ಮಜ್‌ಲಿಸ್ ತ್ತರೀಖತಿ ಶಾದಿಲಿಯ್ಯತ್ತಿಲ್ ಖಾದಿರಿಯ್ಯ ಇದರ ಅಧೀನದಲ್ಲಿ ಪ್ರತೀ ತಿಂಗಳಿಗೊಮ್ಮೆ ಬಾಂಬಿಲ ದರ್ಗಾದಲ್ಲಿ ನಡೆಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಹಾಗೂ ಮಜ್ಲಿಸುನ್ನೂರಿನ ವಾರ್ಷಿಕ ಸಮ್ಮೇಳನವು ಮಾರ್ಚ್ ೧೨ರಂದು ಶಂಸುಲ್ ಉಲಮಾ ವೇದಿಕೆ ಬಾಂಬಿಲದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಉಲೆಮಾ ಅತ್ತಿಪಟ್ಟ ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ಎಸ್ಕೆಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಪ್ರೊ. ಅನೀಸ್ ಕೌಸರಿ ಹೇಳಿದರು.
ಶುಕ್ರವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 12ರಂದು ಬೆಳಗ್ಗೆ ೯:೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಬಾಂಬಿಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಧ್ವಜಾರೋಹಣಗೈಯಲಿದ್ದು ಬಳಿಕ ಸೈಯದ್ ಅಮೀರ್ ತಂಙಳ್ ಕಿನ್ಯ ದರ್ಗಾ ಝಿಯಾರತ್ತಿಗೆ ನೇತೃತ್ವ ನೀಡಲಿದ್ದಾರೆ ಎಂದರು.
ಮಧ್ಯಾಹ್ನ ೨ ಗಂಟೆಗೆ ಹನೀಫ್ ಹುದವಿ ದೇಲಂಪಾಡಿಯವರ ಅಧ್ಯಕ್ಷತೆಯಲ್ಲಿ ತಝ್‌ಕಿಯ್ಯತ್ತ್ ಕ್ಯಾಂಪ್ ನಡೆಯಲಿದ್ದು ಹನೀಫ್ ದಾರಿಮಿ ಸವಣೂರು ಉದ್ಘಾಟಿಸಲಿದ್ದಾರೆ. ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ, ಖಾಸಿಂ ದಾರಿಮಿ ಕಿನ್ಯ ಮುಖ್ಯ ಭಾಷಣ ಹಾಗೂ ಜಾಬೀರ್ ಫೈಝಿ ಬನಾರಿ ಸ್ವಾಗತ ಭಾಷಣ ಮಾಡಲಿದ್ದು, ಲೊರೆಟ್ಟೋ ಪದವು ಅಬ್ದುಲ್ಲಾ ಮುಸ್ಲಿಯಾರ್ ನೇತೃತ್ವದಲ್ಲಿ ಅಸರ್ ನಮಾಝ್ ಬಳಿಕ ಮೌಲೀದ್ ಪಾರಾಯಣ ನಡೆಯಲಿದೆ ಎಂದರು.
ಸಂಜೆ ೪:೩೦ಕ್ಕೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಉಲಮಾ ಸಾದಾತ್ ಸಂಗಮ ನಡೆಯಲಿದೆ. ಪೈಯ್ಯಕ್ಕಿ ಉಸ್ತಾದ್ ದುವಾ ನಿರ್ವಹಿಸಲಿದ್ದು ಎಸ್ಕೆಜೆಯು ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್ಕೆಜೆಯು ಜೊತೆ ಕಾರ್ಯದರ್ಶಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದು ಬಿ.ಎಂ.ಸಿರಾಜುದ್ದೀನ್ ಫೈಝಿ ಸ್ವಾಗತಿಸಲಿದ್ದಾರೆ ಎಂದರು.
ಮಗ್ರೀಬ್ ನಮಾಝ್ ಬಳಿಕ ಅತ್ತಿಪಟ್ಟ ಉಸ್ತಾದ್ ನೇತೃತ್ವದಲ್ಲಿ ಆಧ್ಯಾತ್ಮಿಕ ಸಂಗಮ ನಡೆಯಲಿದ್ದು ತೊಟ್ಟಿ ಉಸ್ತಾದ್ ಹಾಗೂ ಅಬ್ದುಲ್ ಅಝೀಝ್ ತಾಣಲೂರು ನಸೀಹತ್ತ್ ನಿರ್ವಹಿಸಲಿದ್ದಾರೆ. ಸೈಯದ್ ಝೈನುಲ್ ಆಬಿದೀನ್ ತಂಙಳ್ ಪುಸೋಟು, ಅಲೀ ತಂಙಳ್ ಕರಾವಳಿ, ಬದ್ರುದ್ದೀನ್ ಮಶ್ಹೂರ್ ತಂಙಳ್, ಹುಸೈನ್ ಬಾಅಲವಿ ತಂಙಳ್, ಇಬ್ರಾಹೀಂ ಬಾತಿಷಾ ತಂಙಳ್, ತ್ವಾಹಾ ಜಿಫ್ರಿ ತಂಙಳ್, ಅನಸ್ ತಂಙಳ್, ಜುನೈದ್ ಜಿಫ್ರಿ ತಂಙಳ್ ಮೊದಲಾದ ಉಲಮಾ, ಉಮರಾ, ಸಾದಾತುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವಿದ್ದು ಕಾರ್ಯಕ್ರಮದ ಬಳಿಕ ಅನ್ನದಾನ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಾಬಿರ್ ಫೈಝಿ ಬನಾರಿ, ಇಬ್ರಾಹೀಂ ಮುಸ್ಲಿಯಾರ್ ಬಾಂಬಿಲ, ಅಬ್ದುಲ್ ಖಾದರ್ ಸ್ವಾಲಿ ಬಾಂಬಿಲ ಉಪಸ್ಥಿತರಿದ್ದರು.