ಕವರ್ ಸ್ಟೋರಿ

ಅಲ್ಲಿಂದ ಇಲ್ಲಿಗೆ, ನೀರು ಸರಬರಾಜಿಗೆ ತಯಾರಿ

ಒಂದೆಡೆ ಉರಿಸೆಖೆ, ಮತ್ತೊಂದೆಡೆ ನೀರಿನ ಮೂಲವನ್ನು ಗಟ್ಟಿಮಾಡಿಕೊಳ್ಳುವ ತವಕ. ನದಿಯಿಂದ ನೀರು ಹಳ್ಳಿಗಳಿಗೆ ಹರಿಸುವ ಯೋಜನೆಯೊಂದು ಬಂಟ್ವಾಳದಲ್ಲಿ ಸಿದ್ಧವಾಗುತ್ತಿದೆ. ಇದಕ್ಕೆಲ್ಲ ಮೂಲಾಧಾರ ನೇತ್ರಾವತಿ ಅಥವಾ ಇತರ ನದಿಗಳು ಎಂಬುದು ಗಮನಾರ್ಹ.

  • ಹರೀಶ ಮಾಂಬಾಡಿ

www.bantwalnews.com

ಕವರ್ ಸ್ಟೋರಿ

ಕಳೆದ ವರ್ಷ ಮಳೆ ಇಲ್ಲ ಎಂಬ ಅಂಕಿ ಅಂಶ ಒಂದೆಡೆಯಾದರೆ, ಮತ್ತೊಂದೆಡೆ ಈ ಲೆಕ್ಕಾಚಾರಗಳು ಆರಂಭಗೊಳ್ಳುವ ಮೊದಲೇ ಇಡೀ ಬಂಟ್ವಾಳ ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಬರಬಾರದು ಎಂಬ ಉದ್ದೇಶದಿಂದ ಯೋಜನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಅದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ಕರೋಪಾಡಿ ಮತ್ತು ಸಂಗಬೆಟ್ಟು ಯೋಜನೆಗಳೀಗ ಸಿದ್ಧವಾಗುತ್ತಿದೆ. ಕರೋಪಾಡಿ ಕೊನೇ ಹಂತದಲ್ಲಿದೆ.

ಇಡೀ ತಾಲೂಕಿಗೆ ಸುಮಾರು 158 ಕೋಟಿ ರೂ ವೆಚ್ಚದಲ್ಲಿ ಕುಡಿಯಲು ನೀರೊದಗಿಸುವ ಯೋಜನೆಯಿದು.

ಸಂಗಬೆಟ್ಟು ಯೋಜನೆಗೆ ಫಲ್ಗುಣಿ ನದಿ ನೀರು ಆಧಾರವಾದರೆ ಕರೋಪಾಡಿಗೆ ನೇತ್ರಾವತಿ ನೀರು ಮೂಲಾಧಾರ. ಈಗ ಕರೋಪಾಡಿ ಯೋಜನೆ ಮುಕ್ತಾಯದ ಹಂತದಲ್ಲಿದ್ದು ಚಾಲನೆ ನೀಡಲು ದಿನಗಣನೆ ಆರಂಭವಾಗಿದೆ.

ಕರೋಪಾಡಿ ಗ್ರಾಮ ಮತ್ತು ಇತರ 79 ಜನವಸತಿ ಪ್ರದೇಶಗಳಿಗೆ ಅಂದರೆ ಕರೋಪಾಡಿ, ಕನ್ಯಾನ, ಕೊಳ್ನಾಡು, ಸಾಲೆತ್ತೂರು, ವಿಟ್ಲ ಪಡ್ನೂರು ಸೇರಿದಂತೆ ಐದು ಗ್ರಾಮ, ಐದು ಪಂಚಾಯತ್ ಗಳ ಫಲಾನುಭವಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಲಭ್ಯ. 25 ಕೋಟಿ ರೂಪಾಯಿ ಇದರ ವೆಚ್ಚ.4.1 ಎಂ.ಎಲ್.ಡಿ ನೀರು ಇಲ್ಲಿಗೆ ಅಗತ್ಯವಿದೆ.. 55 ಲೀಟರ್ ಪ್ರತಿ ದಿನಕ್ಕೆ ಎಂಬ ಲೆಕ್ಕಾಚಾರದಂತೆ 4.1 ಮಿಲಿಯನ್ ಲೀಟರ್ ಪ್ರತಿದಿನ ಎಂಬ ಅಂದಾಜಿನಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ.

ಯೋಜನೆಯ ಹೆಸರು ಕರೋಪಾಡಿಯಾದರೂ ಕೊಳ್ನಾಡು, ಸಾಲೆತ್ತೂರು, ಕನ್ಯಾನ, ವಿಟ್ಲಪಡ್ನೂರು ಗ್ರಾಮಗಳೂ ಕರೋಪಾಡಿಯೊಂದಿಗೆ ಸೇರುವ ಕಾರಣ, ಈ ಯೋಜನೆ ವ್ಯಾಪ್ತಿ ವಿಸ್ತಾರವಾಗಿದೆ. ಇದಕ್ಕೆ ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹಿಸಲಾದ ನೇತ್ರಾವತಿ ನದಿಯ ಹಿನ್ನೀರೇ ಮೂಲಾಧಾರ. ಸಜಿಪಮುನ್ನೂರು ಗ್ರಾಮದ ಹಾಲಾಡಿ ಎಂಬಲ್ಲಿ 225 ಎಚ್.ಪಿಯ ಎರಡು ಪಂಪ್ ಗಳು ನೀರೆಳೆಯಲು ಸದಾ ಸನ್ನದ್ಧ. ಇಲ್ಲಿ ಅಗತ್ಯವಿರುವ ನೀರನ್ನು ಪಂಪ್ ಮಾಡಿ, ಕಂಚಿನಡ್ಕಪದವು ಎಂಬಲ್ಲಿರುವ ಏಳೂವರೆ ಲಕ್ಷ ಲೀಟರ್ ಸಾಮರ್ಥ್ಯದ ಟ್ರೀಟ್ ಮೆಂಟ್ ಪ್ಲಾಂಟ್ ನಲ್ಲಿ ನೀರು ಶುದ್ಧೀಕರಿಸಲಾಗುತ್ತದೆ. ಅಲ್ಲಿಂದ ನೀರನ್ನು ಮಂಚಿಪದವು, ಕುಡ್ತಮುಗೇರು, ಬಾರೆಬೆಟ್ಟು ಹೀಗೆ ವಿವಿಧೆಡೆ ಸಂಪ್ ಗಳಲ್ಲಿ ಶೇಖರಿಸಿಡುವ ವ್ಯವಸ್ಥೆ ಮಾಡಿ ಪ್ರತಿಯೊಂದು ಪಂಚಾಯಿತಿಗಳಿಗೂ ಒದಗಿಸಲಾಗುತ್ತದೆ. ಈ ಸಂದರ್ಭ ಪ್ರತಿಯೊಂದು ಪಂಚಾಯಿತಿಗೂ ಮೀಟರಿಂಗ್ ವ್ಯವಸ್ಥೆ ಮೂಲಕ ನೀರು ಸರಿಯಾದ ರೀತಿಯಲ್ಲಿ ವಿತರಣೆಯಾಗುವಂತೆ ನೋಡಿಕೊಳ್ಳಬೇಕು.

ಸಂಗಬೆಟ್ಟು ಯೋಜನೆ:ಫಲ್ಗುಣಿ ನದಿಯಿಂದ ಪಂಪ್ ಮಾಡಿ, ಶುದ್ಧೀಕರಿಸಿ, ಒಟ್ಟು 16 ಗ್ರಾಮಗಳು ಏಳು ಪಂಚಾಯಿತಿಗಳಿಗೆ ನೀರೊದಗಿಸುವ 36 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯಿದು. ಸಂಗಬೆಟ್ಟು ಮತ್ತು ಇತರ ೬೫ ಜನವಸತಿ ಪ್ರದೇಶಗಳಿಗೆ ನೀರುಣಿಸುವ ಯೋಜನೆ ವ್ಯಾಪ್ತಿಯಲ್ಲಿ ಸಂಗಬೆಟ್ಟು, ರಾಯಿ, ಅಮ್ಟಾಡಿ, ಪಂಜಿಕಲ್ಲು, ಕುಕ್ಕಿಪ್ಪಾಡಿ, ಕಳ್ಳಿಗೆಯ ಕೆಲ ಭಾಗ ಬರುತ್ತದೆ. ಕರೋಪಾಡಿ ಯೋಜನೆ ಬಳಿಕ ಸಿದ್ಧವಾಗುತ್ತಿರುವ ಸಂಗಬೆಟ್ಟು ಯೋಜನೆ ಸಂಪೂರ್ಣವಾದರೆ ಆ ಭಾಗದ ಜನರ ನೀರಿನ ಸಮಸ್ಯೆ ಬಹುತೇಕ ಪರಿಹಾರವಾದಂತೆ.

ಈ ಯೋಜನೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ. ಅದಲ್ಲದೆ, ಸರಿಯಾಗಿ ನೀರು ವಿತರಣೆಯಾಗುತ್ತದೆಯೋ ಎಂಬುದನ್ನು ನೋಡಿಕೊಳ್ಳಲು ಸರಕಾರದ ನಿರ್ದೇಶನದ ಪ್ರಕಾರ ಕರ್ನಾಟಕ ಪಂಚಾಯತ್ ರಾಜ್ ಅನಿಯಮದ ಪ್ರಕಾರ ಗ್ರಾಮಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ.  ಇದರಲ್ಲಿ ಗ್ರಾಪಂಗಳ ಅಧ್ಯಕ್ಷರು, ಜಿಲ್ಲೆಯ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಲಾಖೆಯ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ, ಪಿಆರ್.ಇ.ಡಿ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಂಬಂತ ವಿದ್ಯುತ್ ಸರಬರಾಜು ಕಂಪನಿಯ ಸಹಾಯಕ ಕಾರ್ಯಪಾಲಕ ಅಭಿಯಂತರ, ಎಂ.ವಿ.ಎಸ್. ವ್ಯಾಪ್ತಿಯಲ್ಲಿ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಕಾರೇತರ ಸಂಸ್ಥೆಗಳ ಗರಿಷ್ಠ ಮೂವರು ತಜ್ಞರು, ಟ್ರೀಟ್ ಮೆಂಟ್ ಘಟಕ ಇರುವ ಗ್ರಾಮೀಣ ನೀರು ಸರಬರಾಜು ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್,ಪಿಡಿಒ ಹೀಗೆ ಪಾರದರ್ಶಕವಾಗಿ ಸಮಿತಿ ನೀರು ಪೂರೈಕೆಯ ಲೋಪದೋಷಗಳ ನಿವಾರಣೆಗೆ ಕೆಲಸ ಮಾಡಬೇಕು.

ಏನೇ ಆದರೂ ಇವಕ್ಕೆಲ್ಲ ನೇತ್ರಾವತಿಯಲ್ಲಿ ಧಾರಾಳ ನೀರಿರಬೇಕು. ಈಗಾಗಲೇ ಎತ್ತಿನಹೊಳೆ ಯೋಜನೆ ಕೆಲಸ ಆರಂಭಗೊಂಡಿದೆ. ಎತ್ತಿನಹೊಳೆ ಯೋಜನೆ ಸಂದರ್ಭ ನೇತ್ರಾವತಿ ನದೀ ನೀರು ವೇಸ್ಟ್ ಆಗುತ್ತದೆ ಎಂಬ ಹೇಳಿಕೆ ಇತ್ತು. ಈಗ ಇಲ್ಲೇ ನೀರಿಲ್ಲ ಎಂಬಂತಾಗಿದೆ. ಕಳೆದ ವರ್ಷ ಮಳೆ ಕಡಿಮೆ,  ಬರ ಘೋಷಣೆಯಾಗಿದೆ. ನೇತ್ರಾವತಿಯಲ್ಲಿ ನೀರಿದ್ದರೆ ತಾನೇ ಬಹುಗ್ರಾಮ ಕುಡಿಯುವ ನೀರು ಯಶಸ್ವಿ ಅನುಷ್ಠಾನಗೊಳ್ಳುವುದು, ನದಿಯಲ್ಲಿ ನೀರು ಇರಬೇಕಾದರೆ ನಾವು ಏನು ಮಾಡಬೇಕು?

ಗಂಭೀರ ಚಿಂತನೆಗೆ ಇದು ಸಕಾಲ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts