ಗಿರಿಲಹರಿ

ಪಾ.ವೆಂ. ಎಂಬ ವಿಸ್ಮಯದ ಆರಾಧಕ

ಅವರು ನಮ್ಮ ಶಬ್ದ ಭಂಡಾರವನ್ನು ಬೆಳೆಸಿದ್ದನ್ನು ಹೇಗೆ ಮರೆಯಲು ಸಾಧ್ಯ? ಅವರ ಪದಾರ್ಥ ಚಿಂತಾಮಣಿ ನಿಜವಾಗಿ ಚಿಂತಾಮಣಿಯೇ. ಅವರು ಪದಗಳ ಹಿಂದೆ ಹೋಗುವ ಅನ್ವೇಷಿಸುವ ಕ್ರಮ ಅನನ್ಯ.

www.bantwalnews.com

  • ಡಾ.ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ

ಇತ್ತೀಚೆಗೆ ಕಾರ್ಕಳದ ಭುವನೇಂದ್ರ ಕಾಲೇಜಿನ ಸಹಯೋಗದಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ  ಪಾ.ವೆಂ. ಆಚಾರ್ಯರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಕೋಟ್ಯಾನ್, ಆಡಳಿತ ಮಂಡಲಿ ಹಾಗೂ ಪ್ರಾಧ್ಯಾಪಕರ ಆಸಕ್ತಿಯ ಜೊತೆಗೆ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾದ ಡಾ. ಜಯಪ್ರಕಾಶ ಮಾವಿನಕುಳಿಯವರ  ಮುತುವರ್ಜಿಯೂ ಈ ಗೋಷ್ಠಿ ಏರ್ಪಡಲು ಕಾರಣ. ಈ ವಿಚಾರ ಸಂಕಿರಣದ ಒಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪಾ.ವೆಂ. ಆಚಾರ್ಯರ ಗದ್ಯ ಬರೆಹಗಳ ಬಗ್ಗೆ ಮಾತನಾಡುವ ಭಾಗ್ಯ ನನಗೆ ದೊರಕಿತು.

ಬಹುಶಃ ಪಾ.ವೆಂ. ಕನ್ನಡದ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಪ್ರಮಾಣದ ಮನ್ನಣೆ ಅವರಿಗೆ ಸಿಕ್ಕಿದಂತಿಲ್ಲ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ನೀಡುವ ಗೋಯೆಂಕಾ ಪ್ರಶಸ್ತಿ ಈ ಪಾ.ವೆಂ.ರನ್ನು  ಹುಡುಕಿಕೊಂಡು ಬಂತು ಎಂಬುದು ಮಾತ್ರ ಸಂತೋಷದ ಸಂಗತಿ. ಆದರೆ ಈ ಪ್ರಶಸ್ತಿಯನ್ನು ಮುಂಬೈಯಲ್ಲಿ ಅವರಿಗೆ ನೀಡಬೇಕಾಗಿದ್ದ ಬಹು ಪ್ರತಿಷ್ಠಿತ ಸಮಾರಂಭ ಕೊನೆ ಕ್ಷಣದಲ್ಲಿ ಅನಿವಾರ್ಯವಾಗಿ ರದ್ದಾದುದೂ ಒಂದು ಸಂಗತಿಯೇ. ಆನಂತರ ಪ್ರಶಸ್ತಿ, ಅದರ ಮೊತ್ತ ಇತ್ಯಾದಿಗಳನ್ನು ಅವರ ಮನೆಗೆ ತಲುಪಿಸಿದರಾದರೂ ಅದನ್ನೆಲ್ಲ ಅನುಭವಿಸುವಷ್ಟು ಕಾಲ ಪಾ.ವೆಂ. ಬದುಕಲಿಲ್ಲ. ಆದರೆ ಕನ್ನಡ ಪತ್ರಿಕೋದ್ಯಮ ಮಟ್ಟಿಗೆ ಅವರು ನಿರ್ಮಿಸಿದ ದಾರಿ ಘನವಾದದ್ದು. ಅವರ ಸಾಹಿತ್ಯ ಬಹುಕಾಲ ನಿಲ್ಲಬಲ್ಲಂಥದ್ದು.

http://kanaja.in/
courtesy

1956ರಲ್ಲಿ ಕಸ್ತೂರಿ ಮಾಸಪತ್ರಿಕೆ ಆರಂಭವಾದಾಗ ಸುಮಾರು ಎರಡು ದಶಕಗಳ ಕಾಲ ಅದರ ಸಂಪಾದಕರಾಗಿ ಅವರು ಕೇವಲ ಪತ್ರಿಕೆಯನ್ನು ಮಾತ್ರ ಕಟ್ಟಿದ್ದಲ್ಲ; ಗದ್ಯ ಬರಹಗಳ ಒಂದು ಮಾದರಿಯನ್ನೂ ಕಟ್ಟಿಕೊಟ್ಟರು. ಸುಮಾರು ಆರುನೂರಕ್ಕೂ ಹೆಚ್ಚು ಲೇಖನಗಳನ್ನು ಅವರು ಬೇರೆ ಬೇರೆ ಹೆಸರುಗಳಲ್ಲಿ ಬರೆದಿದ್ದಾರಂತೆ. ಪಾವೆಂ  ಪುತ್ರರಾದ ಪ್ರೊ. ರಾಧಾಕೃಷ್ಣ ಆಚಾರ್ಯರು ನೆನಪಿಸಿಕೊಳ್ಳುವಂತೆ ಆರಂಭದ ವರ್ಷಗಳಲ್ಲಿ ಕಸ್ತೂರಿಯ ಸಂಚಿಕೆಗಳಲ್ಲಿ ಸುಮಾರು ಮೂರನೇ ಎರಡರಷ್ಟು ಲೇಖನಗಳನ್ನು ಅವರೇ ವಿವಿಧ ಹೆಸರುಗಳಲ್ಲಿ ಬರೆಯುತ್ತಿದ್ದರಂತೆ.

1950-60ರ ದಶಕಗಳಲ್ಲಿ ವಿಜ್ಞಾನ ಲೇಖನ ಬರೆಯುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಈಗಲೂ ಕಡಿಮೆಯೇ. ಆದರೆ ಬರೆಯುವವರಿಲ್ಲ ಎಂದು ಪಾ.ವೆಂ. ಸುಮ್ಮನೇ ಕೂರುವವರಲ್ಲ. ಅವರೇ ವಿಜ್ಞಾನ ವಿಚಾರಗಳನ್ನೆಲ್ಲ ಅಧ್ಯಯನ ಮಾಡಿ ಸ್ವತಃ ದೊಡ್ಡ ವಿಜ್ಞಾನ ಲೇಖಕರಾಗಿ ಮೂಡಿಬಂದರು. ಅವರು ಬರೆಯದ ವಿಚಾರಗಳಿಲ್ಲ ಎನ್ನುವ ರೀತಿಯಲ್ಲಿ ಬರೆದರು. ವೈದ್ಯಕೀಯ, ಖಗೋಳ ವಿಜ್ಞಾನ, ಗಣಿತ, ಸಸ್ಯ-ಪ್ರಾಣಿಶಾಸ್ತ್ರ, ಮನೋವಿಜ್ಞಾನ ಹೀಗೆ ವಿಜ್ಞಾನದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ಓದುಗರಿಗೆ ಇಷ್ಟವಾಗುವ ರೀತಿಯಲ್ಲಿ ಬರೆದರು. ಭಾರತದ ಹಾಗೂ ಜಗತ್ತಿನ ಖ್ಯಾತ ವ್ಯಕ್ತಿಗಳ ಕುರಿತು ಬರೆದರು. ಹೀಗೆಲ್ಲ ಬರೆಯುವ ಮತ್ತು ಇತರರಿಂದ ಬರೆಯಿಸುವ ಮೂಲಕ ಕಸ್ತೂರಿ ಪತ್ರಿಕೆಯನ್ನು ಮನರಂಜನೆಗೆ ಮಾತ್ರ ಸೀಮಿತಗೊಳ್ಳದಂತೆ ನೋಡಿಕೊಂಡರು. ಅಥವಾ ಇದನ್ನು ಹೀಗೂ ಹೇಳಬಹುದು – ಮಾಹಿತಿ ಮತ್ತು ಜ್ಞಾನವನ್ನೂ ಓದುಗರಿಗೆ ಆಸಕ್ತಿಕರವಾಗಿ ಪ್ರಸ್ತುತಪಡಿಸಬಹುದು ಎಂದು ಅವರು ತೋರಿಸಿಕೊಟ್ಟರು. ಹಾಗಿಲ್ಲದೆ ಇರುತ್ತಿದ್ದರೆ ಕಸ್ತೂರಿಯು ಮಾರುಕಟ್ಟೆಯಲ್ಲಿ ಆಗ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ.

ಅವರು ನಮ್ಮ ಶಬ್ದ ಭಂಡಾರ ಬೆಳೆಸಿದ್ದನ್ನು ಹೇಗೆ ಮರೆಯಲು ಸಾಧ್ಯ? ಅವರ ಪದಾರ್ಥ ಚಿಂತಾಮಣಿ ನಿಜವಾಗಿ ಚಿಂತಾಮಣಿಯೇ. ಅವರು ಪದಗಳ ಹಿಂದೆ ಹೋಗುವ ಅನ್ವೇಷಿಸುವ ಕ್ರಮ ಅನನ್ಯ.

ಲಾಂಗೂಲಾಚಾರ್ಯರಾಗಿ ಅವರು ಹರಟೆಗಳನ್ನು ಅಥವಾ ವಿನೋದ ಬರಹಗಳನ್ನು ಬರೆದರು. ಆದರೆ ಅವರು ಬರೆದ ಹರಟೆಗಳೂ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುವಂಥ ಗುಣವನ್ನು ಹೊಂದಿವೆ. ಲಾಂಗೂಲವಿರುವ ಆಚಾರ್ಯ, ಅಂದರೆ ಬಾಲವಿರುವ ನಮ್ಮ ಪೂರ್ವಜರನ್ನು ನೆನಪಿಸುವಂಥ ಹೆಸರನ್ನು ಇಟ್ಟುಕೊಂಡು ಅವರು ಲಘುಬರಹಗಳನ್ನು ಬರೆದರು. ಕಪಿಯಂತೆ, ಬಾಲವಿರುವ ಕತ್ತೆಯೂ ಅವರ ದೃಷ್ಟಿಯಲ್ಲಿ ಗಣ್ಯ ಪ್ರಾಣಿಯೇ. ಅವರು ಕಾವ್ಯ ಬರೆದ ಕವಿಯೂ ಹೌದು. ತುಳು ಕವಿತೆಗಳನ್ನೂ ಬರೆದಿದ್ದಾರೆ. ಅವರ ಕಥೆಗಳ ಸಂಕಲನವೂ ಇದೆ. 1930 ದಶಕದಿಂದ 1990ರ ದಶಕದವರೆಗೆ ಅವರು ಬರೆದ 12 ಕಥೆಗಳು ಅವರ ಸಂಕಲನದಲ್ಲಿವೆ. ಎಲ್ಲ ಕಥೆಗಳೂ ರೋಚಕವಾಗಿ ಕೊನೆವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವ ಕಥೆಗಳು. ಕಸ್ತೂರಿಗೆ ಕಥೆಗಳು ಅನಿವಾರ್ಯ ಎನಿಸಲಿಲ್ಲ ಎಂದು ನನಗೆ ತೋರುತ್ತದೆ. ಒಂದು ವೇಳೆ ವಿಜ್ಞಾನ ಮತ್ತಿತರ ವಿಷಯಗಳ ಲೇಖನಗಳಂತೆ ಕಥೆಗಳು ಅವರ ಕಸ್ತೂರಿಗೆ ಅನಿವಾರ್ಯವಾಗುತ್ತಿದ್ದರೆ ಎಷ್ಟೋ ಅದ್ಭುತ ಕಥೆಗಳು ಕನ್ನಡ ಸಾರಸ್ವತ ಲೋಕಕ್ಕೆ ಪಾ.ವೆಂ. ಮೂಲಕ ಲಭ್ಯವಾಗುತ್ತಿತ್ತು. ಅವರಿಗೆ ಕಥೆ ಬರೆಯಲು ಸಾಕಷ್ಟು ಸಮಯ ಸಿಗಲಿಲ್ಲವೆಂದೇ ತೋರುತ್ತದೆ.

ಸಂಸ್ಕೃತ ಸುಭಾಷಿತಗಳ ಅನುವಾದವನ್ನೂ ಅವರು ಮಾಡಿದ್ದಾರೆ. ಕೊಂಚ ರಸಿಕತೆಯೂ ಇದೆ ಅವರಲ್ಲಿ. ಬಹಳ ಹಿಂದೆ ಓದಿದ ಒಂದು ಅನುವಾದ ನನಗೀಗಲೂ ನೆನಪಿದೆ. ಅದು ಕಾವ್ಯ ಮೀಮಾಂಸೆಯಾದ್ದರಿಂದ ಮನನಾರ್ಹವಾಗಿದೆ.

ಮುಚ್ಚಿದಂತಿರಬೇಕು ಬಿಚ್ಚಿದಂತಿರಬೇಕು

ಮಹರಾಷ್ಟ್ರಿ ಹೆಣ್ಣಿನೆದೆಯಂತೆ ಕವಿತಾರ್ಥ

ಆಂಧ್ರಿಯಂತೆಲ್ಲ ತೆರೆದಿಟ್ಟರೂ ಚೆನ್ನಲ್ಲ

ಗುರ್ಜರಿಯ ತೆರ ಪೂರ ಮರೆಸಿದರು ಸಲ್ಲ

‘ಬ್ರಾಹ್ಮಣರೇನು ಮಾಡಬೇಕು?’ ಮತ್ತು ‘ಮಂಜೂಷಾ’ ಎಂಬೆರಡು ಸಂಕಲನಗಳಲ್ಲಿರುವ, ಪಾ.ವೆಂ. ಆಚಾರ್ಯರ ವೈಚಾರಿಕ ಲೇಖನಗಳು ಅದ್ಭುತವಾದ ಒಳನೋಟಗಳನ್ನು ಹೊಂದಿವೆ. ಅವರ ಪೂರ್ವಾಗ್ರಹರಹಿತ ದೃಷ್ಟಿಯೂ ಗಮನಾರ್ಹ. ಇಲ್ಲಿ ಅದ್ಭುತ ಎಂಬುದೆಲ್ಲ ಉತ್ಪ್ರೇಕ್ಷೆ ಎನಿಸಬಹುದು. ಈಗ ಇವರ ಬಗ್ಗೆ ಬರೆವಾಗ ಇದು ಅದ್ಭುತ, ನಾಳೆ ಇನ್ನೊಬ್ಬರ ಬಗ್ಗೆ ಬರೆವಾಗ ಅದು ಅದ್ಭುತ ಅಂತ ಬರೀತಾನೆ ಅಂತ ಕೆಲವರಿಗೆ ಅನಿಸಬಹುದು. ಆದರೆ ಇದು ಉತ್ಪ್ರೇಕ್ಷೆಯಲ್ಲ. ಯಾಕೆಂದರೆ, ಪಾ.ವೆಂ. ಸುಮಾರು ನಲವತ್ತು ವರ್ಷಗಳ ಹಿಂದೆಯೇ ನಿರ್ಭಿಡೆಯಿಂದ, ನಿರ್ದಾಕ್ಷಿಣ್ಯವಾಗಿ, ಆದರೆ ಪ್ರಾಮಾಣಿಕತೆಯಿಂದ ಮತ್ತು ಪೂರ್ವಾಗ್ರಹರಹಿತ ದೃಷ್ಟಿಯಿಂದ ಮತ್ತು ರಾಜಕೀಯ ಸರಿತನದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೇಳಿ ಮುಗಿಸಿದ ಮಾತುಗಳನ್ನು ಹೇಳುವ ಧೈರ್ಯ ಅಥವಾ ಅರಿವು ಅಥವಾ ಪ್ರಾಮಾಣಿಕತೆ ಇಂದು ಕೂಡ ನಮ್ಮ ಬಹಳಷ್ಟು ಕನ್ನಡ ಲೇಖಕರಿಗೆ ಇಲ್ಲ ಅನ್ನುವುದನ್ನು ಗಮನಿಸಿದರೆ ಪಾ.ವೆಂ. ಚಿಂತನೆ ಮತ್ತು ಬರವಣಿಗೆಯ ಮಹತ್ವ ಅರಿವಾದೀತು. ಹಾಗೆ ನೋಡಿದರೆ ಅವರ ವೈಚಾರಿಕ ಬರವಣಿಗೆಯನ್ನು ಇನ್ನಷ್ಟು ಗೋಷ್ಠಿಗಳ ಮೂಲಕ ಹೆಚ್ಚು ಹೆಚ್ಚು ಚರ್ಚಿಸಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಇಲ್ಲಿ ನಾನು ಪಾ.ವೆಂ. ಬರಹಗಳ ಪರಿಚಯವನ್ನು ಮಾಡಿಕೊಟ್ಟಿಲ್ಲ. ನಿಮ್ಮಲ್ಲಿ ಈವರೆಗೆ ಪಾ.ವೆಂ. ಅವರ ಒಂದು ಬರಹವನ್ನೂ ಓದದ ಹೊಸ ತಲೆಮಾರಿನವರಿದ್ದರೆ, ಅಂಥವರು ಪಾ.ವೆಂ. ಅವರ ಯಾವುದಾದರೂ ಬರಹವನ್ನು ಓದುವಂತಾಗಲಿ ಎನ್ನುವುದು ನನ್ನ ಆಸೆ. ಯಾವುದಾದರೂ ಚಿಂತೆಯಿಲ್ಲ. ಯಾಕೆಂದರೆ ಕಳಪೆಯನ್ನು ಅವರು ಬರೆಯಲಿಲ್ಲ. ಕ್ರಿಕೆಟ್ ಆಟದಲ್ಲಿ ಒಬ್ಬ ಅತ್ಯುತ್ತಮ ಕ್ಷೇತ್ರರಕ್ಷಕ ಇದ್ದರೆ ಆತ ಸ್ಲಿಪ್ ವಿಭಾಗದಲ್ಲಿ ನಿಂತರೂ ಉತ್ತಮನೇ, ಲೋಂಗ್ ಆನ್ ಆದರೂ ಉತ್ತಮನೇ, ಸಿಲ್ಲಿ ಪಾಯಿಂಟ್ ಆದರೂ ಉತ್ತಮನೇ. ಅವನು ಯಾವುದಾದರೂ ಒಂದು ಜಾಗದಲ್ಲೇ ಹೆಚ್ಚು ನಿಲ್ಲಬೇಕಾಗುತ್ತದೆ. ಯಾಕೆಂದರೆ ಅಲ್ಲಿ ಅವನಷ್ಟು ಉತ್ತಮರು ಬೇರೆ ಯಾರೂ ತಂಡದಲ್ಲಿ ಇರುವುದಿಲ್ಲ. ಆ ಜಾಗಕ್ಕೆ ಅವನು ಅನಿವಾರ್ಯ ಅಂತ ಅಷ್ಟೇ. ಪಾ.ವೆಂ ಕೂಡ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಸೈ ಎನಿಸಿಕೊಳ್ಳಬಲ್ಲ ಸಂವೇದನೆ ಇದ್ದವರು. ಬರೆದದ್ದರಲ್ಲಿ ಗದ್ಯಬರಹಗಳು ಹೆಚ್ಚು.

ಅವರ ಬರಹಗಳ ಉತ್ತಮಿಕೆಗೆ ಕಾರಣ ಅವರಲ್ಲಿದ್ದ ವಿಸ್ಮಯದ ಭಾವ. ಪ್ರಕೃತಿಯ ಬಗ್ಗೆ, ಮಾನವನ ಸಾಧನೆಯ ಬಗ್ಗೆ, ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ – ಹೀಗೆ ಅವರಿಗೆ ಎಲ್ಲದರ ಬಗ್ಗೆಯೂ ಕುತೂಹಲ ಇತ್ತು. ವಿಸ್ಮಯವನ್ನು ಅನುಭವಿಸುವ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ದೊಡ್ಡದು.

ಪಾ.ವೆಂ. ಬಗ್ಗೆ ನನಗೆ ಗೌರವಪೂರ್ವಕ ಆದರವಿರಲು ಇನ್ನೊಂದು ಮುಖ್ಯ ಕಾರಣವಿದೆ. ನನಗೆ ನೆನಪಿರುವಂತೆ ಎಳೆಪ್ರಾಯದಲ್ಲಿ ಚಂದಮಾಮ ಬಿಟ್ಟರೆ ನಾನು ಓದುತ್ತಿದ್ದ ನಿಯತಕಾಲಿಕವೆಂದರೆ, ನಾನು ನಾಲ್ಕರಿಂದ ಏಳನೇ ತರಗತಿಯವರೆಗೆ (1980ರ ಹೊತ್ತು) ಕಲಿಯುತ್ತಿದ್ದಾಗ ನನ್ನ ಅಜ್ಜನ ಮನೆಯ ಅಜ್ಜ ತರುತ್ತಿದ್ದ ಕಸ್ತೂರಿಯೇ. ಆಗ ಪಾ.ವೆಂ. ಅದರ ಸಂಪಾದಕರಾಗಿ ಇರದೇ ಇದ್ದರೂ ಅದರಲ್ಲಿ ಅವರ ಛಾಪು, ಬರಹ ಇರುತ್ತಿತ್ತು. ಕಸ್ತೂರಿಯನ್ನು ಆ ವಯಸ್ಸಲ್ಲಿ ನಾನೇನೂ ಇಡೀ ಓದುತ್ತಿರಲಿಲ್ಲ. ಆದರ  ‘ಇದುವೆ ಜೀವ ಇದು ಜೀವನ’, ‘ನಿಮ್ಮ ಶಬ್ದ ಭಂಡಾರ ಬೆಳೆಯಲಿ’ ಈ ಸ್ಥಿರ ಶೀರ್ಷಿಕೆಗಳನ್ನು ಓದುತ್ತಿದ್ದ ನೆನಪಿದೆ.

ಹಾಗೆಯೇ ಅದರಲ್ಲಿ ಕೊನೆಗೆ ಬರುತ್ತಿದ್ದ ಹ್ರಸ್ವರೂಪದ ಕಾದಂಬರಿ. ಡಿ. ಆರ್. ಬಾಲು ಎಂಬವರ ಮಿನಿ ಕಾದಂಬರಿಯೋ ಅಥವಾ ಕಾದಂಬರಿಯ ಆಯ್ದ ಭಾಗವೋ ಒಂದನ್ನು ಓದಿದ ನೆನಪು ಇಂದೂ ಇದೆ. ಆ ಡಿ. ಆರ್. ಬಾಲು ಎಂಬ ಹೆಸರನ್ನು ನಾನು ಆನಂತರ ಕೇಳಿದ್ದೇ ಇಲ್ಲ. ಅವರು ಬೇರೆ ಭಾಷೆಯವರೋ ಏನೋ, ಇದರಲ್ಲಿ ಅನುವಾದಿತವಾಗಿ ಬಂದದ್ದೋ ಏನೋ, ಗೊತ್ತಿಲ್ಲ. ಹಿರಿಯರಿಗೆ ಗೊತ್ತಿರಬಹುದು.

ಪಾ. ವೆಂ. ಬರಹಗಳನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯರ ಒತ್ತಾಸೆಯಿಂದ ಡಾ. ಶ್ರೀನಿವಾಸ ಹಾವನೂರ ಮತ್ತು ಪ್ರೊ. ಶ್ರೀನಿವಾಸಮೂರ್ತಿ ಸಂಪಾದಿಸಿ ಪ್ರಕಟಿಸಿದ್ದು ಶ್ಲಾಘನೀಯ.

ವಿಚಾರ ಸಂಕಿರಣದಲ್ಲಿ ಶ್ಯಾಮಸುಂದರ ಬಿದರಕುಂದಿ, ಲಕ್ಷ್ಮೀಶ ತೋಳ್ಪಾಡಿ, ಕೆ.ಎಂ. ರಾಘವ ನಂಬಿಯಾರ್, ಭುವನೇಶ್ವರಿ ಹೆಗಡೆ, ತಾಳ್ತಜೆ ವಸಂತಕುಮಾರ, ರಾಧಾಕೃಷ್ಣ ಆಚಾರ್ಯ, ಜಯಪ್ರಕಾಶ ಮಾವಿನಕುಳಿ ಇವರೆಲ್ಲ ಆಡಿದ ಮಾತುಗಳು, ಪಾ.ವೆಂ ಅವರ ಕಾಲದಲ್ಲಿ ಅವರನ್ನು ಹೆಚ್ಚು ಓದದ ನನ್ನಂಥವರಿಗೆ ಮತ್ತು ನನ್ನ ನಂತರದ ತಲೆಮಾರಿನವರಿಗೆ ಹೊಸ ಪ್ರೇರಣೆ ನೀಡುವಂತಿದ್ದವು.

ಲೇಖಕರ ದೂರವಾಣಿ ಸಂಖ್ಯೆ 9901413974

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat

Recent Posts