ಜಾನಪದ ಅಧ್ಯಯನದಲ್ಲಿ ನಾವು ದಾಖಲೀಕರಿಸಿದ ಅಂಶಗಳ ಒಡೆಯರು ಗಾಯಕರು ಹಾಗೂ ಅದಕ್ಕೆ ಪೂರಕ ಆಕರಗಳನ್ನು ಒದಗಿಸಿದವರು. ಅವರ ಸಹಭಾಗಿತ್ವದಲ್ಲಿ ಇಂದು ಅಧ್ಯಯನ ನಡೆಯಬೇಕು ಎಂದು ಜಾನಪದ ವಿವಿ ಮಾಜಿ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ಭಾನುವಾರ ಸಂಜೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ನಡೆದ ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಭೌತಿಕ ಸಂಸ್ಕೃತಿಯ ಕುರಿತು ಅಧ್ಯಯನದ ಕೊರತೆ ಇದೆ, ಆದರೆ ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಬಗ್ಗೆ ಹಲವು ಅಧ್ಯಯನಗಳು ವಿಸ್ತಾರವಾಗಿ ಹಾಗೂ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ ಎಂದು ಹೇಳಿದ ಡಾ. ಚಿನ್ನಪ್ಪ ಗೌಡ, ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿರುವ ವಸ್ತುಗಳ ಮೂಲಕ ಭೌತಿಕ ಸಂಸ್ಕೃತಿಯನ್ನು ಜಗತ್ತಿಗೆ ನೀಡಿರುವ ಕುರಿತು ಅಧ್ಯಯನ ನಡೆಸಲು ಸಾಧ್ಯ. ಇತಿಹಾಸ ರಚನೆ, ಸಾಧ್ಯತೆ ಕುರಿತು ಯುವ ವಿದ್ವಾಂಸರು ಕಾರ್ಯಪ್ರವೃತ್ತರಾಗಬೇಕು ಎಂದರು.
ಸಾಂಸ್ಕೃತಿಕ ಕರ್ನಾಟಕದ ಕಲ್ಪನೆ
ಇಂದು ರಾಜಕೀಯ ಕರ್ನಾಟಕ ಎಂದರೆ ಒಡೆಯುವ ಕಲ್ಪನೆ ಮೂಡಿದರೆ, ಸಾಂಸ್ಕೃತಿಕ ಕರ್ನಾಟಕ ಎಂದರೆ ಸಂಘಟಿಸುವ ಕಲ್ಪನೆ ದೊರಕುತ್ತದೆ. ಕರ್ನಾಟಕವನ್ನು ಜೋಡಿಸುವ ಕಾರ್ಯ ಇಂದು ಆಗಬೇಕಿದ್ದು ಸಾಂಸ್ಕೃತಿಕ ಕರ್ನಾಟಕದ ಕಲ್ಪನೆಯತ್ತ ನಾವು ಮನಗಾಣಬೇಕು ಎಂದು ಡಾ.ಚಿನ್ನಪ್ಪ ಗೌಡ ಆಶಿಸಿದರು.
ಕರ್ನಾಟಕ ಜಾನಪದೀಯ ಪರಂಪರೆಯನ್ನು ಕಟ್ಟುವ ಕೆಲಸವಾಗಬೇಕು, ದಾಖಲೀಕರಣವಾಗಬೇಕು. ಇಂದು ಅಂಥದ್ದನ್ನು ಸಂಘಟಿಸುವ ಸಂಸ್ಥೆಯೊಂದು ಅಗತ್ಯವಿದೆ ಎಂದು ಡಾ.ಗೌಡ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ ಜಾನಪದ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಈ ಸಂದರ್ಭ ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಎಚ್.ಆರ್.ಗೌಡ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ವಂದಿಸಿದರು. ಉಪನ್ಯಾಸಕ ರಮಾನಂದ ಭಟ್ ವಂದಿಸಿದರು.