ವಿಟ್ಲ ಸೀಮೆಗೊಳಪಡುವ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹಕಲಶೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ಮಾ.16 ರಂದು ಚಪ್ಪರ ಮೂಹೂರ್ತ ಹಾಗೂ ಉತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು ತಿಳಿಸಿದರು.
ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಕಾರ್ಯ ಹಾಗೂ ಬ್ರಹ್ಮಕಲಶೋತ್ಸವದ ಸಮಿತಿ ಕಾರ್ಯದ ಬಗ್ಗೆ ವಿವರಿಸಿದರು.
1200 ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನ 1984 ರಲ್ಲಿ ಪುನರ್ ನಿರ್ಮಾಣ ಜೀರ್ಣೋದ್ಧಾರಗೊಂಡಿತ್ತು. ಸುಮಾರು 478 ಮನೆಗಳ ಆಸ್ತಿಕ ಬಂಧುಗಳು ಒಟ್ಟು ಸೇರಿ ದೇಗುಲ ಜೀರ್ಣೋದ್ಧಾರ ಕಾರ್ಯ ಆರಂಭಿಸಿದ್ದು, ಅಂದಾಜು 1.2 ಕೋ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಏ. 14ರಂದು ಊರಿನ ಪ್ರತಿಯೊಂದು ಮನೆಯಿಂದ ಕನಿಷ್ಠ 5 ದಂಡು ತೆಂಗಿನ ಗರಿ, 2 ಇಡಿಸೂಡಿ ನೀಡಿ ಮೆರವಣಿಗೆಯಲ್ಲಿ ತಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ನಿರ್ಣಯಿಸಲಾಗಿದೆ.
ಬ್ರಹ್ಮಕಲಶೋತ್ಸವ ಏ.27 ರಿಂದ ಮೊದಲ್ಗೊಂಡು ಮೇ.3 ರ ತನಕ ವಿಜೃಂಭಣೆಯಿಂದ ನಡೆಯಲಿದ್ದು, ಒಡಿಯೂರು ಶ್ರೀ, ಮಾಣಿಲ ಶ್ರೀ, ಕಾಳಹಸ್ತೇಂದ್ರ ಶ್ರೀ, ಧರ್ಮಪಾಲನಾಥ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ, ಕಣಿಯೂರುಶ್ರೀ, ಬಾಳೆಕೋಡಿಶ್ರೀ, ಕರಿಂಜೆ ಶ್ರೀ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜೇಂದ್ರ ಕುಮಾರ್, ಭೀಮೇಶ್ವರ ಜೋಷಿ, ಶಾಸಕಿ ಶಕುಂತಳಾ ಶೆಟ್ಟಿ, ಡಾ. ಪ್ರಭಾಕರ ಭಟ್ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೋಂಕೋಡಿ ಪದ್ಮನಾಭ ತಿಳಿಸಿದರು. ದೇಗುಲದ ಪೂರ್ವ ಇತಿಹಾಸದ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಮಾಮೇಶ್ವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಆಚಾರ್ಯ, ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಪ್ರಧಾನ ಸಂಚಾಲಕ ವೀರಪ್ಪ ಗೌಡ ರಾಯರಬೆಟ್ಟು, ಉಮಾ ಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂಕಪ್ಪ ಗೌಡ, ಪ್ರಚಾರ ಸಮಿತಿ ಸಂಚಾಲಕ ಕರುಣಾಕರ ನಾಯ್ತೋಟು ಉಪಸ್ಥಿತರಿದ್ದರು.