ಆರಾಧನೆ

ನೇತ್ರಾವತಿ ದಡದಲ್ಲಿದೆ ಶರಭೇಶ್ವರ ದೇವಾಲಯ

  • ಪ್ರೊ. ರಾಜಮಣಿ ರಾಮಕುಂಜ

ಬಂಟ್ವಾಳದಿಂದ 14 ಕಿಲೋಮೀಟರ್ ದೂರದಲ್ಲಿ, ಸರಪಾಡಿ ಗ್ರಾಮದ ಸರಪಾಡಿ ಅಗ್ರಹಾರದಲ್ಲಿರುವುದೇ ಶರಭೇಶ್ವರ ದೇವಾಲಯ.

ಕಾಡಿನ ಮಧ್ಯದಲ್ಲಿ ಲಿಂಗೋದ್ಭವವಾಗಿ ಶೈವ ಭಕ್ತರಾದ ವಿಜಯ ಸಾಮ್ರಾಟರೆನಿಸಿಕೊಂಡ ಇಕ್ಕೇರಿ ಮನೆತನದವರು ಈ ಕ್ಷೇತ್ರವನ್ನು ನಿರ್ಮಿಸಿರುತ್ತಾರೆಂದು ತಿಳಿದು ಬರುತ್ತದೆ. ಕಾಡಿನ ಮಧ್ಯದಲ್ಲಿ ಲಿಂಗೋದ್ಭವವಾಗಿರುವುದರಿಂದ ಬಂಗಾರದ ನಾಣ್ಯವನ್ನು ಎಸೆದು ಜನರಿಂದ ಕಾಡನ್ನು ಕಡಿಸಿ ಶ್ರೀ ಕ್ಷೇತ್ರದ ನಿರ್ಮಾಣವಾಗಿದೆ ಎಂಬ ಮಾತಿದೆ.

ದೇವಾಲಯದ ಪಾಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿಯ ದಡದಲ್ಲಿ, ವಿಜಯ ನಗರ ಸಾಮ್ರಾಟರು ಈ ಕ್ಷೇತ್ರಕ್ಕೊಸ್ಕರ ಬ್ರಾಹ್ಮಣರ ಅಗ್ರಹಾರವನ್ನು ನಿರ್ಮಿಸಿದರು. ಆರು ಜಾತಿಯ ಬ್ರಾಹ್ಮಣರಿಗೆ ಹನ್ನೆರಡು ಮನೆಗಳನ್ನು ನಿರ್ಮಿಸಿ, ಪ್ರತಿ ಮನೆಯ ಒಬ್ಬರಿಗೆ ಜೀವನೋಪಾಯಕ್ಕಾಗಿ ರೂ. 16 ತಸ್ತೀಕು ಕೊಡುತ್ತಿದ್ದು ಅದನ್ನು ಈಗಲೂ ಸರಕಾರ ಪಾವತಿ ಮಾಡುತ್ತಿದೆ. ಪಡ್ಡಾಯೂರು ಬಲ್ಲಾಳ ವಂಶದವರು ಸರಪಾಡಿ, ಮಣಿನಾಲ್ಕೂರು, ನಾವೂರು, ಮಣಿ ಈ ನಾಲ್ಕು ಗ್ರಾಮಗಳನ್ನು ಒಳಗೊಂಡಿರುವ ಮಣಿನಾಲ್ಕೂರು ಸೀಮೆಯನ್ನು ಆಳುತ್ತಿದ್ದರು. ಇದೇ ಸೀಮೆಗೆ ಸೇರಿದ ಸರಪಾಡಿದೇವಾಲಯ ಸೀಮೆ ದೇವಸ್ಥಾನವಾಗಿದೆಯೆಂದು ತಿಳಿದುಬರುತ್ತದೆ.

೪೫೦ ಮುಡಿ ಅಕ್ಕಿಯ ವಿಮೆಯನ್ನು ಶ್ರೀ ಕ್ಷೇತ್ರಕ್ಕೆ ಬಿಟ್ಟಿದ್ದು, ಭೂಮಿಯ ಗಡಿಗಳಲ್ಲಿ ಈಗಲೂ ಗಡಿ ಕಲ್ಲುಗಳಿವೆ. ಈ ಗಡಿಕಲ್ಲುಗಳಿಗೆ ಏಕನಾಯಕನ ಕಲ್ಲು ಎನ್ನುತ್ತಾರೆ. ಕ್ಷೇತ್ರದ ದಕ್ಷಿಣದಲ್ಲಿ ನೇತ್ರಾವತಿ ಕಿನಾರೆಯಲ್ಲಿ ಮಠವೊಂದಿದ್ದು, ವೀರಾಂಜನೇಯ ಮಠ ಇದ್ದಂತಹ ಕುರುಹುಗಳು ಕಂಡು ಬರುತ್ತವೆ. ಉತ್ತರ ದಿಕ್ಕಿಗೆ ಎತ್ತರದ ಶಿಖರವಾದ ಕಾಂತಿ ಗುಡ್ಡೆಯಲ್ಲಿ ಸುಂದರ ಪ್ರಕೃತಿಯ ಮಡಿಲಲ್ಲಿ ರಕ್ತೇಶ್ವರಿಯ ಸಾನಿಧ್ಯವಿದೆ.

ಈಗ ಜೀರ್ಣೋದ್ಧಾರಗೊಂಡಿರುವ, ಈ ದೇವಾಲಯದ ಹಳೆಯ ತೀರ್ಥ ಮಂಟಪದ ಕಂಬವೊಂದರಲ್ಲಿ ’ಶಾಲಿವಾಹನ ಶಕ ೪’ ಎಂದು ಬರೆದಿತ್ತಾದ ಕಾರಣ ಇದರ ರಚನೆ ಆ ಕಾಲಕ್ಕೆ ಸಲ್ಲುತ್ತದೆಂದೂ ಅಭಿಪ್ರಾಯಪಡಲಾಗುತ್ತಿದೆ. ಒಂದು ಮೂಲದ ಪ್ರಕಾರ, ನಂದರಸ ದೇವಾಲಯದ ದೈನಂದಿನ ಆಗುಹೋಗುಗಳಿಗಾಗಿ ಹನ್ನೆರಡು ಮನೆಗಳಿರುವಂತೆ ಅಗ್ರಹಾರ ನಿರ್ಮಿಸಿದನೆಂದೂ ಒಂದೊಂದು ಮನೆಗೆ ೧೬ ಮುಡಿ ಅಕ್ಕಿ ಗೇಣಿ (ಉಂಬಳಿ?)ನಿಗದಿಗೊಳಿಸಿದ್ದನೆಂದೂ ತಿಳಿದು ಬರುತ್ತದೆ. ಕಾಲಾಂತರದಲ್ಲಿ ಶ್ರೀ ಕೃಷ್ಣ ದೇವರಾಯನು ನಂದರನ್ನು ಸೋಲಿಸಿ ೫೦೦ ಮೂಡಿ ಅಕ್ಕಿ ಬೆಳೆಯುವ ಗದ್ದೆಯನ್ನು ದೇವಾಲಯಕ್ಕೆ ಉಂಬಳಿ ಬಿಟ್ಟಿದ್ದನೆಂದೂ ಹೇಳಲಾಗುತ್ತಿದೆ.

ಸರಪಾಡಿ ಹೆಸರಿನ ಕುರಿತು: ಸರಪಾಡಿಗೆ ಶರಭೇಶ್ವರ ಸನ್ನಿಧಿ ಇರುವುದರಿಂದ ಶರಪಾಡಿಯೆಂತಲೂ ಸರ್ಪಗಳ ಹಾಡಿ ಆಗಿರುವುದರಿಂದ ಸರ್ಪಾಡಿ-ಸರಪಾಡಿಯೆಂತಲೂ ಎರಡು ಹೆಸರುಗಳಿವೆ  ಎಂಬುದು ಚಾಲ್ತಿಯಲ್ಲಿರುವ ಮಾತು.

ಸರಪಾಡಿ ಎಂಬ ಹೆಸರಿಗೆ ಪುರಾಣದ ಹಿನ್ನೆಲೆಯೊಂದಿಗೆ ಚಾರಿತ್ರಿಕ ಘಟನೆಯೊಂದಿದೆ. ದ್ವಾಪರ ಯುಗದಲ್ಲಿ ಮುನಿಶ್ರೇಷ್ಠನಾದ ಶರಭೃಂಗ ಮಹರ್ಷಿ ಲೋಕ ಸಂಚಾರ ಗೈಯುತ್ತಾ ನೇತ್ರಾವತಿ ನದೀ ತಟದಲ್ಲಿ ವಿಶ್ರಾಂತಿಗಾಗಿ ನಿಲ್ಲುತ್ತಾನೆ. ತನ್ನ ನೈಮಿತ್ತಿಕ ಪೂಜಾ ಕಾರ್ಯಕ್ಕಾಗಿ ಶಿವಲಿಂಗವೊಂದನ್ನು ಸ್ಥಾಪಿಸಿ ಪೂಜಿಸುತ್ತಾ ಹಲವು ಕಾಲದಲ್ಲಿ ಆತನು ಲಿಂಗೈಕ್ಯನಾದನು. ಕಾಲಕ್ರಮೇಣ ಶಿವಲಿಂಗ ಕಾಲಗರ್ಭದಲ್ಲಿ ಸೇರಿಹೋಗುವುದು. ಕಲಿಯುಗದಲ್ಲಿ ಆಳರಸರ ಕಾಲದಲ್ಲಿ ನಂದಾವರದ ನಂದರಸ ದಿಗ್ವಿಜಯಾರ್ಥವಾಗಿ ವೇಣೂರಿನ ಅಜಿಲ ಮನೆತನದವರೊಡನೆ ಯುದ್ಧಮಾಡಿ ಕೈಸೋತು ತನ್ನೂರಿಗೆ ಬಂದಾಗ ಮುಸ್ಸಂಜೆ ಹೊತ್ತು ನೇತ್ರಾವತಿ ನದಿಯಲ್ಲಿ ಮುಖತೊಳೆದು ಶುಚಿರ್ಭೂತನಾಗಿ ಅರಳೀಮರದ ಬುಡದಲ್ಲಿ ಒರಗಿರುವಾಗ ಸ್ವಪ್ನವೊಂದನ್ನು ಕಂಡನು. ಪರಮೇಶ್ವರನೇ ಅಗೋಚರನಾಗಿ ’ಎಲೈ ರಾಜನೆ ಸೋತೆನೆಂದು ಮರುಗದಿರು; ಕೀರ್ತಿಗಾಗಿ ಹಂಬಲಿಸು. ನೀನಿರುವ ವಠಾರದಲ್ಲೇ  ಶರಭೃಂಗಾರ್ಚಿತ ಲಿಂಗವೊಂದಿದೆ; ಜೀರ್ಣೋದ್ಧಾರಗೊಳಿಸು, ನಿನಗೆ ಒಳಿತಾಗುವುದೆಂದು ನುಡಿದನು. ಎಚ್ಚರಗೊಂಡು ತನ್ನೊಡನಿರುವ ಆಳುಗಳನ್ನು ಕರೆದು ಕಾಡು ಕಡಿಯಲು ಅಪ್ಪಣೆ ನೀಡುವನು; ಮುಳ್ಳಿನ ಪೊದರಿಗೆ ನಾಣ್ಯ ಚೆಲ್ಲುವನು, ಕಾಡು ಕತ್ತರಿಸುತ್ತಿರಲು ಅದೇ ಕಾಡಿನಲ್ಲಿ ವಾಸ್ತವ್ಯವಿದ್ದ ಉರಗೇಂದ್ರ ತಕ್ಷಣ ಸಿಟ್ಟುಗೊಂಡು ಅರಸನನ್ನು ಕಚ್ಚಲು ಮುಂದಾಗುವುದು. ನಂದರಸ ಹಾಗೂ ಸರ್ಪರಾಜನ ನಡುವೆ ಘೋರ ಯುದ್ಧವಾದಾಗ ಪರಮೇಶ್ವರ ಮೈದೋರಿ ಯುದ್ಧಕ್ಕ ವಿರಾಮ ಹಾಡಲು, ಸರ್ಪರಾಜನ ಪ್ರಾರ್ಥನೆಯಂತೆ ’ಸರ್ಪ ಪಾಡಿ’(ಹಾಡಿ), ಅದುವೆ ಕಾಲಕ್ರಮೇಣ ಸರಪಾಡಿ ಎಂಬ ಹೆಸರಿನಿಂದ ಕರೆಯುವಂತಾಗಲೆಂದು ಆಶೀರ್ವದಿಸಿ, ಶರಭೃಂಗ ಮುನಿ ಪೂಜಿತ ಲಿಂಗ ಶರಭೇಶ್ವರ ಕ್ಷೇತ್ರ ಎಂದು ಪ್ರಸಿದ್ಧವಾಗುವಂತಾಗಲು ಸೂಚಿಸಿ ಪರಶಿವ ಅದೃಶ್ಯ ಹೊಂದುವನು. ನಂದರಾಯ ತನ್ನ ಆಸ್ಥಾನ ಪುರೋಹಿತರ ಮುಖಾಂತರ ಕುಂದಾಪುರದ ಹಲ್ಸನಾಡು ಮನೆತನದವರನ್ನು ದೇವಸ್ಥಾನದ ಆಡಳಿತ ನೋಡಿಕೊಳ್ಳಲು ನೇಮಿಸಿ, ಅಲ್ಲಿನ ಬ್ರಾಹ್ಮಣರನ್ನು ಪೂಜಾಕಾರ್ಯಕ್ಕೆ ನಿಲ್ಲಿಸಿ ಅವರಿಗೆ ಅಗ್ರಹಾರ ನಿರ್ಮಿಸಿ ಕೊಟ್ಟನು ಎಂದು ಪ್ರತೀತಿ. ಹೀಗಿರಲೂಬಹುದೆ? ಶರಭ ಎಂದರೆ ಶಿವನದೇ ಒಂದು ಅವತಾರ ತಾನೆ. ಹಾಗಿರುವಲ್ಲಿ ’ಶರಭ’ ಇರುವ ಊರು ಶರಪಾಡಿ. ಪಾಡಿ ಅಥವಾ ಹಾಡಿ ಅಂದರೆ ಗ್ರಾಮ, ಹಳ್ಳಿ ಅನ್ನುವ ಅರ್ಥವಿದೆ. ’ಶರ’ ಅನ್ನುವುದಕ್ಕೆ ನೀರು ಅನ್ನುವ ಅರ್ಥವೂ ಇದೆ. ನಿಜದಲ್ಲಿ ನೀರಿನ ನಿಧಿಯನ್ನು ಹೊಂದಿರುವ ಹಳ್ಳಿಯಿದು ಎಂದರೂ ಸರಿಯೆ. ನೇತ್ರಾವತಿ ನದಿ ಇದೇ ಗ್ರಾಮದ ಪಕ್ಕದಲ್ಲೆ ಹರಿಯುತ್ತಿದೆ ಮಾತ್ರವಲ್ಲ, ದೇವಾಲಯದ ಸುತ್ತ ನೀರಿನ ಒಸರು ಚೆನ್ನಾಗಿಯೇ ಇದೆ. ಈ ಕಾರಣದಿಂದಲೂ ಸರಪಾಡಿ ಅನ್ನುವ ಹೆಸರು ಬರಲು ಸಾಧ್ಯವಿದೆ.

ಒಂದು ಕಾಲದಲ್ಲಿ ಬ್ರಾಹ್ಮಣರ ಅಗ್ರಹಾರವೇ ಆಗಿದ್ದ ಈ ದೇವಾಲಯದ ಬೀದಿ ಬಹಳಷ್ಟು ವಿಸ್ತಾರವಾಗಿದೆ. ಹಲವಾರು ಐತಿಹಾಸಿಕ ಹಾಗೂ ಪೌರಾಣಿಕ ರಹಸ್ಯಗಳನ್ನು ಹೊಂದಿರಬಹುದಾದ ಈ ದೇವಾಲಯ ಬಹಳಷ್ಟು ಪುರಾತನ ಹಾಗೂ ಕಾರಣಿಕ ಕ್ಷೇತ್ರ ಎನ್ನುವುದರಲ್ಲಿ ಸಂಶಯವಿಲ್ಲ.

ಮಾರ್ಚ್ ತಿಂಗಳಲ್ಲಿ ಬರುವ ಹುಣ್ಣಿಮೆ(ಶುಕ್ಲಪಕ್ಷ)ಯಂದು ವಾರ್ಷಿಕ ಜಾತ್ರೆ ನಡೆಯುತ್ತದೆ. ಇಲ್ಲಿನ ಈ ವರ್ಷದ ಜಾತ್ರೋತ್ಸವ ಮಾ. ೯ರಿಂದ ೧೩ರವರೆಗೆ ನಡೆಯಲಿದ್ದು, ಮಾ. ೯ರಂದು ಧ್ವಜಾರೋಹಣವಾಗಿ ಧಾರ್ಮಿಕ ಸಭೆ ಹಾಗೂ ಪಂಜ ಭಾಸ್ಕರ ಭಟ್ ಅವರಿಂದ ಧಾರ್ಮಿಕ ಪ್ರವಚನ; ದಿನಾಂಕ ೧೦ರಂದು ಮಧ್ಯಾಹ್ನ ಕಲಶಾಭಿಷೇಕ, ನಿತ್ಯ ಬಲಿ, ರಾತ್ರಿ ಸುದರ್ಷನ ವಿಜಯ ಯಕ್ಷಗಾನ ಬಯಲಾಟ, ದೈವಂಗಳ ನೇಮ, ದೇವರ ಭೇಟಿ ಬಲಿ, ಪಲ್ಲಕ್ಕಿ ಉತ್ಸವ; ದಿನಾಂಕ ೧೧ರಂದು ಮಧ್ಯಾಹ್ನ ನಿತ್ಯ ಬಲಿ, ರಾತ್ರಿ ಪಂಜುರ್ಲಿ ನೇಮ, ದರ್ಷನಬಲಿ, ವಸಂತ ಕಟ್ಟೆಪೂಜೆ, ಚಂದ್ರ ಮಂಡಲೋತ್ಸವ, ಅಶ್ವತ್ಥ ಕಟ್ಟೆಪೂಜೆ; ದಿನಾಂಕ ೧೨ರಂದು ಬೆಳಗ್ಗೆ ಉತ್ಸವ, ಮಧ್ಯಾಹ್ನ ವಿಶೇಷ ಚೆಂಡೆ ವಾದನ, ಮನ್ಮಹಾರಥಾರೋಹಣ, ರಾತ್ರಿ ಗಾನ ನೃತ್ಯ ವೈಭವ, ಶಾಂತಿ ಗುಡ್ಡೆಯಲ್ಲಿ ರಕ್ತೇಶ್ವರಿ ನೇಮ, ವಲಸರಿ ಇಳಿಯುವುದು, ಮಹಾರಥೋತ್ಸವ; ದಿನಾಂಕ ೧೩ರಂದು ಬೆಳಗ್ಗೆ ದೇವರ ದಿವ್ಯದರ್ಶನ, ತುಲಾಭಾರ ಸೇವೆ, ಮಧ್ಯಾಹ್ನ ಪಲ್ಲ ಪೂಜೆ, ಸಾಯಂಕಾಲ ಕೋಡಿ ಕಲ್ಲುರ್ಟಿ ಭಂಡಾರ ಬರುವುದು, ಕಲ್ಲುರ್ಟಿ ದೈವದ ನೇಮ, ಓಕುಳಿ, ದೇವರ ಬಲಿ ಉತ್ಸವ ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೆ ಸಮಾಪನಗೊಳ್ಳುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts