ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಭಾಗಗಳ ಕಾರ್ಮಿಕರ ಹೆಸರು ಉಲ್ಲೇಖವಾಗಿದೆ. ಆದರೆ ಅಧಿಕೃತವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರ ಹೆಸರೇ ಬೇರೆ.
ಹೀಗೆಂದು ಗುರುವಾರ ನಡೆದ ಪುರಸಭೆ ಮೀಟಿಂಗ್ ನಲ್ಲಿ ಪ್ರಶ್ನಿಸಿದವರು ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ.
ಎರಡು ಹೆಸರಿನ ಪಟ್ಟಿಯನ್ನು ಪರಿಶೀಲಿಸಿದಾಗ 39 ಕಾರ್ಮಿಕರ ಪೈಕಿ ಅಧಿಕೃತ ಪಟ್ಟಿಯಲ್ಲಿ ಹೆಸರಿಲ್ಲದೆ ಇರುವುದು ಕಂಡುಬಂತು.
ವಿಷಯದ ಗಂಭಿರತೆ ಅರಿತ ಮುಖ್ಯಾಧಿಕಾರಿ ಸುಧಾಕರ್, ಗುತ್ತಿಗೆದಾರನಿಗೆ ಕಾರ್ಮಿಕರ ಪಟ್ಟಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರು ನೀಡಿಲ್ಲ. ಇದೇ ತಿಂಗಳ 22ರಂದು ಕಸ ವಿಲೇವಾರಿಗೆ ಸಂಬಂಧಿಸಿ ಹೊಸ ಟೆಂಡರ್ ಕರೆಯಲಾಗುತ್ತಿದೆ. ಮುಂದಿನ ದಿನದಲ್ಲಿ ಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಲಾಗುವುದು. ಅದುವರೆಗೆ ಬಿಲ್ಲನ್ನು ತಡೆಹಿಡಿಯುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.
ಕಳೆದ ಬಾರಿಯ ಬಜೆಟ್ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಆಯವ್ಯಯದ ಅಂಕಿ ಅಂಶದ ಲೆಕ್ಕಗಳು ಸಮರ್ಪಕವಾಗಿ ತಾಳೆಯಾಗದೇ ಇರುವ ವಿಚಾರವನ್ನು ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಮತ್ತೆ ಸಭೆಯ ಗಮನಕ್ಕೆ ತಂದರು. ಈ ಬಾರಿ ಬಜೆಟ್ ಅನ್ನು ಸ್ಥಿರೀಕರಣ ಮಾಡುವುದಾದರೆ ಅಂಕಿ ಅಂಶಗಳಲ್ಲಿನ ವ್ಯತ್ಯಾಸಕ್ಕೆ ಸಕಾರಣ ನೀಡಬೇಕೆಂದು ಒತ್ತಾಯಿಸಿದರು.
ಆಯವ್ಯಯದಲ್ಲಿ ಜಮೆ ಮತ್ತು ಖರ್ಚಿಗೂ ಸುಮಾರು ೪ ಕೋಟಿ ರೂ. ವ್ಯತ್ಯಾಸ ಕಂಡುಬರುತ್ತಿದೆ. ಈ ಕುರಿತು ಜಿಲ್ಲಾಕಾರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಯ ಲೆಕ್ಕಾಧೀಕ್ಷಕರಿಗೆ ಜಿಲ್ಲಾಧಿಕಾರಿಯವರು ತನಿಖೆಗೆ ಅದೇಶಿಸಿದ್ದಾರೆ. ಈ ಹಂತದಲ್ಲಿ ಬಜೆಟ್ ಅನ್ನು ವ್ಯತ್ಯಾಸ ಸರಿಪಡಿಸದೆ ಸ್ಥಿರೀಕರಣ ಮಾಡಬಾರದು ಎಂದು ಪಟ್ಟು ಹಿಡಿದರು. ಒಂದು ವೇಳೆ ಬಹುಮತದಿಂದ ಸ್ಥಿರೀಕರಣ ಮಾಡಿದರೆ, ಮತ್ತೆ ಲೆಕ್ಕಪತ್ರದಲ್ಲಾಗುವ ಸಮಸ್ಯೆ ಮತ್ತು ಸಿಬ್ಬಂದಿಗಳಿಗೆ ವೇತನ ನೀಡಲಾಗದ ತೊಂದರೆಯಾದರೆ ಪುರಸಭೆಯೇ ಹೊಣೆ ಎಂದು ತಿಳಿಸಿದ ಅವರು ಬಜೆಟ್ ಮಂಜೂರಾತಿಗೆ ವಿಪಕ್ಷ ಸದಸ್ಯರ ಲಿಖಿತ ಆಕ್ಷೇಪ ಸಲ್ಲಿಸಿದರು.
ಆಡಳಿತ ಸದಸ್ಯ ಗರಂ:
ಕುಡಿಯುವ ನೀರಿನ ಸಹಿತ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ನೀಡಲಾದ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ಗರಂ ಆದರು. ಬರ ಪರಿಸ್ಥಿತಿ ಅಂತ ಈ ಸಂದರ್ಭದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ತರ್ತು ಸ್ಪಂದನ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ನಡೆದುಕೊಂಡರೆ ತಾನಿಲ್ಲಿ ಧರಣಿ ನಡೆಸಬೇಕಾದಿತ್ತು ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ಸಭೆ ಮುಗಿದಾಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೆಯುಡಯ್ಲ್ಯುಎಸ್‌ನ ಕಾರ್ಯವೈಖರಿಯ ಬಗ್ಗೆ ಸದಸ್ಯರು ಪಕ್ಷ ಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು. ಪೈಪ್‌ಲೈನ್ ಅಳವಡಿಕೆಯ ಬಳಿಕ ರಸ್ತೆಯನ್ನು ಅಗೆದು ಅಲ್ಲೇ ಬಿಟ್ಟಿರುವುದು ಮತ್ತು ಬಿ.ಸಿ.ರೋಡ್ ಸಹಿತ ಎಲ್ಲೆಡೆ ಧೂಳು ಆವರಿಸುವುದರಿಂದ ಸಾರ್ವಜನಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಕಾಮಗಾರಿ ಸಂದರ್ಭ ಎಲ್ಲೆಲ್ಲಿ ಹೊಂಡ ತೆಗೆದಿದ್ದೀರಿ ಎಂದು ನೋಡಿದ್ದೀರಾ, ನೀವು ಇಷ್ಟರವರೆಗೆ ಎಷ್ಟು ಕೆಲಸ ಮಾಡಿದ್ದೀರಿ ಎಂಬುದನ್ನು ಮರುಪರಿಶೀಲನೆ ಮಾಡಿದ್ದೀರಾ. ನಿಮ್ಮ ಕಾರ್ಯವೈಖರಿಯಿಂದ ಪುರಸಭೆ ಸಾರ್ವಜನಿಕರಿಂದ ನಿಂದನೆಯ ಮಾತು ಕೇಳುವಂತಾಗಿದೆ ಎಂದು ಸದಸ್ಯ ಶರೀಫ್ ಅಸಮಾಧಾನ ವ್ಯಕ್ತಪಡಿಸಿದರೆ ನಿಮ್ಮ ಕೆಲಸವಾಗುವವರೆಗೆ ನಮ್ಮಲ್ಲಿ ನಯವಿನಯದಿಂದ ವರ್ತಿಸುತ್ತೀರಿ. ಬಳಿಕ ಅರ್ಧಂಬರ್ಧ ಕೆಲಸ ಮಾಡಿ ತೆರಳುತ್ತೀರಿ. ಎಂದು ಸದಸ್ಯ ಇಕ್ಬಾಲ್ ಗೂಡಿನಬಳಿ ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಯುಡಯ್ಲ್ಯುಎಸ್ ಅಧಿಕಾರಿ ಶುಭ ಲಕ್ಷ್ಮಿ ಅವರು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ ಎರಡನೆ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮಾರ್ಚ್ ಅಂತ್ಯಕ್ಕೆ ಪ್ರಯೋಗಿಕವಾಗಿ ನೀರು ಪೂರೈಸಲಾಗುದೆಂದು ಆಶ್ವಾಸನೆ ನೀಡಿದರು.
ಅಂಗನವಾಡಿ ಕಟ್ಟಡಕ್ಕೆ ನೀರು ಪೂರೈಕೆಗೆ ಏನಾದರೂ ಮಾನದಂಡಗಳು ಇವೆಯೇ ಎಂದು ಸದಸ್ಯೆ ಚಂಚಲಾಕ್ಷಿ ಪ್ರಶ್ನಿಸಿದರು.
ನೀರು ಎಲ್ಲಿಂದ ಎಲ್ಲಿಗೆ ಪೂರೈಕೆ ಆರಂಭಿಸಬೇಕು ಎಂಬ ಬಗ್ಗೆಯೂ ವಾಗ್ವಾದ ನಡೆಯಿತು. ಬಿ.ಮೂಡದಿಂದ ಮೊದಲೋ ಅಥವಾ ಬಂಟ್ವಾಳದಿಂದ ಮೊದಲೋ ಎಂಬ ಕುರಿತು ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಮತ್ತು ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ ಮಾತಿನ ಚಕಮಕಿ ನಡೆಸಿದರು. ನೀರಿನ ವಿಷಯದಲ್ಲಿ ತಾರತಮ್ಯ ಮಾಡಬೇಡಿ ಎಂದು ವಸಂತಿ ಚಂದಪ್ಪ ಆಕ್ಷೇಪಿಸಿದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ಸದಸ್ಯರಾದ ಪ್ರವೀಣ್ ಬಿ., ಗಂಗಾಧರ ಪೂಜಾರಿ, ಜಗದೀಶ್ ಕುಂದರ್, ಮೋಹನ್ ಬಿ., ಮುನೀಶ್ ಅಲಿ, ಸುಗುಣಕಿಣಿ, ಜಸಿಂತ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಸಮುದಾಯಾಧಿಕಾರಿ ಮತ್ತಡಿ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಿಬ್ಬಂದಿ ರಝಾಕ್, ಮುಖ್ಯಾಧಿಕಾರಿ ಸುಧಾಕರ್ ಅವರು ಹಾಜರಿದ್ದರು.