ಮಕ್ಕಳಿಗೆ ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ಕೇವಲ ಪಾಠದಿಂದ ಸಿಗಲು ಸಾಧ್ಯವಿಲ್ಲ. ಅದು ಸ್ವತಃ ಅನುಭವಕ್ಕೆ ಬರಬೇಕು. ನಮ್ಮದು ಸ್ವತಂತ್ರಭಾರತವಾಗಿದ್ದರೂ ವಿವಿಧ ವಿಚಾರಗಳಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರಗೊಂಡಿಲ್ಲ. ಹಾಗಾಗಿಯೇ ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ..? ಎಂಬ ಹಾಡುಗಳು ಸ್ವತಂತ್ರ ಭಾರತದಲ್ಲಿ ಹುಟ್ಟಿಕೊಟ್ಟಿದೆ.
ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಆಯೋಜಿಸಿದ್ದ ಮಕ್ಕಳ ಸಾಮರ್ಥ್ಯಾಭಿವೃದ್ದಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ. ಮಕ್ಕಳಿಗೆ ಯೋಚನಾ ಶಕ್ತಿಯನ್ನು ವಿಸ್ತರಿಸುವ ಗುಂಪು ಚಟುವಟಿಕೆ ನಡೆಸುತ್ತಾ, ನಿಮ್ಮ ಭವಿಷ್ಯದ ಕನಸುಗಳನ್ನು ಬರೆಯಿರಿ ಎಂದು ಬಿಳಿ ಹಾಳೆಯನ್ನು ಕೊಟ್ಟೆ. ಕೆಲಮಕ್ಕಳು ನಾಚಿಕೆಯಿಂದ ಬರೆಯಲು ಶುರು ಮಾಡಿದರೆ, ಇನ್ನೂ ಕೆಲ ಮಕ್ಕಳು ಉತ್ಸಾಹದಿಂದ ಬರೆಯಲು ಆರಂಭಿಸಿದರು. ಅವರು ಬರೆಯುತ್ತಿರುವಾಗ ನಾನವರ ಗುಂಪಿನತ್ತ ತೆರಳಿ ಗಮನಿಸುತ್ತಿದ್ದೆ. ಕೆಲ ಮಕ್ಕಳು ಬೇರೆ ಗುಂಪಿನವರು ಏನು ಬರೆಯುತ್ತಿದ್ದಾರೆ ಎಂದು ಕುತೂಹಲದಿಂದ ಇಣುಕುವಾಗ ಯಾಕೆ ಇಣುಕುದು..? ನೋಡಿ ಬರೆಯಲು ಇದೇನು ಪರೀಕ್ಷೆಯಾ..? ಎಂದೂ ತಮಾಷೆ ಮಾಡುತ್ತಿದ್ದೆ.
ಎಲ್ಲರ ಹಾಳೆಯತ್ತ ಗಮನಿಸಿದರೆ ಅದರಲ್ಲಿ ಸಾಮಾನ್ಯವಾಗಿ ಇದ್ದ ಕನಸುಗಳು.. ನಾನು ಡಾಕ್ಟರ್ ಆಗ್ತೇನೆ, ನಾನು ಇಂಜಿನಿಯರ್, ಲಾಯರ್, ಟೀಚರ್, ಪೊಲೀಸ್… ಇತ್ಯಾದಿ ಆಗ್ತೇನೆ ಎಂದು. ಎಲ್ಲರ ಭಾಗವಹಿಸುವಿಕೆ ಬೇಕು ಎಂಬ ಕಾರಣಕ್ಕೆ ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ದಾಖಲಿಸಬೇಕೆಂಬ ಸೂಚನೆ ಕೊಟ್ಟದ್ದರಿಂದ ಅವರು ಬರೆಯುತ್ತಿದ್ದ ಹಾಳೆ, ಗುಂಪಿನ ಒಳಗೇ ಕೈಯಿಂದ ಕೈಗೆ ಪಾಸ್ ಆಗುತ್ತಿತ್ತು.
ಗುಂಪೊಂದರ ವಿದ್ಯಾರ್ಥಿಯೋರ್ವ ಬರೆದ ಕನಸು ಡಿಫರೆಂಟ್ ಆಗಿತ್ತು. ಅಷ್ಟಕ್ಕೂ ಅವನು ಬರೆದದ್ದು ನಾನು ಸ್ವಾತಂತ್ರ್ಯ ಹೋರಾಟಗಾರ ಆಗ್ತೇನೆ. ನನಗೆ ಅಚ್ಚರಿಯಾಯಿತು. ನಾನೂ ಯೋಚನೆ ಮಾಡಿಲ್ಲದ ಹೊಸ ಕನಸು ಈ ಹುಡುಗನಲ್ಲಿ ಮೂಡಿತಲ್ವಾ..? ನೋಡಿದ ಕೂಡಲೇ ಅದು ತಪ್ಪು ಎಂದು ನನಗನ್ನಿಸಿತಾದರೂ…ಅದು ಯಾಕೆ ಸರಿಯಾಗಬಾರದು ಎಂಬ ಯೋಚನೆಯೂ ನನ್ನಲ್ಲಿ ಮೂಡಿತು. ಅವರ ಯೋಚನೆಗಳನ್ನು ದಾಖಲಿಸಿಕೊಳ್ಳುವುದು ಚಟುವಟಿಕೆಯ ಮುಖ್ಯ ಉದ್ದೇಶವಾಗಿದ್ದರಿಂದ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಯಾರು ಎಂಬುದನ್ನು ಅವನಿಗೆ ವಿವರಿಸಿ ಸುಮ್ಮನಾದೆ.
ಆದರೆ ಆ ಬಳಿಕ ನನ್ನ ಮನಸ್ಸಿನಲ್ಲಿ ಇದೇ ವಿಚಾರ ಸುಳಿದಾಡುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರ ಎಂಬುದು ಒಂದು ಪದವಿ ಎಂದು ಆ ವಿದ್ಯಾರ್ಥಿ ಭಾವಿಸಿದ್ದನೇ..? ಅವನ ಶಿಕ್ಷಕರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಸರಿಯಾಗಿ ಹೇಳಿಲ್ಲವೇ..? ಹೇಳಿದ್ದರೂ ಇವನ ಪರಿಕಲ್ಪನೆಯ ಸ್ವಾತಂತ್ರ್ಯ ಬೇರೆಯಾಗಿದೆಯೇ..? ಇದ್ದರೂ ಇರಬಹುದು. ಅದಕ್ಕಿಂತಲೂ ಮುಖ್ಯವಾಗಿ ಸಮಾಜದ ಪ್ರಸ್ತುತ ಸನ್ನಿವೇಶದಲ್ಲಿ ಹಕ್ಕು, ನೆಮ್ಮದಿ ಪ್ರತಿಯೊಂದಕ್ಕೂ ಪ್ರತಿಭಟನೆ, ಹೋರಾಟ ಅನಿವಾರ್ಯವಾಗಿದೆ. ಇದಕ್ಕೆಲ್ಲಾ ಮುಕ್ತಿ ದೊರಕಿಸಬೇಕೆಂದು ತಾನು ಸ್ವಾತಂತ್ರ್ಯ ಹೋರಾಟಗಾರ ಆಗಬೇಕೆಂದು ಬಯಸಿದನೇ..? ಇದನ್ನೂ ಅಲ್ಲಗೆಳೆಯುವಂತಿಲ್ಲ.
ಕೆಲವು ಶಿಕ್ಷಕರಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದೆ. ಅದಕ್ಕೆ ಅವರಂದರು, ಸ್ವಾತಂತ್ರ್ಯ ಹೋರಾಟಗಾರನಾದರೆ ತನ್ನ ಫೊಟೋ ಪುಸ್ತಕದಲ್ಲಿ, ನೋಟಿಸ್ ಬೋಡ್ ನಲ್ಲಿ ಗೋಡೆಯಲ್ಲಿ ಬರಬಹುದು, ನನ್ನ ವಿಷಯದಲ್ಲಿ ಭಾಷಣ ಮಾಡುತ್ತಾರೆ , ತಾನು ಹೀರೋ ಆಗಬೇಕು ಎಂಬುದೂ ಅವನ ಮನಸ್ಥಿತಿ ಆಗಿರಬಹುದು ಎಂದು.
ಇನ್ನೊಬ್ಬ ಶಿಕ್ಷಕರು ಹೇಳಿದ್ದು ಹೀಗೆ.. ಮತ್ತೆ ಯುದ್ದ ಆಗಬೇಕು, ಯುದ್ದ ನೋಡಬೇಕು ಎಂದೂ ಅವನು ಯೋಚಿಸಿರಬಹುದಂತೆ.
ಒಮ್ಮೆ ಅವನ ಯೋಚನೆ ತಪ್ಪು ಎಂದು ಅನ್ನಿಸಿದ ನನಗೆ ಆ ಬಳಿಕ ಹೇಗೆ ನೋಡಿದರೂ ಅವನ ಯೋಚನೆ ಸರಿ ಎಂದು ಅನ್ನಿಸತೊಡಗಿತು.
ಮಕ್ಕಳು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಸ್ಥಿತಿ ಒದಗಿ ಬಂದಿರುವ ಸಾಮಾಜಿಕ ಸ್ಥಿತಿಗತಿಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ, ಸಂಕಷ್ಟದಲ್ಲಿರುವ ಮಕ್ಕಳಿಗೆ ಮುಕ್ತಿ ಕೊಡಲು, ಶಿಕ್ಷಣದ ಹೆಸರಿನಲ್ಲಿ ಮಕ್ಕಳು ಶಾಲೆ/ಮನೆ/ ಸಮಾಜದಲ್ಲಿ ಅನುಭವಿಸುತ್ತಿರುವ ಸಂಕಟಗಳನ್ನು ದೂರಮಾಡಲು ತಾನು ಸ್ವಾತಂತ್ರ್ಯ ಹೋರಾಟಗಾರನಾಗಬೇಕು ಎಂಬ ಛಲ ಅವನಲ್ಲಿ ಇರಲೂ ಬಹುದು.
ಮಕ್ಕಳಿಗೆ ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ಕೇವಲ ಪಾಠದಿಂದ ಸಿಗಲು ಸಾಧ್ಯವಿಲ್ಲ. ಅದು ಸ್ವತಃ ಅನುಭವಕ್ಕೆ ಬರಬೇಕು. ನಮ್ಮದು ಸ್ವತಂತ್ರಭಾರತವಾಗಿದ್ದರೂ ವಿವಿಧ ವಿಚಾರಗಳಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರಗೊಂಡಿಲ್ಲ. ಹಾಗಾಗಿಯೇ ಯಾರಿಗೆ ಬಂತು ಎಲ್ಲಿಗೆ ಬಂತು ೪೭ ರ ಸ್ವಾತಂತ್ರ್ಯ..? ಎಂಬ ಹಾಡುಗಳು ಸ್ವತಂತ್ರ ಭಾರತದಲ್ಲಿ ಹುಟ್ಟಿಕೊಟ್ಟಿದೆ. ಹುಡುಗನ ಡಿಫರೆಂಟ್ ಕನಸಿನಂತಾ ಮಾತುಗಳೊಂದಿಗೆ ಈ ಪ್ರಶ್ನೆ ಮತ್ತೆ ಮತ್ತೆ ಕೇಳುತ್ತಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)