ವಿಟ್ಲ ಕಸಬ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬ್ದುಲ್ ರಝಾಕ್ ಮೋನು ಎಂಬವರನ್ನು ಕಾರಿನಲ್ಲಿ ಅಪಹರಿಸಿದ ಕೇಪು ಗ್ರಾಮದ ನೀರ್ಕಜೆ ಕುಕ್ಕೆಬೆಟ್ಟು ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಹಾಗೂ ಇತರ ಇಬ್ಬರು ಸೇರಿ ಮಾ. 19ರಂದು ರಾತ್ರಿ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬ್ದುಲ್ ರಝಾಕ್ ಮೋನು ಎಂಬವರನ್ನು ಕಾರಿನಲ್ಲಿ ಅಪಹರಿಸಿದ್ದರು.
ಏನಾಗಿತ್ತು:
ರಝಾಕ್ ತನ್ನ ಸ್ನೇಹಿತ ಮನ್ಸೂರು ಎಂಬಾತನ ಬೈಕ್‌ನಲ್ಲಿ ವಿಟ್ಲದಿಂದ ಒಕ್ಕೆತ್ತೂರಿಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರ ತಂಡ ರಝಾಕ್‌ನಲ್ಲಿ ಅಪಹರಿಸಿತ್ತು. ಕೂಡಲೇ ಮನ್ಸೂರು ನೀಡಿದ ಮಾಹಿತಿಯಂತೆ ವಿಟ್ಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು. ಅಪಹರಣಕಾರರ ತಂಡ ಕಾರಿನಲ್ಲಿ ವಿಟ್ಲದಿಂದ ಕಲ್ಲಡ್ಕ ಮೂಲಕ ಬಿಸಿರೋಡು ತೆರಳಿ ಅಲ್ಲಿಂದ ಬಜ್ಬೆ ಮಾರ್ಗವಾಗಿ ಮಂಗಳೂರಿಗೆ ತೆರಳಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಸಂಗ್ರಹಿಸಿ ಬೆನ್ನತ್ತಲು ಪ್ರಯತ್ನಿಸಿತ್ತು. ರಜಾಕ್ ಗೆ ಚೂರಿಯಿಂದ ಗಾಯಗೊಳಿಸಿ, 10 ಸಾವಿರ ರೂ ನಗದು, ಮೊಬೈಲ್ ಫೋನ್ ದರೋಡೆ ಮಾಡಿದ್ದಅಪಹರಣಾಕಾರರು, ಪೊಲೀಸ್ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಅರಿತು ರಜಾಕ್ ಅವರನ್ನು ದೇರಳಕಟ್ಟೆಯಲ್ಲಿ ಇಳಿಸಿ ಪರಾರಿಯಾಗಿದ್ದರು.
ಸತತ ಹುಡುಕಾಟದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಹನೀಫ್ ಯಾನೆ ಜೋಗಿ ಹನೀಫ್ ಕೋಡಪದವು ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ಪಡೆದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಂದ ರಝಾಕ್‌ನ ಮೊಬೈಲ್ ಫೋನ್, 4 ಸಾವಿರ ರೂ. ನಗದು, ಹಲ್ಲೆ ನಡೆಸಿದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ .ಜಿ. ಬೊರಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ನೇತೃತ್ವದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ವಿಟ್ಲ ಎಸ್ಸೈ ನಾಗರಾಜ್ ಎಚ್.ಇ., ಸಿಬ್ಬಂದಿಯಾದ ಬಾಲಕೃಷ್ಣ ಗೌಡ, ಪ್ರವೀಣ್ ರೈ, ರಕ್ಷಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್, ವೃತ್ತ ನಿರೀಕ್ಷಕರ ಕಚೇರಿಯ ಗಿರೀಶ್ ಹಾಗೂ ಚಾಲಕರಾದ ರಘು ರಾಮ, ವಿಜಯೇಶ್ವರ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.