ಡಾ.ಅಜಕ್ಕಳ ಗಿರೀಶ ಭಟ್ ಅವರು ಬರೆದ ಪಾವೆಂ ಕುರಿತ ಅಂಕಣಬರೆಹಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಿವೃತ್ತ ಪೋಸ್ಟ್ ಮಾಸ್ಟರ್ ಎಂ.ಎ.ಶ್ರೀರಂಗ ಪಾವೆಂ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಪಾವೆಂ ಅವರ ಆಸಕ್ತಿಗಳು ಹಲವು ಮುಖದವು. ಪತ್ರಿಕೋದ್ಯಮ ಅದರಲ್ಲಿ ಒಂದು. ಭೈರಪ್ಪನವರು ತಮ್ಮ ‘ಪರ್ವ’ ಕಾದಂಬರಿ ಬರೆಯುತ್ತಿದ್ದ ಸಂದರ್ಭ ಒಮ್ಮೆ ಹುಬ್ಬಳ್ಳಿಗೆ ಹೋಗಿದ್ದಾಗ ಪಾವೆಂ ಅವರ ಭೇಟಿಯಿಂದ ತಮಗಾದ ಅನುಭವವನ್ನು ‘ನಾನೇಕೆ ಬರೆಯುತ್ತೇನೆ’ ಪುಸ್ತಕದಲ್ಲಿರುವ ‘ಪರ್ವ ಬರೆದದ್ದು’ ಎಂಬ ದೀರ್ಘ ಲೇಖನದಲ್ಲಿ ಈ ರೀತಿ ಜ್ಞಾಪಿಸಿಕೊಂಡಿದ್ದಾರೆ.
‘ನಾನು ಮಹಾಭಾರತ ಕುರಿತು ವಾಸ್ತವದ ನೆಲೆಯಲ್ಲಿ ಒಂದು ಕಾದಂಬರಿ ಬರೆಯುತ್ತಿದ್ದೇನೆ ಎಂಬ ವಿಷಯ ತಿಳಿದ ಪಾವೆಂ ಅವರು ಹುಬ್ಬಳ್ಳಿಯಲ್ಲಿ ನಾನಿದ್ದ ಲಾಡ್ಜ್ ಗೆ ಬಂದು ಮಾತಾಡುತ್ತಾ ನಾನೂ ಈ ಬಗ್ಗೆ ಯೋಚಿಸಿದ್ದೇನೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಲೈಬ್ರರಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಪುಸ್ತಕಗಳನ್ನು ಕೊಡುತ್ತಿದ್ದರು. ಹುಬ್ಬಳ್ಳಿಯ ಆ ಲಾಡ್ಜ್ ನಲ್ಲಿ ನಾನಿದ್ದ ಅಷ್ಟು ದಿನವೂ ಪ್ರತಿ ದಿನ ಬೆಳಗ್ಗೆಯೇ ಬಂದು ನನ್ನೊಡನೆ ವಿಚಾರವಿನಿಮಯ ಮಾಡಿ ನನ್ನ ಯೋಚನೆಗಳು ಸ್ಪುಟವಾಗುವಂತೆ ಸಹಕರಿಸುತ್ತಿದ್ದರು. ……… ಮೈಸೂರಿಗೆ ನಾನು ವಾಪಸ್ ಬಂದು ಪರ್ವದ ಬರವಣಿಗೆ ಮುಂದುವರಿಸಿದಾಗ ,ಕೆಲವೊಂದು ಸಂದರ್ಭಗಳಲ್ಲಿ ಕಾದಂಬರಿಯ ಬರವಣಿಗೆಯು ಪೂರ್ತಿ ಮುಗಿಯುವ ತನಕ ನನ್ನ ಜತೆ ಪಾವೆಂ ಅಂಥವರು ಇರಬೇಕಿತ್ತು ಎಂದು ಎಷ್ಟೋ ಸಾರಿ ಅನಿಸಿದ್ದುಂಟು.’
ಇಂದು ಬಹುಮುಖ ಪ್ರತಿಭೆಯ ವ್ಯಕ್ತಿ, ಸಾಹಿತಿ, ಪತ್ರಕರ್ತ ಎಂಬ ಪದಗಳು ಕ್ಲೀಷೆ ಎನ್ನುವ ಮಟ್ಟಿಗೆ ಆಗಿಹೋಗಿದೆ. ಕೆಲವೊಮ್ಮೆ ಅಪಾತ್ರರಿಗೂ ಅವರ ಹೆಸರಿನ ಮುಂದೆ ಬಿರುದು ಬಾವಲಿಗಳಂತೆ ಅದು ಅಂಟಿಕೊಂಡಿರುವುದೂ ಉಂಟು. ಆದರೆ ಪಾವೆಂ ಅವರ ವಿಷಯದಲ್ಲಿ ‘ಬಹುಮುಖ ಪ್ರತಿಭೆ’ ಎಂಬುದು ಕ್ಲೀಷೆಯಲ್ಲ . ಸತ್ಯವಾದ ಮಾತು.
ಇಂದು ಅವರ ಎಷ್ಟೋ ಪುಸ್ತಕಗಳು ಔಟ್ ಆಫ್ ಪ್ರಿಂಟ್ ಆಗಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಥವಾ ಕನ್ನಡ ಸಂಸ್ಕೃತಿ ಇಲಾಖೆಗಳು ಪಾವೆಂ ಅವರ ಲೇಖನಗಳ ಸಮಗ್ರ ಸಂಪುಟ ತಂದರೆ ಒಳ್ಳೆಯದು. ಆದರೆ ಇದುವರೆಗೆ ಆ ಕೆಲಸ ಆಗಿಲ್ಲ ಎಂದು ಕಾಣುತ್ತದೆ. ಖಾಸಗಿ ಪ್ರಕಾಶಕರ ಲಾಭ ನಷ್ಟದ ಲೆಕ್ಕಾಚಾರದ ನಡುವೆ ಅವು ಮರು ಮುದ್ರಣವಾಗಬೇಕಾದರೆ ಅವರಿಗೆ ಪಾವೆಂ ಅವರ ಬರವಣಿಗೆ, ವ್ಯಕ್ತಿತ್ವ ಇವುಗಳ ಬಗ್ಗೆ ಆಸಕ್ತಿ ಇದ್ದರೆ ಮಾತ್ರ ಸಾಧ್ಯವಾದೀತೇನೋ?
ಬಹುಷಃ ಇಂದಿನ ಪೀಳಿಗೆಯ ಓದುಗರಿಗೆ ಅಷ್ಟಾಗಿ ಪರಿಚಯವಿರಲಾರದ ‘ಪಾವೆಂ’ ಅವರನ್ನು ತಮ್ಮ ಅಂಕಣದ ಮೂಲಕ ಜ್ಞಾಪಿಸಿಕೊಟ್ಟಿದ್ದಕ್ಕೆ ಗಿರೀಶ್ ಭಟ್ ಅವರಿಗೆ ವಂದನೆಗಳು.