ಬಂಟ್ವಾಳ

ಏ.1ರಿಂದ 4: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮ

  • ಏ.1ರಂದು ಎಸ್.ಯು.ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆ
  • ಏ.2ರಂದು ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟನೆ
  • ಏ.3, 4ರಂದು ರಾಷ್ಟ್ರೀಯ ವಿಚಾರಸಂಕಿರಣ

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಎಸ್.ಯು.ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಏಪ್ರಿಲ್ 1ರಿಂದ ೪ವರೆಗೆ ನಡೆಯಲಿದೆ.
ಈ ಕುರಿತು ಕಾರ್ಯಕ್ರಮಗಳ ವಿವರ ನೀಡಿದ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ, ಏ.1ರಂದು ಬೆಳಗ್ಗೆ 10.30ಕ್ಕೆ ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಎಸ್. ಯು. ಪಣಿಯಾಡಿ ಗ್ರಂಥಾಲಯ ಸಂಕೀರ್ಣವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ವಹಿಸುವರು. ಮುಖ್ಯ ಅಭ್ಯಾಗತರಾಗಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ರಾಜ್ಯ ಸರಕಾರದ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್ ಮತ್ತು ಹಿರಿಯ ಚಿತ್ರನಟಿ ಹರಿಣಿ ಎಸ್.ರಾವ್ ಉಪಸ್ಥಿತರಿರುವರು ಎಂದರು.
ಏ.2ರಂದು ಭಾನುವಾರ ಇಳಿಸಂಜೆ 4 ಗಂಟೆಗೆ ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕವನ್ನು ಇಂದಿರಾಗಾಂ ರಾಷ್ಟ್ರೀಯ ಮಾನವ ವಸ್ತುಸಂಗ್ರಹಾಲಯ ನಿರ್ದೇಶಕರಾದ ಡಾ.ಸರಿತ್ ಕುಮಾರ್ ಚೌಧರಿ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಇಂದಿರಾ ಬಾಲಕೃಷ್ಣ ಪ್ರಸ್ತಾವನೆ ಮಾಡಲಿದ್ದರೆ, ಜಾನಪದ ವಿಶ್ವವಿದ್ಯಾನಿಲಯ ನಿಕಟಪೂರ್ವ ಉಪಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ವಿಶೇಷ ಉಪನ್ಯಾಸ ಮಾಡುವರು.
ಏ.3 ಮತ್ತು 4ರಂದು ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಲಿದ್ದು ಏ.3ರಂದು ಬೆಳಗ್ಗೆ ೯.೩೦ಕ್ಕೆ ಮೌಕಿಕ ಕಥನ ಮತ್ತು ಭೌತಿಕ ವಸ್ತುಗಳು ಸಾಮಾಜಿಕ ಚರಿತ್ರೆಯ ಪುನರ್ ರಚನೆ ವಿಷಯದಲ್ಲಿ ವಿಚಾರಸಂಕಿರಣ ನಡೆಯಲಿದೆ. ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಕುಲಸಚಿವ ಡಾ.ನಿರಂಜನ ವಾನಳ್ಳಿ ಉದ್ಘಾಟಿಸುವರು. ಎಂ.ಎಲ್.ಸಿ. ಕ್ಯಾ.ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡುವರು. ಬೆಳಗ್ಗೆ ೧೧.೪೫ರಿಂದ ೧.೧೫ವರೆಗೆ ಭೌತಿಕ ಸಂಸ್ಕೃತಿಯ ಆಕರಗಳು ಎಂಬ ಗೋಷ್ಠಿ ನಡೆಯಲಿದ್ದು ಕೇರಳ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್‍ಚ್ ಮತ್ತು ಪಟ್ಟಣಂ ಉತ್ಖನನ ನಿಕಟಪೂರ್ವ ನಿರ್ದೇಶಕ ಪ್ರೊ.ಪಿ.ಜೆ.ಚೆರಿಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಇಂಗ್ಲೀಷ್ ಪ್ರಾಧ್ಯಾಪಕ ಡಾ.ಟಿ.ಕೆ.ರವೀಂದ್ರನ್ ಅಧ್ಯಕ್ಷತೆ ವಹಿಸುವರು.ಅಪರಾಹ್ನ ನಡೆಯುವ ಎರಡನೇ ಗೋಷ್ಠಿ ಭೌತಿಕ ಸಂಸ್ಕೃತಿ ಮತ್ತು ಇತಿಹಾಸ ಮುಖಾಮುಖಿ ಎಂಬ ವಿಷಯಕ್ಕೆ ಸಂಬಂಸಿ ನಡೆಯಲಿದೆ. ಕುವೆಂಪು ವಿವಿಯ ಪ್ರೊ. ರಾಜಾರಾಮ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಮೂಡುಬಿದರೆ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾ ಗಣಪಯ್ಯ ಭಟ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನದ ಬಳಿಕ ಪ್ರತಿನಿಗಳಿಂದ ಪ್ರಬಂಧ ಮಂಡನೆ ನಡೆಯಲಿದೆ.
4ರಂದು ಬೆಳಗ್ಗೆ ೧೦.೩೦ಕ್ಕೆ ಬದಲಾವಣೆ ಸನ್ನಿವೇಶಗಳಲ್ಲಿ ವಸ್ತು ಸಂಗ್ರಹಾಲಯಗಳು ವಿಚಾರದ ಕುರಿತು ಸಲಾರ್ ಜಂಗ್ ಮ್ಯೂಸಿಯಂ ಕ್ಯುರೇಟರ್ ಡಾ.ಜೆ.ಕೇದಾರೇಶ್ವರಿ ಮಾತನಾಡಲಿರುವರು. ಇತಿಹಾಸ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಬಳಿಕ ಮೌಖಿಕ ಇತಿಹಾಸದಲ್ಲಿ ಮೌಖಿಕ ಸಂಸ್ಕೃತಿ ವಿಷಯದ ಕುರಿತು ಡಾ ಇಂದಿರಾ ಚೌಧರಿ ಮಾತನಾಡುವರು. ಡಾ. ಪಿ.ಎನ್.ಎನ್. ಮೂರ್ತಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ ೨.೩೦ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ, ರಾಜ್ಯ ರೈತಸಂಘ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಉದ್ಯಮಿ ನಂದಗೋಪಾಲ ಶೆಣೈ ಭಾಗವಹಿಸುವರು ಎಂದು ತುಕಾರಾಮ ಪೂಜಾರಿ ಹೇಳಿದರು.
ಇದು ತನ್ನ ಮತ್ತು ಪತ್ನಿ ಡಾ.ಆಶಾಲತಾ ಸುವರ್ಣ ಅವರ ಸ್ವಂತ ಪರಿಶ್ರಮದ ಹಣದಿಂದ ಕೇಂದ್ರವನ್ನು ಸ್ಥಾಪಿಸಿದ್ದು, ದಾನಿಗಳು ನೆರವು ನೀಡಿದ್ದಾರೆ. ಆದರೆ ಸರಕಾರದ ವತಿಯಿಂದ ಯಾವುದೇ ನೆರವು ಲಭ್ಯವಾಗಿಲ್ಲ ಎಂದು ತುಕಾರಾಮ ಪೂಜಾರಿ ಹೇಳಿದರು.
ಪ್ರತಿದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಕಾರ್ಯದರ್ಶಿ ಡಾ.ಆಶಾಲತಾ ಎಸ್. ಸುವರ್ಣ, ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಪ್ರಾಂಶುಪಾಲ ಪ್ರೊ. ಪಾಂಡುರಂಗ ನಾಯಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಡಿ.ಎಂ.ಕುಲಾಲ್, ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ