ರಾಜರಾಜೇಶ್ವರಿಯ ಎಡ-ಬಲ ಪಾದ ಭಾಗಗಳಲ್ಲಿ ಕ್ರಮವಾಗಿ, ತಾಳ ಹಾಕುತ್ತಿರುವ ದಂಡನಾಥಾದೇವಿ ಮತ್ತು ದಂಡಿಯೆಂಬ ತಂತಿ ವಾದ್ಯ ನುಡಿಸುತ್ತಾ ಹಾಡುತ್ತಿರುವ ರಾಜ ಮಾತಂಗಿಯರ ವಿಗ್ರಹಗಳಿವೆ. ಸುಬ್ರಹ್ಮಣ್ಯ ಹಾಗೂ ಗಣಪತಿ ವಿಗ್ರಹಗಳ ಹಿಂದೆ, ಕುಳಿತಿರುವ ಬ್ರಹ್ಮಬಟುಕ ಮತ್ತು ನಿಂತಿರುವ ವಿಷ್ಣುಬಟುಕರನ್ನು ಕಾಣಬಹುದು. ಇಲ್ಲೇ ದಕ್ಷಿಣ ಭಾಗದ ತಗ್ಗಾದ ವೇದಿಕೆಯ ಮೇಲೆ ವ್ಯಾಘ್ರಾಸುರ ಸಂಹಾರಿ ರೌದ್ರಾವತಾರಿ ಶಿವನಿದ್ದಾನೆ. ಕುಳಿತ ಭಂಗಿಯಲಿರುವ ಶ್ರೀ ರಾಜರಾಜೇಶ್ವರಿಯ ಭುಜದ ಮೇಲೆ ಹಿಂಭಾಗದ ಪಟ್ಟಿಕೆಯಲ್ಲಿ ಎಡಬಲಕ್ಕೆ ಅರೆ ನಗ್ನ ಶರೀರದ ಚಾಮರಧಾರಿಣಿಯರಿದ್ದಾರೆ. ಕಾಲುಗಳನ್ನು ಕೆಳಗೆ ಇಳಿಬಿಟ್ಟು ಕುಳಿತಿರುವ ಶ್ರೀರಾಜರಾಜೇಶ್ವರಿಯು ದ್ವಿಬಾಹುಯುಕ್ತವಾಗಿದ್ದು ವರದ ಮತ್ತು ಅಭಯ ಹಸ್ತಗಳನ್ನು ಹೊಂದಿದೆ. ಇಲ್ಲಿನ ಗರ್ಭಗೃಹದ ಆಶ್ಚರ್ಯವೆಂದರೆ, ಒಂದೇ ವೇದಿಕೆಯಲ್ಲಿ ಹಲವಾರು ಸಂಖ್ಯೆಯ ದೇವ-ದೇವಿಯರ ಸಮೂಹವನ್ನೇ ಕಾಣಬಹುದಾಗಿದೆ. ಹಲವಾರು ಗುಣ ಸ್ವಭಾವಗಳ ವ್ಯಕ್ತಸ್ವರೂಪವೋ ಎನ್ನುವಂತೆ ಇವು ಕಂಗೊಳಿಸುತ್ತಿವೆ. ದೈವಾಲಯಗಳ ಹೊರತಾಗಿ ಇಂತಹ ಒಂದು ದೃ ಶ್ಯವನ್ನು ಬೇರೆಲ್ಲು ಕಾಣಲು ಸಾಧ್ಯವಿಲ್ಲ. ಇನ್ನೊಂದು ಸೋಜಿಗವೆಂದರೆ, ಸರ್ವಾಲಂಕಾರ ಭೂ ಷಿತೆಯಾದ ಶ್ರೀ ದೇವಿಯ ದರ್ಶನವಾಗಬೇಕಾದಲ್ಲಿ ನಾವು ಮುಖಪಂಟಪದ ಒಳಭಾಗದಲ್ಲಿ ನಿಂತು ಮೂರು ಬಾಗಿಲುಗಳಿಂದ ವೀಕ್ಷಿಸಬೇಕು.

ಹೊರಾಂಗಣದ ಆಗ್ನೇಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಶ್ರೀ ದುರ್ಗಾದೇವಿಯ ಗುಡಿಯಿದೆ. ದೇವಾಲಯಕ್ಕೆ ಸಂಬಂಧಿತ ಆಸ್ತಿಕಡತಗಳಲ್ಲಿ ದೇವಾಲಯದ ಒಡತಿಯಾಗಿಯೇ ಬಿಂಬಿಸಲ್ಪಟ್ಟ ಶ್ರೀ ದೇವಿಯ ಮೂರ್ತಿ ಕೃಷ್ಣ ಶಿಲೆಯಿಂದ ರಚಿಸಲ್ಪಟ್ಟಿದ್ದು, ನಾಲ್ಕು ಕೈಗಳನ್ನು ಹೊಂದಿದೆ. ಮೇಲಿನ ಎರಡರಲ್ಲಿ ಶಂಖಚಕ್ರಗಳಿದ್ದರೆ ಕೆಳಗಿನ ಎಡಗೈಯಲ್ಲಿ ಮಹಿಷನನ್ನು ಬಾಲದಿಂದ ಹಿಡಿದೆತ್ತಿ ಬಲಗೈಯ ಶೂಲದ ಮೊನೆಯಿಂದ ಇರಿಯುತ್ತಿರುವಂತಿದೆ. ಇದೇ ರೀತಿ ಈಶಾನ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಸುಮಾರು ಎರಡು ಮೀಟರ್ ಎತ್ತರದ ಮರದಿಂದ ಮಾಡಿದ ಕ್ಷೇತ್ರಪಾಲ ವಿಗ್ರಹವಿದೆ. ಈತನ ಮಡದಿಯೆಂದೇ ನಂಬಲಾಗಿರುವ, ಆಸನದಲ್ಲಿ ಕುಳಿತ ಭಂಗಿಯಲ್ಲಿರುವ ಸ್ತ್ರೀ ವಿಗ್ರಹವೊಂದಿದೆ. ಕ್ಷೇತ್ರಪಾಲನಿಗೆ ನಾಲ್ಕು ಕೈಗಳಿದ್ದರೆ, ಸ್ತ್ರೀವಿಗ್ರಹಕ್ಕೆ ಎರಡು ಕೈಗಳಿವೆ.
ಇಲ್ಲಿನ ಬಹಳಷ್ಟು ಆಶ್ಚರ್ಯದ ವಿಚಾರವೆಂದರೆ ಕ್ಷೇತ್ರದ ಅಧಿದೇವತೆ ರಾಜರಾಜೇಶ್ವರಿಯಾದರೂ ಬಲಿ, ಉತ್ಸವ, ರಥೋತ್ಸವ, ರಂಗಪೂಜೆ ಇತ್ಯಾದಿಗಳೆಲ್ಲ ನಡೆಯುವುದು ಆಕೆಯ ಪುತ್ರನಾದ ಸುಬ್ರಹ್ಮಣ್ಯನಿಗೆ. ಕ್ಷೇತ್ರದ ಸಂಪತ್ತೆಲ್ಲ ಹೊರಗಿನ ಗುಡಿಯಲ್ಲಿರುವ ದುರ್ಗೆಯ ಹೆಸರಿನಲ್ಲಿ.
ಮೀನ ಸಂಕ್ರಮಣದಂದು ಆರಂಭವಾಗುವ ಇಲ್ಲಿನ ಜಾತ್ರೆ ಸುಮಾರು ಒಂದು ತಿಂಗಳು ನಡೆಯುತ್ತದೆ. ವಿಶೇಷವೆಂದರೆ ಜಾತ್ರೆಯ ಕೊನೆಯ ಅಥವಾ ಅವಭೃತದ ದಿನ ನಿರ್ಣಯವಾಗುವುದು ಧ್ವಜಾರೋಹಣವಾಗಿ, ಮರುದಿನ ಬೆಳಿಗ್ಗಿನ ಉತ್ಸವವಾದ ಬಳಿಕ; ಆವರೆಗೆ ಯಾರಿಗೂ ತಿಳಿದಿರುವುದಿಲ್ಲ. ಇದು ನಿರ್ಣಯವಾಗುವುದು ಮೂಡಬಿದರೆಯ ಪುತ್ತಿಗೆಯಲ್ಲಿ ವಾಸ್ತವ್ಯವಿರುವ ಚೌಟ ಅರಸರ ಸೀಮೆ ಪುರೋಹಿತರ ಮನೆಯಲ್ಲಿ; ಪೊಳಲಿಯಿಂದ ಹೋಗುವ ನಟ್ಟೋಜರು ಕಾಣಿಕೆಯಿಡುವ ಪುರೋಹಿತರ ಪ್ರಶ್ನೆಯ ಮಣೆಯಲ್ಲಿ; ಆ ದಿನ ಮೀನ ಮಾಸದ 26ನೆಯ ದಿನದಿಂದ 30ನೆಯ ದಿನದೊಳಗೆ ಯಾವತ್ತೂ ಆಗಬಹುದು. ನಿರ್ಣೀತ ದಿನವು ಕಿವಿಯಿಂದ ಕಿವಿಗೆ ಬಂದು ದೇವಾಲಯದ ಗೋಪುರದ ಬಾಗಿಲಲ್ಲಿ, ಹತ್ತು ಸಮಸ್ತರ ಎದುರಲ್ಲಿ, ಸ್ಥಾನ, ಗುತ್ತು ಇವರ ಮುಂದೆ ಬಹಿರಂಗಗೊ ಳ್ಳುತ್ತದೆ.
ಇಲ್ಲಿನ ಜಾತ್ರೆಯಲ್ಲಿ ’ದಂಡೆಮಾಲೆ’ ಅನ್ನುವುದು ಬಹಳ ವಿಶೇಷವಾದುದು. ಎಲ್ಲಾ ದೇವಾಲಯಗಳಲ್ಲಿ ಉತ್ಸವಮೂರ್ತಿಯ ಪ್ರಭಾವಳಿಯ ಸುತ್ತ ಹತ್ತಿ ತುಂಬಿಸಿದ ಕೆಂಪು ರೇಷ್ಮೆ ವಸ್ತ್ರದ ದಂಡೆ ಇದ್ದರೆ, ಪೊಳಲಿಯಲ್ಲಿ ಪ್ರಭಾವಳಿಯ ಸುತ್ತ ಕಿಸ್ಕಾರ (ಕೇಪುಳ) ಹೂವನ್ನು ದುಂಡಗಿನ ಆಕೃತಿಯಲ್ಲಿ ದಂಡೆ ಮಾಲೆಯನ್ನು ನಿರ್ಮಿಸಿ ಪ್ರಭಾವಳಿಗೆ ಜೋಡಿಸುತ್ತಾರೆ. ಪ್ರತಿ ಐದು ದಿನಗಳಿಗೊಂದು ಸಲ ಈ ದಂಡೆಯನ್ನು ಬದಲಿಸಿ ಹೊಸಹೊಸ ದಂಡೆಮಾಲೆಯನ್ನು ಜೋಡಿಸುತ್ತಾರೆ.

ಪೊಳಲಿ ಜಾತ್ರೆಗೆ ಇನ್ನೊಂದು ಹೆಸರು ಎನ್ನುವಂತೆ, ಪೊಳಲಿ ಚೆಂಡು ಬಹಳ ಪ್ರಸಿದ್ಧವಾದುದು. ಬೃಹದ್ಗಾತ್ರದ ಈ ಚೆಂಡಿನೊಂದಿಗಿನ ಆಟ ಐದು ದಿನಗಳ ಅವಧಿಯಲ್ಲಿ ನಡೆಯುತ್ತದೆ. ಅತ್ಯಂತ ವಿಶಾಲವಾದ ಗದ್ದೆಯಲ್ಲಿ ಈ ಚೆಂಡಾಟ ಸಾವಿರ ಸೀಮೆಯ ಕೂಡುವಿಕೆಯಿಂದ ನಡೆಯುತ್ತದೆ. ಒಂದನೆಯ ದಿನದ ಚೆಂಡಿನಂದು ರಾತ್ರಿ ಕುಮಾರ ತೇರು, ಎರಡನೆಯ ದಿನ ಹೂ ತೇರು, ಮೂರನೆಯಂದು ಸೂರ್ಯಮಂಡಲ ರಥ, ನಾಲ್ಕನೆಯ ದಿನದಂದು ಚಂದ್ರಮಂಡಲ ರಥ, ಐದನೆಯ ದಿನದಂದು ಆಳು ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಐದನೆಯ ಚೆಂಡಿನಂದು ಉತ್ಸವ ವರ್ಣನಾತೀತ ಪರಾಕಾಷ್ಠೆಗೇರುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ