ಪಾಕಶಾಲೆಯೇ ವೈದ್ಯಶಾಲೆ

ಸುಮ್ಮನೆ ಜಗಿದರೂ ಲಾಭ ನೀಡುವ ಜೀರಿಗೆ

  • ಡಾ.ರವಿಶಂಕರ್ ಎ.ಜಿ.
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

www.bantwalnews.com 

ಜೀರಿಗೆಯು ಪದಾರ್ಥಗಳಿಗೆ ರುಚಿ ಹಾಗು ಪರಿಮಳವನ್ನು ನೀಡುವುದರೊಂದಿಗೆ ಪದಾರ್ಥದ ಸಮತೋಲನವನ್ನು ಸಹ ಕಾಪಾಡುತ್ತದೆ .ಹಾಗೆಯೇ ಇದು ಶರೀರದ ಸಮತೊಲನವನ್ನು ಕಾಪಾಡುವುದರಲ್ಲಿ ಸಹ ಮಹತ್ತರ ಪಾತ್ರವಹಿಸುತ್ತದೆ ಮತ್ತು ಹಲವಾರು ವ್ಯಾಧಿಗಳನ್ನು ಗುಣಪಡಿಸುವುದರಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.

  1. ಮೈಯಲ್ಲಿ ತುರಿಕೆ ಹಾಗು ವೈವರ್ಣ್ಯತೆ ಕಾಣಿಸಿಕೊಂಡಾಗ ಜೀರಿಗೆಯನ್ನು ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಅರೆದು ಆ ಜಾಗಕ್ಕೆ ಲೇಪಿಸಬೇಕು.
  2. ಶರೀರದ ಉಷ್ಣತೆಯಿಂದಾಗಿ ಕಣ್ಣಿನಲ್ಲಿ ನೋವು ಇದ್ದಾಗ ಜೀರಿಗೆಯನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಕಣ್ಣಿಗೆ ಬಿಡಬೇಕು ಅಥವಾ ಅದರಲ್ಲಿ ಅದ್ದಿದ ಬಟ್ಟೆಯನ್ನು ಕಣ್ಣಿನ ಮೇಲೆ ಇಡಬೇಕು.
  3. ಹೊರಗೆ ಕಾಣಿಸುವ ನೋವುಭರಿತವಾದ ಮೂಲವ್ಯಾಧಿಯ ಮೇಲೆ ಜೀರಿಗೆಯನ್ನು ಲೇಪ ಹಾಕುವುದರಿಂದ ಮೂಲವ್ಯಾಧಿಯ ನೋವು ಹಾಗು ಮೊಳೆಯು ವಾಸಿಯಾಗುತ್ತದೆ.
  4. ಏಡಿ ಕಚ್ಚಿದ ಜಾಗಕ್ಕೆ ಜೀರಿಗೆಯನ್ನು ದನದ ತುಪ್ಪ ಹಾಗು ಉಪ್ಪಿನೊಂದಿಗೆ ಮಿಶ್ರ ಮಾಡಿ ಲೇಪ ಹಾಕುವುದರಿಂದ ಉರಿ, ಬಾವು ಹಾಗು ನೋವು ಕಡಿಮೆಯಾಗುತ್ತದೆ.
  5. ಜೀರಿಗೆಯು ರಕ್ತವನ್ನು ಶುದ್ಧಿಮಾಡುವುದರಿಂದ ರಕ್ತಸಂಬಧಿತ ಉರಿ, ಕಜ್ಜಿ, ತುರಿಕೆ ಇತ್ಯಾದಿಗಳಲ್ಲಿ ಜೀರಿಗೆಯನ್ನು ಬೆಲ್ಲದೊಂದಿಗೆ ಸೇವಿಸಿದರೆ ಉತ್ತಮ. ಇದರಿಂದ ಶರೀರದಲ್ಲಿ ರಕ್ತ ವೃದ್ಧಿಯೂ ಆಗುತ್ತದೆ.
  6. ಜೀರಿಗೆಗೆ ಮೂತ್ರ ಪ್ರವೃತ್ತಿಯನ್ನು ಸರಿಯಾಗಿಸುವ ಗುಣವಿರುವುದರಿಂದ ಮೂತ್ರಕೋಶದ ಕಲ್ಲಿನ ಸಮಸ್ಯೆಗೆ ಉತ್ತಮ ಪಥ್ಯಾಹಾರವಾಗಿದೆ.
  7. ಜೀರಿಗೆಯು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಸಹಕರಿಸುತ್ತದೆ
  8. ಜೀರಿಗೆಯು ಸ್ತ್ರೀಯರಲ್ಲಿ ದೇಹದ ಉಷ್ಣತೆಯಿಂದ ಕಾಣಿಸಿಕೊಳ್ಳುವ ಬಿಳಿ ಸೆರಗು ತೊಂದರೆಯನ್ನು ನಿವಾರಿಸುತ್ತದೆ.
  9. ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಕಾಣಿಸಿಕೊಂಡಾಗ ಜೀರಿಗೆಯ ಕಷಾಯ ಮಾಡಿ ಕುಡಿಯಬೇಕು ಮತ್ತು ಜೀರಿಗೆಯನ್ನು ನೀರಿನಲ್ಲಿ ಅರೆದು ಹೊಕ್ಕುಳಿನ ಕೆಳಗೆ ಲೇಪಿಸಬೇಕು .
  10. ಬಾಣಂತಿಯರಲ್ಲಿ ಮೊಲೆ ಹಾಲು ಅಧಿಕಗೊಳ್ಳಲು ಜೀರಿಗೆಯನ್ನು ಬೆಲ್ಲದೊಂದಿಗೆ ಮಿಶ್ರಮಾಡಿ ಪ್ರತಿದಿನ ಸೇವಿಸಬೇಕು.
  11. ಬಾಣಂತಿಯರಿಗೆ ಜೀರಿಗೆ ಕಷಾಯವನ್ನು ಕುಡಿಸುವುದರಿಂದ ಗರ್ಭಾಶಯ ಶುದ್ಧಿಯಾಗುತ್ತದೆ ಮತ್ತು ಅವರ ಸೊಂಟ, ಮೈ ಕೈ ನೋವು ಇತ್ಯಾದಿಗಳು ವಾಸಿಯಾಗುತ್ತದೆ.
  12. ಜ್ವರದಿಂದಾಗಿ ಅಧಿಕ ಶಾರೀರಿಕ ನೋವು,ಉರಿ ಹಾಗು ಅರುಚಿ ಇದ್ದಾಗ ಜೀರಿಗಯನ್ನು ಕಷಾಯ ಮಾಡಿ ಕುಡಿಯಬೇಕು ಅಥವಾ ಹುಡಿಮಾಡಿ ಸ್ವಲ್ಪ ಮೆಂತೆ ಸೇರಿಸಿ ತಿನ್ನಬೇಕು.
  13. ಭೇದಿಯ ಸಮಸ್ಯೆಯಿದ್ದಾಗ ಜೀರಿಗೆಯನ್ನು ಮಜ್ಜಿಗೆ ಅಥವಾ ಶುಂಠಿ ಕಷಾಯದ ಜೊತೆ ಸೇವಿಸಬೇಕು.
  14. ಹೊಟ್ಟೆಯಲ್ಲಿ ಹುಳದ ಉಪದ್ರವ ಕಾಣಿಸಿದಾಗ ಜೀರಿಗೆ ಕಷಾಯಕ್ಕೆ ಮಜ್ಜಿಗೆ ಹಾಗು ಸ್ವಲ್ಪ ಹಿಂಗು ಸೇರಿಸಿ ಕುಡಿಯಬೇಕು.
  15. ಜೀರಿಗೆಯನ್ನು ಉಪಯೋಗಿಸುವುದರಿಂದ ಹುಳಿ ತೇಗು,ಎದೆ ಹಾಗು ಗಂಟಲ ಉರಿ ಇತ್ಯಾದಿಗಳು ಕಡಿಮೆಯಾಗುತ್ತದೆ.
  16. ಜೀರಿಗೆಯನ್ನು ಹಾಗೇ ಸುಮ್ಮನೆ ಜಗಿಯುವುದರಿಂದ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ, ಅರುಚಿ ನಿವಾರಣೆಯಾಗುತ್ತದೆ ಮತ್ತು ಜೀರ್ಣಶಕ್ತಿ ಅಧಿಕವಾಗುತ್ತದೆ
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts