ಬಂಟ್ವಾಳ

ಮಂಗಳೂರಿಗೆ ಇನ್ನು 70 ದಿನಕ್ಕಾಗುವಷ್ಟು ನೇತ್ರಾವತಿ ನೀರು ಸಂಗ್ರಹ

  • ನೀರು ಪೋಲು ಮಾಡಬೇಡಿ, ಮಿತವಾಗಿ ಬಳಸಿ: ಕವಿತಾ ಸನಿಲ್
  • ತುಂಬೆ ಅಣೆಕಟ್ಟು, ಶಂಭೂರು ಎಎಂಆರ್ ನೀರಿನ ಸಂಗ್ರಹ ವೀಕ್ಷಣೆ
  • ಎಸ್‌ಇಜಡ್, ಎಂಆರ್ ಪಿಎಲ್ ಗೆ ನೀರು ಲಿಫ್ಟ್ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ
  • ಕುಡಿಯುವ ನೀರಿಗಷ್ಟೇ ನೇತ್ರಾವತಿ ಬಳಸಲು ಮನವಿ

www.bantwalnews.com report


ನೇತ್ರಾವತಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ಆದರೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಅಂದಾಜು 70 ದಿನಕ್ಕೆ ನೀರು ಪೂರೈಸುವಷ್ಟು ಸಂಗ್ರಹ ತುಂಬೆ, ಎಎಂಆರ್ ಡ್ಯಾಂನಲ್ಲಿದೆ, ಮಿತವಾಗಿ ಕುಡಿಯುವ ನೀರು ಬಳಸಿದರೆ, ಸಮಸ್ಯೆ ಬಾರದು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಮನವಿ ಮಾಡಿದರು.
ಮೇಯರ್ ಆದ ಬಳಿಕ ಶನಿವಾರ ಬೆಳಗ್ಗೆ ತುಂಬೆ ಅಣೆಕಟ್ಟು ಪ್ರದೇಶಕ್ಕೆ ಪ್ರಥಮ ಭೇಟಿ ನೀಡಿದ ಅವರು, ನೀರು ಸಂಗ್ರಹ ಮಟ್ಟವನ್ನು ಪರಿಶೀಲಿಸಿದರು. ಬಳಿಕ ಶಂಭೂರಿನಲ್ಲಿರುವ ಎಎಂಆರ್ ಅಣೆಕಟ್ಟು ಪ್ರದೇಶಕ್ಕೂ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನೀರೆತ್ತದಂತೆ ಎಸ್‌ಇಜಡ್, ಎಂಆರ್ ಪಿಎಲ್ ಗೆ ಸೂಚನೆ
ನೇತ್ರಾವತಿ ನೀರು ಒಳಹರಿವು ಸ್ಥಗಿತಗೊಂಡಿರುವ ಕಾರಣ, ತುಂಬೆ ಮತ್ತು ಎಎಂಆರ್ ಡ್ಯಾಂನಲ್ಲಿ ಪ್ರಸ್ತುತ ನೀರಿನ ಮಟ್ಟ ಪ್ರತಿದಿನ ೧೫ ಸೆಂ.ಮೀ.ಗೂ ಜಾಸ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಾರಣ, ಎಎಂಆರ್ ಪವರ್ ಪ್ರೈ.ಲಿ. ಡ್ಯಾಂನಿಂದ ಎಂ.ಆರ್.ಪಿ.ಎಲ್. ಮತ್ತು ಎಂ.ಎಸ್.ಇ.ಜಡ್ ಸಂಸ್ಥೆಯವರು ನಿರಂತರವಾಗಿ ಪ್ರತಿದಿನ ಡ್ಯಾಂನಿಂದ ನೀರನ್ನು ಲಿಫ್ಟ್ ಮಾಡದಂತೆ ಜಿಲ್ಲಾಕಾರಿ ಡಾ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಂಗಳೂರು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಕೋರಿದ್ದು, ಅದರಂತೆ ಸೂಚನೆ ಹೊರಬಂದಿದೆ. ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಕವಿತಾ ಸನಿಲ್, ನೀರೆತ್ತದಂತೆ ಕಾವಲು ಕಾಯಲು ಇಬ್ಬರು ಎಂಜಿನಿಯರ್ ಗಳು ಎಎಂಆರ್ ಡ್ಯಾಂ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ನೀರಿನ ಮಟ್ಟ 4.5 ಮೀಟರ್ ನಷ್ಟಿದ್ದು, ಪ್ರಸ್ತುತ ನೇತ್ರಾವತಿ ನದಿಯ ನೀರಿನ ಒಳಹರಿವು ಸ್ಥಗಿತಗೊಂಡಿರುವ ಕಾರಣ ಸಂಗ್ರಹವಿರುವ ನೀರನ್ನು ಅಂದಾಜು 20ರಿಂದ 25 ದಿನಗಳವರೆಗೆ ನಗರಪಾಲಿಕೆ ವ್ಯಾಪ್ತಿಗೆ ನೀರು ಪೂರೈಸಬಹುದು. ತುಂಬೆ ವೆಂಟೆಡ್ ಡ್ಯಾಂ ನದಿ ಪಾತ್ರದ ಮೇಲ್ಭಾಗದಲ್ಲಿ ಎ.ಎಂ.ಆರ್.ಸಂಸ್ಥೆಗೆ ಸೇರಿದ ಕಿಂಡಿ ಅಣೆಕಟ್ಟು ಇದ್ದು, ಈ ಅಣೆಕಟ್ಟಿನ ಸಂಗ್ರಹದಿಂದ ಒಟ್ಟು 45 ದಿನಗಳವರೆಗೆ ನೀರು ಪೂರೈಸಬಹುದು. ಮಹಾನಗರಪಾಲಿಕೆಗೆ ಈಗಾಗಲೇ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಕಾರಿಗೆ ವಸ್ತುಸ್ಥಿತಿ ಕುರಿತು ಅವಗಾಹನೆಗೆ ತರಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೇಸಗೆ ಕಾಲದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಲ್ಲ ಬಳಕೆದಾರರೊಂದಿಗೆ ಸಭೆ ನಡೆಸಿ, ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ ಎಂದರು.

ತುಂಬೆ ವೆಂಟೆಡ್ ಡ್ಯಾಂನಲ್ಲಿ 7.5 ಮಿಲಿಯನ್ ಕ್ಯೂಬಿಕ್ ಮೀಟರ್ ನಷ್ಟು (ಎಂ.ಸಿ.ಎಂ) ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಳಕೆದಾರರಿಗೆ ದಿನಂಪ್ರತಿ 160 ಎಂ.ಎಲ್.ಡಿ. ನೀರು ಪೂರೈಸಲಾಗುತ್ತಿದೆ. ಇದರ ಜೊತೆಗೆ ಬಂಟ್ವಾಳ ಪುರಸಭೆ, ಇನೋಸಿಸ್, ಮಂಗಳೂರು ವಿಶ್ವವಿದ್ಯಾನಿಲಯ, ಎರಡು ಏತ ನೀರಾವರಿ ಘಟಕ, ಕೃಷಿ ಮತ್ತು ತೋಟಗಾರಿಕೆ ಉದ್ದೇಶಗಳಿಗೂ ನೀರು ಒದಗಿಸಲಾಗುತ್ತಿದೆ. ದಿನಂಪ್ರತಿ ಸರಾಸರಿ 220 ಎಂ.ಎಲ್.ಡಿಗಿಂತಲೂ ಅಕ ನೀರನ್ನು ಈ ಡ್ಯಾಂನಿಂದ ಉಪಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಎಂಆರ್ ಡ್ಯಾಂನಿಂದ ಎಂಎಸ್‌ಇಜಡ್ ಗೆ 9 ಎಂ.ಎಜಿಡಿ, ಎಂಆರ್ ಪಿಎಸ್ ಗೆ 6 ಎಂಎಲ್ ಡಿ ಒಟ್ಟು 15 ಎಂ.ಜಿ.ಡಿ. (80 ಎಂ.ಎಲ್.ಡಿ) ನೀರು ಮತ್ತು ಸುಮಾರು 5 ಸಾವಿರ ಅಶ್ವಶಕ್ತಿ ಸಾಮರ್ಥ್ಯದ ಪಂಪ್ ಗಳು ಚಾಲನೆಯಲ್ಲಿದ್ದು, ಒಳಹರಿವು ಸ್ಥಗಿತಗೊಳಿಸಿದ ಕಾರಣ, 45 ದಿನಕ್ಕಷ್ಟೇ ನೀರು ಪೂರೈಸಬಹುದು ಎಂದು ಕವಿತಾ ಸನಿಲ್ ಹೇಳಿದರು.
ಯಾವುದೇ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ. ಈ ಕುರಿತು ಉಸ್ತುವಾರಿ ಸಚಿವರು, ಶಾಸಕರು, ಹಿರಿಯ ಕಾರ್ಪೊರೇಟರ್ ಗಳ, ಮಾಜಿ ಮೇಯರ್ ಗಳ ಜೊತೆ ಸಭೆ ನಡೆಸಿ ಮುಂದಿನ ಕ್ರಮದ ಕುರಿತು ತೀರ್ಮಾನಿಸಲಾಗುತ್ತದೆ. ಸಾರ್ವಜನಿಕರಿಗೆ ನೀರಿನ ಕುರಿತು ಯಾವುದೇ ಸಮಸ್ಯೆ ಎದುರಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕುಡಿಯುವ ನೀರಿಗೆ ಆದ್ಯತೆ: ರೈತರಿಗೆ ಸೂಚನೆ
ಅಗತ್ಯ ಇದ್ದಲ್ಲಿ ಮಾತ್ರ ತೋಟಗಾರಿಕಾ ಬೆಳೆಗಳಿಗೆ ನೀರು ಬಳಸಿ, ಒಂದು ವೇಳೆ ಭತ್ತದ ಬೆಳೆಗಳಿಗೆ ನದಿ ಪಾತ್ರದಿಂದ ನೀರು ಬಳಕೆ ಮಾಡಿಕೊಳ್ಳುತ್ತಿದ್ದಲ್ಲಿ, ಈ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಿ, ಕುಡಿಯುವ ನೀರಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಕಾರಿ ಡಾ.ಕೆ.ಜಿ.ಜಗದೀಶ್ ಸೂಚಿಸಿದ್ದಾರೆ.
ಈ ಕುರಿತು ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಮನವಿಗೆ ಸ್ಪಂದಿಸಿರುವ ಅವರು, ಕೃಷಿ, ತೋಟಗಾರಿಕೆ, ಮೆಸ್ಕಾಂ ಇಲಾಖೆಯ ಉನ್ನತ ಅಕಾರಿಗಳು ತುಂಬೆ ಅಣೆಕಟ್ಟು ಪ್ರದೇಶಕ್ಕೆ ಮತ್ತು ನೇತ್ರಾವತಿ ನದಿ ಪಾತ್ರಕ್ಕೆ ಭೇಟಿ ನೀಡಿ, ವಾಸ್ತವ ಸಂಗತಿಗಳನ್ನು ಪರಿಶೀಲಿಸಿ, ತೋಟಗಾರಿಕಾ ಬೆಳೆಗಳಿಗೆ ನೀರಿನ ಅಗತ್ಯತೆಯ ಪ್ರಮಾಣ ಪರಿಶೀಲಿಸಲು ಸೂಚಿಸಿದ್ದಾರೆ.

ಉಪಮೇಯರ್ ರಜನೀಶ್, ಮಾಜಿ ಮೇಯರ್ ಗಳಾದ ಮಹಾಬಲ ಮಾರ್ಲ, ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಆಯುಕ್ತ ಮಹಮ್ಮದ್ ನಜೀರ್, ಇಂಜಿನಿಯರ್ ಲಿಂಗೇಗೌಡ, ಪಾಲಿಕೆ ಸದಸ್ಯ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ