ಗಿರಿಲಹರಿ

ಪುಸ್ತಕ ಬರೆದಿದ್ದೇನೆ….ಓದಿದ್ದೀರಾ?

  • ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ
  • www.bantwalnews.com

ಸಾಮಾನ್ಯವಾಗಿ ಪುಸ್ತಕ ಓದುವವರನ್ನು ಅನುಲಕ್ಷಿಸಿ ನಾವು ಇಂಥಿಂಥವರಿಗೆ ಪುಸ್ತಕದ ಹುಚ್ಚು ಇದೆಎಂದು ಹೇಳುತ್ತೇವೆ. ಅಂಥ ಹುಚ್ಚರು ಪಾಪ! ಅವರ ಸಂತತಿ ಸಾವಿರವಾಗಲಿ. ಅವರ ಬಗ್ಗೆ ಅಲ್ಲ ನಾನಿಲ್ಲಿ ಮಾತನಾಡುತ್ತಿರುವುದು. ನಾನಿಲ್ಲಿ ಹೇಳಲು ಹೊರಟದ್ದು ಪುಸ್ತಕ ಬರೆವವರ ಮತ್ತು ಪ್ರಕಟಿಸುವವರ ಹುಚ್ಚಿನ ಬಗ್ಗೆ. ಈ ಹುಚ್ಚು ನನಗೂ ಸ್ವಲ್ಪಇರುವುದರಿಂದ ನಾನು ಬೇರೆಯವರನ್ನು ಲೇವಡಿ ಮಾಡಿದ್ದೇನೆ ಅಂತ ಯಾರೂ ತಿಳಿಯಬಾರದು.

ನಿಮಗೆ ಎಂಥೆಂಥ ಅನುಭವವಾಗಿದೋ ಗೊತ್ತಿಲ್ಲ, ನನಗೆ ಮತ್ತು ನನ್ನ ಹಲವು ಆಪ್ತರಿಗೆ ಈ ಪುಸ್ತಕಗಳ ವಿಚಾರವಾಗಿ ಹಲವು ಅನುಭವಗಳಾಗಿವೆ. ನೀವು ಯಾವುದೋ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿರುತ್ತೀರಿ. ಅಲ್ಲಿ ಪುಣ್ಯಕ್ಕೆಕಾರ್ಯಕ್ರಮಆರಂಭವಾದ ನಂತರವಷ್ಟೇ ನೀವು ತಲುಪಿರುತ್ತೀರಿ, ಡಬ್ಬಲ್ ಪುಣ್ಯವಂತರಾಗಿದ್ದರೆ ಚಹಾ ತಿಂಡಿ ಸಭಾಂಗಣದ ಒಂದು ಕೊನೆಯಲ್ಲಿ ಇನ್ನೂ ಉಳಿದಿರುತ್ತದೆ. ಅಂತೂಅಲ್ಲಿ ನಡೆಯುವ ಗೋಷ್ಠಿಯನ್ನೋ ಭೋಕರ ಭಾಷಣವನ್ನೋ ಆಸ್ವಾದಿಸುತ್ತೀರಿ. ಮತ್ತೊಮ್ಮೆ ಚಹಾಕ್ಕೆ ಅಥವಾ ಹೆಚ್ಚಿನ ಬಾರಿಊಟಕ್ಕೆ ಬಿಡುವುಸಿಕ್ಕಾಗ ನೀವು ಸಿಕ್ಕಿಬಿದ್ದಿರಿಅಂತಅರ್ಥ. ಯಾರೋ ಒಬ್ಬರು ಹೆಗಲಲ್ಲಿ ನೇಲಿಸಿದ ಚೀಲದೊಳಗೆ ಐದಾರು ಕಿಲೋ ಹೊತ್ತುಕೊಂಡವರು ನಿಮ್ಮ ಬಳಿ ಬರುತ್ತಾರೆ. ಒಂದು ಪುಸ್ತಕ ಹೊರಗೆತೆಗೆಯುತ್ತಾರೆ. ನನ್ನಇತ್ತೀಚಿನ ಪುಸ್ತಕ ಸಾರ್‌ಅನ್ನುತ್ತಾರೆ. ಕೊಡುತ್ತಾರೆ. ನನ್ನ ಹೊಸಾ ಮಗು ಅಂತ ಯಾರಾದರೂ ತಾಯಂದಿರು ಖುಷಿಯಿಂದ ಮಗುವನ್ನು ನೀಡಿದಾಗ್ತೆತ್ತಿಕೊಳ್ಳದೆ ಇರಲು ಆಗುತ್ತದೆಯೇ? ನೀವು ತೆಗೆದುಕೊಳ್ಳುತ್ತೀರಿ.

ಆಯಿತು, ಓದಿ ಅಭಿಪ್ರಾಯ ಹೇಳುತ್ತೇನೆ ಅಂತ ಹೇಳಿ ನೀವು ಇನ್ನೇನು ಊಟದ ಕ್ಯೂವಿನ ಬಾಲದ ತುದಿಗೆ ಹೋಗಬೇಕು ಅಂದುಕೊಳ್ಳುವಷ್ಟರಲ್ಲಿ ನಾನು ಎಲ್ಲರಿಗೂ ನೂರೈವತ್ತಕ್ಕೆಕೊಡುವುದು, ನೀವು ನೂರಿಪ್ಪತ್ತುಕೊಟ್ಟರೆ ಸಾಕು, ನಿಮ್ಮಂಥವರ ಆಶೀರ್ವಾದ ಬೇಕು ಅಂತ ಅಷ್ಟೇ ಸರ್, ಮತ್ತೆ ನಿಮ್ಮಂಥವರು ಪುಸ್ತಕವನ್ನು ಹಾಗೇ ಬಿಟ್ಟಿಯಾಗಿ ತಗೊಳ್ಳೋವರೂ ಅಲ್ಲ ನೋಡಿ, ಹೆಹ್ಹೆ ಅನ್ನುವಾಗ ನೀವು ಕೂಡ ಇನ್ನೆರಡು ಹೆಹ್ಹೆಹ್ಹೆಗಳನ್ನು ಉದುರಿಸಿ ಕಿಸೆಗೆ ಕೈ ಹಾಕಬೇಕಾಗುತ್ತದೆ.

ನನ್ನ ಮಿತ್ರರೊಬ್ಬರು ಇಂಥ ವಿಚಾರಸಂಕಿರಣಗಳಲ್ಲಿ ಊಟಕ್ಕೆಎಲ್ಲರೂ ಏಳುತ್ತಾರೆ ಅನ್ನುವಷ್ಟರಲ್ಲಿ ಎದ್ದು ಮೊದಲು ಹೋಗಿ ತಟ್ಟೆ ಹಿಡಿಯುತ್ತಾರೆ. ಅವರು ಹೆಚ್ಚೇನೂ ಊಟ ಮಾಡದಿದ್ದರೂ ಅವರ ಊಟ ಮುಗಿಯುವುದು ಪುನಃ ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಹೊರತು ಅದರ ಮೊದಲಲ್ಲ. ಮೇಲೆ ನಾನು ಹೇಳಿದ ಸಮಸ್ಯೆ ಬರುತ್ತದೆಅಂತಲೇ ಈ ಉಪಾಯಅಂತಇತ್ತೀಚೆಗೆ ನನ್ನಲ್ಲಿ ತಮ್ಮ ದೀರ್ಘ ಊಟದ ಗುಟ್ಟನ್ನು ಬಿಟ್ಟರು! ನಾನಂತೂ ಒಂದು ಉಪಾಯ ಮಾಡುತ್ತೇನೆ. ಅಂಥ ಹೊಸ ಉಪಾಯಅಂತಲ್ಲ, ಆದರೂಅಪಾಯತಪ್ಪಿಸಲುಉತ್ತಮಉಪಾಯ. ಯಾರಾದರೂ ಹೀಗೆ ಪುಸ್ತಕ ಕೊಡುವವರಿಗೆ ಮಾರುತ್ತರಕೊಡಲುಅಂತಲೇ ನನ್ನಚೀಲದಲ್ಲೂ ನನ್ನದೇಒಂದೆರಡು ಪುಸ್ತಕಗಳಿರುತ್ತವೆ.

ನನಗೆ ನೂರು ರೂಪಾಯಿಯ ಪುಸ್ತಕ ಹಿಡಿಸಿದವರಿಗೆ ನಾನು ನೂರೈವತ್ತರ ಪುಸ್ತಕ ಮೇಲಿಂದಯಾವದುಡ್ಡೂ ಬೇಡ ಅಂತ ಹೇಳಿ ಒಪ್ಪಿಸಿ ಬಿಟ್ಟಾಗ ಅವರ ಮುಖ ನೋಡಬೇಕು ನೀವು. ಒಂದು ನೆನಪಿಟ್ಟುಕೊಳ್ಳಬೇಕಾದ ವಿಚಾರವೆಂದರೆ ನಮಗೆ, ಅಂದರೆ, ಪುಸ್ತಕ ಬರೆವವರಿಗೆಅತಿ ದೊಡ್ಡ ಕಷ್ಟವೆಂದರೆ ಬೇರೆಯವರ ಪುಸ್ತಕ ಓದುವುದು! ಹಾಗಾಗಿ ಈ ರಾಮಬಾಣದಂಥ ಪ್ರತ್ಯಸ್ತ್ರ ಬಹಳ ಪರಿಣಾಮಕಾರಿ.

ಪುಸ್ತಕ ಕೊಟ್ಟುದುಡ್ಡು ತೆಗೆದುಕೊಳ್ಳುವವರದ್ದಾದರೂ ಕೇವಲ ಕ್ಷಣಿಕಆರ್ಥಿಕ ಸಮಸ್ಯೆಯಾಗಿಅಲ್ಲಿಗೆ ನಿಲ್ಲುತ್ತದೆ. ಕೆಲವರದು ನಿರಂತg,ಅಂದರೆಈಗೆಲ್ಲ ನಾವು ವ್ಯಾಪಕವಾಗಿ ಬಳಸುವ ಶಬ್ದ ಬಳಸುವುದಾದರೆ, ಸುಸ್ಥಿರ ಸಮಸ್ಯೆಯೇ ಸರಿ. ಇಂಥ ಪುಸ್ತಕರಚಕರು ಮುಂದಿನ ಬಾರಿ ಊಟದ ಬಿಡುವಿನಲ್ಲಿ ನೀವು ಸಿಕ್ಕಿದಾಗ ಇನ್ನೊಂದು ಪುಸ್ತಕ ಮುಖಕ್ಕೆ ಹಿಡಿದರೂ ಸಹಿಸಿಕೊಳ್ಳಬಹುದು. ಬದಲಾಗಿ ಕಳೆದ ಬಾರಿ ನನ್ನಿಂದ ತಗೊಂಡ ಪುಸ್ತಕ ನಾನು ಹಿಡಿಸಿದ ಪುಸ್ತಕ ಅನ್ನೋದಿಲ್ಲ!) ಓದಿದ್ರಾ ಸಾರ್? ಅಂತ ಕೇಳುತ್ತಾರೆ.

ನಿಮಗೆ ಅದು ಯಾವ ಪುಸ್ತಕ ಅಂತಲೇ ನೆನಪಿಗೆ ಬರೋದಿಲ್ಲ. ಮತ್ತೆ ಓದಿದೆ ಹೆಹ್ಹೆಹ್ಹೆಯೇ ಗತಿಅಥವಾ ಸ್ವಲ್ಪ ಸಾಂಬಾರು ಹಾಕಿಸಿಕೊಂಡು ಬರುತ್ತೇನೆ ಅಂತ ಅಲ್ಲಿಂದ ಜಾಗ ಖಾಲಿ ಮಾಡುತ್ತೀರಿ. ಕ್ರಯಕೊಟ್ಟು ಪುಸ್ತಕ ಕೊಳ್ಳುವುದರ ಜೊತೆ ಓದಬೇಕು ಅನ್ನುವ ಶಿಕ್ಷೆ ಕೊಡುವುದು ಅಮಾನವೀಯವೇ ಸರಿ. ಮತ್ತೆ ಕೆಲವರು ನನ್ನ ಪುಸ್ತಕದ ವಿಮರ್ಶೆಯಾವಾಗ ಬರೆಯುತ್ತೀರಿಅಂತ ಪುಸ್ತಕ ಕೊಂಡತಪ್ಪಿಗೆ ನೀವು ಅಯಾಚಿತವಾಗಿ ಪಡಕೊಂಡ ನಿಮ್ಮ ಜವಾಬುದಾರಿಯನ್ನು ನೆನಪಿಸುತ್ತಲೇಇರುತ್ತಾರೆ. ನೀವು ಉಚಿತವಾಗಿ ಪುಸ್ತಕ ಪಡೆದವರಾದರೆ ನಿಮ್ಮಹೊಣೆಗಾರಿಕೆಇ ನ್ನಷ್ಟು ಜಾಸ್ತಿ.

ಪುಸ್ತಕ ಬರೆವವರದ್ದು ಇನ್ನೂಒಂದು ಸಮಸ್ಯೆಯಿದೆ ಓದುಗರಿಗೆ. ಇತ್ತೀಚೆಗೆ ನನಗೆ ಒಬ್ಬರು ಪತ್ರ ಬರೆದು ನನ್ನ ಒಂದು ಪುಸ್ತಕ ಕಳಿಸಲು ಹೇಳಿದರು, ಅದರ ದುಡ್ಡು ಕಳಿಸುವೆ ಅಂತಲೂ ಹೇಳಿದ್ದರು.

ಈ ಪುಸ್ತಕ ಅಪೇಕ್ಷಿಸಿದ ಅವರಿಗೆ ನನ್ನ ಇನ್ನೊಂದು ಪುಸ್ತಕವೂ ಇಷ್ಟವಾಗಬಹುದು ಎಂಬ ಊಹೆಯಲ್ಲಿ ಇನ್ನೊಂದು ಪುಸ್ತಕವನ್ನೂ ಜೊತೆಗೆ ಪೇಕ್ ಮಾಡಿದೆ. ಕೊರಿಯರು ಆಫೀಸಿನಲ್ಲಿ ಹೊಳೆಯಿತು, ಇವನು ಒಂದು ಎಕ್ಸ್ಟ್ರಾ ಪುಸ್ತಕ ದಾಟಿಸಲು ನೋಡಿದ್ದಾನೆ ಅಂತ ಅವರಿಗೆ ಅನಿಸಿದರೆ? ಪುನಃ ಪ್ಯಾಕನ್ನು ಬಿಚ್ಚಿ ಆ ಎರಡನೇ ಪುಸ್ತಕದೊಳಗೆ ಗೌರವ ಪ್ರತಿ ಅಂತ ಬರೆದು ಮತ್ತೆ ಪ್ಯಾಕ್ ಮಾಡಿದೆ.

ಕೆಲವರು ಹೀಗೊಂದು ಅಘೋಷಿತ, ಅಲಿಖಿತ ನಿಯಮ ಉಂಟೆಂದು ಬಗೆಯುತ್ತಾರೆ. ಅದೇನೆಂದರೆ, ಲೇಖಕ ಪುಸ್ತಕದಲ್ಲಿ ಏನಾದರೂ ಬರೆದು ಕೊಟ್ಟರೆ ಅದು ಉಚಿತ, ಬರೆಯದೇ ಕೊಟ್ಟರೆ ಅದು ಅನುಚಿತ, ಅಲ್ಲಲ್ಲ, ಹಣಕ್ಕೆಅಂತ. ನನಗೆ ಯಾರಾದರೂ ಪುಸ್ತಕ ಕೊಟ್ಟಾಗಲಾಗಲೀ ನಾನುಯಾರಿಗಾದರೂ ಪುಸ್ತಕ ಕೊಟ್ಟಾಗಲಾಗಲೀ ಈ ನಿಯಮವನ್ನು ನಾನು ಅಧ್ಯಾಹಾರವಾಗಿ ಪರಿಗಣಿಸುವುದಿಲ್ಲ. ದೊಡ್ಡ ದೊಡ್ಡವರಿಗೆಲ್ಲ ಕೊಡುವಾಗ ಎಂತದ್ದು ನನ್ನ ಸಹಿ ಹಾಕಿ ಕೊಡುವುದು ಅಂತ ನನಗೆ ಮುಜುಗರ.

ಒಟ್ಟಿನಲ್ಲಿ, ನಾನಾಗಿ ಪುಸ್ತಕ ಕೊಟ್ಟಾಗ ನಾನು ಹಣ ನಿರೀಕ್ಷೆ ಮಾಡುವುದಿಲ್ಲ.ಅವರಾಗಿ ಕೇಳಿದಾಗ ಮಾತ್ರ ನಿರೀಕ್ಷೆ ಮಾಡುತ್ತೇನೆ ಅಷ್ಟೆ. ಹಾಗೆಯೇ ಅವರಾಗಿ ಕೊಟ್ಟಾಗ ಹಣ ಕೊಡಲು ನನಗೆ ಬಹಳ ಬಾರಿ ಮನಸ್ಸಿರುವುದಿಲ್ಲ. ಹಾಗೆಂದು ನನಗೆ ಅಗತ್ಯವಿಲ್ಲದ ಪುಸ್ತಕವಾದರೆ ದಾಕ್ಷಿಣ್ಯಕ್ಕೆ ಬಿದ್ದು ದುಡ್ಡು ಕೊಡುವುದಿಲ್ಲ ಅಂತಿಲ್ಲ. ಆದರೆ ನಾನು ಒತ್ತಾಯ ಮಾಡಿ ಹಣ ಕೊಡುವುದಿಲ್ಲ.

ಲೇಖಕರು ಪುಸ್ತಕದಲ್ಲಿ ಏನು ಬರೆದುಕೊಡುತ್ತಾರೆ ಎನ್ನುವುದರಲ್ಲೂ ವೈವಿಧ್ಯವಿದೆ. ಇದರ ಬಗ್ಗೆಯೇ ಒಂದು ಫಿಸ್ಕೋಲಜಿ ಅಂದರೆ ಮನಶ್ಶಾಸ್ತ್ರೀಯ ಅಧ್ಯಯನ ಮಾಡಬಹುದು. ಕೆಲವರು ಪ್ರೀತಿಯಿಂದ ಅಂತ ಬರೆಯುತ್ತಾರೆ. ಕೆಲವರುಆದರದಿಂದ, ಕೆಲವರು ಆತ್ಮೀಯತೆಯಿಂದ ಅಂತ, ಮತ್ತೆ ಕೆಲವರು ಗೌರವಾದರಗಳಿಂದ ಅಂತ, ಮತ್ತೆ ಕೆಲವರು ಶುಭಾಶಯಗಳೊಂದಿಗೆ ಅಂತ, ಕೆಲವರು ಸಹಿ ಮಾತ್ರ, ಕೆಲವರು ಸಹಿಯೊಂದಿಗೆ ದಿನಾಂಕ ಕೂಡ. ಒಬ್ಬರು ಉದಯೋನ್ಮುಖ ಲೇಖಕರು ನನಗೆ ಅವರ ಒಂದು ಪುಸ್ತಕ ನೀಡುತ್ತಾ ಅದರಲ್ಲಿ ನನ್ನ ಆತ್ಮೀಯ ಅಭಿಮಾನಿಗೆ ಅಂತ ಬರೆದುಕೊಟ್ಟಿದ್ದರು. ಆ ಮೂಲಕ ಅವರ ಅಭಿಮಾನಿಗಳ ಪಟ್ಟಿಗೆ ಒಂದು ಹೆಸರನ್ನುಅಧಿಕೃತವಾಗಿ ಸೇರಿಸಿಕೊಂಡಿದ್ದರು.

ಒಂದೆಡೆ ನನ್ನ ಒಂದು ಪುಸ್ತಕವನ್ನು ದುಡ್ಡು ಕೊಟ್ಟೇ ಪಡೆದುಕೊಂಡ ಆಗಷ್ಟೇ ಪರಿಚಿತರಾದ ಯುವ ಮಹಿಳೆಯೊಬ್ಬರು ಪ್ರೀತಿಯಿಂದ ಅಂತ ಬರೆದುಕೊಡಿ ಸರ್‌ ಅಂದರು! ನನ್ನ ಹೆಂಡತಿ ಅಂದು ನನ್ನ ಜೊತೆಗೆ ಇರದಿದ್ದುದರಿಂದ ನಾನು ಕೋರ್ಟು ಮಾರ್ಷಲ್ ನಿಂದ ತಪ್ಪಿಸಿಕೊಂಡೆ.

ಕೆಲವು ಲೇಖಕರು ಅವರ ಪುಸ್ತಕವನ್ನು ನೀವು ಕೊಳ್ಳದಿದ್ದರೆ ನೀವು ಕನ್ನಡಕ್ಕೆ ಪ್ರೋತ್ಸಾಹ ನೀಡದವರು ಅಂತಲೇ ಪರಿಗಣಿಸುತ್ತಾರೆ. ಅಷ್ಟೇ ಅಲ್ಲ ಕೆಲವರು ನಿಮ್ಮನ್ನು ಕನ್ನಡ ವಿರೋಧಿಗಳು ಅಂತ ಪರಿಗಣಿಸುವ ಸಾಧ್ಯತೆಯೂ ಇದೆ. ಎಲ್ಲ ಪುಸ್ತಕಗಳನ್ನೂ ಎಲ್ಲರೂ ಯಾಕೆ ಓದಬೇಕು ಅಂತ ನೀವು ಕೇಳುವ ಪ್ರಶ್ನೆ ಸರಿಯಾಗಿಯೇ ಇದೆ. ಆದರೆ, ಹೆತ್ತವರ ಹೆಗ್ಗಣವನ್ನು ನೀವು ಕಡೆಗಣಿಸಬಾರದಲ್ಲವೆ?

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat