ಹೊಸ ಜನಾಂಗದಲ್ಲಿ ನಮ್ಮ ವಿದ್ವಾಂಸರ ಬಗ್ಗೆ ಅಸಹಿಷ್ಣುತೆ ಕಾಣಿಸುತ್ತದೆ. ಇದು ಇತಿಹಾಸದ ಒಟ್ಟು ಸಂಶೋಧನೆ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ನಿರಂಜನ ವಾನಳ್ಳಿ ಹೇಳಿದರು.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು ಸಾಮಾಜಿಕ ಚರಿತ್ರೆಯ ಪುನರ್ ರಚನೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಹಲವಾರು ವಿಷಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಂಶೋಧನೆಗೆ ಒಳಪಡದ ವ್ಯಕ್ತಿ, ವಸ್ತುಗಳು ಇನ್ನೂ ಹಲವಾರು ಬಾಕಿ ಉಳಿದಿವೆ. ಇಂಥ ಅಸಹಿಷ್ಣುತೆಯಿಂದಾಗಿ ಸಂಶೋಧಕರ ಕೊರತೆ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಳೆಯ ವಸ್ತುಗಳಲ್ಲಿ ಕೆಲವು ಪೂಜಾಸ್ಥಳದಲ್ಲಿದ್ದರೆ, ಇನ್ನು ಕೆಲವು ವಿನಾಶದ ಅಂಚಿನಲ್ಲಿವೆ. ಇವುಗಳ ಅಧ್ಯಯನ ಆಗಬೇಕಾದ ಅಗತ್ಯವಿದೆ ಎಂದು ಹೇಳಿದ ವಾನಳ್ಳಿ , ಜನರಿಗೆ ನಮ್ಮದು ಎನ್ನುವುದರ ಬಗ್ಗೆ ಗೌರವ ಕಡಿಮೆಯಾಗುತ್ತಿರುವುದು ಕಾರಣ, ಸಂಗ್ರಹಿಸಿದ ಪ್ರತಿಯೊಂದು ವಸ್ತುವಿನ ಹಿಂದೆಯೂ ಅದರದ್ದೇ ಆದ ರೋಚಕ ಕಥೆ ಇದೆ. ಇದನ್ನು ಅಧ್ಯಯನ ಮಾಡುವ ಕೌಶಲ ಅಗತ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಪರಿಷತ್ತು ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಭಾರತೀಯ ಇತಿಹಾಸವನ್ನು ಭಾರತೀಯ ದೃಷ್ಟಿಕೋನದೊಂದಿಗೆ ನೋಡುವ ಪ್ರಾಮಾಣಿಕ ಪ್ರಯತ್ನ ಆಗಿದೆಯಾ ಎಂಬುದನ್ನು ಗಮನಿಸಬೇಕು. ಕ್ಕರಿಸಿ ಮಾತನಾಡಿದರೆ ಪದವಿ ಪಡೆದುಕೊಳ್ಳುತ್ತಾರೆ, ಹೀಗಾಗಿಯೇ ಭಾರತದ ಇತಿಹಾಸದ ನೆಗೆಟಿವ್ ಅಂಶಗಳನ್ನೇ ವೈಭವೀಕರಿಸಲಾಗಿದ್ದು, ಮೌಲ್ಯಯುತ ವಿಚಾರಗಳನ್ನು ಬದಿಗಿರಿಸಲಾಗಿದೆ. ಇವನ್ನು ನಿವಾರಿಸಬೇಕಾದರೆ ನಮ್ಮ ಪರಿಕಲ್ಪನೆಯಲ್ಲೇ ಇತಿಹಾಸವನ್ನು ಮರುವಿಮರ್ಶೆ ಹಾಗೂ ಮರು ಅಧ್ಯಯನ ಇಂದು ನಡೆಯಬೇಕು ಎಂದು ಹೇಳಿದರು. ಉಪನ್ಯಾಸಕ ಚೇತನ್ ಮುಂಡಾಜೆ ಹಾಜರಿದ್ದರು. ವಿಚಾರಸಂಕಿರಣದ ಸಂಯೋಜಕಿ ಡಾ.ಆಶಾಲತಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಸ್ವಾಗತಿಸಿದರು. ಮಂಗಳೂರು ವಿವಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಸುರೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು. ಡಾ.ಸಾಯಿಗೀತಾ ವಂದಿಸಿದರು. ಸಿಂಧೂರ ಕಾರ್ಯಕ್ರಮ ನಿರೂಪಿಸಿದರು.