ರೈತರ ಸಾಲ ಮನ್ನಾ, ಕುಡಿಯಲು ನೀರು, ಉದ್ಯೋಗ ಭರವಸೆ ಒದಗಿಸಲು ಒತ್ತಾಯಿಸಿ, ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಪಕ್ಷದ ನಾಯಕ ಉಮಾನಾಥ ಕೋಟ್ಯಾನ್, ರಾಜ್ಯದಾದ್ಯಂತ ಬರಗಾಲ ತಾಂಡವವಾಡುತ್ತಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಸರಕಾರ ಇದ್ಯಾವುದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದೆ. ಎತ್ತಿನಹೊಳೆ ಯೋಜನೆ, ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಹಣಕಾಸಿನ ವ್ಯವಹಾರ ಸಂಶಯಾಸ್ಪದವಾಗಿದ್ದು, ಅಂಥ ವಿಚಾರಗಳಲ್ಲೇ ರಾಜ್ಯ ಸರಕಾರ ಮುಳುಗಿದೆ. ರೈತರ ಕುರಿತು ಅಧಿಕಾರಿಗಳು ವರ್ತಿಸುವ ರೀತಿ ಸರಿ ಇಲ್ಲ. ಕೂಡಲೇ ಎಲ್ಲರಿಗೂ ನೀರಿನ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಬಂಟ್ವಾಳ ಜನತೆಗೆ ಕಾಂಗ್ರೆಸ್ ರೋಗಭಾಗ್ಯ ಒದಗಿಸುತ್ತಿದೆ ಎಂದು ಲೇವಡಿ ಮಾಡಿದ ನಾಯಕ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ರೈತರ ಸಂಕಷ್ಟಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಈಗಾಗಲೇ ನೇತ್ರಾವತಿ ನದಿ ಮಲಿನಗೊಂಡಿದ್ದು, ಇದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿಲ್ಲವೇ, ಪರಿಸರ ಮಂತ್ರಿಗಳೂ ಆಗಿರುವ ರಮಾನಾಥ ರೈಗಳು, ಬಂಟ್ವಾಳದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಅನುಷ್ಠಾನಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ಒಂದೂವರೆ ವರ್ಷಗಳಿಂದ ಬಡವರಿಗೆ ಬಿಪಿಎಲ್ ಕಾರ್ಡ್ ಒದಗಿಸುತ್ತಿಲ್ಲ. ಹಾಲಿನ ಸಬ್ಸಿಡಿ ಇನ್ನೂ ಫಲಾನುಭವಿಗಳಿಗೆ ದೊರಕಿಲ್ಲ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾಜಿ ರಾಜ್ಯ ಸಹವಕ್ತಾರೆ ಸುಲೋಚನ ಜಿ.ಕೆ.ಭಟ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಜೀವ ಭಂಡಾರಿ ಮಾತನಾಡಿದರು.
ಕೂಡಲೇ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಮರೋಪಾದಿಯಲ್ಲಿ ಯೋಜನೆ ರೂಪಿಸಬೇಕು. ರೈತರ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ, ಬರ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಬೇಕು. ಜಾನುವಾರುಗಳಿಗೆ ಮೇವು ಒದಗಿಸಲು ಕೂಡಲೇ ಜಿಲ್ಲಾಧಿಕಾರಿಗೆ ಆದೇಶ ನೀಡುವುದರ ಜೊತೆಗೆ ಹಣ ಬಿಡುಗಡೆ ಮಾಡಬೇಕು. ಗೋಶಾಲೆಗಳನ್ನು ರಾಜ್ಯಾದ್ಯಂತ ತೆರೆದು ಸಂಕಷ್ಟದಲ್ಲಿರುವ ರೈತರ ಜಾನುವಾರುಗಳಗೆ ಆಶ್ರಯ ಒದಗಿಸಬೇಕು. ಗುಳೇ ಹೋಗುವ ಅನಿವಾರ್ಯತೆ ಎದುರಿಸುತ್ತಿರುವ ರೈತಾಪಿ ಕುಟುಂಬ ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ಯೋಜನೆಯಡಿ ಸೂಕ್ತ ಉದ್ಯೋಗ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಕಾರ್ಯದರ್ಶಿ ಸುಗುಣ ಕಿಣಿ, ಬಿಜೆಪಿ ಬಂಟ್ವಾಳ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಮಂಡಲ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಮಂಡಲ ಉಪಾಧ್ಯಕ್ಷರಾದ ವಿಜಯ ರೈ, ದೇವಪ್ಪ ಪೂಜಾರಿ, ಹರಿಶ್ಚಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೂಜಾರಿ, ಗಣೇಶ್ ಸುವರ್ಣ, ಕುಲ್ಯಾರ್ ನಾರಾಯಣ ಶೆಟ್ಟಿ, ದಿನೇಶ್ ಭಂಡಾರಿ, ಎ.ಗೋವಿಂದ ಪ್ರಭು, ವಜ್ರನಾಥ ಕಲ್ಲಡ್ಕ, ಸಂತೋಷ್ ಕುಮಾರ್, ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ, ಜಯಂತಿ ವೀರಕಂಭ, ಗಂಗಾಧರ ಕೋಟ್ಯಾನ್, ವಸಂತ ಅಣ್ಣಳಿಕೆ, ರಮನಾಥ ರಾಯಿ, ಸೀತಾರಾಮ ಪೂಜಾರಿ, ರತ್ನಕುಮಾರ್ ಚೌಟ, ಆನಂದ ಕುಲಾಲ್, ಸಂಜೀವ ಪೂಜಾರಿ, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಬಿ.ಕೆ.ಅಣ್ಣು ಪೂಜಾರಿ, ಮೋಹನ್ ಪಿ.ಎಸ್, ಮಹಾಬಲ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ರೋನಾಲ್ಡ್ ಡಿ ಸೋಜ, ಗುರುದತ್ ನಾಯಕ್, ಗೋಪಾಲ ಸುವರ್ಣ ,ಪುಷ್ಪರಾಜ್ ಚೌಟ ಮುಂತಾದವರು ಉಪಸ್ಥಿತರಿದ್ದರು.