ಪಾಕಶಾಲೆಯೇ ವೈದ್ಯಶಾಲೆ

ಸಾಮಾನ್ಯದ್ದೇನಲ್ಲ ಕೊತ್ತಂಬರಿ ಬೀಜ

www.bantwalnews.com

ಡಾ.ಎ.ಜಿ.ರವಿಶಂಕರ್

ಅಂಕಣ: ಪಾಕಶಾಲೆಯೇ ವೈದ್ಯಶಾಲೆ

 ನೋಡಲು ಸಣ್ಣದಾಗಿರುವ ಕೊತ್ತಂಬರಿ ಬೀಜದ ಹಿರಿಮೆ ದೊಡ್ಡದು. ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿಡುವ ಗುಣ ಹೊಂದಿರುವುದು ಸಾಮಾನ್ಯ ವಿಷಯವೇ?

 

ಸಾಧಾರಣವಾಗಿ ಯಾವುದೇ ಸಾಂಬಾರು ಪದಾರ್ಥಗಳು ಕೊತ್ತಂಬರಿ ಬೀಜ ಹಾಕದೆ ಪರಿಪೂರ್ಣವಾಗುವುದಿಲ್ಲ. ಇದರಿಂದ ತಿಳಿಯುವುದೇನೆಂದರೆ ವಾತ ಪಿತ್ತ ಕಪಗಳನ್ನು ಸಮತೊಲನದಲ್ಲಿಡುವ  ಗುಣವನ್ನು  ಹೊಂದಿರುವ ಪದಾರ್ಥವನ್ನು ನಮಗೆ ತಿಳಿದೋ ಅಥವಾ ತಿಳಿಯದೆಯೋ ಸೇರಿಸಿದಂದಾಗುತ್ತದೆ. ಹೀಗೆ ಕೊತ್ತಂಬರಿ ಬೀಜದ ಮಹಿಮೆ ಏನು ಎಂಬುದನ್ನು ಒಂದೊಂದಾಗಿ ನೋಡೋಣ.

  1. ಮೂಗಿನಲ್ಲಿ ರಕ್ತಸ್ರಾವ ಆಗುವುದಿದ್ದರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಮೂಗಿಗೆ ಬಿಡಬೇಕು ಮತ್ತು ಕೊತ್ತಂಬರಿಯನ್ನು ನೀರಿನಲ್ಲಿ ಅರೆದು ಹಣೆಗೆ ಲೇಪಿಸಬೇಕು .
  2. ಕಣ್ಣಿನ ನೋವು, ಉರಿ, ಸ್ರಾವ ಇದ್ದಾಗ ಕೊತ್ತಂಬರಿ ನೀರನ್ನು ಕಣ್ಣಿಗೆ ಬಿಡಬೇಕು ಅಥವಾ ತೆಳ್ಳಗಿನ ಬಟ್ಟೆಯನ್ನು ಅದರಲ್ಲಿ ಅದ್ದಿ ಕಣ್ಣಿನ ಮೇಲೆ ಇಡಬೇಕು .
  3. ಕೊತ್ತಂಬರಿ ಬೀಜದ ಹಾಲು ಕಷಾಯವು ಖಿನ್ನತೆ,ಅಪಸ್ಮಾರ, ಮೂರ್ಛಾರೋಗ ,ತಲೆಸುತ್ತುವಿಕೆ ಇತ್ಯಾದಿಗಳಲ್ಲಿ ಉತ್ತಮ ಪಥ್ಯಾಹಾರವಾಗಿದೆ.
  4. ಅತಿಯಾದ ಬಾಯಾರಿಕೆಯಾಗುವುದಿದ್ದರೆ ಕೊತ್ತಂಬರಿ ಹಾಕಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
  5. ಜ್ವರದಿಂದಾಗಿ ಬಾಯಾರಿಕೆ, ತಲೆನೋವು, ವಾಕರಿಕೆ ಇತ್ಯಾದಿಗಳು ಇದ್ದಾಗ ಕೊತ್ತಂಬರಿಯನ್ನು ಹಾಗೆಯೇ ಜಗಿಯಬಹುದು ಅಥವಾ ಬೆಲ್ಲ ಹಾಕಿ ಕಷಾಯ ಮಾಡಿ ಕುಡಿದರೂ ಆದೀತು.
  6. ಹೊಟ್ಟೆನೋವು ಆಗಿ ನೊರೆ ಮಿಶ್ರಿತ ಭೇದಿಯ ಸಮಸ್ಯೆಯಲ್ಲಿ ಕೊತ್ತಂಬರಿ ಬೀಜವನ್ನು ಕಷಾಯ ಮಾಡಿ ಕುಡಿಯಬೇಕು ಅಥವಾ ಮಜ್ಜಿಗೆ ಸೇರಿಸಿ ಸೇವಿಸಿದರೂ ಆದೀತು.
  7. ಹುಳದ ಬಾಧೆಯಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಾಗ  ಕೊತ್ತಂಬರಿ ಕಷಾಯವನ್ನು ಕುಡಿಯಬೇಕು.
  8. ಮುಖದಲ್ಲಿ ಮೊಡವೆ ಹಾಗು ಅದರ ಕಲೆಗಳು ಇದ್ದಾಗ ಕೊತ್ತಂಬರಿ ಬೀಜದ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಮುಖಕ್ಕೆ ಹಚ್ಚಬೇಕು.
  9. ತಲೆಕೂದಲು ಜಾಸ್ತಿಯಾಗಿ ಉದುರುತ್ತಿದ್ದರೆ ಕೊತ್ತಂಬರಿ ಬೀಜದ ಹುಡಿಯನ್ನು ಎಳ್ಳೆಣ್ಣೆ ಅಥವಾ ನೀರಿನಲ್ಲಿ ಕಲಸಿ ತಲೆಗೆ ಹಚ್ಚಬೇಕು.
  10. ಅನಿಯಮಿತ ಮುಟ್ಟಿನ ಸಮಸ್ಯೆ ಹಾಗು ಕಿರುಹೊಟ್ಟೆ ನೋವು ಇದ್ದಾಗ ಇದರ ಕಷಾಯ ಸೇವನೆ ಸಹಕಾರಿಯಾಗುವುದು. ಇದರಿಂದ ಮುಟ್ಟಿನ ಸಮಯದ ಮಾನಸಿಕ ಅಸಮತೋಲನ ಕೂಡ ಸರಿಯಾಗುತ್ತದೆ.
  11. ಮೂತ್ರದ ಉರಿ ಹಾಗು ಅಲ್ಪ ಸ್ರಾವ ಇದ್ದಾಗ ಕೊತ್ತಂಬರಿಯ ಕಷಾಯ ಮಾಡಿ ಚೆನ್ನಾಗಿ ಆರಿಸಿ ಕುಡಿಯಬೇಕು.
  12. ಗಂಟಲಲ್ಲಿ ಕಪ ಕಟ್ಟಿ ಕೆಮ್ಮಿನ ಸಮಸ್ಯೆ ಇದ್ದಾಗ ಕೊತ್ತಂಬರಿ ಮತ್ತು ಬೆಲ್ಲದ ಮಿಶ್ರಣವನ್ನು ಸೇವಿಸಬೇಕು.
  13. ಬಾಯಿ ಮತ್ತು ನಾಲಿಗೆಯಲ್ಲಿ ಹುಣ್ಣು ಆದಾಗ ಕೊತ್ತಂಬರಿ ಬೀಜವನ್ನು ಜಗಿಯಬೇಕು ಅಥವಾ ಕಷಾಯದಲ್ಲಿ ಬಾಯಿ ಮುಕ್ಕಳಿಸಬೇಕು.
  14. ಚರ್ಮದಲ್ಲಿ ತುರಿಕೆಯಿದ್ದಾಗ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಅರೆದು ಲೇಪಿಸಬೇಕು.
  15. ಎಳೆ ವಯಸ್ಸಿನಲ್ಲಿ ಚರ್ಮ ಸುಕ್ಕುಕಟ್ಟುವುದಿದ್ದರೆ ಕೊತ್ತಂಬರಿ ಬೀಜವನ್ನು ಹಾಲಿನ ಕೆನೆಯಲ್ಲಿ ಕಲಸಿ ಆ ಜಾಗಕ್ಕೆ ಹಚ್ಚಬೇಕು.
  16. ಮಧುಮೇಹ ರೋಗಿಗಳಲ್ಲಿ ಕೊತ್ತಂಬರಿ ಬೀಜದ ಉಪಯೋಗವು ರೋಗವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  17. ನೋವು ಮತ್ತು ಊತ ಇದ್ದ ಕಡೆ ಕೊತ್ತಂಬರಿ ಬೀಜವನ್ನು ಅರೆದು ಲೇಪಿಸಬೇಕು.
  18. ಕೊತ್ತಂಬರಿಯ ಹಾಲು ಕಷಾಯ ಮಾಡಿ ಕುಡಿಯುವುದರಿಂದ ರಕ್ತದ ಉಷ್ಣತೆ ಕಡಿಮೆಯಾಗಿ ಶರೀರದ ನೋವು ಶಮನವಾಗುತ್ತದೆ.
  19. ಕೊತ್ತಂಬರಿಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿ ಇರುವುದರಿಂದ ಮೂಳೆಯ ದೃಢತೆಗೆ ಇದು ಸಹಕಾರಿಯಾಗಿದೆ.
  20. ಅಜೀರ್ಣ,ಅರುಚಿ ,ಕ್ರಿಮಿಬಾಧೆಗಳಲ್ಲಿ ಕೊತ್ತಂಬರಿ ಬೀಜದ ಉಪಯೋಗವು ರಾಮಬಾಣದಂತೆ ಕೆಲಸಮಾಡುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts