ಸಹಕಾರಿ ಸಂಸ್ಥೆಗಳು ಗ್ರಾಹಕರನ್ನು ಸತಾಯಿಸದೆ ಸಕಾಲದಲ್ಲಿ ಸಾಲ ನೀಡುವ ಮೂಲಕ ಉತ್ತಮ ಸೇವೆಯನ್ನು ನೀಡುವುದು ಸಹಕಾರಿ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಬುಧವಾರ ಕಲ್ಲಡ್ಕ ಶ್ರೀರಾಮ ಮಂದಿರದ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ರಾಮ ಸೌಹಾರ್ದ ಸಹಕಾರಿ ನಿಯಮಿತ ಕಲ್ಲಡ್ಕ ಶಾಖೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಸಹಕಾರಿ ಸಂಘಗಳು ದಿನನಿತ್ಯ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ಎಲ್ಲರ ಸಹಕಾರದಿಂದ ಸರ್ವರ ವಿಕಾಸವಾಗುವುದು. ಸಾರ್ವಜನಿಕ ರಂಗದಲ್ಲಿ ಸರಕಾರದ ಏಕಸ್ವಾಮ್ಯವಿಲ್ಲದೆ ಸಹಕಾರಿ ಸಂಸ್ಥೆಗಳ ಆರೋಗ್ಯಕರ ಪೈಪೋಟಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ಸಿಗುತ್ತದೆ. ಸಹಕಾರಿ ಸಂಘಗಳು ಗ್ರಾಹಕರನ್ನು ದೇವರೆಂದು ತಿಳಿದು ಉತ್ತಮ ಸೇವೆ ನೀಡಬೇಕು. ಆಡಳಿತ ಮಂಡಳಿ ಮತ್ತು ನೌಕರರು ಜನರೊಂದಿಗೆ ಉತ್ತಮ ಸಂಬಂಧ ಇಟ್ಟು ಕೊಂಡಾಗ ಸಹಕಾರಿ ಸಂಸ್ಥೆ ಬೆಳೆಯುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಮುಖ್ಯ ಅತಿಥಿಯಾಗಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಠೇವಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕಲ್ಲಡ್ಕವು ಶ್ರೀ ರಾಮ ಮಂದಿರದ ಮೂಲಕ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮಾತ್ರವಲ್ಲದೆ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯುವುದಕ್ಕೆ ಡಾ. ಪ್ರಭಾಕರ ಭಟ್ ಮಾರ್ಗದರ್ಶನವಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಯ ಮೂಲಕ ಮೀಟರ್ ಬಡ್ಡಿಗೆ ಕಡಿವಾಣ ಹಾಕಿದ್ದು ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಡಿಕೆ ಬೆಳೆಗಾರರಿಗೆ ಸೂಕ್ತ ಬೆಲೆ ನೀಡುವಂತೆ ಕ್ಯಾಂಪ್ಕೋ ಸಂಸ್ಥೆ ನಿರಂತರ ಪ್ರಯತ್ನಿಸಿದ್ದು ರೈತರಿಗೆ ಸುಭಿಕ್ಷೆಯ ಕಾಲ ಬಂದಿದೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ನಿರ್ದೇಶಕರುಗಳಾದ ಬಿ. ನಾರಾಯಣ ಸೋಮಾಯಾಜಿ, ವಸಂತ ಮಾಧವ, ನಾಗೇಶ್ ಕಲ್ಲಡ್ಕ, ಕೃಷ್ಣ ಪ್ರಸಾದ್ ಕೆ.ಎನ್., ರಮೇಶ್ ಎನ್, ವಸಂತ ಬಲ್ಲಾಳ್, ರವಿರಾಜ ಕಣಂತೂರು, ಕುಶಾಲಪ್ಪ ಅಮ್ಟೂರು, ಮಲ್ಲಿಕಾ ಆರ್.ಶೆಟ್ಟಿ, ಭಗಿನಿ ಗಂಗಾ, ಪ್ರೇಮ, ಕಾನೂನು ಸಲಹೆಗಾರ ಸತೀಶ್ ಕುಮಾರ್ ಶಿವಗಿರಿ, ಪ್ರಧಾನ ವ್ಯವಸ್ಥಾಪಕ ಎಂ. ಉಗ್ಗಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್ ಸ್ವಾಗತಿಸಿ, ಉಪಾಧ್ಯಕ್ಷ ಸುಜಿತ್ ಕುಮಾರ್ ವಂದಿಸಿದರು. ನಿರ್ದೇಶಕ ಯತೀನ್ ಕುಮಾರ್ ನಿರೂಪಿಸಿದರು.