ಬಂಟ್ವಾಳ

ಬಹುಗ್ರಾಮ ಕುಡಿಯುವ ನೀರು ಸಜೀಪನಡು ಗ್ರಾಮಕ್ಕೆ ಒದಗಿಸಿ

ಸಜೀಪನಡು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರು ಒದಗಿಸದಿದ್ದಲ್ಲಿ ತೀವ್ರ ತರದ ಪ್ರತಿಭಟನೆ ಮಾಡುತ್ತೇವೆ.  ನಮ್ಮ ಗ್ರಾಮವನ್ನು ಬಳಸಿ ಬೇರೆ ಗ್ರಾಮಕ್ಕೆ ನೀರು ಕೊಡಲು ಅವಕಾಶ  ನೀಡುವುದಿಲ್ಲ. ಇದಕ್ಕಾಗಿ ಸಾರ್ವಜನಿಕರ ಆಶಯದಂತೆ ನ್ಯಾಯಪರ ಹೋರಾಟ ಮಾಡುತ್ತೇವೆ ಎಂದು ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಹೇಳಿದ್ದಾರೆ.

 ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬ ಪ್ರದೇಶದಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿ ಇದೀಗ ಕೊನೆಯ ಹಂತದಲ್ಲಿದೆ. ಇದರ ಮೊದಲನೇ ಯೋಜನೆಯಾದ ಕರೋಪಾಡಿ ಯೋಜನೆಯಡಿಯಲ್ಲಿ ೫ ಗ್ರಾಮಕ್ಕೆ ನೀರು ಸರಬರಾಜು ಆಗಲು ಕ್ಷಣಗಣನೆಯಲ್ಲಿದೆ. ಇನ್ನೊಂದು ಯೋಜನೆಯಾದ ಸಜೀಪಮುನ್ನೂರು ಯೋಜನೆ ಪ್ರಾರಂಭವಾಗುವ ಹಂತದಲ್ಲಿದೆ. ಸಜೀಪನಡು ಗ್ರಾಮದಲ್ಲಿರುವ ಸ.ನಂ:೧೦೯/೨ಪಿಯಲ್ಲಿ ಇದರ ಪ್ಲಾಂಟೇಷನ್ ಹೊಂದಿದ ಕಾರಣ ಪ್ರಥಮ ಹಂತದಲ್ಲಿಯೇ ನಮ್ಮ ಗ್ರಾಮಕ್ಕೆ ನೀರು ಒದಗಿಸಬೇಕೆಂದು ನಮ್ಮ ಕ್ಷೇತ್ರದ ಶಾಸಕರಲ್ಲಿ ಹಾಗೂ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಯವರಲ್ಲಿ ಮನವಿಯನ್ನೂ ಮಾಡಿಕೊಂಡಿರುತ್ತೇವೆ. ಆದರೂ ನಮ್ಮ ಈ ಬೇಡಿಕೆ ಈಡೇರಿರಲಿಲ್ಲ. ತದ ನಂತರ ದ್ವಿತೀಯ ಹಂತದಲ್ಲಿ ನೀರು ನೀಡುತ್ತೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿರುತ್ತಾರೆ. ಇತ್ತೀಚಿನ ಗ್ರಾಮದ ಸಾಮಾನ್ಯ ಸಭೆಯಲ್ಲಿ ನೀರು ಒದಗಿಸದಿದ್ದಲ್ಲಿ ತೀವೃ ತರಹದ ಪ್ರತಿಭಟನೆ ಮಾಡುವುದು ಎಂದು ನಿರ್ಣಯಿಸಲಾಗಿದ್ದು ಇದರ ಪ್ರತಿಯನ್ನು ಉಸ್ತುವಾರಿ ಸಚಿವರಿಗೆ, ಆಹಾರ ಖಾತೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಜೀಪನಡು ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂಬ ಭರವಸೆ ನೀಡಿದ ಕಾರಣ ಮನವಿಯನ್ನು ಕೊಟ್ಟಿರುವುದಿಲ್ಲ. ಆದರೆ ಇತ್ತೀಚೆಗೆ  ನೀರು ಒದಗಿಸುವ ಬಗ್ಗೆ ಸಜೀಪನಡು ಗ್ರಾಮದ ಹೆಸರೇ ಇಲ್ಲವಾಗಿದೆ. ಸಜೀಪನಡು ಗ್ರಾಮದಲ್ಲಿ ಸರಕಾರಿ ಜಾಗ ಇರುವುದು ಕೆಲವೇ ಕೆಲವು ಎಕರೆ. ಅದರಲ್ಲಿ ಒಂಭತ್ತು ಎಕರೆ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ, ಎರಡು ಎಕರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೀಸಲಿರಿಸಿದೆ.

ಬಂಟ್ವಾಳ ಕ್ಷೇತ್ರದಿಂದ ನಮ್ಮ ಗ್ರಾಮವನ್ನು ಎಲ್ಲದಕ್ಕೂ ಬಳಸಿ ಕೊನೆಗೆ ಎಂಜಲು ಎಲೆಯಂತೆ ಬಿಸಾಡಲು ಅವಕಾಶ ಮಾಡಿಕೊಡುವುದಿಲ್ಲ. ನಮ್ಮಲ್ಲಿರುವ ಸರಕಾರಿ ಜಾಗವನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಮೀಸಲಿಟ್ಟ ಕಾರಣ ನಮ್ಮ ಗ್ರಾಮ ಸರಕಾರಿ ಜಾಗ ರಹಿತ ಗ್ರಾಮವಾಗಿದೆ.  ಹೆಚ್ಚು ಬಡವರು ಇರುವ ಗ್ರಾಮವಾದ ನಮ್ಮ ಗ್ರಾಮದಲ್ಲಿ ನಿವೇಶನಕ್ಕಾಗಿ ನೂರಾರು ಅರ್ಜಿಗಳು ಬಂದರೂ ಕೈ ಕಟ್ಟಿ ಕುಳಿತುಕೊಳ್ಳುವಂಥ ಪರಿಸ್ಥಿತಿ ಬಂದಿದೆ. 94ಸಿಸಿ ಯಡಿಯಲ್ಲಿ 116 ಅರ್ಜಿಗಳು ಬಂದಿದ್ದು ಘನತ್ಯಾಜ್ಯ ಘಟಕದ ಕಾರಣದಿಂದ ಎಲ್ಲ ಅರ್ಜಿಗಳು ತಿರಸ್ಕೃತಗೊಂಡಿದೆ. ನಮ್ಮ ನ್ಯಾಯಪರ ಬೇಡಿಕೆಯನ್ನು ಗೌರವಾನ್ವಿತ ಮುಖ್ಯಮಂತ್ರಿಯವರಿಗೆ, ಕಂದಾಯ ಸಚಿವರಿಗೆ, ಗ್ರಾಮೀಣಾಭಿವೃದ್ಧಿ ಸಚಿವರಿಗೆ, ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ನಮ್ಮ ಶಾಸಕರೂ, ಆಹಾರ ಖಾತೆ ಸಚಿವರಾದ  ಯು.ಟಿ.ಖಾದರ್‌ರವರಿಗೆ, ನಮ್ಮ ಗ್ರಾಮದ ಜನಪ್ರತಿನಿಧಿಗಳು ಹಾಗೂ ನಾಯಕರುಗಳು ನಿಯೋಗದೊಂದಿಗೆ ಭೇಟಿ ಕೊಟ್ಟು ಮನವಿ ಅರ್ಪಿಸಿ ನ್ಯಾಯ ಒದಗಿಸಕೊಡಬೇಕೆಂದು ಬೇಡಿಕೆಯನ್ನು ಕೋರಲಿದ್ದೇವೆ ಎಂದು ಅವರು ಹೇಳಿದ್ದಾರೆ.     

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts