ಏನ್ಮಗನಿಗೆ ಏನೂ ಕೆಲಸ ಇಲ್ಲ ಅಂತಲ್ಲ. ಹಾಗಂತ ಭಾರೀ ಕೆಲಸ ಇರುವವನೂ ಅಲ್ಲ.
ಆದರೆ ಯಾರಾದ್ರೂ ಹೇಗಿದ್ದೀರಿ ಅಂತ ಕೇಳಿದರೆ ಪುರುಸೊತ್ತೇ ಇಲ್ಲ, ನಿನ್ನೆ ಅಲ್ಲಿಗೆ ಹೋಗಲಿಕ್ಕಿತ್ತು, ಇವತ್ತು ಮಂಗಳೂರಿಗೆ ಹೋಗಬೇಕು, ನಾಳೆ ಬೆಂಗ್ಳೂರಿಗೆ ಹೋದ್ರೂ ಹೋದೆ, ಹೇಳ್ಳಿಕ್ಕಾಗೂದಿಲ್ಲ, ಯಬ್ಬ! ಬಿಝೀ ಅಂದ್ರೆ ಬಿಝೀ, ಎಲ್ಲದಕ್ಕೂ ನಾನೇ ಆಗ್ಬೇಕು, ನನ್ನ ಕೆಲಸದ ಒಟ್ಟಿಗೆ ದಿನಕ್ಕೆರಡು ಸಲ ಆ ಲಾಕ್ಮನೆ ಫೋನು ಮಾಡ್ತಾನೆ, ಅಲ್ಲಿಗೆ ಬಾ ಇಲ್ಲಿಗೆ ಬಾ, ನೀನಿದ್ರೆ ನನ್ನ ಕೆಲಸ ಆದದ್ದೇ ಗೊತ್ತಾಗೂದಿಲ್ಲ ಅಂತ.. ಅಂತೆಲ್ಲ ಅರ್ಧ ಗಂಟೆ ಅವನು ಹೇಗೆ ಬಿಝೀ ಅಂತ ಹೇಳುತ್ತ ಹೋದಾನು. ಹಾಗಂತ ನಮ್ಮ ಏನ್ಮಗ ಹಾಗೆಲ್ಲ ಸುಮ್ಮಸುಮ್ಮನೆ ಲಾಕ್ಮನೆಯ ಮನೆಗೆ ಬರುವುದಿಲ್ಲ. ಅವನಿಗೆ ಬರಬೇಕೆಂದು ಕಂಡಾಗ ಮಾತ್ರ ಬರುವುದು. ಮತ್ತೆ ಅವನಿಗೆ ಬರಬೇಕೆಂದು ಕಾಣಲು ನಮಗೆ ಕಾಣುವಂಥ ಯಾವುದೇ ಕಾರಣ ಇರಬೇಕೆಂದೂ ಇಲ್ಲ.
ಈ ಬಾರಿ ಏನ್ಮಗನು ಲಾಕ್ಮನೆಯ ಮನೆಗೆ ಬಂದಾಗ ಲಾಕ್ಮನೆ ಸಿಗರೇಟು ಸೇದುತ್ತಲೂ ಇರಲಿಲ್ಲ ಅಥವಾ ಶತಪಥ ಹಾಕುತ್ತಲೂ ಇರಲಿಲ್ಲ. ಆದರೂ ಅವನು ಭಯಂಕರ ತಲೆಬಿಸಿಯಲ್ಲಿ ಇದ್ದ ಅನ್ನುವುದು ಅವನು ಉಗುರು ಕಚ್ಚುತ್ತ್ತಿದ್ದುದನ್ನು ನೋಡಿದರೆ ಯಾರಿಗಾದರೂ ಗೊತ್ತಾಗಬಹುದಿತ್ತು.
ಇನ್ನು ಅವನನ್ನು ಹಲವಾರು ವರ್ಷಗಳಿಂದ ನೋಡುತ್ತಿರುವ ಏನ್ಮಗನಿಗೆ ಗೊತ್ತಾಗದೇ ಇದ್ದೀತೇ? ಗೊತ್ತಾಗಿಯೇ ಆಯಿತು. ಮತ್ತು ಈ ತಲೆಬಿಸಿಗೆ ಆಗಷ್ಟೇ ಅಂದರೆ ಏನ್ಮಗನು ಅಂಗಳಕ್ಕೆ ಕಾಲಿಡುವಾಗಷ್ಟೇ ಹೊರಹೋಗುತ್ತಿದ್ದ ಸುಮಾರು ಇಪ್ಪತ್ತೈದರ ಹುಡುಗಿಯೇ, ಅಲ್ಲಲ್ಲ, ಮಹಿಳೆಯೇ ಕಾರಣವಿರಬಹುದು ಅಂತಲೂ ಅಂದಾಜಾಯಿತು.
”ಅಬ್ಬ ಬಂದ್ಯಾ ಮಾರಾಯ? ನಿನ್ನನ್ನೇ ನೆನಪು ಮಾಡಿಕೊಳ್ತಾ ಇದ್ದೆ. ನಾನು ಪತ್ತೇದಾರಿಕೆಯ ಕೆಲಸ ಸುರು ಮಾಡಿ ಎಷ್ಟು ವರ್ಷ ಆಯಿತು ಹೇಳು”
ಲಾಕ್ಮನೆ ಹೇಳಿದ ಮತ್ತು ಕೇಳಿದ.
”ಏನಿಲ್ಲದಿದ್ರೂ ಇಪ್ಪತ್ತೈದು ವರ್ಷ ಆಗಲಿಲ್ವೋ? ”
ಅಂತ ಏನ್ಮಗನೂ ಕೇಳಿದ.
ಲಾಕ್ಮನೆ ಸ್ವಲ್ಪ ಉತ್ಸಾಹಗೊಂಡಂತೆ ಕಂಡ-”ಮತ್ತೆ?! ಆದ್ರೆ ನನ್ನ ಇಡೀ ಇಷ್ಟು ವರ್ಷಗಳ ಈ ಕೆಲಸದಲ್ಲಿ ಇಂಥದ್ದೊಂದು ಸಮಸ್ಯೆ ಬಂದದ್ದೇ ಇಲ್ಲ. ಇದನ್ನು ಹೇಗೆ ಪರಿಹಾರ ಮಾಡುವುದೂ ಅಂತ ಗೊತ್ತಾಗೂದೂ ಇಲ್ಲ”
ಲಾಕ್ಮನೆಯ ಇಂಥ ಮಾತುಗಳನ್ನು ಏನ್ಮಗ ಎಷ್ಟು ಸಲ ಕೇಳಿದ್ದಾನೋ ಏನೋ. ಈ ಕೇಸು ನನ್ನಿಂದ ಆಗುವಂಥದ್ದಲ್ಲಪ್ಪಾ ಅಂತ ಶತಪಥ ಹಾಕುತ್ತಿದ್ದ ಲಾಕ್ಮನೆಯನ್ನು ನೋಡಿ ಏನ್ಮಗನೇ ಸುಸ್ತಾಗಿ ಕೊನೆಗೆ ಮನೆಗೆ ಹೊರಡುತ್ತೇನೆ ಅಂದಾಗ ಥಟ್ಟನೆ ಲಾಕ್ಮನೆಗೆ ಏನೋ ಹೊಳೆಯುತ್ತಿತ್ತು. ಕೆಲವೊಮ್ಮೆ ಆಗಲೇ ಅಥವಾ ಕೆಲವೊಮ್ಮೆ ಮರುದಿನ ಏನ್ಮಗನನ್ನೂ ಕರೆದುಕೊಂಡು ಲಾಕ್ಮನೆ ಹೊರಟರೆ ಕೇಸು ಪತ್ತೆಯಾಯಿತೆಂದೇ ಅರ್ಥ.
ಹೀಗಾಗಿ ಈವರೆಗೆ ಲಾಕ್ಮನೆಯ ಕೈಗೆ ಬಂದ ಒಂದೇ ಒಂದು ಕೇಸೂ ಕಂಡುಹಿಡಿಯದೇ ಬಾಕಿ ಆದದ್ದು ಅಂತಲೇ ಇಲ್ಲ. ಇದೂ ಹಾಗೇ ಅಂತ ಏನ್ಮಗನಿಗೆ ವಿಶ್ವಾಸವಿತ್ತು. ಕೇಳಿದ-”ನೀನು ಸುಮ್ಮನೆ ಗಡಿಬಿಡಿ ಮಾಡುವುದು ಯಾಕೆ? ಕೂತು ಆಲೋಚನೆ ಮಾಡುವ. ಅದ್ಯಾರು ಆ ಸುಂದರಿ ನಾನು ಬರುವಾಗ ಹೋದದ್ದು?”
”ನೋಡು ನೋಡು ಸುಂದರಿ ಅಂದ್ರೆ ನಿನಗೂ ಕುತೂಹಲ ಜಾಸ್ತಿ ಆಗುತ್ತದಲ್ವಾ? ನೀನು ಬರದೆ ನಾಲ್ಕು ದಿನ ಆಯಿತಲ್ವ? ಈ ಕೇಸು ಮೊನ್ನೆಯಿಂದ ತಲೆ ತಿನ್ತಾ ಉಂಟು. ಮೊನ್ನೆಯೇ ಫೋನಿನಲ್ಲಿ ಮಾತನಾಡಿದ್ದಳು ಅವಳು. ನಿನಗೆ ಗೊತ್ತುಂಟಲ್ಲ ನಾನು ನನ್ನ ಕ್ಲಯಂಟುಗಳು ಮನೆಗೆ ಬರುವುದನ್ನು ಇಷ್ಟಪಡೂದಿಲ್ಲ. ಈಗ ಫೋನೇ ಸುರಕ್ಷಿತ. ಕ್ಲಯಂಟುಗಳೂ ಇಲ್ಲಿ ಬರಲು ಬಯಸುದಿಲ್ಲ. ನಾನು ಒಬ್ಬ ಪತ್ತೇದಾರ ಅಂತ ಊರಲ್ಲಿಡೀ ಗೊತ್ತಿರೂದರಿಂದ. ನನ್ನತ್ರ ಬಂದದ್ದು ಬೇರೆಯವರಿಗೆ ಗೊತ್ತಾಗುವುದು ನನ್ನ ಕ್ಲಯಂಟುಗಳಿಗೂ ಇಷ್ಟವಿಲ್ಲ. ಆದರೂ ಇವತ್ತು ಅವಳನ್ನು ಬರಲಿಕ್ಕೆ ಹೇಳಿದೆ, ಸ್ವಲ್ಪ ವಿವರವಾಗಿ ಮಾಹಿತಿ ಅವಳಿಂದ ಬೇಕಿತ್ತು”
ಏನ್ಮಗನಿಗೆ ಕುತೂಹಲ ಹೆಚ್ಚಾಯಿತು. ಕೇಳಿದ-”ಅವಳಿಗೆ ಏನು ಪತ್ತೆಯಾಗಬೇಕಾಗಿದೆ?”
ಇಷ್ಟನ್ನು ಲಾಕ್ಮನೆ ಹೇಳಿ ಮುಗಿಸಿದಾಗ ಏನ್ಮಗನಿಗೂ ಇದು ಗಂಭೀರ ಸಮಸ್ಯೆ ಅಂತ ಅಂದಾಜಾಯಿತು. ಗೆಳತಿಗೂ ಇವಳ ಗಂಡನಿಗೂ ನಡುವೆ ಏನಾದರೂ ಉಂಟೋ ಅಂತ ಕಂಡುಹಿಡಿಯುವುದು ದೊಡ್ಡ ಸಮಸ್ಯೆಯಲ್ಲ ಅಂತ ಏನ್ಮಗನಿಗೂ ಅನಿಸಿತು. ಆದರೆ ಇವಳ ಗಂಡ ಕೊಲೆಗಾರ ಹೌದೋ ಅಲ್ಲವೋ ಅಂತ, ಯಾವ ಸಾಕ್ಷಿಯೂ ಇಲ್ಲದಿರುವಾಗ ಕಂಡುಹಿಡಿಯುವುದು ಹೇಗೆ?
”ಈಗ ಅದೆಲ್ಲ ತಿಳಕೊಂಡು ಅವಳಿಗೇನಾಗಬೇಕಾಗಿದೆ? ಹೇಗೂ ಇವಳ ಗೆಳತಿ ಅವಳಷ್ಟಕ್ಕೇ ಇದ್ದಾಳಲ್ಲ? ಕೊಲೆ ಕೇಸು ಹಾಕಿಲ್ಲ ತಾನೆ? ಪೋಲಿಸರ ಕಿರಿಕಿರಿಯೂ ಇಲ್ಲ ತಾನೇ? ಇವಳ ಗಂಡನಿಗೂ ಆ ಗೆಳತಿಗೂ ಏನಾದರೂ ಉಂಟೋ ಅಂತ ನಾವು ಪತ್ತೆ ಮಾಡಿದ್ರೆ ಮುಗೀತಲ್ಲ? ”ಅಂದ ಏನ್ಮಗ.
ಲಾಕ್ಮನೆ ಹೇಳಿದ ‘‘-ಅದಷ್ಟೇ ಆದ್ರೆ ನಾನ್ಯಾಕೆ ತಲೆಬಿಸಿ ಮಾಡ್ತಿದ್ದೆ? ಇವಳಿಗೆ ಆ ಸಾವಿನದ್ದೇ ಮುಖ್ಯ ಪ್ರಶ್ನೆಯಾಗಿದೆ. ಹಾಗಾಗಿ ಅದನ್ನು ಪತ್ತೆ ಮಾಡದೆ ಇದನ್ನು ಪತ್ತೆ ಮಾಡಿ ಏನೂ ಪ್ರಯೋಜನ ಇಲ್ಲ ಅಂತಲೇ ಹೇಳಿದ್ದಾಳೆ. ಫೀಸೂ ಸಿಗಲಿಕ್ಕಿಲ್ಲ.” ಏನ್ಮಗನಿಗೂ ಏನೂ ಹೊಳೆಯಲಿಲ್ಲ. ಓ! ಹೌದಾ?! ಇದು ನನ್ನಿಂದಲೂ ಬಿಡಿಸಲಿಕ್ಕಾಗದ ಸಮಸ್ಯೆ ಮಹರಾಯಾ, ನಾನಿನ್ನು ಬರ್‍ತೇನೆ. ನೋಡೋಣ ಏನಾದ್ರೂ ಹೊಳೆದರೆ ನಾಳೆಯೋ ನಾಡಿದ್ದೋ ಬಂದಾಗ ಹೇಳುತ್ತೇನೆ. ಅಂತಂದು ಏನ್ಮಗ ಹೊರಟುಹೋದ.
ನಾಲ್ಕು ದಿನ ಬಿಟ್ಟು ಏನ್ಮಗ ಬಂದಾಗ ಲಾಕ್ಮನೆ ಭಾರೀ ಖುಷಿಯಲ್ಲಿದ್ದ. ಏನ್ಮಗನಿಗೂ ಖುಷಿಯಾಯಿತು. ಎಲ್ಲವನ್ನೂ ಪತ್ತೆ ಮಾಡಿಯೇ ಬಿಟ್ಟಿರಬೇಕು; ನನಗೆ ಹೇಳದೇ ಹೋಗಿ ಪತ್ತೇದಾರಿಕೆ ಮಾಡಿಕೊಂಡು ಬಂದಿದ್ದಾನೆ ಅಂದುಕೊಂಡ ಏನ್ಮಗ.
”ಸತ್ಯ ಗೊತ್ತಾಯಿತಾ? ಭಾರೀ ಖುಷಿಯಲ್ಲಿದ್ದೀ.” ಅಂತ ಕೇಳಿದ.
ಲಾಕ್ಮನೆ ಅಂದ- ”ದೊಡ್ಡ ಸತ್ಯ ಗೊತ್ತಾಯಿತು ಮಾರಾಯಾ. ಆದರೆ ಆ ಸುಂದರಿಯ ಕೇಸು ಏನೂಂತ ಗೊತ್ತಾಗಲಿಲ್ಲ.” ಏನ್ಮಗನಿಗೆ ಅಚ್ಚರಿ. ಗೊತ್ತಾಯಿತು ಅಂತಾನೆ, ಕೇಸು ಹಾಗೇ ಉಂಟು ಅಂತಲೂ ಹೇಳ್ತಾನೆ. ಏನಪ್ಪ ಇದು ಅಂದುಕೊಂಡ.
ಕೇಳಿಯೇ ಬಿಟ್ಟ-” ಅಲ್ಲ, ನೀನು ಕೇಸಿನ ಸತ್ಯವನ್ನು ಪತ್ತೆ ಮಾಡದಿದ್ರೆ ಕಾನಂಡಯಲಣ್ಣ ನಾಳೆ ನಿನ್ನ ಕತೆ ಏನು ಬರೀತಾನೆ? ” ಲಾಕ್ಮನೆಗೆ ಅಚ್ಚರಿಯಾಗಲಿಲ್ಲ ಏನ್ಮಗನ ಮಾತು ಕೇಳಿ. ಯಾಕೆಂದರೆ ಲಾಕ್ಮನೆ ಹಿಡಿದ ಕೇಸು ಪತ್ತೆಯಾಗದೆ ಇದ್ದದ್ದೇ ಇಲ್ಲವಲ್ಲ ಈವರೆಗೆ? ಲಾಕ್ಮನೆ ಹೇಳಿದ-” ನಾನು ಅವಳಿಗೆ ಹೇಳಿಬಿಟ್ಟೆ ನಾನು ಸೋತೆ ಅಂತ; ಇದು ನನ್ನಿಂದ ಆಗೂದಿಲ್ಲ ಅಂತ. ಈ ಮೂಲಕ ನಾನು ಜಗತ್ತಿನ ದೊಡ್ಡ ಸತ್ಯವೊಂದನ್ನು ಪತ್ತೆ ಮಾಡಿದ್ದೇನೆ. ಅದೇನೆಂದರೆ ಸೋಲನ್ನು ಸ್ವೀಕರಿಸುವುದರಷ್ಟು ದೊಡ್ಡ ಗೆಲುವಿಲ್ಲ ಅನ್ನುವುದು. ಅದನ್ನೇ ಈ ಸಲ ಕಾನಂಡಯಲಣ್ಣ ಬರೆಯಲಿ. ಈ ಬಾರಿ ಒಮ್ಮೆಯಾದರೂ ಲಾಕ್ಮನೆ ಸೋತ ಕತೆ ಅವನು ಬರೆಯಲಿ. ಇನ್ನು ಮುಂದೆ ನನಗೆ ಸೋಲುವ ಗೆಲುವಿನ ಸುಖ ಮತ್ತೆ ಮತ್ತೆ ಬೇಕು. ಅವಮಾನದ ಸಮ್ಮಾನವೂ ತಿರಸ್ಕಾರದ ಪುರಸ್ಕಾರವೂ.”