ಸಮಾಜದ ಬಗ್ಗೆ ಮಾನವೀಯ ಗುಣಗಳನ್ನು ಬೆಳೆಸುವ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ, ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಶಿಕ್ಷಣದ ಮೂಲ ಧ್ಯೇಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ‘ದೀಪಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶುಭ ಹಾರೈಸಿದರು.
ಈ ದೇಶದಲ್ಲಿ ಜ್ಞಾನಕ್ಕೆ ವಿಶೇಷ ಸ್ಥಾನವಿದ್ದು, ಜ್ಞಾನವು ದೇಶದ ಸಂಪತ್ತಾಗಿದೆ. ದೇಶದ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ. ಜ್ಞಾನ ವೃದ್ಧಿಯಾದಾಗ ಅಜ್ಞಾನದ ಕತ್ತಲೆ ದೂರವಾಗುತ್ತದೆ. ಹನುಮಂತನ ಭಕ್ತನಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು. ತಂದೆತಾಯಿ ಗುರುಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಉದ್ಯಮಿ ರಾಜೇಂದ್ರ ಮೈಸೂರು ಮಾತನಾಡಿ ತಂದೆ ತಾಯಿ, ಹಿರಿಯರಲ್ಲಿ ಮುಕ್ತವಾಗಿ ಮಾತನಾಡುವ ಅಭ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ದುಃಖಕ್ಕೆ ಒಳಗಾದಾಗ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಸಮಾಜ ಸೇವೆ ಮಾಡುವ ಮೂಲಕ ಮನಸ್ಸಿಗೆ ಶಾಂತಿಯನ್ನು ಪಡೆಯಬಹುದು ಎಂದು ಸ್ವಾನುಭವದ ಮಾತುಗಳನ್ನಾಡಿದರು.
ಶಾರೀರಿಕ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತವಚನ ನೀಡಿದರು.
ಉದ್ಯಮಿಗಳಾದ ಸುಧಾಕರ ಶೆಟ್ಟಿ ಹುಬ್ಬಳ್ಳಿ, ವಿಜಯಕುಮಾರ್ ಶೆಟ್ಟಿ ಹುಬ್ಬಳ್ಳಿ, ಬಾಲಕೃಷ್ಣ ಶೆಟ್ಟಿ ಮಂಗಳೂರು, ರಮಾನಂದ ಶೆಟ್ಟಿ, ವೀಣಾ ಶಶಿಧರ ಮಾರ್ಲ, ಜಿ.ಕೆ.ರಾವ್ ಮಂಗಳೂರು, ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ್ ಎನ್ ಉಪಸ್ಥಿತರಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೂಗೂ ಸೇತುವೆಗಳ ರೂವಾರಿ ಗಿರೀಶ್ ಭಾರದ್ವಾಜ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಲೋಹಿತ್, ನಿವೇದಿತಾ ಅನುಭವಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಹರ್ಷಿತಾ ನಿರೂಪಿಸಿ, ಮೇದಿನಿ ಸ್ವಾಗತಿಸಿ, ವೀಕ್ಷಿತಾ ವಂದಿಸಿದರು.