ಮರಳು ಮಾಫಿಯಾ ಮಟ್ಟ ಹಾಕಲು ತೆರಳಿದ ವೇಳೆ ಕೊಲೆ ಯತ್ನ ನಡೆದಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ದೂರಿದ್ದಾರೆ. ಉಡುಪಿ ಡಿಸಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಕುಂದಾಪುರ ತಾಲೂಕಿನಲ್ಲಿ ಭಾನುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಘಟನೆ ನಡೆದಿದೆ.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಬೆದರಿಕೆ ಹಾಗೂ ಕೊಲೆಯತ್ನಕ್ಕೊಳಗಾದವರು.
ಅಕ್ರಮ ಮರಳುಗಾರಿಕೆ ಆರೋಪ ಹಿನ್ನೆಲೆಯಲ್ಲಿ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ಖುದ್ದು ಜಿಲ್ಲಾಧಿಕಾರಿಯವರೇ ಪರಿಶೀಲನೆ ನಡೆಸಲು ತೆರಳಿದ್ದರು. ಭಾನುವಾರ ಜಿಲ್ಲಾಧಿಕಾರಿ, ಅವರ ಅಂಗರಕ್ಷಕ, ಚಾಲಕನೊಂದಿಗೆ ಒಂದು ವಾಹನದಲ್ಲಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ, ಅವರ ಪತಿ ತಮ್ಮ ಖಾಸಗಿ ವಾಹನದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಕುಂದಾಪುರದ ಪ್ರದೇಶಗಳಿಗೆ ರಾತ್ರಿಯ ವೇಳೆ ತೆರಳುತ್ತಿದ್ದರು. ಹಳ್ನಾಡು ಪ್ರದೇಶ, ಧಕ್ಕೆ ಬಳಿ ಜಿಲ್ಲಾಧಿಕಾರಿಗಳ ತಂಡ ತಲುಪಿದ ಸಂದರ್ಭ ಅಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದುದು ಕಂಡುಬಂದಿದ್ದು, ಅದನ್ನು ಮುಟ್ಟುಗೋಲು ಹಾಕಿ, ಕಂಡ್ಲೂರು ಪ್ರದೇಶಕ್ಕೆ ತೆರಳಿದರು. ಈ ಸಂದರ್ಭ ಬೈಕುಗಳಲ್ಲಿ ಡಿಸಿ, ಎಸಿ ವಾಹನವನ್ನು ಕೆಲವರು ಬೆಂಬತ್ತಿಕೊಂಡು ಬಂದರು. ಕಂಡ್ಲೂರು ಸೇತುವೆ ಬಳಿಕ ಜನ ಜಮಾಯಿಸಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ತಂಡದ ಮೇಲೆ ಹಲ್ಲೆಗೆ ಯತ್ನಿಸಿದರು. ಈ ಸಂದರ್ಭ ಸಹಾಯಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿಯವರ ಮೇಲೂ ಹಲ್ಲೆ ನಡೆಸಲಾಗಿದೆ.ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿ ಅವರು ಅಲ್ಲಿಗೆ ತಲುಪುವ ವೇಳೆ ಜನರು ಜಾಗ ಖಾಲಿ ಮಾಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಕೊಲೆ ಯತ್ನದ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.