ಕವರ್ ಸ್ಟೋರಿ

ನೀರು ಮಿತವಾಗಿ ಬಳಸಿ…ಏಕೆಂದರೆ,,,

ಹರೀಶ ಮಾಂಬಾಡಿ

www.bantwalnews.com

ಎಂದಿನಂತೆ ಬೇಸಗೆ ಆರಂಭಗೊಂಡಿದೆ. ನೀರು ಉಳಿಸುವ ಕಾಳಜಿ ಹಿಂದೆಂದಿಗಿಂತಲೂ ಈ ಬಾರಿ ಬೇಕಾಗಿದೆ. ಅಂಕಿ ಅಂಶಗಳೇ ಹೇಳುವ ಪ್ರಕಾರ ನಮ್ಮೂರಲ್ಲಿ ಮಳೆ ಕಳೆದ ಬಾರಿ ಭಾರೀ ಕಡಿಮೆ…ಬರ ಬಂದಿದೆ ಸ್ವಾಮೀ…

ನೇತ್ರಾವತಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ಆದರೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಅಂದಾಜು 65 ದಿನಕ್ಕೆ ನೀರು ಪೂರೈಸುವಷ್ಟು ಸಂಗ್ರಹ ತುಂಬೆ, ಎಎಂಆರ್ ಡ್ಯಾಂನಲ್ಲಿದೆ, ಮಿತವಾಗಿ ಕುಡಿಯುವ ನೀರು ಬಳಸಿದರೆ, ಸಮಸ್ಯೆ ಬಾರದು. ಹೀಗಂದು ಮಂಗಳೂರು ಮೇಯರ್ ತುಂಬೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ಇತ್ತು ಹೋದ ಸಂದರ್ಭ ಅಲ್ಲಿದ್ದ ಪತ್ರಕರ್ತರಿಗೆ ಹೇಳಿದ ಮಾತು.

ಹೀಗೆ ಆದ ಕೆಲ ದಿನಗಳಲ್ಲೇ ನೀರಿನ ಒಳಹರಿವು ನಿಂತಿದೆ. ಇನ್ನೇನಿದ್ದರೂ ಉಪಯೋಗಿಸುವಾಗ ಭಾರೀ ಜಾಗ್ರತೆ ಮಾಡಬೇಕು ಎಂಬ ಸಂದೇಶ ಬಂದವು.

ಹಾಗಾದರೆ ನೇತ್ರಾವತಿಯಲ್ಲಿ ನೀರು ಕಡಿಮೆಯಾಗುತ್ತಿದೆಯಾ, ಅಥವಾ ಉಪಯೋಗಿಸುವವರು ಜಾಸ್ತಿಯಾಗುತ್ತಿದ್ದಾರಾ?

ತುಂಬಾ ಸಿಂಪಲ್.

ಎರಡಕ್ಕೂ ಉತ್ತರ ಹೌದು.

ನೇತ್ರಾವತಿಯಲ್ಲಿ ನೀರು ಕಡಿಮೆ ಆಗುತ್ತಿರುವುದಂತೂ ಸತ್ಯ. ಎಷ್ಟೇ ಅಂಕಿ ಅಂಶಗಳನ್ನು ಕೊಟ್ಟರೂ ನೇತ್ರಾವತಿಯಲ್ಲಿ ಈಗಿರುವ ನೀರಿನ ಸಂಗ್ರಹಕ್ಕೂ ಉಪಯೋಗಿಸುವವರ ಸಂಖ್ಯೆಗೆ ಹೋಲಿಸಿದರೆ ಎಷ್ಟು ನೀರಿದ್ದರೂ ಸಾಲದು.

ಕೇವಲ ಮನುಷ್ಯರು ಕುಡಿಯುವ ನೀರಿಗಷ್ಟೇ ನೇತ್ರಾವತಿಯನ್ನು ಬಳಸಿದ್ದರೆ ಇಷ್ಟು ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಇಂದು ಹುಟ್ಟಿದಲ್ಲಿಂದ ಸಮುದ್ರ ಸೇರುವವರೆಗೆ ನೇತ್ರಾವತಿ ನದಿ ನೀರು ಜನಸಾಮಾನ್ಯರಿಗಷ್ಟೇ ಅಲ್ಲ, ಕಾರ್ಖಾನೆ ಇತ್ಯಾದಿಗಳಿಗೆ ಹೋಗುತ್ತದೆ. ಎಲ್ಲರಿಗೂ ನದಿ ಬೇಕು. ನೇತ್ರಾವತಿಯ ಉಪನದಿಗಳೂ ಬೇಕು. ಈ ಹಗ್ಗಜಗ್ಗಾಟದ ನಡುವೆಯೇ ಕಳೆದ ವರ್ಷ ಮಳೆಯೇ ಕಡಿಮೆ ಬಿದ್ದಿದೆ. ಈಗ ಬಿಸಿ ಎದ್ದಿದೆ.

ಮೇಲ್ನೋಟಕ್ಕೆ ಬರಗಾಲ ಕಾಣಿಸುತ್ತಿಲ್ಲ. ಆದರೆ ನಮ್ಮೊಳಗೇ “ಬರ”  ಇದೆ. ನೀರನ್ನು ಮಿತವಾಗಿ ಬಳಸಬೇಕು ಎಂಬ ಜಾಗೃತಿ ನಮ್ಮಲ್ಲಾಗಿಲ್ಲ. ಭೂಮಿಯನ್ನು ಕೊರೆಯುವುದರ ವಿರುದ್ಧ ಯಾರೂ ಜಾಗೃತರೂ ಆಗಿಲ್ಲ. ಇಂದು ನೀರಿಗಾಗಿ ನಾವು ಭೂಮಿಯಾಳಕ್ಕೆ ಇಳಿಯುವ ಬದಲು ಜಲಮರುಪೂರಣ, ಜಲಸಂರಕ್ಷಣೆ ಕಡೆಗೆ ಚಿತ್ತ ಹರಿಸಬಹುದು. ಆದರೆ ಈ ವಿಚಾರವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇವತ್ತಿಗೆ ನೀರು ಸಿಕ್ಕಿದರೆ ಆಯಿತು, ನಾಳೆಯದ್ದು ನಾಳೆಗೆ ನೋಡೋಣ ಎಂಬ ಚಿಂತಕರು ಇಂದು ಜಾಸ್ತಿ. ಇದರ ಪರಿಣಾಮವೇ ಈಗ ನೀರಿನ ಕೊರತೆಯನ್ನು ನಾವು ಅನುಭವಿಸಬೇಕು.

ಇದೀಗ ಧಾರಾಕಾರ ಬೆವರಿಳಿಸುವ ಸಮಯ. ತಾಪಮಾನವೂ ಏರಿಕೆಯಾಗುತ್ತಿದೆ. ಇಂಥ ಹೊತ್ತಿನಲ್ಲಿ ಸಹಜವಾಗಿಯೇ ನೀರಿನ ಅವಶ್ಯಕತೆ ಇದೆ. ಆದರೆ ನೀರಿದೆ ಎಂದು ಧಾರಾಳವಾಗಿ ಉಪಯೋಗಿಸುವ ಮುನ್ನ ಯೋಚಿಸಿ. ಯಾರೋ ನೀರಿಗಾಗಿ ಪರದಾಟ ನಡೆಸುತ್ತಿರಬಹುದು ಎಂಬುದನ್ನು ಗಮನಿಸಿ.

ನೇತ್ರಾವತಿ ನೀರು ಒಳಹರಿವು ಸ್ಥಗಿತಗೊಂಡಿರುವ ಕಾರಣ, ತುಂಬೆ ಮತ್ತು ಎಎಂಆರ್ ಡ್ಯಾಂನಲ್ಲಿ ಪ್ರಸ್ತುತ ನೀರಿನ ಮಟ್ಟ ಪ್ರತಿದಿನ  ಕಡಿಮೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಾರಣ, ಎಎಂಆರ್ ಪವರ್ ಪ್ರೈ.ಲಿ. ಡ್ಯಾಂನಿಂದ ಎಂ.ಆರ್.ಪಿ.ಎಲ್. ಮತ್ತು ಎಂ.ಎಸ್.ಇ.ಜಡ್ ಸಂಸ್ಥೆಯವರು ನಿರಂತರವಾಗಿ ಪ್ರತಿದಿನ ಡ್ಯಾಂನಿಂದ ನೀರನ್ನು ಲಿಫ್ಟ್ ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿ ಡಾ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಇದು ಮಂಗಳೂರಿನ ವಿಷಯವಾಯಿತು.

ಆದರೆ ನೇತ್ರಾವತಿಯಷ್ಟೇ ಅಲ್ಲ, ಬೋರ್ ವೆಲ್ ಗಳಲ್ಲೂ ನೀರು ಬತ್ತಿದರೆ? ಆಗೇನು ಮಾಡೋದು, ಮತ್ತೊಂದು ಕೊಳವೆ ಬಾವಿ ತೋಡುವುದಾ?

ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಮುನ್ನ ಜಲಸಂಪನ್ಮೂಲಗಳನ್ನು ಪ್ರಾಕೃತಿಕವಾಗಿಯೇ ಪಡೆಯಲು ಸಾಧ್ಯವೇ ಎಂದು ಯೋಚಿಸೋಣ.

ಕುಡಿಯುವ ನೀರು ಪಡೆಯಲು ಹಾಗೂ ಇದ್ದ ನೀರನ್ನು ಉಳಿಸಲು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಯಾವ ರೀತಿಯಲ್ಲಿ ತೊಡಗಿಸಬಹುದು ಎಂಬ ಕುರಿತು ನಿಮ್ಮಲ್ಲಿ ಐಡಿಯಾಗಳಿದ್ದರೆ ನಮ್ಮೊಂದಿಗೆ ಹಂಚಿ. ನೀವು ಈ ಮೈಲ್ ಮಾಡುವ ಮೂಲಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.

bantwalnews@gmail.com  Watsapp No: 9448548127 Pls mention your name and address

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts