ಸಮಾಜ ಮುಖಿ ಚಿಂತನೆಗಳೊಂದಿಗೆ ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಗ್ರಾಮಗ್ರಾಮಗಳಲ್ಲಿ ಯುವಕರಲ್ಲಿ ಮೂಡಿದಾಗ ಆರೋಗ್ಯವಂತ ಗ್ರಾಮದ ನಿರ್ಮಾಣ ಸಾಧ್ಯ. ಎಂದು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು.
ಸಜೀಪ ಮೂಡದ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಬಿಜೆಪಿ ಸಜೀಪ ಮೂನ್ನೂರು ಗ್ರಾಮ ಸಮಿತಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಮತ್ತು ಲಯನ್ಸ್ ಮತ್ತು ಲಯನೆಸ್ಸ್ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಕೆಎಂಸಿ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ನಡೆದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಇಂತಹ ಕಾರ್‍ಯಕ್ರಮಗಳನ್ನು ಸಂಘಟನೆಗಳು ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ಲಯನ್ಸ್ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ಮಾತನಾಡಿ ಲಯನ್ಸ್ ಕ್ಲಬ್ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ವಚ್ಛತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಬಿಜೆಪಿಯ ಸಜೀಪಮುನ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ದಯಾನಂದ ಬಿಎಮ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಉದ್ಯಮಿ ಗೋಪಾಲಕೃಷ್ಣ ಆಚಾರ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷಣ್ ಅಗ್ರಬೈಲು, ಲಯನೆಸ್ ಕ್ಲಬ್ ಅಧ್ಯಕ್ಷೆ ದೇವಿಕಾ ದಾಮೋದರ, ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ. ಭಾಲಕೃಷ್ಣ ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲಾ ಸಂಯೋಜಕ ದಾಮೋದರ್ ಬಿ.ಎಮ್. ಸ್ವಾಗತಿಸಿ, ಶ್ರೀ ಗುರು ಮಾಚಿದೇವ ಸಮುದಾಯ ಭವನದ ಅಧ್ಯಕ್ಷ ಎನ್.ಕೆ ಶಿವ ವಂದಿಸಿದರು. ಮಂಜು ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 67 ಯುನಿಟ್ ರಕ್ತ ಸಂಗ್ರಹಿಸಲಾಯಿತು.