ಪಾಕಶಾಲೆಯೇ ವೈದ್ಯಶಾಲೆ

ಎಳ್ಳೆಣ್ಣೆಗಿದೆ ವೈದ್ಯಕೀಯ ಮಹತ್ವ

  • ಡಾ.ರವಿಶಂಕರ್ ಎ.ಜಿ.
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

www.bantwalnews.com

ಎಳ್ಳಿಗೆ ಸಂಸ್ಕೃತದಲ್ಲಿ ತಿಲ ಹಾಗೂ  ಎಣ್ಣೆಗೆ ತೈಲ ಎಂದು ಕರೆಯುತ್ತಾರೆ. “ತಿಲೋಧ್ಭವಂ ತೈಲಂ “ ಎಂಬ ವಾಕ್ಯವಿದೆ. ಅಂದರೆ  ಎಳ್ಳಿನಿಂದ ಉಧ್ಭವವಾದುದು ಎಣ್ಣೆ ಎಂದರ್ಥ. ಆದರೆ ವಾಡಿಕೆಯಲ್ಲಿ ಇತರ ದ್ರವ್ಯಗಳ ಎಣ್ಣೆಯನ್ನು ಸಹ ತೈಲ ಎಂದು ಕರೆಯುತ್ತಿದ್ದರೂ ,ನಿಜಾರ್ಥದಲ್ಲಿ ಎಣ್ಣೆಯ ಮೂಲದ್ರವ್ಯ ಎಳ್ಳು ಆಗಿದೆ. ಸಾಧಾರಣವಾಗಿ ಆಯುರ್ವೇದದ ಹೆಚ್ಚಿನ ದ್ರವ್ಯಗಳ ಎಣ್ಣೆಯನ್ನು ಕಾಯಿಸುವಾಗ ಎಳ್ಳೆಣ್ಣೆಯನ್ನೇ ಮೂಲ ಘಟಕವಾಗಿ ಬಳಸುತ್ತಾರೆ.

  1. ಎಳ್ಳೆಣ್ಣೆಯು ಉತ್ತಮ ವಾತಶಾಮಕವಾಗಿದ್ದು ಶರೀರಕ್ಕೆ ನಿತ್ಯ ಹಚ್ಚಿ ಸ್ನಾನ ಮಾಡುವುದರಿಂದ ದೇಹದ  ಪುಷ್ಟಿ ಹಾಗು ಬಲ ವೃದ್ಧಿಯಾಗುತ್ತದೆ,ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮ ಸುಕ್ಕು ಕಟ್ಟುವುದನ್ನು ತಡೆಗಟ್ಟುತ್ತದೆ .
  2. ಎಳ್ಳೆಣ್ಣೆಯನ್ನು ಹಚ್ಚಿ ಎಳೆ ಮಕ್ಕಳನ್ನು ಸ್ನಾನ ಮಾಡಿಸುವುದರಿಂದ ಮಕ್ಕಳ ಚರ್ಮ ಕಾಂತಿಯುತವಾಗುತ್ತದೆ, ರಕ್ತ ಸಂಚಾರ ಅಧಿಕವಾಗಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಮತ್ತು ಮೂಳೆಗಳು ಬಲಿಷ್ಟವಾಗುತ್ತವೆ.
  3. ಎಳ್ಳೆಣ್ಣೆಯನ್ನು ಹಚ್ಚುವುದರಿಂದ ಸಂಧು,ಸೊಂಟ,ಬೆನ್ನು ಇತ್ಯಾದಿಗಳ ನೋವು ಬಾರದಂತೆ ತಡೆಗಟ್ಟಬಹುದು ಮತ್ತು ಇರುವಂತಹ ನೋವುಗಳನ್ನು ಶೀಘ್ರವಾಗಿ ಗುಣಪಡಿಸಬಹುದು.
  4. ಎಳ್ಳೆಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯತುರಿಕೆ,ಹೊಟ್ಟು ನಿವಾರಣೆಯಾಗುತ್ತದೆ ಮತ್ತು ತಲೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ನೀಳವಾಗಿ ಬೆಳೆಯುತ್ತದೆ.
  5. ಎಳ್ಳೆಣ್ಣೆಯನ್ನು ಬಿಸಿಮಾಡಿ ನಿಯಮಿತವಾಗಿ ಕಿವಿಗೆ ಬಿಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ ಮತ್ತು ಕಿವಿಯ ಕೇಳುವ (Hearing) ಸಾಮರ್ಥ್ಯ ಸುಧಾರಣೆಯಾಗುತ್ತದೆ.
  6. ಬಿಸಿನೀರಿಗೆ 10 ಹನಿಯಷ್ಟು ಎಳ್ಳೆಣ್ಣೆ ಹಾಕಿ ಮುಖ ತೊಳೆಯುವುದರಿಂದ ಮುಖದ ಕೊಳೆ ನಿವಾರಣೆಯಾಗಿ ಮುಖಕ್ಕೆ ಕಾಂತಿಯನ್ನು ನೀಡುತ್ತದೆ.
  7. ಚಲಿಗಾಲದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಒಣ ಚರ್ಮ ಅಥವಾ ಚರ್ಮದ ಬಿರಿಯುವಿಕೆಯ ತೊಂದರೆ ಇದ್ದಾಗ ಪ್ರತಿನಿತ್ಯ ಎಳ್ಳೆಣ್ಣೆಯನ್ನು ಶರೀರಕ್ಕೆ ಹಚ್ಚಿ ಒಂದು ಘಂಟೆಯ ನಂತರ ಸ್ನಾನ ಮಾಡಬೇಕು.
  8. ಒಂದು ಕೋಳಿ ಮೊಟ್ಟೆಗೆ ಒಂದು ಚಮಚದಷ್ಟು ಎಳ್ಳೆಣ್ಣೆ ಮಿಶ್ರಣ ಮಾಡಿ ಮುಟ್ಟಿನ ಸಮಯದಲ್ಲಿ ಸೇವಿಸುವುದರಿಂದ ಅನಿಯಮಿತ ಮುಟ್ಟಿನ ತೊಂದರೆ ನಿವಾರಣೆಯಾಗುತ್ತದೆ.
  9. 10 ಗ್ರಾಂ ನಷ್ಟು ಅಕ್ಕಿಹಿಟ್ಟಿಗೆ 1 ಚಮಚ ಎಳ್ಳೆಣ್ಣೆ ಮತ್ತು 1 ತುಂಡು ಬೆಲ್ಲ ಮಿಶ್ರ ಮಾಡಿ ತಿಂದರೆ ಮುಟ್ಟಿನ ಅಲ್ಪ ರಕ್ತಸ್ರಾವದ ಸಮಸ್ಯೆ ನಿವಾರಣೆಯಾಗುತ್ತದೆ.
  10. ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಉರಿ,ನೋವು ಶೀಘ್ರ ಶಮನವಾಗುತ್ತದೆ ಮತ್ತು ಗಾಯ  ಬೇಗನೆ ವಾಸಿಯಾಗುತ್ತದೆ.
  11. ಪ್ರತಿನಿತ್ಯ ಬೆಳಗ್ಗೆ 4 ರಿಂದ 5 ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ವಸಡಿನ ರಕ್ತಸ್ರಾವ,ಹಲ್ಲಿನದುರ್ಬಲತೆ ಅಥವಾ ಅಕಾಲ ಹಲ್ಲಿನ ಉದುರುವಿಕೆ ,ಬಾಯಿಯ ದುರ್ಗಂಧ  ಇತ್ಯಾದಿಗಳು ನಿವಾರಣೆಯಾಗುತ್ತದೆ.
  12. ಪ್ರತಿನಿತ್ಯ ಒಂದು ಚಮಚದಷ್ಟು ಎಳ್ಳೆಣ್ಣೆಯನ್ನು ಸೇವಿಸುವುದರಿಂದ ಶರೀರದ ಸಂಧುಗಳ ನೋವು ,ಮಾಂಸಖಂಡಗಳ ನೋವು ಇತ್ಯಾದಿಗಳು ಬಾರದಂತೆ ತಡೆಗಟ್ಟುತ್ತದೆ.
  13. ಎಳ್ಳೆಣ್ಣೆ ಮತ್ತು ಅರಸಿನ ಪುಡಿಯ ಮಿಶ್ರಣವನ್ನು ಮಕ್ಕಳಲ್ಲಿ, ಅಲರ್ಜಿಯಾಗಿ ಬಂದ ತುರಿಕೆ,ಕಜ್ಜಿಗಳಿಗೆ(Napkin rashes etc) ಹಚ್ಚಿದರೆ ಶೀಘ್ರ ಶಮನವಾಗುತ್ತದೆ.
  14. ಸಂಜೆ ಹೊತ್ತಿನಲ್ಲಿ ಎಳ್ಳೆಣ್ಣೆಯನ್ನು ಕಣ್ಣಿನ ರೆಪ್ಪೆ ಮತ್ತು ಕಾಲಿನ ಅಡಿ ಭಾಗಕ್ಕೆ ಹಚ್ಚುವುದರಿಂದ ನಿದ್ರಾಹೀನತೆ ನಿವಾರಣೆ ಆಗುತ್ತದೆ ಮತ್ತು ಕಣ್ಣಿನ ದೃಷ್ಟಿ ಸಾಮರ್ಥ್ಯ ಕೂಡ ಜಾಸ್ತಿಯಾಗುತ್ತದೆ.
  15. ಕಾಲಿನ ಹಿಮ್ಮಡಿ ಒಡೆಯುವುದಿದ್ದರೆ ರಾತ್ರಿ ಮಲಗುವಾಗ ಕಾಲಿನ ಅಡಿಭಾಗಕ್ಕೆ ಎಳ್ಳೆಣ್ಣೆಯನ್ನು ಹಚ್ಚಿ ಹತ್ತಿಯ ಕಾಲು ಚೀಲ ಹಾಕಿ  ಮಲಗಬೇಕು.
  16. ಬಿಸಿನೀರಿಗೆ ಎಳ್ಳೆಣ್ಣೆಯನ್ನು ಹಾಕಿ ಸ್ತ್ರೀಯರು ಯೋನಿಯನ್ನು ತೊಳೆಯುವುದರಿಂದ ,ಅಲ್ಲಿಯ ತುರಿಕೆ ನಿವಾರಣೆಯಾಗುತ್ತದೆ ಮತ್ತು ಕೆಲವು ವಿಧದ ಬಿಳುಪು ಹೋಗುವುದು ಕಡಿಮೆಯಾಗುತ್ತದೆ.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts