ಸಾಂಸ್ಕೃತಿಕ

ಕಲಾರಸಿಕರ ಮನತಣಿಸಿದ ನೃತ್ಯಮಾರ್ಗ

ಮಂಗಳೂರು ಪುರಭವನದಲ್ಲಿ ನೃತ್ಯಗುರು ವಿದ್ಯಾಶ್ರೀ ರಾಧಾಕೃಷ್ಣ ಅವರು ಸಾದರಪಡಿಸಿದ ಸಾದರಪಡಿಸಿದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ (ನೃತ್ಯಮಾರ್ಗಂ) ಕಲಾರಸಿಕರ ಮನತಣಿಸುವಲ್ಲಿ ಯಶಸ್ವಿಯಾಯಿತು.

  • ರಾಧಿಕಾ ಶೆಟ್ಟಿ
ಚೆನ್ನೈಯ ಗಾಯಕ ಶ್ರೀಕಾಂತ್ ಗೋಪಾಲಕೃಷ್ಣನ್ ಅವರ ಸಂಗೀತ ಸಂಯೋಜನೆಯ ಸ್ವರಾಂಜಲಿಯೊಂದಿಗೆ ಸಂಜೆಯ ಕಾರ್ಯಕ್ರಮ ಆರಂಭಿಸಿದ ವಿದ್ಯಾಶ್ರೀ ತಮ್ಮ ಭಿನ್ನಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ರಾಗಮಾಲಿಕಾ ಮತ್ತು ಆದಿತಾಳದ ಗಣೇಶ ಸ್ತುತಿಯ ಅಚ್ಚುಕಟ್ಟಾದ ನರ್ತನದೊಂದಿಗೆ ಸ್ವರಾಂಜಲಿಯನ್ನು ಅವರು ಪರ್ಯವಸಾನಗೊಳಿಸಿದರು.
ಚಾರುಕೇಶಿ ವರ್ಣದ ಇನ್ನುಂ ಎನ್‌ಮನಂ ಹಾಡಿನ ಪ್ರಸ್ತುತಿ ನೃತ್ಯಮಾರ್ಗದ ಮುಖ್ಯ ಆಕರ್ಷಣೆಯಾಗಿತ್ತು. ಪಿಟೀಲು ದಿಗ್ಗಜ ಲಾಲ್ಗುಡಿ ಜಯರಾಮ್ ಅವರ ಈ ರಚನೆಯ ಪ್ರದರ್ಶನ, ಹಾಡುಗಾರ ಮತ್ತು ನೃತ್ಯಗಾರ್ತಿಯ ನಿಜಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು. ಇಬ್ಬರೂ ಅತ್ಯುತೃಷ್ಟ ಗುಣಮಟ್ಟದ ಪೈಪೋಟಿಯ ಪ್ರದರ್ಶನ ನೀಡಿದರು. ಬಾಲಕೃಷ್ಣ ಮತ್ತು ಗೋಪಿಕೆಯರ ನಡುವಿನ ಲಾಲಿತ್ಯ ಪಲ್ಲವಿಯ ಸಂಚಾರಿಭಾವಕ್ಕೆ ವಸ್ತುವಾಯಿತು. ಕಲಾವಿದೆ ತ್ರಿಕಾಲ ಜತಿಯನ್ನೂ ಭಿನ್ನ ಮತ್ತು ಚೆನ್ನಾಗಿ ಪ್ರಸ್ತುತಗೊಳಿಸಿ, ಪ್ರೇಕ್ಷಕ ವರ್ಗವನ್ನು ರಂಜಿಸಿದರು. ಮುಂದಿನ ಹಂತದಲ್ಲಿ ಅಭಿನಯ ಸಾಧ್ಯತೆಗೆ ತೆರೆದುಕೊಂಡ ವಿದ್ಯಾಶ್ರೀ, ಸುಬ್ಬರಾಮ ಅಯ್ಯರ್ ಅವರ ರಚನೆಯ ಯಾ ರುಕಾಗಿಲುಂ ಭಯಮಾ..(ರಾಗ ಬೇಗಡ, ಮಿಶ್ರಛಾಪು ತಾಳ)ದಲ್ಲಿ ನಾಯಕಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದರು. ನಂತರದ ಇನ್ನುಯಿರ್ ಸೇವಲು…ನಲ್ಲಿ ನಾಯಕಿಯ ವಿರಹ ವೇದನೆಯನ್ನೂ ವಿದ್ಯಾಶ್ರೀ ಸಮರ್ಥವಾಗಿ ಬಿಂಬಿಸಿದರು. ಕೋಗಿಲೆ, ಗಿಳಿ ಮತ್ತು ಗರುಡನೊಂದಿಗೆ ನಾಯಕಿಯ ಸಂವಾದ ಸೊಗಸಾಗಿ ನಿರೂಪಿತವಾದುದು ಕಲಾವಿದೆಯ ಪ್ರೌಢಿಮೆಗೆ ಸಾಕ್ಷಿಯಾಯಿತು. ರಾಗಮಾಲಿಕಾದಲ್ಲಿ ಸಂಚರಿಸಿದ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದವರು ದೆಹಲಿಯ ರಮಾ ವೈದ್ಯನಾಥನ್ ಎಂಬ ಪ್ರತಿಭಾನ್ವಿತ ಕಲಾವಿದೆ. ವಿದ್ಯಾಶ್ರೀ ಸದ್ಯ ರಮಾ ಅವರ ಶಿಷ್ಯೆ.
ಮುಂದೆ ಎರಡು ಕನ್ನಡ ಹಾಡುಗಳಿಗೆ ವಿದ್ಯಾಶ್ರೀ ನೃತ್ಯ ಸಂಯೋಜಿಸಿ, ನರ್ತಿಸಿದರು. ಡಾ.ಜಿ.ಎಸ್. ಶಿವರುದ್ರಪ್ಪ ಅವರ ರಚನೆ ಹೌದೇನೇ ಉಮಾ..(ಶುದ್ಧಧನ್ಯಾಸಿ ರಾಗ) ಎಂಬ ಹಾಡಿಗೆ, ತಾಯಿ ಮತ್ತು ಉಮಾರ ನಡುವಿನ ಸಂವಾದದ ಮನೋಜ್ಞ ಅಭಿನಯ ನೀಡಿ, ವಿದ್ಯಾಶ್ರೀ ಜನರಂಜಿಸಿದರು. ಮುಂದಿನ ಅವರ ಪ್ರಸ್ತುತಿ ಕೃಷ್ಣನ ವಿನೋದದ ಕುರಿತ ಚಿತ್ರಣ ನೀಡಿತು. ಪುರಂದರದಾಸರ ರಚನೆಯ ‘ಗುಮ್ಮನ ಕರೆಯದಿರೆ…ಅಮ್ಮ..’ ಹಾಡಿಗೆ ಕಲಾವಿದೆ ಮನೋಜ್ಞಾಭಿನಯ ನೀಡಿದರು. ತಿಲಂಗ್ ರಾಗ ಮತ್ತು ಆದಿತಾಳದ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಯಿತು. ವಂದೇ ಮಾತರಂ ಹಾಡಿನ ಕೆಲ ಪಂಕ್ತಿಗಳನ್ನು ಆಯ್ಕೆ ಮಾಡಿಕೊಂಡು, ಲಾಲ್ಗುಡಿ ಜಯರಾಮ್ ಅವರ ರಚನೆಯ ತಿಲ್ಲಾನ ಆ ದಿನದ ಕೊನೆಯ ಪ್ರಸ್ತುತಿಯಾಗಿ, ಗಮನ ಸೆಳೆಯಿತು.
ನಟುವಾಂಗದಲ್ಲಿ ಕಲಾವಿದೆ ಅಪರ್ಣಾ ಕಿಶೋರ್ (ಮಣಿಪಾಲ), ಚೆನ್ನೈಯ ಜಿ. ಶ್ರೀಕಾಂತ್ ಗೋಪಾಲಕೃಷ್ಣನ್ ಅವರ ಹಾಡುಗಾರಿಕೆ, ಮೃದಂಗದಲ್ಲಿ ಚೆನ್ನೈಯ ನಗೈ ಶ್ರೀರಾಮ್, ಪಾಲಕ್ಕಾಡ್‌ನ ವಯಲಿನ್ ಕಲಾವಿದ ಸುಬ್ಬರಾಮನ್, ಉಡುಪಿಯ ಕೊಳಲು ಕಲಾವಿದ ನಿತೀಶ್ ಅಮ್ಮಣ್ಣಾಯ ಅವರ ಪ್ರತಿಭಾ ಪ್ರದರ್ಶನ ನೃತ್ಯಮಾರ್ಗವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿತು. ಗಂಭೀರ ಮತ್ತು ಸತ್ವಪೂರ್ಣ ಕಾರ್ಯಕ್ರಮಕ್ಕೆ ಹಿಮ್ಮೇಳದ ಕೊಡುಗೆ ಸ್ಮರಣೀಯ.
( ಲೇಖಕಿ ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ಮತ್ತು ನೃತ್ಯಗುರು)
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ