ಬಂಟ್ವಾಳ

ಕನ್ನಡ ಮನಸ್ಸುಗಳನ್ನ ಬೆಸೆಯುವಲ್ಲಿ ನಾವಿನ್ನೂ ಸಫಲರಾಗಿಲ್ಲ

ಭೌಗೋಳಿಕವಾಗಿ, ರಾಜಕೀಯವಾಗಿ ಕರ್ನಾಟಕ ಏಕೀಕರಣವಾಗಿದೆಯೇ ಹೊರತು, ಕನ್ನಡ ಮನಸ್ಸುಗಳನ್ನ ಬೆಸೆಯುವಲ್ಲಿ ನಾವಿನ್ನೂ ಸಫಲರಾಗಿಲ್ಲ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಪುಂಡಿಕಾಯಿ ಗಣಪಯ್ಯ ಭಟ್ ಸಿದ್ಧಕಟ್ಟೆಯಲ್ಲಿ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಹೇಳಿದರು. ಅವರ ಭಾಷಣದ ಆಯ್ದ ವಿವರ ಇಲ್ಲಿದೆ.

ಸಂಸ್ಕೃತಿ ಮಾಲಿನ್ಯದಿಂದ ತುಳು ಸಂಸ್ಕೃತಿ ಬದಲು
ಸಂಸ್ಕೃತಿ ಮಾಲಿನ್ಯ ದಿಂದಾಗಿ ತುಳು ಸಂಸ್ಕೃತಿ ತನ್ನ ಮೂಲ ಚಹರೆಯನ್ನು ಕಳೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಈ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಿ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕುವ ಮೂಲಕ ಈ ನೆಲದ ಸಾಂಸ್ಕೃತಿಕ ಚಹರೆಯನ್ನು ಮೂಲರೂಪದಲ್ಲಿ ಉಳಿಸಿಕೊಳ್ಳುವ ದಿಶೆಯಲ್ಲಿ ಪ್ರಜ್ಞಾವಂತರು ಚಿಂತನೆ ನಡೆಸಲೇಬೇಕಾದ ಸನ್ನಿವೇಶ ಇಂದು ಸೃಷ್ಟಿಯಾಗಿದೆ. ದೇವಾಲಯಗಳ ಜೀರ್ಣೋದ್ಧಾರ ಹಾಗೂ ಪುನರ್ನಿರ್ಮಾಣದ ಹೆಸರಿನಲ್ಲಿ ಈ ನೆಲದ ಶೈಲಿಯ ದೇವಾಲಯಗಳು ಕಣ್ಮರೆಯಾಗಿ ಅವುಗಳ ಸ್ಥಾನದಲ್ಲಿ ನಮ್ಮದಲ್ಲದ, ಇನ್ಯಾವುದೋ ಪ್ರದೇಶದ, ಶೈಲಿಯ ನಿರ್ಮಾಣಗಳು ಕಾಣಿಸಿಕೊಳ್ಳುತ್ತಿವೆ. ಈ ನೆಲದ ಆರಾಧನಾ ಸಂಪ್ರದಾಯವಾದ ಭೂತಾರಾಧನೆ ವೈದಿಕ ಪರಂಪರೆಯತ್ತ ವಾಲುತ್ತಿದೆ

ಸಾಫ್ಟವೇರ್ ಯುವಕರ ಕನ್ನಡ ಕೆಲಸ
ಸಾಫ್ಟ್‌ವೇರ್ ಉದ್ಯಮದಲ್ಲಿರುವ ನೂರಾರು ಕನ್ನಡದ ಯುವಕರು ತಮ್ಮ ಬ್ಲಾಗ್‌ಗಳ ಮೂಲಕ ತಮ್ಮದೇ ಆದ ರೀತಿಯಲ್ಲಿ ಕನ್ನಡದ
ಸೇವೆಯನ್ನು ಮಾಡುತ್ತಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕನ ನೆಲೆಯಲ್ಲಿ ಇದನ್ನೆಲ್ಲ ಗಮನಿಸುತ್ತ ಬಂದಿರುವ ನನ್ನಲ್ಲಿ ಕನ್ನಡದ ಭವಿಷ್ಯದ ಕುರಿತು ಮಿತಿ ಮೀರಿ ಆತಂಕ ಪಡುವ ಹಂತಕ್ಕೆ ನಾವು ತಲುಪಿಲ್ಲ

ಬಾಮಕುಮಾರ ಸಂದಿ
ಬಾಮಕುಮಾರ ಸಂದಿ ಎಂಬ ತುಳು ಪಾಡ್ದನವು ಗಣಪತಿಯ ಹುಟ್ಟಿನ ಕಥೆಯನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ನಿರೂಪಿಸುತ್ತದೆ. ಬಾಮಕುಮಾರ ಎಂದರೆ ಗಣಪತಿ. ಗಣಪತಿಯ ಶಿರವನ್ನು ಶಿವನು ತುಂಡರಿಸುವುದು ನಂತರ ಆನೆಯ ಶಿರವನ್ನು ಜೋಡಿಸಿ ಗಜಾನನನ್ನು ಸೃಷ್ಟಿಸುವುದು ಇದೆ. ಬಾಮಕುಮಾರ ಸಂದಿ ಪಾಡ್ದನದಂತೆ ಈ ಎಲ್ಲ ಘಟನೆಗಳೂ ನಡೆಯುವುದು ಬಂಟ್ವಾಳದ ಬಳಿಯ ಚೆಂಡ್ತಿಮಾರು ಪ್ರದೇಶದಲ್ಲಿ

ನಿಜವಾದ ಅರ್ಥದ ’ವಿಶಾಲಕರ್ನಾಟಕ’
ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಆ ದಿವ್ಯ ಚೇತನಗಳು ಕಂಡ ನಿಜವಾದ ಅರ್ಥದ ’ವಿಶಾಲಕರ್ನಾಟಕ’ದ ಕನಸು ನನಸಾದಾಗ ಮತ್ತು ಸರ್ವಕನ್ನಡಿಗರಲ್ಲೂ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಅಭಿಮಾನ ಮೂಡಿದಾಗ ಮಾತ್ರ ಈ ಎಲ್ಲ ಆಚರಣೆಗಳಿಗೂ ಅರ್ಥ ಬರಲು ಸಾಧ್ಯ. ಹಾಗಾಗಲಿ ಎಂದು ಆಶಿಸುವುದಷ್ಟೆ ಸಧ್ಯಕ್ಕೆ ನಮಗೆ ತೋರುವ ದಾರಿ .
ನಡೆದಿಲ್ಲ ಶಿಕ್ಷಣ ಕ್ರಾಂತಿ
ಸ್ವಾತಂತ್ರ್ಯಾನಂತರ ಹಲವು ಕ್ಷೇತ್ರಗಳಲ್ಲಿ ಮಹಾನ್ ಕ್ರಾಂತಿಗಳಾದವು ಆದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಲಿಲ್ಲ ನಮ್ಮ ರಾಜ್ಯದ ಮಟ್ಟಿಗೆ ಪ್ರಾಥಮಿಕ ಶಿಕ್ಷಣ ನಿರ್ಲಕ್ಷಿತ ಕ್ಷೇತ್ರವಾಗಿರುವುದು ಒಂದು ದೊಡ್ಡ ದುರಂತ ಎಂದು ಹೇಳಿದ ಅವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರಕಾರಿ ಪ್ರಾಥಮಿಕ ಶಾಲೆಗಳಂತೂ ಅತಂತ್ರ ಸ್ಥಿತಿಯಲ್ಲಿವೆ. ನೂರಾರು ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಯನ್ನೆದುರಿಸಬೇಕಾಗಿದೆ ಎಂದರು. ತಾಲೂಕಿನಲ್ಲಿ ವಿದ್ಯಾರ್ಥಿ ಸಂಖ್ಯೆಯ ಕೊರತೆಯಿಂದಾಗಿ ೧೮ ಶಾಲೆಗಳು ಮುಚ್ಚುವ ಭೀತಿಯನ್ನೆದುರಿಸುತ್ತಿವೆ. ೨೮ ವಿದ್ಯಾರ್ಥಿಗಳಿದ್ದು ಮುಚ್ಚುವ ಭೀತಿಯನ್ನೆದುರಿಸುತ್ತಿದ್ದ ಬಂಟ್ವಾಳ ತಾಲೂಕಿನ ಒಂದು ಶಾಲೆಗೆ ಸ್ಥಳೀಯರ ನಿರಂತರ ಪ್ರಯತ್ನದ ಫಲವಾಗಿ ಈ ಶೈಕ್ಷಣಿಕ ವರ್ಷದಲ್ಲಿ ೨೨೬ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ ಎಂಬ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಪ್ರತಿಯೊಂದಕ್ಕೂ ಸರಕಾರವನ್ನೇ ದೂಷಿಸುತ್ತ ಕೂರುವ ಬದಲು ಸ್ಥಳೀಯರೂ ಈ ಸಮಸ್ಯೆಗೆ ಸಕಾರತ್ಮಕವಾಗಿ ಸ್ಪಂದಿಸಿದರೆ ಕೆಲವು ಕನ್ನಡ ಶಾಲೆಗಳ ಮುಚ್ಚುವಿಕೆಯನ್ನಾದರೂ ತಡೆಯಲು ಸಾಧ್ಯವಾಗಬಹುದು ಕರ್ನಾಟಕದಲ್ಲಿ ಪ್ರಸ್ತುತ ಒಟ್ಟು ಐವತ್ತು ಸಾವಿರಕ್ಕೂ ಹೆಚ್ಚು ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಇವುಗಳಲ್ಲಿ ಒಟ್ಟು ಮೂವತ್ತೈದು ಸಾವಿರಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿಯಿವೆ ಎಂದರು. ಡಾ. ಮೋಹನ ಆಳ್ವರು ಆರನೇ ತರಗತಿಯಿಂದ ಹತ್ತನೇ ತರಗತಿಯ ವರೆಗಿರುವ ಕನ್ನಡ ಮಾಧ್ಯಮ ಶಾಲೆಯೊಂದನ್ನು ಮೂಡುಬಿದಿರೆಯಲ್ಲಿ ನಡೆಸುತ್ತಿದ್ದಾರೆ. ಈ ಬಾರಿ ಇಲ್ಲಿ ಪ್ರವೇಶ ಪಡೆಯಲು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅರ್ಜಿ ಹಾಕಿದವರ ಸಂಖ್ಯೆ ಸುಮಾರು ಎಂಟು ಸಾವಿರ ಸರಿಯಾದ ರೀತಿಯಲ್ಲಿ ಶಾಲೆಗಳನ್ನು ನಡೆಸಿದರೆ ಕನ್ನಡ ಮಾಧ್ಯಮದಲ್ಲಿ ಕಲಿಯಲು ವಿದ್ಯಾರ್ಥಿಗಳು ಸಿದ್ಧರಿದ್ದಾರೆಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ ಎಂದರು.
ಕರ್ನಾಟಕ ಮುಚ್ಚಿದ ವಿಶ್ವವಿದ್ಯಾನಿಲಯ
ಬಂಟ್ವಾಳ ತಾಲೂಕೂ ಸೇರಿದಂತೆ ಕರ್ನಾಟಕದಲ್ಲಿ ಇಂದು ಎಷ್ಟೋ ಕಾಲೇಜುಗಳಲ್ಲಿ ಕಲಾ ವಿಭಾಗಗಳು ವಿದ್ಯಾರ್ಥಿಗಳ ತೀವ್ರ ಕೊರತೆಯನ್ನದುರಿಸುತ್ತಿದ್ದು, ಕೆಲವೆಡೆಗಳಲ್ಲಿ ಇವುಗಳು ಶಾಶ್ವತವಾಗಿ ಮುಚ್ಚುವ ಹಂತವನ್ನು ತಲಪಿವೆ. ನಾಡಿನ ಸಹಸ್ರಾರು ಉನ್ನತ ಶಿಕ್ಷಣಾಕಾಂಕ್ಷಿಗಳ ಆಸರೆಯಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯವು ಕಳೆದ ಎರಡು ವರ್ಷಗಳಿಂದ ಕರ್ನಾಟಕ ಮುಚ್ಚಿದ ವಿಶ್ವವಿದ್ಯಾನಿಲಯವಾಗಿ ಪರಿವರ್ತಿತವಾಗಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿಯನ್ನು ಸೇರಿಸಿಕೊಂಡು ಕಾಲೇಜುಗಳು ನಡೆಸುವ ರಾಷ್ಟ್ರಮಟ್ಟದ/ರಾಜ್ಯಮಟ್ಟದ ವಿಚಾರಗೋಷ್ಠಿಗಳೆಂಬ ನಾಟಕಗಳನ್ನು ನಡೆಸಲು ಲಕ್ಷಾಂತರ ರೂಪಾಯಿಗಳ ಅನುದಾನವನ್ನು ನೀಡುವ ಯು.ಜಿ.ಸಿ. ಒಂದು ಕಡೆಯಾದರೆ ಕಾಲೇಜುಗಳಿಗೆ ಸೂಕ್ತ ಕಾಲದಲ್ಲಿ ಅರ್ಹ ಉಪನ್ಯಾಸಕರನ್ನು ನೇಮಿಸುವಲ್ಲಿ ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರ ಇನ್ನೊಂದು ಕಡೆ. ಉನ್ನತ ಶಿಕ್ಷಣ ಕ್ಷೇತ್ರದ ಈ ಎಲ್ಲ ಗೊಂದಲಗಳಿಗೆ ಸೂಕ್ತ ಪರಿಹಾರವನ್ನು ಅತ್ಯಂತ ಜರೂರಾಗಿ ಕಂಡುಕೊಳ್ಳುವಲ್ಲಿ ವಿಫಲವಾದರೆ ಈಗಾಗಲೇ ಸೊರಗುತ್ತಿರುವ ಉನ್ನತ ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ
ಬಂಟ್ವಾಳಕ್ಕಿದೆ ೬ ಸಾವರ ವರುಷಗಳ ಇತಿಹಾಸ:
ಈ ತನಕ ಬೆಳಕಿಗೆ ಬಂದಿರುವ ಆಧಾರಗಳ ಹಿನ್ನಲೆಯಲ್ಲಿ ಈ ಪ್ರದೇಶದ ಇತಿಹಾಸವನ್ನು ಕನಿಷ್ಟ ಆರು ಸಾವಿರ ವರ್ಷಗಳಷ್ಟು ಹಿಂದಕ್ಕೊಯ್ಯಲು ಸಾಧ್ಯ. ಇನ್ನು, ಸ್ಮಾರಕಗಳ ರೂಪದಲ್ಲಿ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಗತಕಾಲದ ಅತ್ಯಂತ ಹಳೆಯ ರಚನೆಗಳೆಂದರೆ ಬಡಗ ಕಜೆಕಾರಿನ ಪಾಂಡವರ ಕಲ್ಲಿನಲ್ಲಿ ಗುರುತಿಸಲಾದ, ಸುಮಾರು ೨೫೦೦ ವರ್ಷಗಳಷ್ಟು ಪ್ರಾಚೀನವಾದ, ಬೃಹತ್ ಶಿಲಾಯುಗದ ಸಮಾ ಸ್ಮಾರಕಗಳು. ಮೂವತ್ತು ವರ್ಷಗಳಷ್ಟು ಇತ್ತೀಚಿನ ವರೆಗೂ ಇಲ್ಲಿ ಕಾಣಿಸುತ್ತಿದ್ದ ಸುಮಾರು ನೂರರಷ್ಟುಇಂತಹ ಸಮಾ ಸ್ಮಾರಕಗಳು ಜನವಸತಿಯ ವಿಸ್ತರಣೆಯಿಂದಾಗಿ ಇಂದು ಸಂಪೂರ್ಣ ಕಣ್ಮರೆಯಾಗುವ ಹಂತಕ್ಕೆ ಬಂದಿರುವುದು ಒಂದು ದುರಂತ ಎಂದು ಭಟ್ ವಿಷಾದಿಸಿದರು.
ಪ್ರಥಮ ಬಂಡಾಯ ಬಂಟ್ವಾಳದಲ್ಲಿ
ಆಳುಪ ಅರಸರ, ವಿಜಯನಗರದ ಅರಸರ ಮತ್ತು ಹೈದರಾಲಿ, ಟೀಪು ಸುಲ್ತಾನರ ಆಳ್ವಿಕೆಯಡಿಯಲ್ಲಿ ಬಂದ ಇಂದಿನ ಬಂಟ್ವಾಳ ತಾಲೂಕು ಪ್ರದೇಶ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಯಿತು. ಟೀಪು ಸುಲ್ತಾನನ ಆಳ್ವಿಕೆಯ ಕಾಲದಲ್ಲಂತೂ ಈ ಪ್ರದೇಶ ಒಂದು ರೀತಿಯಲ್ಲಿ ರಣರಂಗವೇ ಆಗಿತ್ತು ಎಂಬುದು ಐತಿಹಾಸಿಕ ಸತ್ಯ. ಈ ಸಂದರ್ಭ ವಿಟ್ಲದ ಡೊಂಬ ಹೆಗ್ಗಡೆ ಅರಸರ ಮತ್ತು ನಂದಾವರ ಬಂಗ ಅರಸರ ಆಳ್ವಿಕೆಯನ್ನೂ ಉಲ್ಲೇಖಿಸಬೇಕು. ೧೭೯೯ ರಲ್ಲಿ ಟೀಪು ಸುಲ್ತಾನನ ಅಂತ್ಯದೊಂದಿಗೆ ಈ ಪ್ರದೇಶ ಬ್ರಿಟಿಷರ ವಶವಾದಾಗ ಅವರ ವಿರುದ್ಧ ಪ್ರಥಮವಾಗಿ ಬಂಡಾಯದ ಬಾವುಟವನ್ನು ಹಾರಿಸಿದ್ದು ವಿಟ್ಲದ ಡೊಂಬ ಹೆಗ್ಗಡೆ ಅರಸ. ಸ್ವಾತಂತ್ರ್ಯ ಹೋರಾಟದಲ್ಲಿ ಬಂಟ್ವಾಳದ ಜನ ಎಂದೂ ಹಿಂದುಳಿದಿಲ್ಲ ಎಂದರು.
ಪುಣ್ಯಭೂಮಿ ಬಂಟ್ವಾಳ
ಬಂಟ್ವಾಳ ತಾಲೂಕು ಒಂದು ಪುಣ್ಯಭೂಮಿ. ವಿವಿಧ ಮತಧರ್ಮಗಳ ನೂರಾರು ಆರಾಧಾನಾ ಕೇಂದ್ರಗಳು ತಾಲೂಕಿನ ತುಂಬೆಲ್ಲಾ ಇರುವುದೇ ಇದಕ್ಕೆ ಸಾಕ್ಷಿ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದೇವಾಲಯಗಳ ಇತಿಹಾಸ ಆರಂಭವಾಗುವುದೇ ಈ ತಾಲೂಕಿನಿಂದ. ಕನಿಷ್ಟ ಕ್ರಿ. ಶ. ೭-೮ ನೇ ಶತಮಾನದಷ್ಟು ಪ್ರಾಚೀನವಾದ ಪೊಳಲಿಯ ರಾಜರಾಜೇಶ್ವರಿ ದೇಗುಲ ಈ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕರ್ನಾಟಕದ ಇನ್ನೆಲ್ಲೂ ಕಂಡುಬರದ, ಇಲ್ಲಿ ಆರಾಧನೆಗೊಳ್ಳುವ ಬೃಹದ್ ಗಾತ್ರದ ಮೃಣ್ಮಯ ಮೂರ್ತಿಗಳು ಇದನ್ನೊಂದು ವಿಶಿಷ್ಟ ಕ್ಷೇತ್ರವನ್ನಾಗಿ ರೂಪಿಸಿವೆ. ಹಾಗೆಯೆ, ವಿಟ್ಲದ ಪಂಚಲಿಂಗೇಶ್ವರ ದೇವಾಲಯವನ್ನು ಈ ಜಿಲ್ಲೆಯ ಅತ್ಯಂತ ದೊಡ್ಡ ದೇಗುಲ ಎಂದು ಗುರುತಿಸಲಾಗುತ್ತದೆ. ಜಿಲ್ಲೆಯ ಅತ್ಯಂತ ಪ್ರಾಚೀನ ಮಸೀದಿ ಇರುವುದು ಈ ತಾಲೂಕಿನ ಅಜಿಲಮೊಗರಿನಲ್ಲಿ, ಜಿಲ್ಲೆಯ ಮೂರು ಪ್ರಾಚೀನ ಚರ್ಚುಗಳಲ್ಲೊಂದಾದ ಹೋಲಿ ಫ್ಯಾಮಿಲಿ ಚರ್ಚ್ ಇರುವುದು ಇಲ್ಲಿನ ಮೇರಮಜಲಿನಲ್ಲಿ ತಾಲೂಕಿನಲ್ಲಿರುವ ನೂರಾರು ಭೂತಾಲಯಗಳ ಪೈಕಿ ಅಗೆಲು ಸೇವೆಗೆ ಪ್ರಸಿದ್ಧವಾಗಿರುವ ಪಣೋಲಿಬೈಲಿನ ಕಲ್ಲುರ್ಟಿ ದೈವಸ್ಥಾನವು ಲಕ್ಷಾಂತರ ಭಕ್ತರನ್ನಾಕರ್ಷಿಸುತ್ತಿರುವ ಒಂದು ಜನಮನ್ನಣೆಯ ಕ್ಷೇತ್ರವಾಗಿ ರೂಪುಗೊಂಡಿದ್ದು, ಇದು ಈ ಜಿಲ್ಲೆಯಲ್ಲಿ ಸರಕಾರಕ್ಕೆ ಅತ್ಯಂತ ಹೆಚ್ಚು ಆದಾಯವನ್ನು ತಂದುಕೊಡುವ ಭೂತಸ್ಥಾನ ಎಂದು ದಾಖಲಾಗಿದೆ ಎಂದರು.

ಮೂರು  ಸಾಹಿತ್ಯ ದಿಗ್ಗಜರು

ಬಂಟ್ವಾಳ ವ್ಯಾಪ್ತಿಗೆ ಸೇರಿದ ಮೂರು ಮಂದಿ ಸಾಹಿತ್ಯ ದಿಗ್ಗಜರಾದ ಮುಳಿಯ ತಿಮ್ಮಪ್ಪಯ್ಯ, ಪಂಜೆ ಮಂಗೇಶ ರಾವ್ ಮತ್ತು ಕಡೆಂಗೋಡ್ಲು ಶಂಕರ ಭಟ್ಟ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಗಳ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು ದಾಖಲೀಕರಣ ಅಗತ್ಯ: ಬಂಟ್ವಾಳ ತಾಲೂಕು ಸೇರಿದಂತೆ ನಮ್ಮ ಜಿಲ್ಲೆಗೆ ಒಂದು ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆ ಇದೆ, ಸುದೀರ್ಘವಾದ ಇತಿಹಾಸವಿದೆ. ಇದರ ದಾಖಲೀಕರಣ, ಅಧ್ಯಯನ ಮತ್ತು ಸಂಶೋಧನೆಯ ದಿಶೆಯಲ್ಲಿ ಬಹಳಷ್ಟು ಕೆಲಸಗಳು ಇನ್ನೂ ಬಾಕಿ ಉಳಿದುಕೊಂಡಿವೆ ಸ್ಥಳನಾಮಗಳ ಅಧ್ಯಯನಕ್ಕಂತೂ ಇಲ್ಲಿ ವಿಪುಲವಾದ ಅವಕಾಶಗಳಿವೆ.ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅಪೂರ್ವವಾದ ಕುರುಹುಗಳು ನಮ್ಮ ಅವಜ್ಞೆಯ ಫಲವಾಗಿ ಇಂದು ಕಣ್ಮರೆಯಾಗುವ ಹಂತವನ್ನು ತಲಪಿರುವುದು ಆತಂಕವನ್ನುಂಟು ಮಾಡುವ ಸಂಗತಿ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ