ಬಂಟ್ವಾಳ ಭಂಡಾರಿಬೆಟ್ಟು ನಿವಾಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ಯಾಕ್ಸೋಫೋನ್‌ವಾದಕ ಬಿ.ಜಿ.ರವೀಂದ್ರ ಬಂಟ್ವಾಳ್ (71) ಹೃದಯಾಘಾತದಿಂದ ಮೂಡುಬಿದ್ರೆ ಸ್ವಗೃಹದಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.
ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೂಡುಬಿದ್ರೆ ಗಾಂಧಿನಗರ ಎಂಬಲ್ಲಿ ವಾಸವಾಗಿರುವ ಇವರು ಬುಧವಾರ ಮುಂಜಾನೆಯಷ್ಟೇ ಮುಂಬೈನಿಂದ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸಾಗಿದ್ದರು.
ಕಳೆದ 40 ವರ್ಷಗಳ ಹಿಂದೆ ತಂಜಾವೂರಿನಲ್ಲಿ ನಾದಸ್ವರ ಮತ್ತು ಬಂಟ್ವಾಳದಲ್ಲಿ ಸ್ಯಾಕ್ಸೋಫೋನ್ ತರಬೇತಿ ಪಡೆದು ಬಳಿಕ ಜನಪ್ರಿಯ ಸ್ಯಾಕ್ಸೋಫೋನ್‌ವಾದಕರಾಗಿ ಗುರುತಿಸಿಕೊಂಡಿದ್ದರು. ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ಸಹಿತ ಪುನರೂರು, ತೋಕೂರು ದೇವಸ್ಥಾನ ಹಾಗೂ ಫರಂಗಿಪೇಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಖಾಯಂ ಸ್ಯಾಕ್ಸೋಫೋನ್‌ವಾದಕರಾಗಿದ್ದ ಇವರ ಧ್ವನಿಸುರುಳಿಯೂ ಬಿಡುಗಡೆಗೊಂಡಿದೆ. ಮೂಡುಬಿದ್ರೆ ಗಾಣಿಗ ಸಂಘದ ಉಪಾಧ್ಯಕ್ಷರಾಗಿದ್ದರು. ಕಳೆದ ೧೦ ವರ್ಷಗಳ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದೆ.