ಬಂಟ್ವಾಳ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಗುರುತಿಸಲಾದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ನಿಭಾಯಿಸಲು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜತೆಯಾಗಿ ಸಾಗುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ನಿಭಾಯಿಸಲು ಸಭೆ ಸೇರಿ ಪ್ರಗತಿ ಕುರಿತು ಮಾಹಿತಿ ನೀಡಬೇಕು ಎಂದರು.
ಹಕ್ಕುಪತ್ರ: ತಾಲೂಕಿನಲ್ಲಿ ೯೪ಸಿ ಅಡಿಯಲ್ಲಿ ೧೭,೬೦೦ ಅರ್ಜಿಗಳು ಬಂದಿದ್ದು ಈ ಪೈಕಿ ೯,೮೪೧ ಅರ್ಜಿಗಳನ್ನು ಇತ್ಯರ್ಥಪಡಿಸಿ ಹಕ್ಕು ಪತ್ರ ವಿತರಿಸಲಾಗಿದೆ. ಉಳಿತ ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ವಿಲೇವಾರಿಗೆ ಬಾಕಿಯಾಗಿದೆ ಎಂದು ಸಚಿವ ರೈ ಅವರ ಪ್ರಶ್ನೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಎಂ.ಎಸ್.ಮುಹಮ್ಮದ್, ಕೆಲವು ಗ್ರಾಮ ಕರಣಿಕರ ಕಾರ್ಯ ವೈಖರಿಯಿಂದಾಗಿ ಈ ಸಮಸ್ಯೆ ಪರಿಹಾರಕ್ಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡು ತ್ವರಿತಗೊಳಿಸಲು ಅವರು ಆಗ್ರಹಿಸಿದರು. ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು ಇದರಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಲಾಗಿದೆ. ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೂಡಾ ಸಂಪೂರ್ಣ ಹಂತಕ್ಕೆ ತಲುಪಿದೆ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ನೀಡಿದರು.
ಬಂಟ್ವಾಳ ನೂರು ಬೆಡ್ಡಿನ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿ ಮುಂದಿನ ವಾರ ಸಂಪೂರ್ಣಗೊಳ್ಳಲಿದೆ ಎಂದ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ತಾಲೂಕಿನಲ್ಲಿ ದಢಾರ-ರುಬೆಲ್ಲಾ ಕಾರ್ಯಕ್ರಮ ಶೇ. ೯೮ರಷ್ಟು ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ತಾಲೂಕಿನಲ್ಲಿ ವೈದ್ಯಾಧಿಕಾರಿಗಳ ಕೊರೆತೆಯಿಲ್ಲ. ಪ್ರತೀ ಆರೋಗ್ಯ ಕೇಂದ್ರಕ್ಕೂ ವೈದ್ಯಾಧಿಕಾರಿಗಳನ್ನು ನೇಮಕಮಾಡಲಾಗಿದೆ ಎಂದರು.
ಬಂಟ್ವಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಏನೇನು ಬೇಕು ಎಂಬ ಕುರಿತು ವರದಿ ಸಲ್ಲಿಸುವಂತೆ ಸಚಿವ ರೈ ಪುರಸಭೆ ಮುಖ್ಯಾಧಿಕಾರಿ ಸುಧಾಕರ್ ಅವರಿಗೆ ಸೂಚಿಸಿದರು. ದೇವರಾಜ ಅರಸು ಭವನ ನಿರ್ಮಾಣ, ಎ.ಆರ್.ಟಿ.ಓ ಕಚೇರಿ, ಮೋರಾಜಿ ದೇಸಾಯಿ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅವರು ತಹಶೀಲ್ದಾರ್‌ಗೆ ಸೂಚಿಸಿದರು.
ಗೂಡಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಇದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ದೂರಿದರು. ಈ ಸಂದರ್ಭ ಉತ್ತರಿಸಿದ ಅಧಿಕಾರಿ, ಸರಕಾರಿ ಸೌಲಭ್ಯಗಳ ಕೊರತೆ ಇಲಾಖೆಗಿದೆ ಎಂದು ಅಬಕಾರಿ ಅಧಿಕಾರಿ ಅಳಲು ತೋಡಿಕೊಂಡರು. ಬೆಂಜನಪದವು ಕಾಲೇಜು ಮುಂಭಾಗದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಲ್ಲಿ ಚಿಲ್ಲರೆ ಮದ್ಯದ ಬಾಟಲಿಗಳು ವಿಕ್ರಯವಾಗುತ್ತಿದ್ದು, ಇದು ಶಾಲೆ, ಕಾಲೇಜು ಮಕ್ಕಳ ಕೈಗೆ ಸಿಗುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಚಂದ್ರಪ್ರಕಾಶ ಶೆಟ್ಟಿ ಕೋರಿದರು. ಸಜಿಪನಡು ಗ್ರಾಪಂನಲ್ಲಿ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿ ಗ್ರಾಮಸಭೆಯೇ ರದ್ದುಗೊಂಡ ವಿಚಾರವನ್ನು ಜಿಪಂ ಸದಸ್ಯ ರವೀಂದ್ರ ಕಂಬಳಿ ಪ್ರಸ್ತಾಪಿಸಿದರು.
ಆರ್ ಟಿ ಇ ಸಮಸ್ಯೆ
ಆರ್ ಟಿ ಇ ಕಾನೂನಿನಡಿ ಆನ್ ಲೈನ್ ನಲ್ಲಿ ವಿಟ್ಲ ಶಾಲೆ ವೀರಕಂಭದಲ್ಲಿದೆ ಎಂದು ಡಿಸ್ಪ್ಲೇ ಆಗುತ್ತದೆ ಎಂದು ಜಿಪಂ ಸದಸ್ಯೆ ಮಂಜುಳಾ ಮಾವೆ ಹೇಳಿದರು. ಆರ್ ಟಿಇಯಲ್ಲಿ ವಾರ್ಡ್ ಮತ್ತು ಪಿನ್ ಕೋಡ್ ವ್ಯತ್ಯಾಸ ಇರುವುದನ್ನು ಹೇಳಿದ ಬಿಇಒ ಲೋಕೇಶ್, ಸೇರ್ಪಡೆ ವಿಷಯದಲ್ಲಿ ಯಾವುದೇ ಶಾಲೆಗಳಲ್ಲೂ ಗೊಂದಲ ಇಲ್ಲ, ಎಲ್ಲರಿಂದಲೂ ಸಹಕಾರ ದೊರಕುತ್ತಿದೆ ಎಂದು ಮಾಹಿತಿ ನೀಡಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರಾಜೇಶ್ ಬಾಳೆಕಲ್ಲು, ಉಮೇಶ್ ಬೋಳಂತೂರು, ಅಬ್ದುಲ್ಲಾ ವಿವಿಧ ವಿಷಯ ಮಾತನಾಡಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಉಪಸ್ಥಿತರಿದ್ದರು. ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು. ತಾಪಂ ಇಒ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ ವಂದಿಸಿದರು.
ಬಿ.ಸಿ.ರೋಡ್ ಹೃದಯಭಾಗದಲ್ಲೇ ಖಾಸಗಿ ಬಸ್ ಸ್ಟ್ಯಾಂಡ್
ಸಾರ್ವಜನಿಕರ ಅನುಕೂಲಕ್ಕಾಗಿ ಬಿ.ಸಿ.ರೋಡಿನಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಕುರಿತಂತೆ ಸಭೆಯ ಬಳಿಕ ತಾಲೂಕಿನ ವಿವಿಧ ಅಧಿಕಾರಿಗಳ ಸಭೆಯನ್ನು ನಡೆಸಿದ ಸಚಿವ ರಮಾನಾಥ ರೈ ಅವರು ಈಗಿರುವ ತಾಲೂಕು ಪಂಚಾಯಿತ್‌ನ ಹಳೆ ಕಟ್ಟಡ ಹಾಗೂ ಅದರ ಮುಂಭಾಗದಲ್ಲಿರು ಉಪ ನೋಂದಾಣಿ ಕಚೇರಿಯನ್ನು ತೆರವುಗೊಳಿಸಿ ಇಲ್ಲಿ ಪಿಪಿ ಮಾದರಿಯಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು.
ಇಲ್ಲಿ ಬಸ್ ನಿಲ್ದಾಣ ಮಾತ್ರವಲ್ಲದೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣವನ್ನು ಕೂಡಾ ನಿರ್ಮಾಣಕ್ಕೂ ಯೋಜನೆಯಲ್ಲಿ ಸೇರಿಸುವಂತೆ ಸೂಚಿಸಿದರಲ್ಲದೆ ಸರ್ವೇ ಕಾರ್ಯವನ್ನು ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಹಾಗೆಯೇ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ತೆರಳಲು ರಸ್ತೆಯನ್ನು ಕೂಡಾ ನಿರ್ಮಿಸಲು ಸೂಚಿಸಿದರು.
ಮಂಗಳೂರು ಸಹಾಯಕ ಕಮಿಷನರ್ ರೇಣುಕಾಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಇಒ ಸಿಪ್ರಿಯಾನ್ ಮಿರಾಂದ, ಮುಖ್ಯಾಧಿಕಾರಿ ಸುಧಾಕರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಧನಲಕ್ಷ್ಮಿ ಮೊದಲಾದವರು ಇದ್ದರು.