ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಕಂಬಳಬೆಟ್ಟು ನಿವಾಸಿಗಳಾದ ಸುಂದರ ಪೂಜಾರಿ ಮತ್ತು ಅಬ್ದುಲ್ ಅಜೀಮ್ ಅವರಿಗೆ ಪಟಾಕಿ ತಯಾರಿಯೇ ಸಾವಿಗೆ ಕಾರಣವಾಗುತ್ತದೆ ಎಂದು ಗೊತ್ತೇ ಆಗಲಿಲ್ಲ. ಕಂಬಳಬೆಟ್ಟು ಗರ್ನಲ್ ಸಾಹೀಬರ ಮನೆಯಲ್ಲಿ ಪಟಾಕಿ ತಯಾರಿ ಕಾರ್ಮಿಕರು ಇವರು.
ಅಬ್ದುಲ್ ಅಜೀಮ್ ಅವರಿಗೆ 24 ವರ್ಷ. ಅವರು ಕಂಬಳಬೆಟ್ಟು ಶಾಂತಿನಗರದ ಉಮ್ಮರ್ ಕಾಂಞ ಎಂಬವರ ಮಗ. ಸುಂದರ ಪೂಜಾರಿ ಅವರಿಗೆ 39 ವರ್ಷ. ಅವರು ಕುಳ ಗ್ರಾಮದ ಕಾರ್ಯಾಡಿ ಮನೆಯ ಚೋಮ ಪೂಜಾರಿ ಎಂಬವರ ಮಗ. ಸ್ಫೋಟದ ತೀವ್ರತೆಗೆ ಸಮೀಪದ ಮನೆಯ ಇಬ್ಬರು ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸುಮಾರು 6.15ರಿಂದ 6.30ರ ವೇಳೆ ಘಟನೆ ನಡೆದಿದೆ.
ಏನಾಯಿತು?
ಗರ್ನಲ್ ಸಾಹೇಬರ ಮನೆಯಲ್ಲಿ ಸಿಡಿಮದ್ದು ತಯಾರಿ ಹಲವು ದಶಕಗಳಿಂದ ನಡೆಯುತ್ತಿದ್ದು, ಸಾಹೀಬ್ ಅವರ ಮರಣದ ಬಳಿಕ ಈ ಘಟಕವನ್ನು ಅವರ ಮಕ್ಕಳಾದ ಗಫೂರ್ ಮತ್ತು ರಫೀಕ್ ಎಂಬವರು ನಡೆಸುತ್ತಿದ್ದರು. ಸಿಡಿಮದ್ದು ತಯಾರಿಕೆಗೆ ಪರಿಕರಗಳನ್ನು ಆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ . ಸಾಮಾನ್ಯವಾಗಿ ಇಲ್ಲಿ ಐದಾರು ಮಂದಿ ಕೆಲಸಗಾರರು ಸಿಡಿಮದ್ದು ತಯಾರಿಯಲ್ಲಿ ಇರುತ್ತಾರೆ. ಈ ಘಟಕದಲ್ಲಿ ಒಟ್ಟು ಆರು ಮಂದಿ ಕೆಲಸ ನಿರ್ವಹಿಸುತ್ತಿದ್ದು ಸ್ಫೋಟಕ್ಕೆ ಕೆಲವೇ ನಿಮಿಷಕ್ಕೆ ಮೊದಲು ನಾಲ್ವರು ಕೆಲಸ ಮುಗಿಸಿ ಘಟಕದಿಂದ ತೆರಳಿದ್ದರು. ಉಳಿದಿದ್ದ ಸುಂದರ, ಮತ್ತು ಹಾಶೀಂ ಕೆಲಸದಲ್ಲಿ ನಿರತರಾಗಿದ್ದರು.
ಘಟನೆ ತೀವ್ರತೆಗೆ ಸುಂದರ ಮತ್ತು ಹಾಶೀಂ ಅವರ ಮೃತದೇಹ ಛಿದ್ರಛಿದ್ರವಾಗಿ ಹೋಗಿದೆ. ಒಬ್ಬರ ದೇಹದ ಭಾಗಗಳು ಮಾಡಿನ ಮೇಲೆ ಕಾಣಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಫೂರ್ ಅವರ ಮನೆಯ ಹಂಚು ಹಾರಿಹೋಗಿದ್ದು, ಸಮೀಪದ ಮನೆಗಳಲ್ಲೂ ಕಂಪನದ ಅನುಭವ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಭೂಷಣ್ ಜಿ. ಬೊರಸೆ, ಡಿವೈಎಸ್ಪಿ ರವೀಶ್ ಸಿ.ಆರ್., ಸಿಐ ಬಿ.ಕೆ.ಮಂಜಯ್ಯ, ವಿಟ್ಲ ಎಸ್. ಐ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಇಲಾಖೆ ಸಿಬ್ಬಂದಿಗಳಾದ ದಿವಾಕರ, ಕರಿಬಸಪ್ಪ, ಪರೀಕ್ಷಿತ್, ಸದಾಶಿವ ಕೈಕಂಬ, ಶೀತಲ್, ಲಿಂಗಪ್ಪ ಮೊದಲಾದವರು ಭೇಟಿ ನೀಡಿದರು.