ಮಕ್ಕಳ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಶಾರೀರಿಕ ಚಟುವಟಿಕೆಗಳನ್ನು ಹಾಗೂ ಪರಿಸರದ ಬಗ್ಗೆ ಉತ್ತಮ ಭಾವನೆಗಳನ್ನು ಜಾಗೃತ ಮಾಡುವ ಹೊರಾಂಗಣ ಚಟುವಟಿಕೆಗಳು ಅವಶ್ಯಕವಾಗಿದ್ದು, ’ಕಿಷ್ಕಿಂಧಾ’ ಆಟಿಕಾವನ ಮಗುವಿನ ಸೃಜನಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಿಸಲಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಮಕ್ಕಳ ಆಟಿಕಾ ಉದ್ಯಾನವನದ ಉದ್ಘಾಟನಾ ಸಂದರ್ಭ ಹೇಳಿದರು.
ಹಲವು ಭಾವನಾತ್ಮಕ ಸಂಗತಿಗಳನ್ನು ಜೋಡಿಸಿ ಆಟಿಕವನವನ್ನು ನಿರ್ಮಾಣ ಮಾಡಲಾಗಿದೆ. ಮಗು ಎಲ್ಲಾ ಹಂತದಲ್ಲೂ ಬೆಳೆಯಬೇಕು. ಸಂತೋಷದಿಂದ ನಲಿನಲಿದು ಕಲಿಯಬೇಕು. ಆನಂದದ ಕಲಿಕೆಗೆ ಪೂರಕವಾಗುವಂತೆ ಎಳೆಯ ವಯಸ್ಸಿನ ಮಕ್ಕಳ ಮೆದುಳಿನ ಬೆಳವಣಿಗೆಗೆ ಪೂರಕವಾಗಿ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮಗುವಿನ ಮನಸ್ಸನ್ನು ಅರಳಿಸುವ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಆಟಿಕಾವನದಲ್ಲಿ ವಿಶೇಷವಾಗಿ ನಿರ್ಮಿಸಲಾದ ’ತೂಗುಸೇತುವೆ’ಯನ್ನು ಪದ್ಮಶ್ರೀ ಪುರಸ್ಕೃತ ತೂಗುಸೇತುವೆಯ ಸರದಾರ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಅವಕಾಶ ನೀಡುವ ’ವಿಕಸನದ ಭಿತಿ’ಯನ್ನು ಉದ್ಯಮಿ ರಾಜೇಂದ್ರ ಮೈಸೂರು ಚಿತ್ರ ಬಿಡಿಸುವ ಮೂಲಕ ಅನಾವರಣಗೊಳಿಸಿದರು. ಮಣ್ಣಿನ ಮಡಿಕೆ-ಮಾದರಿಗಳನ್ನು ತಯಾರಿಸುವ ’ವಿರಚನ’ ಕುಟೀರಕ್ಕೆ ಉದ್ಯಮಿ ವಸಂತ ಶೆಟ್ಟಿ ಚಾಲನೆ ನೀಡಿದರು. ನಾಮಫಲಕವನ್ನು ಲಯನ್ ಅರುಣ್ ಶೆಟ್ಟಿ ಅನಾವರಣಗೊಳಿಸಿದರು. ಬಟನ್ ಅದುಮುವ ಮೂಲಕ ಉದ್ಯಮಿ ಪ್ರಕಾಶ್ ಶೆಟ್ಟಿ ಬೆಂಗಳೂರು ’ನೇತ್ರಾವತಿ ಜಲಧಾರೆ’ಯನ್ನು ಹರಿಸಿದರು. ಮಕ್ಕಳ ಆಟಕ್ಕಾಗಿ ನಿರ್ಮಿಸಲಾದ ವೈವಿಧ್ಯಮಯ ಉಯ್ಯಾಲೆಗಳಿಗೆ ವೀಣಾ ಶಶಿಧರ ಮಾರ್ಲ ಚಲಾವಣೆ ಮಾಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುಧಾಕರ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ಡಾ| ಕಮಲಾ ಪ್ರಭಾಕರ ಭಟ್, ಚೆನ್ನಪ್ಪ ಕೋಟ್ಯಾನ್, ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರವಿರಾಜ್, ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ ಮಾರ್ಲ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಜಯರಾಮ ರೈ, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು ಮೊದಲಾದವರು ಉಪಸ್ಥಿತರಿದ್ದರು.