ಮತ್ತೆ ಮತ್ತೆ ಮಾಧ್ಯಮಗಳು ಎಚ್ಚರಿಸಿದವು. ಆಡಳಿತ ನೋಟಿಸ್ ನೀಡಿದ್ದೇವೆ ಎಂದಿತು. ಆದರೆ ನೇತ್ರಾವತಿ ಒಡಲಿಗೆ ತ್ಯಾಜ್ಯಗಳು ಸೇರುವುದು ನಿಂತಿಲ್ಲ. ಯಾವುದೇ ಒಂದು ನಿಯಮ ಮಾಡಿ, ನಿಯಮ ಇರೋದೇ ಮುರೀಲಿಕ್ಕೆ ಎಂಬಂತೆ ಜನ ವರ್ತಿಸುತ್ತಾರೆ. ಜನರಿಗೆ ಇದರ ಅರಿವಾಗದಿದ್ದರೆ ಏನೂ ಪ್ರಯೋಜನವಿಲ್ಲ.
www.bantwalnews.com
ಸುಮ್ಮನೆ ಹಾಗೆ ಒಮ್ಮೆ ಬಂಟ್ವಾಳ ಜಕ್ರಿಬೆಟ್ಟಿನಿಂದ ತುಂಬೆ ಅಣೆಕಟ್ಟು ಸಂಗ್ರಹಿತ ಪ್ರದೇಶದವರೆಗೆ ನೇತ್ರಾವತಿ ನದಿಗುಂಟ ಹೋಗಿ.
ಅಲ್ಲಲ್ಲಿ ನದಿಗೆ ಕೊಳಚೆ ನೀರು ಸೇರುತ್ತಿದೆ. ಇದೇನೂ ದೊಡ್ಡ ವಿಷಯವಲ್ಲ. ಹಲವು ವರ್ಷಗಳಿಂದಲೂ ಹೀಗೆ ನೀರು ಸೇರುತ್ತಿದೆಯಲ್ಲ, ಈಗ್ಯಾಕೆ ಸುದ್ದಿ ಎನ್ನಬಹುದು. ಆದರೆ ನಾಲ್ಕೈದು ವರ್ಷಗಳ ಹಿಂದೇಕೆ, ಕಳೆದ ವರ್ಷದವರೆಗೂ ತುಂಬೆ ಅಣೆಕಟ್ಟಿನ ನೀರು ಸಂಗ್ರಹ ಇಷ್ಟೊಂದು ಇರಲಿಲ್ಲ. ಈಗಂತೂ ದಿಢೀರ್ ಸಂಗ್ರಹ. ನೀರು ಸಂಗ್ರಹಿಸುವುದು ತಪ್ಪಲ್ಲ. ಆದರೆ ನೀರಿಗೆ ಕೊಳಚೆ ಹಾಕಿದರೆ ಅದು ನಮ್ಮ ಬಳಿಯೇ ತಿರುಗಿ ಬರುತ್ತದೆ.
ನ್ಯೂಟನ್ ನ ಮೂರನೇ ನಿಯಮದಂತೆ!!!
ಇಲ್ಲಿ ಸ್ನಾನ, ಈಜು, ಬಟ್ಟೆ ತೊಳೆಯುವುದು, ನದಿಗೆ ಇಳಿಯುವುದು ಹಾಗೂ ಪ್ರಾಣಿಗಳನ್ನು ತೊಳೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂಬ ತುಕ್ಕುಹಿಡಿದ ಬೋರ್ಡಿನಂತೆ ನಿಯಮ, ಸೂಚನೆಗಳಿಗೂ ತುಕ್ಕು ಹಿಡಿದ ಕಾರಣ ಯಾವ ಪ್ರಯೋಜನವೂ ಆಗಿಲ್ಲ. ಇನ್ನು ದಂಡವೇ ಗತಿ ಎಂಬಷ್ಟರ ಮಟ್ಟಿಗೆ ನಾವೂ ಒಗ್ಗಿಹೋಗಿದ್ದೇವೆ.
ಈ ನೀರನ್ನು ನೀವೊಮ್ಮೆ ಮುಟ್ಟಿ ನೋಡಿ ಸ್ವಲ್ಪ ಹೊತ್ತಿನಲ್ಲಿ ಮೈಮೇಲೆ ತುರಿಕೆ ಏಳಬಹುದು. ಹೀಗಾಗಲು ಕಾರಣ ತ್ಯಾಜ್ಯಸಂಗ್ರಹ.
ನಿಜವಾದ ವಿಚಾರವೆಂದರೆ, ನದಿಗೆ ಮಳೆನೀರು ಸೇರಲೆಂದು ಬರುವ ತೋಡುಗಳಿವು. ಆದರೆ ಈಗ ಕೊಳಕು ತ್ಯಾಜ್ಯಗಳು ಬಂದು ಸೇರುತ್ತವೆ. ಕೆಲವೊಮ್ಮೆ ನೇರವಾಗಿ ನದಿಗೆ ತ್ಯಾಜ್ಯದ ಕಟ್ಟುಗಳನ್ನು ಎಸೆಯಲಾಗುತ್ತದೆ. ಕಸ, ಕಡ್ಡಿಗಳು, ಮದ್ಯದ ಬಾಟಲಿಗಳು, ವಿವಿಧ ತ್ಯಾಜ್ಯಗಳು, ಪ್ಲಾಸ್ಟಿಕ್ ಗಳು, ಮನೆಯ ಗಲೀಜು ಹೀಗೆ ನೇತ್ರಾವತಿ ತೀರದ ನೀರು ತ್ಯಾಜ್ಯದಿಂದ ತುಂಬಿ ತುಳುಕಲು ಆರಂಭಿಸಿತು.
ಹಿಂದೆಲ್ಲ ತ್ಯಾಜ್ಯಗಳು ನದಿಗೆ ಸೇರುವ ಮೊದಲೇ ಅಲ್ಲಲ್ಲೇ ಡ್ರೈನ್ ಆಗುತ್ತಿತ್ತು. ಒಣಗಿ ಹೋಗುತ್ತಿತ್ತು. ಆದರೆ ಈಗ ದಡದವರೆಗೂ ನೀರು ತುಂಬಿದೆ. ಬಂಟ್ವಾಳದಲ್ಲಿ ನೀವು ನೋಡುತ್ತಿರುವ ಜಲರಾಶಿ ತುಂಬೆ ಡ್ಯಾಂನಲ್ಲಿ ಸಂಗ್ರಹವಾದ ನೀರಿನ ಹಿಮ್ಮುಖ ಪ್ರವಾಹದ ಭಾಗ. ಹೀಗಾಗಿ ಬರುವ ಕೊಳಕೆಲ್ಲ ನೀರಿಗೆ ಸೇರುತ್ತದೆ. ಮತ್ತೆ ವಾಪಸ್ ದಡದತ್ತ ಸಾಗುತ್ತದೆ.
ಈ ವಿಚಾರ ಪುರಸಭಾ ಮೀಟಿಂಗ್ ನಲ್ಲಿ ಪ್ರಸ್ತಾಪಗೊಂಡಿದೆ. ಹಲವು ಬಾರಿ ಸಾರ್ವಜನಿಕರೂ ಗಮನ ಸೆಳೆದಿದ್ದಾರೆ. ತ್ಯಾಜ್ಯ ಬಿಡುವವರ ವಿರುದ್ಧ ನೋಟಿಸ್ ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದೆಲ್ಲ ಒತ್ತಟ್ಟಿಗಿರಲಿ, ಮೂಲತ: ಬೇಕಾಗಿರುವುದು ತ್ಯಾಜ್ಯವನ್ನು ಅಲ್ಲಿಗೆ ಎಸೆಯಲೇಬಾರದು ಎಂಬಂಥ ಮನೋಸ್ಥಿತಿ.
ನಿಯಮ ಇರೋದೇ ಮುರೀಲಿಕ್ಕೆ