ಕೇರಳ ಮುಖ್ಯಮಂತ್ರಿ ಮಂಗಳೂರಿಗೆ ಬಂದಿದ್ದಾರೆ. ಕೆಲವು ಗಂಟೆಗಳಲ್ಲಿ ಸೌಹಾರ್ದತಾ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಆದರೆ ಅದನ್ನು ವಿರೋಧಿಸಿ ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ಹಲವು ಬಸ್ಸುಗಳಿಗೆ ಕಲ್ಲು ತೂರಾಟ ನಡೆದಿದೆ. ಆದರೆ ಒಟ್ಟಾರೆಯಾಗಿ ಹರತಾಳ ಶಾಂತಿಯುತವಾಗಿ ನಡೆಯಿತು.. ಶನಿವಾರ ಮಧ್ಯಾಹ್ನದವರೆಗಿನ ತಾಜಾ ವರದಿ ಬಂಟ್ವಾಳನ್ಯೂಸ್ ನಲ್ಲಿದೆ…
www.bantwalnews.com report
ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮುಖ್ಯ ಬಸ್ ನಿಲ್ದಾಣದಲ್ಲಿ ವಿರಳ ಸಂಖ್ಯೆಯಲ್ಲಿ ಜನರು ಬಸ್ಸುಗಳಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಆದರೆ ಕೇವಲ ಕೆಎಸ್ಸಾರ್ಟಿಸಿ ಬಸ್ಸುಗಳು ಮಾತ್ರ ಓಡಾಟ ನಡೆಸುತ್ತಿದ್ದು, ಅವುಗಳೂ ಖಾಲಿ ಸಂಚರಿಸುತ್ತಿದ್ದವು. ಮೂಡುಬಿದರೆ, ಸರಪಾಡಿ, ಸಜೀಪ ಸಹಿತ ಹಳ್ಳಿ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್ಸುಗಳು ನಿಲ್ಲುವ ಜಾಗ ಖಾಲಿಯಾಗಿತ್ತು. ಸದಾ ಗಿಜಿಗುಟ್ಟುತ್ತಿದ್ದ ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿಂದು ಸಂಪೂರ್ಣ ಬಂದ್ ವಾತಾವರಣ ಕಂಡುಬಂತು.
ಬ್ಯಾಂಕುಗಳು ರಜೆಯಾಗಿದ್ದರೆ, ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಕೋರ್ಟು ತೆರೆದಿದ್ದರೂ ವಕೀಲರ ಕಚೇರಿಗಳಿಗೆ ಕಕ್ಷಿದಾರರು ಬಾರದ ಕಾರಣ, ಅಲ್ಲೂ ಬಂದ್ ಎಫೆಕ್ಟ್ ಕಂಡುಬಂತು. ಮೆಡಿಕಲ್ ಶಾಪ್ ಹಾಗೂ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದುದು ಬಿಟ್ಟರೆ ಇಡೀ ಬಿ.ಸಿ.ರೋಡ್ ನ ಪ್ರಮುಖ ವಾಣಿಜ್ಯ ವ್ಯವಹಾರಗಳೆಲ್ಲವೂ ಬಂದ್ ಆಗಿದ್ದವು. ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಸಚಿವರ ಕಚೇರಿ, ತಾಲೂಕು ಪಂಚಾಯಿತಿ ಕಚೇರಿಯಲ್ಲಿ ರಜೆಯ ವಾತಾವರಣ ಇದ್ದಂತಿತ್ತು. ಹೋಟೆಲುಗಳು, ಕ್ಯಾಂಟೀನುಗಳು ಬಂದ್ ಆಗಿದ್ದ ಕಾರಣ ಪೇಟೆಗೆ ಬಂದಿದ್ದವರು ಪರದಾಡಬೇಕಾಯಿತು.
ಆಟೋ ರಿಕ್ಷಾಗಳು ಸ್ಟ್ಯಾಂಡಿನಲ್ಲಿದ್ದರೂ ಗ್ರಾಹಕರು ಬಾರದ ಕಾರಣ ಕ್ಯೂನಲ್ಲೇ ನಿಲ್ಲಬೇಕಾಯಿತು. ಟೂರಿಸ್ಟ್ ಟ್ಯಾಕ್ಸಿಗಳೂ ಕಡಿಮೆ ಸಂಖ್ಯೆಯಲ್ಲಿತ್ತು. ಖಾಸಗಿ ವಾಹನಗಳ ಓಡಾಟ ಅಬಾಧಿತವಾಗಿತ್ತು.
ಸರಕಾರಿ ಶಾಲೆಗಳಲ್ಲಿ ವಿರಳ ಹಾಜರಾತಿ ಇದ್ದರೆ, ಕೆಲ ಖಾಸಗಿ ಶಾಲೆಗಳಿಗೆ ರಜೆ ಇತ್ತು. ಪ್ರಥಮ ಪಿಯುಸಿ ಪರೀಕ್ಷೆ ಬರೆಯುವ ಮಕ್ಕಳು ಕಷ್ಟಪಟ್ಟು ಪರೀಕ್ಷಾ ಕೇಂದ್ರ ತಲುಪುವಂತಾಯಿತು.
ಬಂಟ್ವಾಳ ಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಬಂಟ್ವಾಳದ ರಸ್ತೆಗಳು ಶನಿವಾರ ಖಾಲಿ ಖಾಲಿಯಾಗಿದ್ದವು.
ಮೇಲ್ಕಾರ್ ನಲ್ಲಿ ಕೆಲ ಅಂಗಡಿಗಳು ತೆರೆದಿದ್ದರೆ, ಕಲ್ಲಡ್ಕ ಪೇಟೆ ಸಂಪೂರ್ಣ ಬಂದ್ ಆಚರಿಸಿತು. ಮಾಣಿಯಲ್ಲಿ ವಾರದ ಸಂತೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದ್ದು, ಬಹುತೇಕ ಅಂಗಡಿಗಳು ಬಾಗಿಲು ತೆರೆದಿದ್ದವು.
ಬಿ.ಸಿ.ರೋಡ್, ಬಂಟ್ವಾಳ, ವಿಟ್ಲ ಪೇಟೆಯಲ್ಲಿ ಔಷಧಿ, ಹಾಲು ಹಾಗೂ ದಿನಪತ್ರಿಕೆ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಖಾಸಗಿ ಬಸ್‌ಗಳು ಹಾಗೂ ಕಾರುಗಳು ಬೆಳಿಗ್ಗೆನಿಂದಲೇ ರಸ್ತೆಗೆ ಇಳಿಯಲಿಲ್ಲ. ಕೆಲವು ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳು ಎಂದಿನಂತೆ ಸಂಚಾರ ಮಾಡುತ್ತಿದ್ದರೆ, ಜನಸಂಚಾರ ವಿರಳವಿತ್ತು. ವಿಟ್ಲ ಪೇಟೆ ಸಂಪೂರ್ಣ ಬಂದ್ ಆಗಿದ್ದು, ಮೇಗಿನಪೇಟೆ ಒಕ್ಕೆತ್ತೂರು, ಮಂಗಳಪದವು ಎಂಬಲ್ಲಿ ಅಂಗಡಿಗಳ ಬಾಗಿಲು ತೆರೆದಿದ್ದವು. ಕನ್ಯಾನದಲ್ಲಿ ಬಂದ್ ಪರಿಣಾಮ ಅಷ್ಟೋಂದಿರಲಿಲ್ಲ.
ವಿಟ್ಲದಲ್ಲಿ ಕಲ್ಲು ತೂರಾಟ
ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ಹಲವು ಬಸ್‌ಗಳಿಗೆ ಕಲ್ಲು ತೂರಾಟ, ಲಾರಿಯೊಂದಕ್ಕೆ ಬೆಂಕಿ, ಹಾಗೂ ಸರ್ಕಾರಿ ಬಸ್ಸಿಗೆ ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣ ನಡೆದಿದೆ.
ವಿಟ್ಲದ ಕುದ್ದುಪದವು ಎಂಬಲ್ಲಿ ಕೇರಳ ಖಾಸಗಿ ಬಸ್ಸಿಗೆ, ಕನ್ಯಾನದ ಮಲ್ಲಿಕಟ್ಟೆ ಹಾಗೂ ವಿಟ್ಲ ಪೇಟೆಯಲ್ಲಿ ಮೂರು ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿಗೆ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆಯೂ ನಡೆದಿದೆ. ಸ್ಥಳೀಯರು ಹಾಗೂ ಬಸ್ ಸಿಬ್ಬಂದಿ ಕೂಡಲೇ ಎಚ್ಚೆತ್ತ ಕಾರಣ ಅನಾಹುತ ತಪ್ಪಿತು.
ಒಕ್ಕೆತ್ತೂರು ನಿವಾಸಿ ಅಬೂಬಕ್ಕರ್ ಹೈವೆ ಅವರು ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಲಾರಿನ ಮುಂಭಾಗ ಸಂಪೂರ್ಣವಾಗಿ ಕರಕಲಾಗಿದೆ.
ಕಂಬಳಬೆಟ್ಟು ಹಾಗೂ ಉರಿಮಜಲು ಎಂಬಲ್ಲಿ ಆಲದ ಮರದ ಗೆಲ್ಲುಗಳನ್ನು ಕಡಿದು ರಸ್ತೆ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿದರೆ, ಕಂಬಳಬೆಟ್ಟು ಹಾಗೂ ಮಿತ್ತೂರು ರೇಲ್ವೇ ಸೇತುವ ಕೆಳಗಡೆ ರಸ್ತೆ ಮಧ್ಯೆದಲ್ಲಿ ಚಕ್ರಕ್ಕೆ ಬೆಂಕಿ ಹಚ್ಚಲಾಗಿದೆ.
ವಿಟ್ಲದ ಚಂದಳಿಕೆ ಎಂಬಲ್ಲಿ ರಸ್ತೆ ಬಂದ್ ಮಾಡಲು ಯತ್ನಿಸಿದ ಆರೋಪದಲ್ಲಿ ಎರಡು ದ್ವಿಚಕ್ರ ವಾಹನವನ್ನು ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸ ಇಲಾಖೆ ಪುತ್ತೂರು ಕಡೆಗೆ ತೆರಳುವ ಸರ್ಕಾರಿ ಬಸ್‌ಗಳಿಗೆ ರಕ್ಷಣೆ ಒದಗಿಸಿದ್ದಾರೆ. ವಿಟ್ಲದಿಂದ ಪುತ್ತೂರು ವರೆಗೆ ಬಸ್ಸಿನ ಮುಂದೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಬೈಕಿನಲ್ಲಿ ತೆರಳುವ ಮೂಲಕ ರಕ್ಷಣೆ ನೀಡಿದರು.
ಈ ಎಲ್ಲ ಘಟನೆ ಹಿನ್ನೆಲೆಯಲ್ಲಿ ವಿಟ್ಲ ಪರಿಸರದಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.