ಮಕ್ಕಳ ಮಾತು

ಸಾಮರ್ಥ್ಯ ನಮ್ಮಲ್ಲೇ ಇದೆ..

ಪ್ರ॒ತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸುವುದು ಹಾಗೂ ಪ್ರತಿಭಾ ವಿಕಸನಕ್ಕೆ ಅಗತ್ಯವಿರುವ ಪ್ರೇರಣೆಯನ್ನು ಒದಗಿಸುವ ಕೆಲಸ ದೊಡ್ಡವರಾದಾಗಬೇಕೇ ವಿನಃ ಮಕ್ಕಳ ಪ್ರತಿಭೆಗಳನ್ನೇ ತಮ್ಮ ವ್ಯಾಪಾರದ ಸರಕ್ಕಾನ್ನಾಗಿಸುವ ಶಿಕ್ಷಣೋದ್ಯಮಿಗಳ ನಿಲುವನ್ನು ನಾವು ಖಂಡಿಸಬೇಕಾಗಿದೆ.

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಸುಳ್ಯ ತಾಲೂಕಿನ ಶಾಲೆಯೊಂದರಲ್ಲಿ ಒಂದು ದಿನ ಮಕ್ಕಳ ಸಾಮರ್ಥ್ಯ ಅಭಿವೃದ್ದಿ ಕಾರ್ಯಾಗಾರ ರದಲ್ಲಿ ನಾನು ಪಾಲ್ಗೊಂಡಿದ್ದೆ. ಮಕ್ಕಳಿಗಾಗಿ ಕ್ರಿಯಾತ್ಮಕ ಚಟುವಟಿಕೆ ಎಂದು ವಿಷಯ ಮುದ್ರಿಸಿ ಎಂದು ಸಂಘಟಕರಲ್ಲಿ ನಾನು ಹೇಳಿದ್ದರೂ, ಶೀರ್ಷಿಕೆ ಬದಲಾದ ವಿಷಯ ಗೊತ್ತಾದ್ದು, ಆ ಶಾಲೆಗೆ ಹೋಗಿ ಸಂಪನ್ಮೂಲ ವ್ಯಕ್ತಿಯಾಗಿ ಕುಳಿತು ಆಮಂತ್ರಣ ಪತ್ರಿಕೆ ನೀಡಿದಾಗಲೇ.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಯೊಬ್ಬರು ಸಾಮರ್ಥ್ಯ ಎಂದರೆ ಅದು ಯೋಗ್ಯತೆ, ಇಂದಿನ ಸಂಪನ್ಮೂಲ ವ್ಯಕ್ತಿ ನಿಮ್ಮ ಯೋಗ್ಯತೆಯನ್ನು ಹೆಚ್ಚಿಸುವ ತರಬೇತಿ ನೀಡಿತ್ತಾರೆ ಎಂದೆಲ್ಲಾ ದೊಡ್ಡ ಮಾತುಗಳನ್ನಾಡಿದರು. ನನಗದು ಇಷ್ಟವಾಗಲೇ ಇಲ್ಲ, ಸಮಾರಂಭದ ಬಳಿಕ ಮಕ್ಕಳೊಂದಿಗೆ ಮಾತನಾಡುತ್ತಾ, ಎಲ್ಲರೂ ಯೋಗ್ಯರೇ, ಅವರವರ ಮಟ್ಟಿಗೆ ಯೋಗ್ಯತೆ ಎನ್ನುವುದು ಎಲ್ಲರಿಗೂ ಇರುವಂತಾದ್ದೇ, ಅಷ್ಟಕ್ಕೂ ಯೋಗ್ಯತೆ ಎನ್ನುವುದು ಒಂದು ದಿನದಲ್ಲಿ ಬರುವುದಲ್ಲ, ಅದನ್ನು ಒಂದೇ ದಿನದಲ್ಲಿ ನಿಮಗೆ ನೀಡುವ ಯೋಗ್ಯತೆಯೂ ನನ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.

(ನನ್ನ ಮಾತಿನಲ್ಲೇನಾದರೂ ತಪ್ಪಿದ್ದರೆ ತಿಳಿಸಿ)

ಬಳಿಕ ಮಾತು ಮುಂದುವರಿಸಿದ ನಾನು ದಿನವಿಡೀ ನಡೆದ ಮಕ್ಕಳೊಂದಿಗಿನ ಮಾತುಕತೆಯಲ್ಲಿ ಯೋಗ್ಯತೆ ಎಂಬ ಶಬ್ದ ಎಲ್ಲೂ ಇಣುಕದಂತೆ ಜಾಗ್ರತೆ ವಹಿಸಿದೆ. ಮಕ್ಕಳು ಕ್ರಿಯಾಶೀಲರಾಗುವ ವಿವಿಧ ಆಟಗಳನ್ನು-ಚಟುವಟಿಕೆ, ಗುಂಪು ಚರ್ಚೆ ನಡೆಸುತ್ತಾ ದಿನವಿಡೀ ಮಕ್ಕಳೊಂದಿಗೆ ಆಟ ಆಡಿದೆ,ಹಾಡಿದೆ, ಕುಣಿದೆ.

ಮಕ್ಕಳೊಂದಿಗೆ ಮಾತನಾಡುವ ಸಂದರ್ಭ ಮಕ್ಕಳಲ್ಲಿ ಕುತೂಹಲಕ್ಕೆಂದು ಕೇಳಿದೆ. ಸಾಮರ್ಥ್ಯ ಅಂದರೆ ಏನು..? ಅದು ಎಲ್ಲಿ ಸಿಗುತ್ತದೆ..? ಪ್ರತಿಭಾವಂತರು ಎಂದರೆ ಯಾರು..? ಎಂದಾಗ ಅವರು ಸಾಮರ್ಥ್ಯ ನಮ್ಮಲ್ಲೇ ಇದೆ, ಅದನ್ನು ಎಲ್ಲಿಯೂ ಹುಡುಕುವ ಅಗತ್ಯವಿಲ್ಲ, ನಾವೆಲ್ಲರೂ ಪ್ರತಿಭಾವಂತರು.. ಕೆಲವರು ಇದನ್ನು ವ್ಯಕ್ತಪಡಿಸುವ ರೀತಿ ಮತ್ತು ಅವರಿಗೆ ಸಿಗುವ ಅವಕಾಶಗಳು ವಿಭಿನ್ನವಾಗಿರುತ್ತದೆ ಎಂದಾಗ ವೆರಿಗುಡ್ ಎಂದೆ.

ಮಕ್ಕಳ ಮಾತು, ಮನಗಳಲ್ಲಿ ಅಡಗಿರುವ ಸತ್ಯ ಬಹುತೇಕ ದೊಡ್ಡವರಿಗೆ ಅರ್ಥವಾಗುವುದೇ ಇಲ್ಲ. ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿಸುತ್ತೇವೆ ಎಂದು ಸಾರುವ ಕೆಲವರು, ಪ್ರತಿಭಾನ್ವಿತ ಮಕ್ಕಳಿಗಾಗಿ ಶೋಧ ಆರಂಭಿಸುವ ಪ್ರಕ್ರಿಯೆ ತೀರಾ ನಾಟಕೀಯವಾದದ್ದು ಎಂಬುದು ಮೇಲೆ ಹೇಳಿದ ಮಕ್ಕಳ ಮಾತಿನಿಂದ ಸ್ಪಷ್ಟವಾಗುತ್ತದೆ.

ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸುವುದು ಹಾಗೂ ಪ್ರತಿಭಾ ವಿಕಸನಕ್ಕೆ ಅಗತ್ಯವಿರುವ ಪ್ರೇರಣೆಯನ್ನು ಒದಗಿಸುವ ಕೆಲಸ ದೊಡ್ಡವರದಾಗಬೇಕೇ ವಿನಃ, ಮಕ್ಕಳ ಪ್ರತಿಭೆಗಳನ್ನೇ ತಮ್ಮ ವ್ಯಾಪಾರದ ಸರಕ್ಕಾನ್ನಾಗಿಸುವ ಶಿಕ್ಷಣೋದ್ಯಮಿಗಳ ನಿಲುವನ್ನು ನಾವು ಖಂಡಿಸಬೇಕಾಗಿದೆ.

ಪ್ರತಿಭಾನ್ವಿತರೇ ನಿಮಗಿದೋ ಉಚಿತ ಶಿಕ್ಷಣ ಕೊಡುತ್ತೇವೆ ಎಂದು ಕೈ ಬೀಸಿ ಕರೆಯುವ ವಿದ್ಯಾಸಂಸ್ಥೆಗಳು, ಆ ಪ್ರತಿಭಾನ್ವಿತರ ಹೆಸರಿನಲ್ಲಿ ಲಕ್ಷಗಟ್ಟಲೆ ಡೊನೇಶನ್ ಸಂಗ್ರಹಿಸುತ್ತಾರೆ, ಅವಕಾಶದ ಹೆಸರಿನಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ, ಹಣಗಳಿಸುತ್ತಲೂ ಇರುತ್ತಾರೆ. ಆದರೆ ಮಕ್ಕಳ ಪ್ರತಿಭೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟು, ಸಂಘಟಕರನ್ನು ಕೊಂಡಾಡುವ ನಮಗೆ ಅಲ್ಲಿ ಮಕ್ಕಳು ಅನುಭವಿಸುವ ಪ್ರತಿಭಾಯಾತನೆ ಅರ್ಥವಾಗುವುದೇ ಇಲ್ಲ. ಮಕ್ಕಳ ಹೆಸರಿನಲ್ಲಿ ದೊಡ್ಡ ಜನರಾಗ ಬಯಸುವ ದಡ್ಡ ಪೋಷಕರಿಗೂ ಮಕ್ಕಳ ಸಂಕಟ ಮನವರಿಕೆಯಾಗುವುದೇ ಇಲ್ಲ.

ಎಲ್ಲಾ ವಿದ್ಯಾರ್ಥಿಗಳೂ ಪ್ರತಿಭಾನ್ವಿತರೇ ಆದರೆ, ಸ್ಪರ್ಧೆಗಳಲ್ಲಿ  ಹಲವು ಬಹುಮಾನಗಳನ್ನು ಪಡೆದ ವಿದ್ಯಾರ್ಥಿನಿಯೊಬ್ಬಳು , ಪ್ರತಿಭಾನ್ವಿತ ಮಕ್ಕಳ ಉಚಿತ ಶಿಕ್ಷಣದಿಂದ ವಂಚಿತಳಾದ ಕಥೆ ಕೇಳಿ.

ಆಕೆ ಕರಾಟೆ ಸ್ಪರ್ಧೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರವೀಣೆ. ಎಸ್.ಎಸ್. ಎಲ್.ಸಿ ಪರೀಕ್ಷೆ ಮುಗಿದಾಕ್ಷಣ  ಪತ್ರಿಕೆಯಲ್ಲಿ ಜಾಹಿರಾತು ಕಂಡಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ಎಂದು ಭಾವಿಸಿ ಅರ್ಜಿಹಾಕಿದ್ದಳು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಆಕೆಗೆ ಉಚಿತ ಶಿಕ್ಷಣದ ಅಗತ್ಯವೂ ಇತ್ತು. ಆದರೆ ಅರ್ಜಿ ಹಾಕಿದ ಆಕೆಗೆ ಯಾವುದೇ ರಿಯಾಕ್ಷನ್  ವಿದ್ಯಾಸಂಸ್ಥೆಯ ಕಡೆಯಿಂದ ಬರಲಿಲ್ಲ. ಯಾರೋ ಹೇಳಿದ ಮಾತಿನಂತೆ ಇಂಟರ್ ವ್ಯೂ ದಿನದಂದು ಆ ವಿದ್ಯಾರ್ಥಿನಿ ವಿದ್ಯಾಸಂಸ್ಥೆಗೆ ತನ್ನ ಹೆತ್ತವರೊಂದಿಗೆ ಹಾಜರಾದಳು. ಎಲ್ಲರ ಇಂಟರ್ ವ್ಯೂ ಮುಗಿದ ಬಳಿಕ, ಒಳ ಹೊಕ್ಕ ಇವರಿಗೆ ಆಘಾತ ಕಾದಿತ್ತು. ಇಲ್ಲಮ್ಮಾ, ನಮ್ಮಲ್ಲಿ ಕರಾಟೆಗೆ ಹೆಚ್ಚು ಪ್ರೋತ್ಸಾಹ ಇಲ್ಲಮ್ಮಾ.. ಸೋ ಸಾರಿ.. ಎಂದು ಕಳುಹಿಸಿಕೊಟ್ಟರು ಆ ಮಹಾನುಭಾವರು. ಪೆಚ್ಚು ಮೋರೆ ಹಾಕಿ ವಾಪಾಸಾದ ಆಕೆ ಸರ್ಕಾರಿ ವಿದ್ಯಾಸಂಸ್ಥೆಗೆ ಸೇರಿ, ಎರಡು ವರ್ಷದ ಹಿಂದೆ  ದ್ವಿತೀಯ ಪಿಯುಸಿಯನ್ನೂ ಗಮನೀಯ ಅಂಕಗಳಿಸುವುದರೊಂದಿಗೆ ಪೂರ್ಣಗೊಳಿಸಿದಳು.

ಪ್ರತಿಭಾನ್ವಿತರಿಗೆ ಅವಕಾಶ ಕೊಡುವ ನೈಜಮನಸ್ಸು ಆ ವಿದ್ಯಾಸಂಸ್ಥೆಗೆ ಇದ್ದಿದ್ದರೆ, ಈ ಕರಾಟೆ ಪ್ರವೀಣೆಗೆ ಉಚಿತ ಶಿಕ್ಷಣ ಕೊಡಬಹುದಿತ್ತು. ಆದರೆ ಆ ವಿದ್ಯಾರ್ಥಿನಿಯ ಕರಾಟೆ ಕಲೆ ಇವರ ಶಿಕ್ಷಣ ವ್ಯಾಪಾರದ ಮಾರಾಟದ ಸರಕಾಗದೇ ಇದ್ದುದರಿಂದ ಈ ವಿದ್ಯಾರ್ಥಿನಿಗೆ ಆ ಸಂಸ್ಥೆ ಪ್ರವೇಶ ನಿರಾಕರಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಇಂತಹಾ ಅದೆಷ್ಟೋ ಘಟನೆಗಳು ನಮ್ಮ-ನಿಮ್ಮ ನಡುವೆ ನಡೆದಿದ್ದರೂ ಅದೆಲ್ಲವೂ ಸುದ್ದಿಯಾಗದೆ ರದ್ದಿಯಾಗುತ್ತಿದೆ. ಮಕ್ಕಳ ಪ್ರತಿಭೆಗಳ ಹೆಸರಿನಲ್ಲಿ ತಮ್ಮ ವ್ಯಾಪಾರ-ವ್ಯವಹಾರ ನಡೆಸುವ  ಶಿಕ್ಷಣ ಸಂಸ್ಥೆಗಳು ಇನ್ನುಮುಂದಾದರೂ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಲಿ. ಕೇವಲ ಆಟ ಪಾಠದಲ್ಲಿ ಮುಂದಿರುವ ಮಕ್ಕಳನ್ನು ಮಾತ್ರ ಎತ್ತಿಹಿಡಿದು, ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ ಅವರನ್ನು ಶೋಷಿಸುವ ಪ್ರವೃತ್ತಿ ಇನ್ನಾದರೂ ನಿಲ್ಲಿಸಲಿ. ಇಂತಹಾ ಘಟನೆಗಳಿಗೆ ಅಂಕಿತ ಹಾಕಬೇಕಾದರೆ ಪ್ರಜ್ಞಾವಂತ ಪೋಷಕರು ಜಾಗೃತರಾಗುವುದೊಂದೇ ದಾರಿ.. ಆಗ ಮಾತ್ರ ಶಿಕ್ಷಣದ ನೈಜ ಉದ್ದೇಶ ಈಡೇರಲು ಸಾಧ್ಯ..

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts