ಕವರ್ ಸ್ಟೋರಿ

ಕರಾವಳಿಯಲ್ಲೂ ಬರಗಾಲ

ಉಡುಪಿ ಜಿಲ್ಲೆಯಲ್ಲೂ ಇದೇ ಮೊದಲಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕೇಳಿಲ್ಲವಂತೆ. ಬರಪೀಡಿತ ಎಂಬ ಘೋಷಣೆ ಮಳೆ ಪ್ರಮಾಣ ಆಧರಿಸಿ ಮಾಡಲಾಗಿದೆ. ಮೇಲ್ನೋಟಕ್ಕೆ ಎಲ್ಲೂ ಬರದಿಂದ ಜನರು ಬಳಲಿದಂತೆ ಕಾಣದಿದ್ದರೂ ಮಳೆ ಪ್ರಮಾಣದ ಲೆಕ್ಕಾಚಾರಗಳು ಬೇರೆಯೇ ಹೇಳುತ್ತವೆ.

  • ಬಂಟ್ವಾಳನ್ಯೂಸ್ ಕವರ್ ಸ್ಟೋರಿ

ನೇತ್ರಾವತಿ ತಿರುಗಿಸಬೇಡಿ, ಎತ್ತಿನಹೊಳೆ ಯೋಜನೆ ಕೈಬಿಡಿ ಎಂದು ಗಂಟಲು ಹರಿದುಹೋಗುವಂತೆ ಹೇಳಿದ್ದೇ ಬಂತು. ಇದುವರೆಗೆ ರಾಜ್ಯಮಟ್ಟದಲ್ಲಿ ಇದ್ಯಾವುದೂ ದೊಡ್ಡ ಸಂಗತಿಯೇ ಆಗಿಲ್ಲ. ಈ ವಿಚಾರದಲ್ಲಿ ವಿಧಾನಸೌಧ ಚಲೋ ಎಂದು ಉಭಯ ರಾಜಕೀಯ ಪಕ್ಷಗಳ ಜವಾಬ್ದಾರಿಯುತ ಸಚಿವ, ಸಂಸದರಾದಿಯಾಗಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಮುಂದೆ ಧರಣಿ ಕುಳಿತಿದ್ದಾರೆಯೇ?

ಇದೀಗ ನ್ಯಾಯಾಲಯದ ಬಾಗಿಲಿನಲ್ಲಿ ಈ ಸಂಗತಿ ಇದ್ದರೆ, ಮತ್ತೊಂದು ವಿಚಾರ ನಮ್ಮ ಕಣ್ಣೆದುರಿದೆ. ಅದು ಬರಗಾಲ.

ನಮಗೇನಾಗಿದೆ ಧಾಡಿ, ಎಲ್ಲವೂ ಚೆನ್ನಾಗಿದೆಯಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ಹಾಗಲ್ಲ. ನಮ್ಮ ಕಾಲಬುಡದಲ್ಲೇ ಅಂತರ್ಜಲ ಕುಸಿದಿದೆ. ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕಡಲ ತೀರದ ಕರಾವಳಿಯ ಎರಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಐದು ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲು ಹಲವು ಲೆಕ್ಕಾಚಾರಗಳನ್ನು ಇಲಾಖೆ ಮಂಡಿಸಿದದೆ.

ಜನವರಿ 10ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯ ನಡಾವಳಿಯನ್ವಯ ಜನವರಿ 24ರಂದು ಸರಕಾರ ಹೊರಡಿಸಿದ ಆದೇಶದ ಪ್ರಕಾರ, ರಾಜ್ಯದ 30 ಜಿಲ್ಲೆಗಳ 160 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅವುಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕು ಸೇರಿವೆ. ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಈ ಆಯ್ಕೆ ನಡೆದಿದೆ. ಸತತ 6 ವಾರಗಳ ಮಳೆ ಕೊರತೆ, ಶುಷ್ಕ ವಾತಾವರಣ, ತೇವಾಂಶ ಕೊರತೆ, ಬೆಳೆಹಾನಿ, ಅಂತರ್ಜಲ ಕುಸಿತ ಈ ಮಾನದಂಡಗಳಲ್ಲಿ ಪ್ರಮುಖ. ಸೆ.1ರಿಂದ ಡಿ.31ವರೆಗೆ ಕರಾವಳಿಯಲ್ಲಿ ಶೇ.20ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಅಂತರ್ಜಲ ತೀವ್ರ ಕುಸಿಯುತ್ತದೆ ಹಾಗೂ ಮಣ್ಣಿನ ಸತ್ವವೂ ಕಡಿಮೆಯಾಗುತ್ತದೆ.

ಅದು ಹೀಗಿದೆ ನೋಡಿ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೆ.1ರಿಂದ ಡಿ.31ವರೆಗೆ ಮಳೆ ಪ್ರಮಾಣ.

ತಾಲೂಕು                          ಮಳೆ ಸರಾಸರಿ                ಮಳೆಯಾಗಿದ್ದು              ಮಳೆ ಕೊರತೆ

ಮಂಗಳೂರು                       301 ಮಿ.ಮೀ.                  75 ಮಿ.ಮೀ.                 ಶೇ.75

ಬಂಟ್ವಾಳ                          337 ಮಿ.ಮೀ.                  91 ಮಿ.ಮೀ.                 ಶೇ.73

ಉಡುಪಿ                            270 ಮಿ.ಮೀ.                 75 ಮಿ.ಮೀ.                 ಶೇ.72

ಕಾರ್ಕಳ                            403 ಮಿ.ಮೀ.                 139 ಮಿ.ಮೀ.               ಶೇ.65

ಕುಂದಾಪುರ                        240 ಮಿ.ಮೀ.                101 ಮಿ.ಮೀ.                ಶೇ.58

ಈ ಲೆಕ್ಕಾಚಾರಗಳು ಕರಾವಳಿಯಲ್ಲೂ ಬರ ಇದೆ ಎಂದು ಹೇಳುತ್ತವೆ.

ಬರ ಪರಿಹಾರ ಕುರಿತು ಕೆಲ ಕೋಟಿ ಅನುದಾನ ಬಿಡುಗಡೆಯಾಗಬಹುದು. ಅದು ಎಲ್ಲೆಲ್ಲಿ ವಿನಿಯೋಗವಾಗುತ್ತೋ ಗೊತ್ತಿಲ್ಲ. ಆದರೆ ನಾವಂತೂ ಜಲಸಾಕ್ಷರರಾಗಲು ಇದು ಸಕಾಲ. ಜಲಮರುಪೂರಣ, ನೀರಿಂಗಿಸುವ ಪ್ರಕ್ರಿಯೆಯನ್ನು ಇನ್ನಾದರೂ ನಡೆಸದಿದ್ದರೆ, ಮುಂದಿನ ವರ್ಷವೂ ಉಭಯ ಜಿಲ್ಲೆಗಳ ಎಲ್ಲ ತಾಲೂಕುಗಳೂ ಬರಪೀಡಿತ ಎಂಬ ಘೋಷಣೆಗೆ ಈಡಾಗಬೇಕಾಗುತ್ತದೆ. ಈಗಾಗಲೇ ಅಂತರ್ಜಲ ಪಾತಾಳಕ್ಕೆ ತಲುಪುತ್ತಿರುವುದು ಇದಕ್ಕೆ ಸ್ಪಷ್ಟ ಸೂಚನೆ.

ನಮ್ಮಲ್ಲಿ ಎಲ್ಲಿದೆ ಬರ ಎಂದು ವ್ಯಂಗ್ಯವಾಡದೆ ಎಚ್ಚರಗೊಳ್ಳಿ ಕರಾವಳಿ ಜನರೇ, ಇಲ್ಲದಿದ್ದರೆ ಬರದ ಮತ್ತಷ್ಟು ಚಿತ್ರಗಳು ನಮ್ಮಲ್ಲೂ ಬರಬಹುದು.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.