ಆರಾಧನೆ

ಶ್ರೀ ಸೀತಾರಾಮ ದೇವಸ್ಥಾನ – ಜಾತ್ರೋತ್ಸವ

  • ಪ್ರೊ. ರಾಜಮಣಿ ರಾಮಕುಂಜ

ಬಿ.ಸಿ. ರೋಡಿನಿಂದ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿರುವ ಬಂಟ್ವಾಳ ಪೇಟೆಯ ಹೃದಯ ಭಾಗದ ಶ್ರೀ ಸೀತಾರಾಮ ದೇವಸ್ಥಾನ, ಪಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿ ನದಿಯ ಬಲ ಪಾರ್ಶ್ವದಲ್ಲಿದೆ. ೧೮೩೮ರ ವಿಳಂಬಿ ಸಂವತ್ಸರ ಜ್ಯೇಷ್ಠ ಶುದ್ಧ ನವಮಿಯಂದು, ವಾಮನಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ರಾಮ ಭಟ್ಟರಿಂದ ಶ್ರೀ ರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಗೊಂಡು, ದೇವಾಲಯವು ಉದ್ಘಾಟನೆಗೊಂಡಿತು. ಆ ಕಾಲದ ಮುನ್ಸೀಫರಾಗಿದ್ದ ನಾಗರಕಟ್ಟೆ ಶ್ರೀ ಮಂಜಪ್ಪಯ್ಯನವರ ನೇತ್ರತ್ವದಲ್ಲಿ ಸಮಾಜದ ಪ್ರಮುಖರಾದ ಮಂಕಿ ಮಂಜುನಾಥಯ್ಯ, ಕೊಂಬ್ರಬೈಲು ಸುಬ್ರಾಯ ಶ್ಯಾನುಭಾಗ, ಕೊಡಿಯಾಲ್ ಕೃಷ್ಣಯ್ಯ, ಜೆಪ್ಪು ಮಲ್ಲಪ್ಪಯ್ಯ, ಆಳೇಕಲ್ ನರಸಯ್ಯ ಶ್ಯಾನುಭಾಗ, ಮುಲ್ಲರ ಪಟ್ಣ ರಾಮಪ್ಪಯ್ಯ, ಮಡ್ಯಾರು ಚಂದ್ರಶೇಖರಯ್ಯ, ವಿಠೋಬಯ್ಯ ಮುಂತಾದವರು ಸೇರಿಕೊಂಡು ೧೮೩೬ರಲ್ಲಿ ಈ ದೇವಳದ ಸ್ಥಾಪನಾ ಕಾರ್ಯವನ್ನು ಆರಂಭಿಸಿದ್ದರು. ಕೊಂಬ್ರಬೈಲು ಸುಬ್ರಾಯ ಶ್ಯಾನುಭಾಗರು ದೇವಳದ ಗರ್ಭಗೃಹ ರಚನೆಯ ಪೂರ್ಣ ಖರ್ಚನ್ನು ಭರಿಸಿದ್ದರು. ೧೮೩೬ರಲ್ಲಿ ಈ ದೇವಳದ ಕಾರ್ಯ ಆರಂಭವಾಗಿದ್ದರೂ ಕೊಡಗಿನ ಕಲ್ಯಾಣಪ್ಪನ ದಂಗೆಯ (೧೮೩೭) ಕಾರಣದಿಂದಾಗಿ ಕೆಲಸ ಕುಂಟುತ್ತಾ ೧೮೩೫ರಲ್ಲಿ ಪೂರ್ಣಗೊಳ್ಳಬೇಕಾಯಿತು. ಇಲ್ಲಿರುವ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣ ಸಮೇತವಾದ ಸ್ವಯಂವರ ಮೂರ್ತಿಯನ್ನು (ಪಟ್ಟದ ದೇವರು) ಸಾಹುಕಾರ ಪ್ರಭು ಕುಟುಂಬದ ಅಪ್ಪಯ್ಯ ಪ್ರಭುಗಳು ಕಾಶಿಯಿಂದ ತಂದು ಸಮರ್ಪಿಸಿದರೆನ್ನುವುದು ಹಿರಿಯರ ಮಾತು.
ಈಗ ದೇವಾಲಯವಿರುವ ಜಾಗ ಈ ಮೊದಲು ಕನ್ನಡ ಮಾತನಾಡುವ ಗೌಡ ಜನಾಂಗಕ್ಕೆ ಸೇರಿದ್ದಾಗಿತ್ತು. ಇದೇ ಜಾಗದಲ್ಲಿದ್ದ ಬಾಡಿಗೆ ಮನೆಯೊಂದರಲ್ಲಿ ಚಿತ್ರಾಪುರ ಸಾರಸ್ವತ ಬ್ರಾಹ್ಮಣರೊಬ್ಬರು ವಾಸವಾಗಿದ್ದರು. ಆ ಮನೆಯಲ್ಲಿ ಕೃಷ್ಣನ ಶಿಲಾ ಮೂರ್ತಿಗೆ ನಿತ್ಯ ಪೂಜೆ ಹಾಗೂ ಅಷ್ಟಮಿ ವೃತ ವಿಜೃಂಭಣೆಯಿಂದ ನಡೆಯುತ್ತಿತ್ತು. ಆ ಜಾಗದಲ್ಲಿ ಪ್ರಕೃತ ರಾಮ ದೇವಾಲಯ ನಿರ್ಮಾಣವಾಗಿರುವುದೊಂದು ವಿಶೇಷವಾಗಿ ಕಾಣುತ್ತದೆ.
ಗರ್ಭಗುಡಿಯ ಪೀಠದ ಮೇಲ್ಭಾಗದಲ್ಲಿ ಪಟ್ಟದ ರಾಮಚಂದ್ರನ ಸ್ವಯಂವರ ಮೂರ್ತಿಯಿದ್ದರೆ ಮಧ್ಯ ಭಾಗದಲ್ಲಿ ಶ್ರೀರಾಮನ ಸ್ವಯಂವರ ಉತ್ಸವ ಮೂರ್ತಿಯಿದೆ. ಮೂರನೆಯ ಕೆಳ ಹಂತದಲ್ಲಿ ವೀರ ಮಾರುತಿ ಹಾಗೂ ವೆಂಕಟರಮಣನ ಸ್ವಯಂವರ ವಿಗ್ರಹವಿದೆ. ಇದು ಹೇಗೆ ಬಂತು ಅನ್ನುವುದರ ಕುರಿತು ಮಾಹಿತಿಯಿಲ್ಲ. ಗರ್ಭಗುಡಿಯ ಗೋಡೆಯ ಎರಡು ಚೌಕಾಕಾರದ ಅಂತಸ್ತಿನ ಬಲಭಾಗದಲ್ಲಿ ಗಣಪತಿ, ಎಡ ಭಾಗದ ಅಂತಸ್ತಿನಲ್ಲಿ, ದೇವಾಲಯ ಆಗುವ ಮೊದಲು ಸಾರಸ್ವತ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿದ್ದ ಸುಮಾರು ಒಂದು ಅಡಿ ಎತ್ತರದ ಕೃಷ್ಣನ ಶಿಲಾಮೂರ್ತಿಯಿದೆ. ಪ್ರಸನ್ನ ಮಾರುತಿ ಎಂದು ಕರೆಯಲ್ಪಡುವ ಪಂಚಲೋಹದ ಮೂರ್ತಿಯೊಂದು ಪಕ್ಕದ ಯಜ್ಞ ಶಾಲೆಯಲ್ಲಿದೆ. ಅಮ್ಮೆಂಬಳ ರಾಮ ರಾವ್ ಅವರ ಕುಟುಂಬಕ್ಕೆ ಸೇರಿದ ಹನುಮಂತನ ವಿಗ್ರಹವೂ ಇಲ್ಲಿ ಸ್ಥಾನ ಪಡೆದಿದೆ. ಅಂಡಾರು ದೇವರಾಯ ರಾವ್ ಅವರ ಮನೆತನಕ್ಕೆ ಸೇರಿದ ಸುಮಾರು ಮೂರು ಅಡಿ ಗಾತ್ರದ ಮರದ ಕೆತ್ತನೆಯ ಶಾಂತ ದುರ್ಗಾ ದೇವಿಯ ಸುಂದರ ವಿಗ್ರಹವೊಂದು ಇದೇ ದೇವಾಲಯದ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಈಗಲೂ ಕೂಡ ಒಂಭತ್ತು ದಿನಗಳ ಅವಧಿಯ ನವರಾತ್ರಿ ಪೂಜೆ ಅಂಡಾರು ಕುಟುಂಬದ ಎರಡು ಶಾಖೆಗಳಿಂದ ನಡೆಯುತ್ತಿದೆ. ಇದಕ್ಕಿಂತ ಪೂರ್ವದಲ್ಲಿ ಅಂಡಾರು ಕುಟುಂಬದವರ ಮನೆಯಲ್ಲಿ (ಈಗಿನ ಬೈ ಪಾಸ್ ರಸ್ತೆಯ ೪ ಮಾರ್ಗ ಸೇರುವಲ್ಲಿ ಈಗಲೂ ಆ ಮನೆಯಿದೆ) ನವರಾತ್ರಿ ಎಷ್ಟು ವಿಜೃಂಭಣೆಯಿಂದ ನಡೆಯುತ್ತಿತ್ತೆಂದರೆ, ಈ ಸಂದರ್ಭದ ಹುಲಿ ವೇಷ ಶ್ರೀ ವೆಂಕಟರಮಣ ಪ್ರಾಥಮಿಕ ಶಾಲೆ, ಮಹಮ್ಮಾಯಿ ದೇವಳವಾಗಿ ಇವರ ಮನೆಯ ಶಾಂತ ದುರ್ಗಾ ದೇವಿಯ ಎದುರು ಸೇವಾ ರೂಪದಲ್ಲಿ ಕುಣಿಯುವ ಕ್ರಮವಿತ್ತೆಂಬುದು ಹಿರಿಯರ ಮಾತು. ಸರಿ ಸುಮಾರು ೭೫ ವರ್ಷಗಳ ಹಿಂದೆ ಈ ದೇವಿಯ ಮೂರ್ತಿಯನ್ನು ಸೀತಾರಾಮ ದೇವಾಲಯಕ್ಕೆ ನೀಡಿ ಅಂಡಾರು ದೇವರಾಯ ರಾವ್ ಕುಟುಂಬದವರು ಊರಿನಿಂದ ನಿರ್ಗಮಿಸಿದರು.
ಈ ದೇವಳದ ಮುಂಭಾಗದಲ್ಲಿ ಪ್ರತಿ ವರ್ಷ ’ಗುರ್ಜಿ’ ಕಟ್ಟುವ ಸಂಪ್ರದಾಯವಿತ್ತು. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ದೇವರ ಉತ್ಸವ ರಾತ್ರೆ ದೇವಳದಿಂದ ಹೊರಟು, ಮುಖ್ಯರಸ್ತೆಯಾಗಿ ಈಗಿನ ವಿ.ಎನ್.ಆರ್ ಗೋಲ್ಡ್‌ನ ಎದುರು ಕಟ್ಟೆ ಪೂಜೆ ಆಗಿ, ಕೊಟ್ರಮ್ಮನ ಗಂಡಿಯಾಗಿ ಹನುಮಂತ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ತ್ಯಾಗ ರಾಜ ರಸ್ತೆಯಲ್ಲಿ ಅಲ್ಲಲ್ಲಿ ಸಾರಸ್ವತರ ಮನೆಗಳ ಎದುರಿರುವ ಕಟ್ಟೆಗಳಲ್ಲಿ ಪೂಜೆಗೊಂಡು, ಪುನಃ ದೇವಳಕ್ಕೆ ಬರುವಾಗ ಬೆಳಗ್ಗಿನ ಜಾವ ಏಳು ಗಂಟೆಯಾಗುತ್ತಿತ್ತು. ಹೆಚ್ಚಿನಂಶ ಆ ಸಂದರ್ಭದ ಬಂಟ್ವಾಳದಲ್ಲಿ ಗೌಡ ಸಾರಸ್ವತರಿಗೆ ಸಮಾನ ಸಂಖ್ಯೆಯ ಮನೆಗಳು ಸಾರಸ್ವತರದ್ದೇ ಆಗಿರಬೇಕು; ಅಷ್ಟೊಂದು ಕುಟುಂಬಗಳು ಒಟ್ಟಾಗಿ ಮೆರೆಯುತ್ತಿದ್ದ ಸಂದರ್ಭವದು. ಈಗಿನ ಕಾಶೀ ಮಠ(ತ್ಯಾಗರಾಜ ರಸ್ತೆ) ಹೊಸಪೇಟೆಯ ರಸ್ತೆಯಲ್ಲಿ ಹೆಚ್ಚಾಗಿ ಸಾರಸ್ವತರ ಮನೆಗಳೇ ತುಂಬಿದ್ದವು. ತಂತ್ರಿ, ಪುರೋಹಿತ, ಪುರಾಣಿಕರೆಂದು ಮೂರು ಕುಟುಂಬದವರು ದೇವರ ಚಾಕರಿಗೆ ಮೀಸಲಾಗಿದ್ದರು. ತಂತ್ರಿಯಾಗಿ ಗಣಪತಿ ಭಟ್ಟ(ಮಗ್ಗದ ಭಟ್ರು) ಕಾರ್ಯ ನಿರ್ವಹಿಸುತ್ತಿದ್ದರು.
೧೯೦೭ರಲ್ಲಿ ಕಾಲರಾ ರೋಗ, ೧೯೧೭ರಲ್ಲಿ ಪ್ಲೇಗ್ ರೋಗ ಹಬ್ಬಿ ಸುಮಾರು ಅರ್ಧದಷ್ಟು ಮಂದಿ ಸಾರಸ್ವತರು ಇಲ್ಲಿಂದ ವಲಸೆ ಹೋದರು. ಆ ನಂತರ ೧೯೨೩ರ ನೆರೆಯಿಂದಾಗಿ ಬಹುತೇಕ ಮಂದಿ ಬೇರೆ ಪ್ರದೇಶಗಳಿಗೆ ವಲಸೆ ಹೋದರು. ಈಗ ಅಧಿಕ ಸಂಖ್ಯೆಯಲ್ಲಿರುವ ಗೌಡ ಸಾರಸ್ವತರ ಮಧ್ಯೆ ಸಾರಸ್ವತರ ಬೆರಳೆಕೆಣಿಯ ಮನೆಗಳು ಮಾತ್ರ ಉಳಿದಿವೆ.
೧೯೧೭ರಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವವನ್ನು ಕಂಡ ಈ ದೇವಾಲಯದಲ್ಲಿರುವ ಶ್ರೀ ರಾಮನ ಉತ್ಸವ ಮೂರ್ತಿಗೆ ಭಿನ್ನ ಬಂದ ಕಾರಣದಿಂದಾಗಿ
ಸ್ವಾಮಿಗಳ ಅಪ್ಪಣೆಯಂತೆ ೧೯.೦೩.೧೯೯೯ ರಲ್ಲಿ ಹೊಸತಾಗಿ ಪಂಚ ಲೋಹದ ರಾಮನ ವಿಗ್ರಹವನ್ನು ಪುನರ್ ಸ್ಥಾಪಿಸಲಾಯಿತು. ೧.೪.೨೦೦೧ ರಲ್ಲಿ ದೇವಳದ ಮುಂಭಾಗದ ಮುಖ್ಯ ದ್ವಾರ ಕಟ್ಟಡ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡಿತು.
೧೮೩೯ರಲ್ಲಿ ಮೊದಲ ಹನುಮಂತ ವಾಹನ ಇಲ್ಲಿ ಸೇರ್ಪಡೆಗೊಂಡಿತು. ೧೮೫೭ರ ರಾಕ್ಷಸ ನಾಮ ಸಂವತ್ಸರದಲ್ಲಿ ಬ್ರಹ್ಮರಥ ಸೇವೆಗೆ ಸಿದ್ಧವಾಯಿತು. ಇದೇ ದೇವಾಲಯದಲ್ಲಿ ಪರಿಚಾರಿಕೆಯಲ್ಲಿದ್ದ ನಾರಾಯಣಪ್ಪ ಅನ್ನುವವರು ’ನಾಣ್ಣಪ್ಪಿ’ ವಾಹನ ಎಂದು ಕರೆಯಲ್ಪಡುವ ಸಣ್ಣ ವಾಹನವೊಂದನ್ನು ದೇವಾಲಯಕ್ಕೆ ಅರ್ಪಿಸಿದರು. ನಾರಾಯಣಪ್ಪ ಹೆಸರಿನ ಸಂಕುಚಿತ ರೂಪ ’ನಾಣ್ಣಪ್ಪಿ’ ಇರಬಹುದು. ಇವುಗಳಲ್ಲದೆ; ಗರುಡ ವಾಹನ, ಅಷ್ಟ ಪಟ್ಟಿ ಲಾಲ್ಕಿ, ಬೊಂಬೆ ಚವರ, ಭಂಡಿ, ರಥ ಇತ್ಯಾದಿ ವಾಹನಗಳನ್ನು ಇಲ್ಲಿ ಕಾಣಬಹುದು. ಇದಲ್ಲದೆ, ಬಂಟ್ವಾಳ ನಿವಾಸಿಯಾಗಿದ್ದ ಕೊಡಿಯಾಲ ಅನಂತರಾಯರು ಶ್ರೀ ರಾಮನ ಸನ್ನಿಧಾನಕ್ಕೆ, ದಿನಾಂಕ ೬.೧೦.೧೯೫೯ ರಂದು ೧೯೫ ರಜತ ತೊಲೆಗಳನ್ನು ಸೇವಾ ರೂಪದಲ್ಲಿ ಒಪ್ಪಿಸಿದ್ದರು.
ಹಿಂದೆ ಬೊಂಬೆ ಚವರ ಎನ್ನುವ ಸುಂದರ ವಾಹನದಲ್ಲಿ ಮೃಗ ಬೇಟೆ ದಿನ ಹಗಲು ಉತ್ಸವದಲ್ಲಿ ದೇವರನ್ನು ಪೇಟೆ ಸವಾರಿಯ ಸಂದರ್ಭದಲ್ಲಿ ಈ ವಾಹನದಲ್ಲಿ ಕುಳ್ಳಿರಿಸುತ್ತಿದ್ದರು. ಸದ್ಯಕ್ಕೆ ಹಗಲು ಉತ್ಸವ ನಿಂತು ಹೋಗಿದೆ. ಈ ದೇವಳದ ಹಳೆಯ ಭಂಡಿ ರಥವನ್ನು ಆಗಿನ ಆಡಳಿತದಾರರಾದ ಕೇಳ ಕುಮಾರ ರಾವ್ ಅವರು ನಾವೂರಿನ ಬೀದಿ ಗೋಪಾಲಕೃಷ್ಣ ದೇವಳಕ್ಕೆ ಒಪ್ಪಿಸಿದ್ದರು.
ದೇವರ ಹೆಸರಿನಲ್ಲಿ ಸುಮಾರು ೧೫೦ ಮುಡಿ ಆಸ್ತಿ ಇತ್ತು ಮಾತ್ರವಲ್ಲ, ಈ ದೇವಳಕ್ಕೆ ಸಂಬಂಧಪಟ್ಟಂತೆ ಕಳ್ಳಿಗೆ, ಬಡ್ತೋಡಿ, ಕಡಂಬಿ, ಅರೆಬೆಟ್ಟು(ವಿಟ್ಲ ಸಮೀಪ), ಮಾಡಮ್ಮೆ(ಸಿದ್ದಕಟ್ಟೆ), ಬಡ್ಡಕಟ್ಟೆ ಮೊದಲಾದ ಕಡೆಗಳಲ್ಲಿ ಜಾಗ ಹರಡಿತ್ತಂತೆ. ಈ ಎಲ್ಲಾ ವಿಚಾರಗಳು ಈ ದೇವಾಲಯದ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿ ತೀರದಲ್ಲಿ ಸಾರಸ್ವತರಿಗೆ ಸಂಬಂಧಪಟ್ಟಂತೆ ಉತ್ತರ ಕ್ರಿಯಾದಿ ಕೆಲಸ ಕಾರ್ಯಗಳನ್ನು ಮಾಡುವರೇ ಛತ್ರವೊಂದಿತ್ತು ಅನ್ನುವುದನ್ನು ಈ ದೇವಳಕ್ಕೆ ಸಂಬಂಧಿತರು ನೆನಪಿಸಿಕೊಳ್ಳುತ್ತಾರೆ.
ಹೋಳಿ ಹುಣ್ಣಿಮೆಯಂದು ಕಾಮ ದಹನ ಹಬ್ಬ; ಲಕ್ಷ ದೀಪೋತ್ಸವ, ಹನುಮಜ್ಜಯಂತಿ, ಯುಗಾದಿ, ಪೇಟೆ ಸವಾರಿ ಇತ್ಯಾದಿ ನಡೆಯುತ್ತಿತ್ತು; ಪ್ರತಿ ದಿನ ಐದು ಸೇರು ಅಕ್ಕಿ ನೈವೇದ್ಯ ದೇವರಿಗೆ ಸಮರ್ಪಿತವಾಗುತ್ತಿತ್ತು ಅನ್ನುವುದೂ ಕೂಡ ದೇವಳದ ಗತ ವೈಭವವನ್ನು ಸೂಚಿಸುತ್ತದೆ. ಆದರೆ ೧೯೭೦ರ ದಶಕದಲ್ಲಿ, ಭೂಸುಧಾರಣಾ ಕಾಯ್ದೆಯನ್ವಯ ದೇವಾಲಯದ ಆದಾಯದ ಮೂಲಕ್ಕೇ ತೀವ್ರ ಹೊಡೆತ ಬಿತ್ತು ಮಾತ್ರವಲ್ಲ ಚಿತ್ರಾಪುರ ಸಮಾಜದ ಅನೇಕ ಕುಟುಂಬಗಳು ಬಂಟ್ವಾಳದಿಂದ ದೂರದ ಊರುಗಳಿಗೆ ವಲಸೆ ಹೋದದ್ದೂ ಕೂಡ ದೇವಳದ ಆರ್ಥಿಕ ತೊಂದರೆಗಳಿಗೆ ಕಾರಣವಾಯಿತು. ಹೀಗಿದ್ದೂ ಊರ ಹಾಗೂ ಪರವೂರ ಸಮಸ್ತ ಸಮಾಜ ಬಂಧುಗಳ ಉದಾರ ದೇಣಿಗೆಯಿಂದ ದೇವಳವು ಪುನಃಶ್ಚೇತನಗೊಂಡು ಸಮಸ್ತ ಹಿಂದು ಜನಾಂಗಕ್ಕೆ ಶ್ರದ್ಧಾ ಕೇಂದ್ರವೆನಿಸಿತು.
ವಾರ್ಷಿಕ ನಡಾವಳಿಗಳು: ಶ್ರೀ ದೇವಳದಲ್ಲಿ ತ್ರಿಕಾಲದಲ್ಲೂ ಪೂಜೆ ನಡೆಯುತ್ತಿದ್ದು, ವಾರ್ಷಿಕ ಮಹಾ ರಥೋತ್ಸವವು ಶ್ರೀ ರಾಮನವಮಿಯ ದಿನ ನಡೆಯುವುದು. ಏಳು ದಿನಗಳ ಕಾಲ ನಿರಂತರ ಈ ಕಾರ್ಯಕ್ರಮವು ನಡೆಯುತ್ತದೆ. ಪ್ರತಿ ದಿನ ಒಂದು ಸೇರು ಅಕ್ಕಿ ನೈವೇದ್ಯದೊಂದಿಗೆ, ವರ್ಷದಲ್ಲಿ ನಾಗರ ಪಂಚಮಿ, ಚೌತಿ, ಕಾರ್ತಿಕ ಹುಣ್ಣಿಮೆ, ಯುಗಾದಿ ಮುಂತಾದ ವಿಶೇಷ ಉತ್ಸವಗಳು ನಡೆಯುತ್ತವೆ.
ಪ್ರಕೃತ, ಶ್ರೀ ದೇವರ ಪುನರ್ ಪ್ರತಿಷ್ಠಾ ವರ್ಧಂತಿ ಹಾಗೂ ಶ್ರೀರಾಮ ನವಮಿ ರಥೋತ್ಸವ ಸಮಾರಂಭ ದಿನಾಂಕ ೩೦ರಿಂದ ಆರಂಭಗೊಂಡಿದೆ. ೧.೪.೧೭ನೇ ಶನಿವಾರ ಬೆಳಿಗ್ಗೆ ಅಭಿಷೇಕ, ಯಜ್ಞಾರಂಭ, ಯಜ್ಞಾರತಿ, ಬಲಿ ಸಂತರ್ಪಣೆ; ರಾತ್ರಿ ಗಂಟೆ ೮ಕ್ಕೆ ನಗರ ಉತ್ಸವ, ವಸಂತ ಪೂಜೆ, ಅಷ್ಟಾವಧಾನ, ಪ್ರಸಾದಸಾದ; ದಿನಾಂಕ ೨ರಂದು ಬೆಳಿಗ್ಗೆ ಯಜ್ಞಾರಂಭ, ಯಜ್ಞಾರತಿ, ಬಲಿ, ಸಂತರ್ಪಣೆ, ರಾತ್ರಿ ಗಂಟೆ ೮ಕ್ಕೆ ಗೋಪುರೋರೋತ್ಸವ, ನಗರ ಉತ್ಸವ, ವಸಂತ ಪೂಜೆ, ಅಷ್ಟಾವಧಾನ, ಪ್ರಸಾದ; ದಿನಾಂಕ ೩.೩.೧೭ನೇ ಸೋಮವಾರ ಎಂದಿನಂತೆ ಯಜ್ಞ, ರಾತ್ರಿ ಗಂಟೆ ೮.೩೦ಕ್ಕೆ ಮೃಗ ಬೇಟೆ ಉತ್ಸವ, ನೇತ್ರಾವತಿ ನದೀ ತೀರದಲ್ಲಿ ಕಟ್ಟೆ ಪೂಜೆ, ನಗರ ಉತ್ಸವ, ದ್ವಾರ ಪೂಜೆ, ವಸಂತ ಪೂಜೆ, ಅಷ್ಟಾವಧಾನ, ಪೂಜೆ. ದಿನಾಂಕ ೪.೪.೧೭ರ ಮಂಗಳವಾರ ಚೈತ್ರ ಶುದ್ಧ ೯ಯು ಶ್ರೀ ರಾಮನವಮಿ, ಬೆಳಿಗ್ಗೆ ಗಂಟೆ ೮.೩೦ಕ್ಕೆ ಸಾಮೂಹಿಕ ಪ್ರಾರ್ಥನೆ, ಸೀಯಾಳ ಅಭಿಷೇಕ, ಯಜ್ಞಾರಂಭ, ಯಜ್ಞ ಪೂರ್ಣಾಹುತಿ. ಮಧ್ಯಾಹ್ನ ೧೨.೩೦ಕ್ಕೆ ರಥಾರೋಹಣ, ಸಂತರ್ಪಣೆ, ರಾತ್ರಿ ಗಂಟೆ ೮.೩೦ಕ್ಕೆ ರಥೋತ್ಸವ, ವಸಂತಪೂಜೆ, ಅಷ್ಟಾವಧಾನ, ಪ್ರಸಾದ. ದಿನಾಂಕ ೫.೪.೧೭ರ ಬುಧವಾರ ಚೈತ್ರ ಶುದ್ಧ ೧೦ಯು ಬೆಳಿಗ್ಗೆ ಗಂಟೆ ೮ಕ್ಕೆ ಅವಭೃತೋತ್ಸವ, ನಗರ ಉತ್ಸವ, ನದಿ ಸ್ನಾನ, ಧ್ವಜಾವರೋಹಣ,, ಸಾಮೂಹಿಕ ಪ್ರಾರ್ಥನೆ, ಯಜ್ಞ ವಿಸರ್ಜನೆ, ಸಂತರ್ಪಣೆ. ರಾತ್ರಿ ಗಂಟೆ ೮ಕ್ಕೆ ವಸಂತ ಪೂಜೆ, ಅಷ್ಟಾವಧಾನ, ನವಗ್ರಹ ದಾನ ಅಂಕುರ ಪ್ರಸಾದ ವಿತರಣೆಯೊಂದಿಗೆ ಉತ್ಸವ ಪರಿಸಮಾಪ್ತಿಗುಳ್ಳುತ್ತದೆ.
(ಲೇಖನದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9449894812)

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts