ಸುಮಾರು ೭೫ ಲ.ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಎ.೨೯ ರಿಂದ ಮೇ.೩ರವರೆಗೆ ನಡೆಯಲಿರುವ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ,ಶ್ರೀ ಗುರುಗಳ ಬೆಳ್ಳಿಪಾದ ಪ್ರತಿಷ್ಠೆ,ಶ್ರೀ ಆಂಜನೇಯ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ಜರಗಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ,ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಕ್ಷೇತ್ರದ ಪುನರ್‌ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ನಾವೆಲ್ಲರೂ ಸಂಘಟಿತವಾದ ಸೇವೆಯನ್ನು ಸಲ್ಲಿಸಬೇಕಾಗಿದೆ. ಕ್ಷೇತ್ರದ ಉತ್ಸವದೊಂದಿಗೆ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಬಲಗೊಳ್ಳಲು ಸಾಧ್ಯವಿದೆ. ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ,ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ದೇವರ ಕೆಲಸ ಪುಣ್ಯದ ಕೆಲಸ. ಅಂತಹ ಭಾಗ್ಯ ನಮಗೆ ದೊರೆತಿರುವುದಕ್ಕೆ ನಾವು ದೇವರಿಗೆ ಕೃತಜ್ಞರಾಗಬೇಕು. ಈ ಕ್ಷೇತ್ರದ ಪ್ರಗತಿಯಲ್ಲಿ ಎಲ್ಲಾ ರೀತಿಯ ಭೇದಭಾವವನ್ನು ದೂರಮಾಡಿ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಸೇವೆ ಸಲ್ಲಿಸಬೇಕಾಗಿದೆ. ಬ್ರಹ್ಮಕಲಶೋತ್ಸವವನ್ನು ಅತ್ಯಂತ ವೈಭವಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು.
ಸೇವಾ ಸಮಿತಿ ಅಧ್ಯಕ್ಷ ಮಂಜಪ್ಪ ನಾಯ್ಕ್,ಕ್ಷೇತ್ರದ ಧರ್ಮದರ್ಶಿ ಹರೀಶ ನಾಯ್ಕ,ಜೀರ್ಣೋಧ್ಧಾರ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ,ಸೇವಾ ಸಮಿತಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಂಗಳೂರು,ದಾನಿ ಸದಾಶಿವ ರಾವ್ ಧರ್ಮಸ್ಥಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಜಯರಾಮ ನಾಯ್ಕ ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ನಾಯ್ಕ ಕೆ.ಬೆಳ್ಳಾರೆ ವಂದಿಸಿದರು. ಸಲಹೆಗಾರ ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.