ಬಂಟ್ವಾಳ

ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ಪ್ರತಿಭಾನ್ವಿತರಿಗೆ ಸನ್ಮಾನ

ಮಂಗಳೂರು ವಿಶ್ವವಿದ್ಯಾನಿಲಯದ 2015-16 ನೇ ಸಾಲಿನ ಬಿ.ಕಾಂ, ಬಿ.ಎಸ್ಸಿ, ಎಂಕಾಂ ಪರೀಕ್ಷೆಯಲ್ಲಿ ಏಳು ರ್‍ಯಾಂಕ್ ಹಾಗೂ ಆರು ಚಿನ್ನದ ಪದಕ/ನಗದು ಪುರಸ್ಕಾರ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ನಡೆದ ಶಿಕ್ಷಕ – ರಕ್ಷಕ ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್‍ಭ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್, ವಿದ್ಯಾರ್ಥಿಯಾದವನು ತನ್ನ ಕಲಿಕೆಯ ಸಮಯದಲ್ಲಿ ವಿಶೇಷ ಆಸಕ್ತಿಯೊಂದಿಗೆ ಅಹರ್ನಿಶಿ ಪ್ರಯತ್ನವನ್ನು ಮಾಡಬೇಕು. ಆಧುನಿಕ ಆಕರ್ಷಣೆಯಿಂದ ತನ್ನ ಕರ್ತವ್ಯದ ಕಡೆಗೆ ಗಮನ ನೀಡಬೇಕು. ಓರ್ವ ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಆತನ ದುಡಿಮೆಯೊಂದಿಗೆ ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯು ಅಷ್ಟೇ ಮುಖ್ಯವಾದುದು ಎಂದು ಹೇಳಿದರು.

ಜಾಹೀರಾತು

ಸಂಸ್ಥೆಯೊಂದರಲ್ಲಿರುವ ನಿಯಮಾವಳಿಗಳು ಇರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಪಾಲಿಸಿ ಕಲಿತವರಿಗೆ ಯಶಸ್ಸು ನಿಶ್ಚಿತ. ಆದರೆ ಮೊಬೈಲ್‌ನಂತಹ ಆಧುನಿಕ ಸಾಧನಗಳು ಇಂದು ಮಕ್ಕಳ ಮನೋಸ್ಥಿತಿ ಹಾಳು ಮಾಡುತ್ತಿರುವುದು ವಿಷಾದನೀಯ. ಹೊಸ ಜೀವನಶೈಲಿಯ ಕಡೆಗೆ ತಿರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆದಾಗ ಆತನ ಸಂತೋಷದೊಂದಿಗೆ ಹೆತ್ತವರಿಗೆ ಮತ್ತು ಕಾಲೇಜಿಗೆ ಕೀರ್ತಿ ಬರುತ್ತದೆ. ಕಾಲೇಜು ನಿರಂತರ ರ್‍ಯಾಂಕ್ ಪಡೆಯುವಲ್ಲಿ ಹೆತ್ತವರ ಕೊಡುಗೆಯು ಗಮನಾರ್ಹವಾದುದು ಎಂದರು.

ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರ್ರೊ. ಭಾರತಿ.ಎಸ್ ಭಟ್ ಮತ್ತು ಕಾಲೇಜಿನ ಸಹಾಯಕರಾದ ಜಿ.ಎನ್ ನೋಣಯ್ಯ ಮತ್ತು ಸ್ಟೂಡೆಂಟ್ ಫೇಕಲ್ಟಿ ತರಗತಿ ನಡೆಸಿದ ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಿ.ಎಸ್ಸಿ. ವಿಭಾಗದಲ್ಲಿ ಪ್ರಥಮ ರ್‍ಯಾಂಕ್  ವಿಜೇತ ವಿದ್ಯಾರ್ಥಿನಿ ಕು. ಕಾವ್ಯ ಕೆ. ನಾಯಕ್ ಇವರು ಮಾತನಾಡಿ ರ್‍ಯಾಂಕ್ ಪಡೆಯುವಲ್ಲಿ ತನ್ನ ಪರಿಶ್ರಮದೊಂದಿಗೆ ಸಂಸ್ಥೆ ಮತ್ತು ಹೆತ್ತವರ ಸಹಕಾರವನ್ನು ಸ್ಮರಿಸಿದರು. ರ್‍ಯಾಂಕ್ ಪಡೆಯುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಅಹರ್ನಿಸಿ ಪ್ರಯತ್ನವನ್ನು ಮಾಡಬೇಕೆಂದು ಕಿವಿ ಮಾತು ಹೇಳಿದರು

ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಹೊಳ್ಳರವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ವರದಿ ವರ್ಷದಲ್ಲಿ ತನಗೆ ಕೊಟ್ಟ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಂಧರ್ಭದಲ್ಲಿ ರಚಿಸಲಾಯಿತು. ಜಗದೀಶ್ ಹೊಳ್ಳ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಉಪ ಪ್ರಾಂಶುಪಾಲ ಪ್ರೊ. ತುಕಾರಾಂ ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲಕಿ ಪ್ರೊ. ಪ್ರೇಮಲತಾ ಪೈ. ವಂದಿಸಿದರು. ಡಾ| ಟಿ.ಕೆ ರವೀಂದ್ರನ್ ಅತ್ಯಧಿಕ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪ್ರೊ. ನಾರಾಯಣ ಭಂಡಾರಿ ನೂತನ ಕಾರ್ಯಕಾರಿ ಸಮಿತಿಯ ರಚನೆಯನ್ನು ನಿರ್ವಹಿಸಿದರು.  ರಮಾನಂದ್ ಭಟ್ ಮತ್ತು ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.