ಕವರ್ ಸ್ಟೋರಿ

ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಬೇಕು ಗಡಿ ಕಾವಲು

ಸುಳ್ಯದಿಂದ ತಲಪಾಡಿವರೆಗೆ ಕರ್ನಾಟಕ – ಕೇರಳ ಗಡಿ ಪ್ರದೇಶದಲ್ಲಿ ಹಲವು ರಸ್ತೆಗಳು ಎರಡೂ ರಾಜ್ಯಗಳನ್ನು ಸಂಪರ್ಕಿಸುತ್ತವೆ. ಬಹಳಷ್ಟು ಬಾರಿ ಒಂದು ರಾಜ್ಯದಲ್ಲಿ ಅಪರಾಧ ನಡೆಸಿ, ಇನ್ನೊಂದು ರಾಜ್ಯಕ್ಕೆ ಜಿಗಿದು ವರ್ಷಗಟ್ಟಲೆ ಅಡಗುವ ಯತ್ನ ಮಾಡಲು ಇದೇ ಗಡಿಯಲ್ಲಿರುವ ದುರ್ಬಲ ಪಹರೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನಮ್ಮ ಗಡಿ ಭದ್ರವಿದ್ದರೆ, ಇಂಥದ್ದನ್ನೆಲ್ಲ ಮಟ್ಟ ಹಾಕಲು ಸಾಧ್ಯ

  • ಹರೀಶ ಮಾಂಬಾಡಿ
  • www.bantwalnews.com

ಇಲ್ಲಿ ಪರ್ಮಿಟ್ಟಿದೆ, ಅಲ್ಲಿ ಇಲ್ಲ. ಇಲ್ಲಿ ನಿಷೇಧವಿಲ್ಲ, ಅಲ್ಲಿ ಇದೆ… ಹೀಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಕೆಲವೊಂದು ಕಾನೂನುಗಳು ಭಿನ್ನವಾಗಿರುತ್ತವೆ. ಹೀಗಾಗಿ ಗಡಿ ದಾಟಿ ಕಾನೂನು ಉಲ್ಲಂಘಿಸುವ ಪ್ರಯತ್ನಗಳೂ ಆಗುತ್ತವೆ. ಹಾಗೆ ನೋಡಿದರೆ, ಕರ್ನಾಟಕ ಮತ್ತು ಕೇರಳ ಗಡಿ ದಾಟಿ ದಿನನಿತ್ಯ ಸಾವಿರಾರು ಮಂದಿ ಉದ್ಯೋಗಕ್ಕೆ ತೆರಳುತ್ತಾರೆ. ಬಹುತೇಕ ಮಂದಿ ಹೊಟ್ಟೆಪಾಡಿಗಾಗಿ ರಾಜ್ಯದ ಗಡಿ ದಾಟಿದರೆ, ಕೆಲವರು ಇಂಥದ್ದೇ ಸಂದರ್ಭ ದುರುಪಯೋಗಪಡಿಸಿ, ಅಕ್ರಮ ಕಾರ್ಯಗಳನ್ನೂ ನಡೆಸುವುದುಂಟು. ಇಂಥದ್ದನ್ನೆಲ್ಲ ನಿಯಂತ್ರಿಸಬೇಕಾದರೆ ಗಡಿ ಪ್ರದೇಶಗಳಲ್ಲಿ ಪೊಲೀಸರ ಬಿಗು ಕಾವಲು ಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಲ್ಲುಂಟು.

ಬಂಟ್ವಾಳ ತಾಲೂಕನ್ನೇ ನೋಡಿ, ಕನ್ಯಾನ ದಾಟಿ ಮುಗುಳಿ ಪಾಸ್ ಆದರೆ ಆತ ಕೇರಳಕ್ಕೆ ಜಿಗಿದ ಎಂದರ್ಥ. ಅಲ್ಲೇ ಒಳರಸ್ತೆಗಳಲ್ಲಿ ಕೇರಳಕ್ಕೆ ದಾಟಿ ಹೋಗಬಹುದು. ಇಲ್ಲಿ ದುಷ್ಕೃತ್ಯ ಎಸಗಿ ಕೇರಳಕ್ಕೆ ತೆರಳಿ ಅವಿತುಕೊಳ್ಳುವ ಖದೀಮರ ಹಲವು ಕತೆಗಳನ್ನು ನಾವು ವೃತ್ತಪತ್ರಿಕೆಗಳಲ್ಲಿ ಓದಿರುತ್ತೇವೆ. ಹೀಗಾಗಿಯೇ ಗಡಿ ಭಾಗಗಳಲ್ಲಿ ಖಡಕ್ ಆಗಿ ನಿಗಾ ವಹಿಸಲು ಪೊಲೀಸರ ನೆರವು ಅತಿ ಅಗತ್ಯ.

ಆದರೆ ಇತ್ತೀಚೆಗೆ ಕೇಳಿಬರುತ್ತಿರುವ ಮಾತೆಂದರೆ ಸಾರಡ್ಕದಲ್ಲಿರುವ ಚೆಕ್ ಪೋಸ್ಟ್ ನಲ್ಲಿ ನಡೆಯುತ್ತಿದ್ದ ಪೊಲೀಸ್ ತಪಾಸಣೆ ಈಗ ನಿಂತುಹೋಗಿದೆ. ಹೀಗಾಗಿ ಈ ಜಾಗದಲ್ಲಿ ನಿರ್ಭೀತಿಯಿಂದ ಕಿಡಿಗೇಡಿಗಳೂ ಸಂಚರಿಸಲು ಸಾಧ್ಯ ಎನ್ನುವಂತಾಗಿದೆ.

ಕರ್ನಾಟಕದಿಂದ ಕೇರಳ ಸಂಚರಿಸುವ ಪನ್ವೇಲ್ – ಕೊಚ್ಚಿ ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ಹಾಗೂ ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ಪುರಾತನ ಕಾಲದಿಂದಲೂ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಪೆರುವಾಯಿ, ಸಾಲೆತ್ತೂರು ಭಾಗದಲ್ಲಿ ತಾತ್ಕಾಲಿಕ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಸಾರಡ್ಕದಲ್ಲಿ ಆಹಾರ ಇಲಾಖೆಯ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿ ಎರಡು ದಶಕಗಳಿಂದಲೂ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಾರಡ್ಕದಲ್ಲಿ ನಿತ್ಯ ಎರಡು ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿರುತ್ತಿದ್ದುದರಿಂದ ಅಡ್ಯನಡ್ಕ, ತೋರಣಕಟ್ಟೆ, ಮೂಡಂಬೈಲು ಭಾಗಗಳಲ್ಲಿ ದುಷ್ಕರ್ಮಿಗಳ ಕಾಟ ಕಡಿಮೆ ಇತ್ತು. ಆದರೆ ಈಗ  ಸಾರಡ್ಕ ಬಸ್ ನಿಲ್ದಾಣದ ಒಳಗೇ ಮದ್ಯದ ಬಾಟಲಿಗಳು ಕಾಣಸಿಗಲಾರಂಭಿಸಿವೆ..

ಕನ್ಯಾನದಲ್ಲಿ ಹೊರಠಾಣೆ ಆಗಬೇಕು ಎಂಬ ಬೇಡಿಕೆ ಹಳೆಯದ್ದು. ಇಲ್ಲಿ ಆಗಾಗ್ಗೆ ಸಂಭವಿಸುವ ಅಹಿತಕರ ಘಟನೆ ನಿಯಂತ್ರಿಸಲು ಹೊರಠಾಣೆಯ ಅವಶ್ಯಕತೆ ಇದ್ದಂತೆ ಸಾರಡ್ಕ, ಅಡ್ಯನಡ್ಕ ಪರಿಸರದಲ್ಲೂ ಒಂದು ಔಟ್ ಪೋಸ್ಟ್ ಅತಿ ಅಗತ್ಯ ಎಂಬುದು ಪೊಲೀಸರಿಗೆ ಮನವರಿಕೆ ಆಗುವ ಹೊತ್ತಿಗೆ ಅದೆಷ್ಟು ಅಕ್ರಮಗಳು ನಡೆಯುತ್ತವೆಯೋ ಏನೋ, ಇದೀಗ ಪೊಲೀಸರು ಮೊಬೈಲ್ ಸ್ಕ್ವಾಡ್ ಮೂಲಕ ಆಗಾಗ್ಗೆ ತಪಾಸಣೆ ನಡೆಸುತ್ತಿರುತ್ತಾರೆ. ಆದರೆ ಚೆಕ್ ಪೋಸ್ಟ್ ಅಥವಾ ಪೊಲೀಸ್ ಔಟ್ ಪೋಸ್ಟ್ ಕೆಲಸ ನಿರ್ವಹಿಸುವ ರೀತಿಯಲ್ಲಿ ಇದು ಸಾಧ್ಯವೇ ಎಂಬುದನ್ನು ಕಾಲವೇ ಉತ್ತರಿಸಬೇಕು.

ಏನಾಗಬೇಕು

ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ – ಕೇರಳ ಗಡಿಯ ಪ್ರತಿಯೊಂದು ಮಾರ್ಗದಲ್ಲೂ ಕನಿಷ್ಠ ಓರ್ವ ಕಾನ್ಸ್ ಟೇಬಲ್ ನಿಯೋಜಿಸುವ ಮೂಲಕ ದಿನದ ಇಪ್ಪತ್ತನಾಲ್ಕು ತಾಸು ನಿಗಾ ಇರಿಸುವಂತೆ ಮಾಡಬೇಕು. ಇದಕ್ಕಾಗಿ ಸಿಬ್ಬಂದಿ ಕೊರತೆ ಇದ್ದರೆ ಕೂಡಲೇ ಅದನ್ನು ನೇಮಿಸಬೇಕು ಎಂದು ಇಲಾಖಾ ವತಿಯಿಂದ ಹಾಗೂ ಜನಪ್ರತಿನಿಧಿಗಳು ಎನಿಸಿಕೊಂಡವರಿಂದ ನಡೆಯಬೇಕು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts