ಆರಾಧನೆ

ಬೆಳ್ಳೂರಿನ ಕಾವೇಶ್ವರ ದೇವಸ್ಥಾನದಲ್ಲಿ ಜಾತ್ರಾ ವೈಭವ

ಲೇಖನ: ಪ್ರೊ. ರಾಜಮಣಿ ರಾಮಕುಂಜ

ಸುಮಾರು 800 ವರ್ಷಗಳ ಹಿನ್ನೆಲೆ ಇರಬಹುದಾದ ದೇವಾಲಯವೇ ಬಂಟ್ವಾಳ ತಾಲೂಕು ಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನ. ಭೂತಕಾಲವನ್ನು ಸ್ವಲ್ಪ ಇಣುಕಿ ನೋಡಿದರೆ ದೇವಾಲಯದ ವೈಭವದ ದಿನಗಳು ತೆರೆದುಕೊಳ್ಳುತ್ತವೆ. ಇದೊಂದು ಗ್ರಾಮಾಂತರ ಪ್ರದೇಶದಲ್ಲಿರುವ ದೇವಾಲಯ. ಇಲ್ಲಿ ವೈಭವೋಪೇತ ಜಾತ್ರೆ, ಧರ್ಮನೇಮ ಇತ್ಯಾದಿಗಳು ನಡೆಯುತ್ತಿದ್ದ ಕಾಲವಿತ್ತು. ಹದಿನಾರು ವರ್ಗಗಳು, ಬೆಳ್ಳೂರು ಗುತ್ತು ಸೇರಿದಂತೆ ಏಳು ಗುತ್ತುಗಳು ಹಾಗೂ ಭಕ್ತಾದಿಗಳ ಸಹಕಾರದಿಂದ ಮತ್ತು ದೇವರ ಭೂಮಿಯ ಆದಾಯದಿಂದ ಇಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಜರಗಿತ್ತಿದ್ದವು. ಸದ್ಯಕ್ಕೆ ಖರ್ಚುವೆಚ್ಚಗಳಿಗೆ ಭಕ್ತರ ಸಹೃದಯತೆಯನ್ನೇ ಅವಲಂಬಿಸಬೇಕಾಗಿದೆ.

ಇಲ್ಲಿ ಕಾವೇಶ್ವರ ದೇವಸ್ಥಾನವಲ್ಲದೆ, ಕಾವಗುಡ್ಡೆ, ನಾಗಬ್ರಹ್ಮಸ್ಥಾನ, ಮಹಮ್ಮಾಯಿ ದೇವಸ್ಥಾನ, ಬೆಮ್ಮರ ಗುಡಿ, ಮಾಡ್ಲಾಯ ದೈವದ ಮಾಡ, ಮಾಡ್ಲಾಯ ಕಲ್ಲು, ಪರಕೂರು ಭಟ್ಟರ ಬೀಡು ಇತ್ಯಾದಿಗಳೂ ಈ ದೇವಾಲಯದ ಆಸುಪಾಸಿನಲ್ಲೇ ಇದೆ.

ತೆಂಕಬೆಳ್ಳೂರು ಗ್ರಾಮದಲ್ಲಿರುವ ಈ ದೇವಾಲಯ, ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಸುಮಾರು ೨೯ ಕಿ.ಮೀ.ಗಳಷ್ಟು, ತಾಲೂಕು ಕೇಂದ್ರವಾದ ಜೋಡುಮಾರ್ಗದಿಂದ ಸುಮಾರು 9 ಕಿ.ಮೀ.ಗಳಷ್ಟು ದೂರದಲ್ಲಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದ ಮೂಲ ಸ್ಥಳ ಇದರ ಎದುರು ಭಾಗದಲ್ಲೇ ಇರುವ ಎತ್ತರವಾದ ಕಾವಗುಡ್ಡೆ. ಕಾವ ಋಷಿಗಳು ಈ ಗುಡ್ಡದ ನೆತ್ತಿಯಲ್ಲಿ ಲಿಂಗರೂಪದಲ್ಲಿ ಪ್ರತಿಷ್ಠಾಪಿಸಿದ ಶಿವನಿಗೆ ’ಕಾವೇಶ್ವರ’ ಎಂಬ ಹೆಸರು ಬಂತೆಂಬುದು ಭಾವುಕ ಜನರ ನಂಬುಗೆ. ಕಾವ ಋಷಿಗಳು ಶಿವನನ್ನು ಪ್ರತಿಷ್ಠಾಪಿಸಿದ ಈ ಗುಡ್ಡಕ್ಕೆ ’ಕಾವಗುಡ್ಡೆ’ ಎಂಬ ಹೆಸರು ಶಾಶ್ವತವಾಗಿ ನಿಂತಿದೆ. ಈ ಗುಡ್ಡದ ತುದಿಯಲ್ಲಿ ದೇವಸ್ಥಾನ ಇತ್ತೆನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಿ ನಷ್ಟವಾಗಿ ಹೋಗಿದ್ದ ಪಳೆಯುಳಿಕೆಗಳು ಇಂದಿಗೂ ಗೋಚರಿಸುತ್ತದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ, ದೇವಸ್ಥಾನದಿಂದ ಬೆಳಕನ್ನು ಮೇಲೆ ಕೊಂಡುಹೋಗಿ ಅಲ್ಲಿ ದೀಪ ಹಚ್ಚಿ ಅಲ್ಲಿಂದ ದೇವರನ್ನು ಬೆಳಕಿನೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ದೇವಸ್ಥಾನಕ್ಕೆ ಮರಳಿಬಂದು ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸ ಆರಂಭವಾಗುತ್ತದೆ.

ಈ ದೇವಾಲಯದ ಇತಿಹಾಸವನ್ನು ದರ್ಶಿಸಿಕೊಳ್ಳಲು ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೂ ಐತಿಹಾಸಿಕ ಪ್ರಸಿದ್ಧ ದೇವಪೂಂಜರು ಕೊಡುಗೆಯಾಗಿ ನೀಡಿರುವ, ಗರ್ಭಗುಡಿಯ ಎದುರು ಕಂಚಿನ ಎರಡು ಘಂಟೆಗಳು ಪ್ರಸಿದ್ಧವಾದವುಗಳು. ಆದರೆ, ಈ ಘಂಟೆಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇಲ್ಲಿ ಇಬ್ಬರು ದೇವಪೂಂಜರು; ವೇಣೂರಿನಲ್ಲಿ ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಟಾಪಿಸಿದವನು ನಾಲ್ಕನೇ ವೀರತಿಮ್ಮಣ್ಣಾಜಿಲ; ಶಾಲಿವಾಹನ ಶಕ ೧೫೨೫ ಶೋಭಕೃತು ಸಂವತ್ಸರ ಅಂದರೆ ಕ್ರಿ.ಶ.೧೬೦೪ ಮಾರ್ಚ್ ಒಂದನೇ ದಿನಾಂಕದ ಗುರುವಾರ ಇವನ ಆಡಳಿತ ಕಾಲದಲ್ಲಿ ಸೇನಾಧಿಪತಿಯಾಗಿದ್ದವನು ದೇವಪೂಂಜ. ಅನಂತರ ರಾಜರ ಅಸಡ್ಡೆಯಿಂದ ಬೇಸರಗೊಂಡ ಈತ ಬೆಳ್ಳೂರು ಗುತ್ತಿಗೆ ಹೋಗಿ ನೆಲೆನಿಂತ. ಇನ್ನೊಬ್ಬ ದೇವುಪೂಂಜ ಬೆಳ್ಳೂರುಗುತ್ತು ಲಕ್ಷ್ಮಣ ಪೂಂಜರ ಅಣ್ಣ ದೇವುಪೂಂಜ. ಈತ ಸುಮಾರು ೨೯ ವರ್ಷದಲ್ಲೇ ಮೃತಪಟ್ಟಿರಬಹುದು. ಆದರೆ ಘಂಟೆಯಲ್ಲಿ ಬರೆದಿರುವ ಹೆಸರು  ಯಾವ ದೇವಪೂಂಜನದ್ದು ಎಂಬುದು ಸ್ಪಷ್ಟವಾಗುವುದಿಲ್ಲ; ಆದರೂ ಹೀಗೆ ಯೋಚಿಸಬಹುದೋ ಏನೋ. ’ತಿಮ್ಮಣ್ಣಾಜಿಲನಿಂದ ಅಸಡ್ಡೆಗೊಳಗಾದ ಮೊದಲ ದೇವಪೂಂಜನ ಪ್ರತಾಪವನ್ನು ತಿಳಿದ ಬಂಗರಾಜನು ಆತನನ್ನು ತನ್ನ ಸೈನ್ಯಕ್ಕೆ  ಸೇನಾಧಿಪತಿಯಾಗಿ ನೇಮಿಸಿದನು. ಈ ದೇವಪೂಂಜನಿಗೆ ತನ್ನ ಜೀವಿತಾವಧಿಯಲ್ಲಿ ಹೆಚ್ಚಿನ ರಾಜಕೀಯ ಸ್ಥಾನಮಾನ ಇದ್ದದ್ದರಿಂದಾಗಿ ಈತನೇ ದೇವಾಲಯದಲ್ಲಿರುವ ಕಂಚಿನ ಗಂಟೆಗಳನ್ನು ಕೊಟ್ಟಿರುವ ಸಾಧ್ಯತೆಗಳೇ ಜಾಸ್ತಿ’ ಎನ್ನಬಹುದು.

ತೋಕೂರು ಬಂಟ ಮನೆತನದ ಕೊರೊಪೊಳಕ್ಕ(ಪತಿಯ ಹೆಸರು ಲಭ್ಯವಿಲ್ಲ)ಎಂಬವರ ಮಕ್ಕಳು ದೇವು ಪೂಂಜ, ಲಕ್ಷ್ಮಣ ಪೂಂಜ, ತಂಕು ಪೂಂಜ ಹಾಗೂ ಕೊರೊಪೊಳಕ್ಕ, ಗಂಗಕ್ಕ, ಪರಮೇಶ್ವರಕ್ಕ ಎಂಬ ಮಕ್ಕಳು. (ದೊಡ್ಡ ಮಗಳಿಗೆ ಪ್ರೀತಿಯಿಂದ ತಾಯಿಯ ಹೆಸರಿನಿಂದಲೇ ಕರೆಯುತ್ತಿದ್ದರು.)

ಈ ಕ್ಷೇತ್ರದ ಬಗ್ಗೆ ಜನರಾಡುವ ಕಥೆಯೊಂದಿದೆಃ ಬೆಟ್ಟಕ್ಕೆ ಹತ್ತಿ ಇಳಿಯಲು ಅಶಕ್ತರಾದ ಓರ್ವ ಭಕ್ತ ’ಸ್ವಾಮಿ ನೀವಿರುವ ಬೆಟ್ಟಕ್ಕೆ ಬಂದು ದರ್ಶನ ಪಡೆಯಲು ಶರೀರದಲ್ಲಿ ಶಕ್ತಿ ಸಾಲದು, ವಯಸ್ಸೂ ಆಯಿತು, ನಾನಿರುವಲ್ಲಿಗೇ ಬಂದು ನಿನ್ನ ದರ್ಶನ ಭಾಗ್ಯವನ್ನು ಅನುಗ್ರಹಿಸು, ಎರಡು ಕೊಡ ನೀರನ್ನಾದರೂ ತಂದು ಅಭಿಷೇಕ ಮಾಡುತ್ತಿದ್ದೆ’ ಎಂದು ಪ್ರತಿದಿನ ಶಿವಧ್ಯಾನಮಾಡಿ ಭಕ್ತಿಯಿಂದ ಆರಾಧಿಸುತ್ತಿದ್ದರು. ಅವರ ತಪಃ ಶಕ್ತಿಗೆ ಕಾವಗುಡ್ಡೆಯ ಬುಡದಲ್ಲಿ ದನ-ಹುಲಿ ಅನ್ಯೋನ್ಯತೆಯಿಂದ ತಿರುಗಾಡುತ್ತಿದ್ದ ಅವಿಸ್ಮರಣೀಯ-ಸಾಂಕೇತಿಕ ಸ್ವಪ್ನವನ್ನು ಕಂಡರು. ದೇವರ ಸಂದೇಶಗಳಂತೆ ಸ್ವಪ್ನಗಳನ್ನು ಅವಲೋಕಿಸಿದಂತಾಯಿತು. ಅಪೂರ್ವವಾದ ದೈವೀಶಕ್ತಿಯ  ನೆಲೆಯೆಂದೂ ದೇವತಾ ಪ್ರತಿಷ್ಠೆಗೆ ಯೋಗ್ಯವೆಂದೂ ಸಂಕಲ್ಪಿಸಿದ ಭಕ್ತ ಪ್ರಾತರ್ವಿಧಿಗಳನ್ನು ಮುಗಿಸಿ, ಉಷಃಕಾಲದ ಪೂಜೆ ಸಹಿತವಾಗಿ ಈಗಿರುವ ಸಾನ್ನಿಧ್ಯದಲ್ಲಿ ಶಿವನನ್ನು ಪ್ರತಿಷ್ಟಾಪಿಸಿದನೆಂದು ಪ್ರತೀತಿ.

ಶತ ಶತ ವರ್ಷಗಳ ಹಿಂದೆ ಕಾವ ಮುನಿಯು ಇಲ್ಲಿ ತಪಸ್ಸು ಮಾಡುತ್ತಿದ್ದುದರಿಂದ ಇಲ್ಲಿಗೆ ಈ ಹೆಸರು ಬಂದಿತೆಂದು ಇಲ್ಲಿನ ಐತಿಹ್ಯ ಸಾರುತ್ತದೆ. ಕಾವ ಋಷಿಗಳ ಪ್ರತಿಷ್ಠೆಯಿಂದಲೇ ಈ ದೇವರಿಗೆ ಕಾವೇಶ್ವರ ಎಂತಲೂ ಹೆಸರು ಪ್ರಚಲಿತವಾಗಿದೆ ಎನ್ನುವುದು ಇಲ್ಲಿನವರ ಅಂಬೋಣ.

ದೇವಾಲಯದ ಗರ್ಭಗುಡಿ ಶಿಲೆಯಿಂದ ನಿರ್ಮಾಣಗೊಂಡಿದ್ದು, ಮಾಡು ತಾಮ್ರದ ಹೊದಿಕೆಯಿಂದ ಮುಚ್ಚಲ್ಪಟ್ಟಿದೆ. ಗರ್ಭಗುಡಿಯ ಹೊರಭಾಗದಲ್ಲಿ ಒಂದು ಕತ್ತಲೆಯ ಪ್ರದಕ್ಷಿಣಾಪಥವಿದೆ. ಎದುರು ಭಾಗದಲ್ಲಿ ಶಿಲಾಮಯ ತೀರ್ಥಮಂಟಪವಿದೆ. ಸುತ್ತಲೂ ಪೌಳಿಗಳಿರುವ ಈ ದೇವಾಲಯದ ಪ್ರಾಂಗಣದಲ್ಲಿ ಮುಂದೆ ಬಂದಾಗ ಎದುರುಗಡೆ ಗ್ರಾಮದ ಪ್ರಧಾನ ದೈವಗಳು; ಮಾಡ್ಲಾಯ, ಕೊಡಮಣಿತ್ತಾಯ, ಜುಮಾದಿ, ಇಷ್ಟ ದೇವತೆಗಳ ಗುಡಿ, ಮುಂದೆ ಬರುವಾಗ ನೈಋತ್ಯ ಭಾಗದಲ್ಲಿ ಶಿಲಾಮಯ ವಿನಾಯಕನ ಗುಡಿ. ದೇವಸ್ಥಾನದ ಹಿಂಭಾಗದಲ್ಲಿ ವನಶಾಸ್ತಾರನ ಗುಡಿಯಿದೆ. ಪೂರ್ವ ಬಲಭಾಗದಲ್ಲಿ ವಸಂತ ಮಂಟಪವಿದೆ.

ಮಾತನಾಡುವ ಕಾವೇಶ್ವರ ಮಾಡ್ಲಾಯ ಎಂಬ ಉಕ್ತಿ ಈ ಊರಲ್ಲೆಲ್ಲಾ ಪ್ರಸರಿಸಿದೆ, ಅಷ್ಟೊಂದು ಕಾರಣಿಕ ಸ್ಥಳವಿದು. ಕಾವೇಶ್ವರನೆಂದೇ ಪ್ರಸಿದ್ಧವಾದರೂ ಉಮಾಮಹೇಶ್ವರ ಸಾನ್ನಿಧ್ಯ ಇಲ್ಲಿನ ವಿಶೇಷ.

ಪ್ರಕೃತ ಈ ದೇವಾಲಯದಲ್ಲಿ ಮಾರ್ಚ್ 11 ರಿಂದ 15 ರವರೆಗೆ ವಾರ್ಷಿಕ ಜಾತ್ರಾ ಸಂಭ್ರಮ. ದಿನಾಂಕ ೧೧ರಂದು ಬೆಳಿಗ್ಗೆ ೧೦ಕ್ಕೆ ದೇವತಾ ಪ್ರಾರ್ಥನೆ ನವಕ ಕಲಶ, ಪ್ರಧಾನ ಹೋಮ; ೧೨.೩೦ಕ್ಕೆ ಮಹಾಪೂಜೆ, ಸಂಜೆ ಗಂಟೆ ೪ಕ್ಕೆ ಕೋಳಿಕುಂಟ, ಸಾಯಂಕಾಲ ೭ಕ್ಕೆ ಭಂಡಾರದ ಮನೆಯಿಂದ ಭಂಡಾರ ಬರುವುದು, ರಾತ್ರೆ ೯ಕ್ಕೆ ಧ್ವಜಾರೋಹಣ, ಉತ್ಸವ ಬಲಿ, ಕಂಚಿಲ ಸೇವೆ, ಸಂಜೆ ೫ಕ್ಕೆ ಸುದರ್ಶನ ವಿಜಯ ಯಕ್ಷಗಾನ ಬಯಲಾಟ. ದಿನಾಂಕ ೧೨ರಂದು ಬೆಳಿಗ್ಗೆ ಶತರುದ್ರಾಭಿಷೇಕ, ೧೨.೩೦ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಗಂಟೆ ಐದಕ್ಕೆ ಪ್ರಥಮ ಚೆಂಡು, ಗಂಟೆ ೬ಕ್ಕೆ ಶ್ರೀ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ ಇವರಿಂದ ಹರಿಕಥಾ ಸತ್ಸಂಗ, ರಾತ್ರಿ ೭ಕ್ಕೆ ಪಣ-ಪಣ ತುಡರ ಉತ್ಸವ ಬಲಿ, ಚಂದ್ರ ಮಂಡಲ. ದಿನಾಂಕ ೧೩ರಂದು ಬೆಳಿಗ್ಗೆ ೧೦ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಕೊಡಿಪೂಜೆ, ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ನಡುಚೆಂಡು, ರಾತ್ರಿ ೭ಕ್ಕೆ ಉತ್ಸವ ಬಲಿ, ಚಂದ್ರಮಂಡಲ, ಪಲ್ಲಕಿ ಉತ್ಸವ, ರಾತ್ರೆ ೧೧ರಿಂದ ಯಕ್ಷಗಾನ ಬಯಲಾಟ. ದಿನಾಂಕ ೧೪ಕ್ಕೆ ಬೆಳಿಗ್ಗೆ ಗಂಟೆ ೧೦ಕ್ಕೆ ರಥಕ್ಕೆ ನವಕ ಕಲಶ, ೧೧ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ದೇವರ ಬಲಿ, ಅನ್ನ ಸಂತರ್ಪಣೆ, ಸಂಜೆ ಐದರಿಂದ ಕಡೆಚೆಂಡು, ಸಂಜೆ ಆರರಿಂದ ರಥದಲ್ಲಿ ಹೂವಿನ ಪೂಜೆ, ೭ಕ್ಕೆ ರಥೋತ್ಸವ, ೮ರಿಂದ ರಥೋತ್ಸವ ಬಲಿ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ರಾತ್ರಿ ಗಂಟೆ ೧೨ಕ್ಕೆ ಭೂತ ಬಲಿ, ಶಯನ ಸೇವೆ, ಕವಾಟ ಬಂಧನ, ಅದೇ ದಿನ ಸಂಜೆ ೬ರಿಂದ ಭರತ ನಾಟ್ಯ ವೈಭವ. ದಿನಾಂಕ ೧೫ರಂದು ಬೆಳಿಗ್ಗೆ೭ಕ್ಕೆ ಕವಾಟೋದ್ಘಾಟನೆ ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಪೂಜೆ, ಗಣಪತಿ ದೇವರಿಗೆ ಸಾರ್ವಜನಿಕ ಅಪ್ಪದ ಪೂಜೆ, ತುಲಾಭಾರ ಸೇವೆ, ಚೂರ್ಣೋತ್ಸವ, ಚಂದ್ರಮಂಡಲ, ೧ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ ೭ರಿಂದ ಯಾತ್ರಾ ಹೋಮ, ದೇವರ ಓಕುಳಿ ಸ್ನಾನ, ಸವಾರಿಯಲ್ಲಿ ಕಟ್ಟೆ ಪೂಜೆ, ಧ್ವಜಾವರೋಹಣ, ಮಾಡ್ಲಾಯ ದೈವದ ನೇಮೋತ್ಸವ; ಅಂದೇ ಸಂಜೆ ೭ರಿಂದ ಭಕ್ತಿ ಗಾನಸುಧಾ, ರಾತ್ರಿ ಗಂಟೆ ೧೦ರಿಂದ ನೃತ್ಯ ಕಾರ್ಯಕ್ರಮ. ದಿನಾಂಕ ೧೬ರಂದು ಸಂಪ್ರೋಕ್ಷಣೆಯೊಂದಿಗೆ ಜಾತ್ರೆ ಪರಿಸಮಾಪ್ತಿಗೊಳ್ಳುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts