www.bantwalnews.com report
ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣ ಅಭಿಯಾನ ನಡೆಸುತ್ತಿರುವ ಬಂಟ್ವಾಳ ತಾಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ರಾಜಸ್ಥಾನದಲ್ಲೂ 5 ದಿನ ಶಿಕ್ಷಣ ಜಾಗೃತಿ ಅಭಿಯಾನ ನಡೆಸಿ ಶೈಕ್ಷಣಿಕ ಆಂದೋಲನದ ಹೆಜ್ಜೆಯನ್ನು ಉತ್ತರ ಭಾರತದ ರಾಜ್ಯಗಳಿಗೂ ವಿಸ್ತರಿಸಿಕೊಂಡಿದೆ.
ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ರಾಜಾಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿಯಾನ ನಡೆಸುವಂತೆ ಅಲ್ಲಿನ ಶಿಕ್ಷಣಾಸಕ್ತರ ಆಹ್ವಾನದ ಮೇರೆಗೆ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರೊಂದಿಗೆ ಶಿಕ್ಷಣಾಸಕ್ತರಾದ ಪೂನಂಚಂದ್ ರಾಜಪುರೋಹಿತ್ ಹಾಗೂ ರಾಮರಾಮ್ ದೇವಸಿ ನೇತೃತ್ವದ ತಂಡ ರಾಜಸ್ಥಾನಕ್ಕೆ ಭೇಟಿ ನೀಡಿತ್ತು. ಮೊದಲ ದಿನ ಅಲ್ಲಿನ ಶಿಕ್ಷಣಾಸಕ್ತರ ತಂಡದೊಂದಿಗೆ ಜಾಲೋರ್ ಶಾಸಕಿ, ಮಾಜಿ ಶಾಸಕ, ಮಂಡಲ ಪ್ರಧಾನ್, ಸರಪಂಚ್‌ಗಳ ಜೊತೆ ಶಿಕ್ಷಣದ ಮಹತ್ವ, ಶಿಕ್ಷಣ ವ್ಯವಸ್ಥೆಯಲ್ಲಿ ಕೈಗೊಳ್ಳಬಹುದಾದ ಸುಧಾರಣ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಎರಡನೇ ದಿನ ಜಾಲೋರ್ ಜಿಲ್ಲೆಯ ರೇವತಾಡ್ ಗ್ರಾಮದ ಶ್ರೀಮತಿ ನಯಿಬಾಯಿ ಆದರ್ಶ ರಾಜಕೀಯ ಉಚ್ಛ ಮಾಧ್ಯಮಿಕ ವಿದ್ಯಾಲಯ, ರಾಜಕೀಯ ಉಚ್ಛ ಪ್ರಾಥಮಿಕ ವಿದ್ಯಾಲಯ ಖೇಡಾ, ಸಾಯಿಲ ಗ್ರಾಮದ ರಾಜಕೀಯ ಉಚ್ಛ ಪ್ರಾಥಮಿಕ ವಿದ್ಯಾಲಯ ಕತ್ರೋಸನ್ ಮತ್ತಿತರ 12 ಸರಕಾರಿ ವಿದ್ಯಾಲಯಗಳಿಗೆ ತಂಡ ಭೇಟಿ ನೀಡಿ ಅಧ್ಯಯನ ನಡೆಸಿತು. ಮೂರನೆಯ ದಿನ ಶಿಕ್ಷಣದ ಬಗ್ಗೆ ಜನಜಾಗೃತಿ ಮೂಡಿಸುವ ಬಗ್ಗೆ ಸಾಯಿಲ ಗ್ರಾಮ ಪಂಚಾಯತ್ ವಠಾರದಲ್ಲಿ ಬೃಹತ್ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಧಾನ ಭಾಷಣ ಮಾಡಿದರು. ಜಾಲೋರ್ ಶಾಸಕಿ ಅಮೃತಾ ಮೇಘವಾಲ, ಮಂಡಲ ಪ್ರಧಾನ್ ಜಬಾರ್‌ಸಿಂಗ್ ರಾಜ್‌ಪುರೋಹಿತ್, ಸಾಯಲ್ ಗ್ರಾಮದ ಸರಪಂಚ್ ಸುರೇಶ್ ರಾಜಪುರೋಹಿತ್ ಮತ್ತಿತರ ಪ್ರಮುಖರು ಭಾಗವಹಿಸಿ ದುರ್ಗಾ ಫ್ರೆಂಡ್ಸ್‌ನ ಕಾರ್ಯ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಮಾನ ಶಿಕ್ಷಣ ಜಾರಿ ಹಾಗೂ ಸರಕಾರಿ ಶಾಲೆಯಲ್ಲಿನ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಕ್ಲಬ್‌ನ ಮನವಿಯನ್ನು ಶಾಸಕಿಯ ಮೂಲಕ ರಾಜಸ್ಥಾನ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ಸಾಯಿಲ ಗ್ರಾಮದಲ್ಲಿ ನಡೆದ ಶಿಕ್ಷಣ ಜಾಗೃತಿ ಕಾರ್ಯಕ್ರಮದ ಪ್ರೇರಣೆ ಪಡೆದ ವ್ಯಕ್ತಿಯೊಬ್ಬರು ಜಾಲೋರ್ ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸುವಂತೆ ಕ್ಲಬ್ ಸದಸ್ಯರನ್ನು ಆಗ್ರಹಿಸಿದ್ದು ಅದರಂತೆ ಸಂಜೆಯ ವೇಳೆಗೆ ದೇವಸಿ ವಿದ್ಯಾರ್ಥಿ ನಿಲಯದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಸುಮಾರು ೨೫೦ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶೈಕ್ಷಣಿಕವಾಗಿ ಹಿಂದುಳಿದಿರುವ ಜಾಲೋರ್‌ನಲ್ಲಿ ಇಂತಹ ಕಾರ್ಯಕ್ರಮದ ಅಗತ್ಯತೆ ಇದ್ದು ಈ ಜಾಗೃತಿ ಇಲ್ಲಿ ಶೈಕ್ಷಣಿಕ ಸುಧಾರಣೆಗೆ ಮುನ್ನುಡಿ ಬರೆಯಲಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ರಾಜಸ್ಥಾನದ ಜಿಲ್ಲೆಗಳ ಪೈಕಿ ಜಾಲೋರ್ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಕೆಲ ಶಾಲೆಗಳಲ್ಲಿ ಮುನ್ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿದ್ದರೂ ಮೂರು ಮಂದಿ ಶಿಕ್ಷಕರೇ ಶಾಲೆಯ ಎಲ್ಲಾ ಕಾರ್ಯಗಳನ್ನು ನಿಭಾಯಿಸ ಬೇಕಾಗಿದೆ. ಸಾಕಷ್ಟು ನೆರವು ನೀಡುವ ಶಿಕ್ಷಣಾಭಿಮಾನಿಗಳು ಇದ್ದರೂ ಮಾರ್ಗದರ್ಶನದ ಕೊರತೆಯಿಂದ ಸರಕಾರಿ ಶಾಲೆಗಳು ಪ್ರಗತಿ ಕಾಣದೆ ಮೂಲಸ್ಥಿತಿಯಲ್ಲಿಯೇ ಉಳಿಯುವಂತಾಗಿದೆ. ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಭೇಟಿಯ ಬಳಿಕ ಹೊಸ ಆಶಾವಾದ ಮೂಡಿದ್ದು ಶಾಲಾ ದತ್ತು ಯೋಜನೆ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಮಾಹಿತಿಯನ್ನು ಸ್ಥಳೀಯರು ಪಡಕೊಂಡರು.