ಆರಾಧನೆ

ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶ

  • ಪ್ರೊ. ರಾಜಮಣಿ ರಾಮಕುಂಜ

ಬಂಟ್ವಾಳ ತಾಲೂಕಿನ ಮಂಚಿ, ಇರಾ, ಬೋಳಂತೂರು- ಈ ಮೂರು ಗ್ರಾಮಗಳಲ್ಲಿ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ನೆಲೆಯಾಗಿದ್ದು, ನಂಬಿದವರಿಗೆ ಇಂಬು ನೀಡಿ ಪಾಲಿಸುವ ಕಾರಣೀಕ ದೈವಗಳಾಗಿರುತ್ತವೆ.

ಮಂಚಿ ಗ್ರಾಮದಲ್ಲಿರುವ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಮಾಡವು ಬಂಗ ಅರಸರ ಕಾಲದಲ್ಲಿ ಅವರ ಸೇನೆಯ ದಂಡ ನಾಯ್ಕರಾಗಿದ್ದ ಮಂಚಿ ಗುತ್ತು ಕುಂಞಾಳರಿಂದ ಸ್ಥಾಪಿಸಲ್ಪಟ್ಟ ಕ್ಷೇತ್ರವಾಗಿದೆ.
ಕುಂಡಲಿನೀ ಮಹರ್ಷಿಯವರಿಂದ ಕುಂಡಲಿನಿ ಬೆಟ್ಟದ ಮೇಲೆ ಸ್ಥಾಪಿಸಲ್ಪಟ್ಟ ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಾಲಯ ಮತ್ತು ಬಾವ ಬೀಡಿನಿಂದ ಕಿರುವಾಳು ಹೊರಟು ಮೂರು ಗ್ರಾಮದಲ್ಲಿ ನೇಮ-ಬಲಿ-ಭೋಗ ಪಡೆಯುತ್ತಿರುವ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಕ್ಷೇತ್ರಗಳು ಇರಾ, ಮಂಚಿ, ಬೋಳಂತೂರು- ಈ ಮೂರು ಗ್ರಾಮಸ್ಥರ ಆರಾಧ್ಯ ಕೇಂದ್ರಗಳಾಗಿವೆ.
ಮಂಚಿ ಮಾಡದ ಬಗ್ಗೆ ತಿಳಿಯುವುದಾದರೆ, ಕೇಪಾಡಿ ಬೀಡಿನಿಂದ ಅಂಬಡಾಡಿ ಬೀಡಿಗೆ, ಅಂಬಡಾಡಿ ಬೀಡಿನಿಂದ ಕುದಿ ಗ್ರಾಮಕ್ಕೆ ಬಂದು, ನಂತರ ಕುರಿಯಾಡಿ ಬೀಡಿನ ಕುರಿಯ ಕಡಂಬ ಎನ್ನುವವರ ಹಿಂದೆ ಬಂದ ಶ್ರೀ ಅರಸು ದೈವ ಬಾರಿಮಲೆ ಉಕ್ಕುಡದಲ್ಲಿ ಮಾಡ ಕಟ್ಟಿಸಿ, ಅಲ್ಲಿಂದ ಕುರಿಯಾಡಿ ಮಂಜಪಿಲ ಬಾಕಿಮಾರು ಗದ್ದೆ ಬದಿಯ ರೆಂಜ ಮರದ ಹೂವಿನ ಪರಿಮಳಕ್ಕೆ ಮನಸೋತು, ಕಾಲಿಟ್ಟ ಜಾಗದಲ್ಲಿ ತುಳಸಿ ಮಂಟಮೆ ಕಟ್ಟಿಸಿ, ’ಜಾಗದ ಹೆಸರು ತನಗೆ, ತನ್ನ ಹೆಸರು ಜಾಗಕ್ಕೆ’ ಎಂದು ಕಟ್ಟು ಮಾಡಿಸಿ ಶ್ರೀ ಅರಸು ಕುರಿಯಾಡಿದಾರ್ ಎನ್ನುವ ಹೆಸರು ಬಂತು. ಅದೇ ರೀತಿ ಪಯ್ಯೊಳಿಗೆಯಿಂದ ಬಂದ ಇಬ್ಬರು ಉಳ್ಳಾಕುಲು ದೈವ ಕೋಟೆದಾರ್ ದೇಸಿಂಗರು(ಅಣ್ಣ-ತಮ್ಮ ದೈವಗಳು)- ಹೀಗೆ ಮೂವರು ದೈವಂಗಳು. ಈ ದೈವಗಳು ತಮ್ಮ ಕಾರಣೀಕದ ಮೂಲಕ ಮೂರು ಗ್ರಾಮಗಳಲ್ಲಿ ಅನೇಕ ಕಡೆ ಚಾವಡಿ, ಮಾಡ ಹೊಂದಿದ್ದು, ಇರಾ ಗ್ರಾಮದ ಆರು ಸ್ಥಳಗಳಲ್ಲಿ ನೇಮೋತ್ಸವ ನಡೆಯುತ್ತಿದೆ. ಬಾರಿ ಮಲೆಯಲ್ಲಿ 12 ವರ್ಷಕ್ಕೊಮ್ಮೆ ಪೈಚಿಲ್ ನೇಮ ಮತ್ತು ಮಂಚಿ-ಬೋಳಂತೂರು ಗ್ರಾಮಗಳಲ್ಲಿ ಒಂದೊಂದು ಕಡೆ ನೇಮೋತ್ಸವ ನಡೆಯುತ್ತಿದೆ.
ಬಂಗಾಡಿಯ ಬಂಗರಸರು ತೆಂಕಣ ರಾಜ್ಯಕ್ಕೆ ದಿಗ್ವಿಜಯಕ್ಕೆ ಹೊರಟವರು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ಮಂಚಿಕಟ್ಟೆಯಲ್ಲಿ ಕೂತು ಆಯಾಸ ಪರಿಹರಿಸುತ್ತಿರುವಾಗ ಅವರ ದಂಡಿಗೆಯ ಮೇಲೆ ಶಾಸ್ತ್ರ ಬಿಳಿ ಕೋಳಿಯೊಂದು ಹಾರಿ ಬಂದು ಕೂತು ಮೂರು ಸಲ ಕೂಗಿ ಹಾರಿ ಹೋಯಿತು. ಈ ವಿಚಾರವಾಗಿ ಜ್ಯೋತಿಷಿ ಮುಖಾಂತರ ವಿಮರ್ಶಿಸಿದಾಗ, ’ದೇವರಿಗೆ ಸಮನಾದ ಮಹಾಶಕ್ತಿಗಳಾದ ಮೂರು ದೈವಗಳು ನಿಮ್ಮ ಸಹಾಯಕ್ಕೆ ನಿಂತಿವೆ. ಪ್ರತಿಯಾಗಿ ನಿಮ್ಮಿಂದ ಸೇವೆ ಬಯಸುತ್ತಿದೆ’ ಎಂದು ತಿಳಿದುಬಂತು. ಬಂಗರಸರು, ’ಯುದ್ಧದಲ್ಲಿ ಗೆದ್ದು ಬಂದರೆ ಮಾಡ ಕಟ್ಟಿಸಿ ಬಲಿ-ಭೋಗದ ಸೇವೆ ನೀಡುತ್ತೇವೆ’ ಎಂದು ಪ್ರಾರ್ಥಿಸಿ ಮುಂದಕ್ಕೆ ಹೋಗುತ್ತಾರೆ. ಯುದ್ಧದಲ್ಲಿ ವಿಜಯಿಯಾಗುತ್ತಾರೆ. ಆದರೆ ಯುದ್ಧದಲ್ಲಿ ಸೇನಾನಾಯಕ ಕುಂಞಾಳರು ಬಲ ಕೈಯನ್ನು ಕಳೆದುಕೊಳ್ಳುತ್ತಾರೆ. ಯುದ್ಧದಿಂದ ಹಿಂತಿರುಗಿ ಬರುವಾಗ ಮಂಚಿಯಲ್ಲಿ ಕುಂಞಾಳರಿಗೆ ಬಂಗಾರದ ಕೈ ಜೋಡಿಸಿ, ಅವರ ನೇತೃತ್ವದಲ್ಲೇ ಕಪಿಲೆ ದನವೂ-ಹುಲಿಯೂ ಆಟ ಆಡುತ್ತಿದ್ದ ಸ್ಥಳದಲ್ಲಿ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಮಾಡ ಕಟ್ಟಿಸಿ, ನಿರ್ವಹಣೆಗೆ ಅವರನ್ನೇ ನೇಮಿಸಿ ಉಂಬಳಿ, ಉತ್ತಾರಗಳನ್ನು ಬಂಗರಸರು ನೀಡುತ್ತಾರೆ. ಕುಂಞಾಳರಿಗೆ ದೈವದ ಆರಂಭದ ಬೂಳ್ಯ ಪ್ರಸಾದ ಸಂದಾಯವಾಗುತ್ತಿತ್ತು. ಇದು ಬಂಗಾಡಿಯ ಬಂಗರಸರಿಗೆ ಸಲ್ಲುವ ಗೌರವವಾಗಿತ್ತು.

ಹೀಗೆ ಇತಿಹಾಸ ಪ್ರಸಿದ್ಧವಾದ ಈ ಮಾಡದಲ್ಲಿ ದಿನಾಂಕ 16 ರಿಂದ 21 ರವರೆಗೆ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಸಂಭ್ರಮ ನಡೆಯಲಿಕ್ಕಿದೆ.
ದಿನಾಂಕ 16ರಂದು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ; ದಿನಾಂಕ 17ರಂದು 108 ಕಾಯಿ ಮಹಾಗಣಪತಿ ಹೋಮ, ಸಾಯಂಕಾಲ ದುರ್ಗಾ ಪೂಜೆ ಅಘೋರ ಹೋಮ, ಬಿಳಿ ಶಿಲೆ ಪ್ರತಿಷ್ಠೆ; 18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು; ದಿನಾಂಕ 19 ರಂದು ಪೂರ್ವಾಹ್ನ ಗಂಟೆ ೮ಕ್ಕೆ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಐವರು ಬಂಟರ ಸ್ಥಾನದಲ್ಲಿ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಗಂಟೆ 9ಕ್ಕೆ ಚಂಡಿಕಾ ಯಾಗ ನಡೆದು ದಿನಾಂಕ 20ರಂದು ದೈವಗಳ ನೇಮ ಹಾಗೂ 21ರಂದು ಕಿರುವಾಳು ಇಳಿಯುವದರೊಂದಿಗೆ ಉತ್ಸವ ಸಮಾಪನಗೊಳ್ಳುತ್ತದೆ. ಉತ್ಸವದ ಆರೂ ದಿನಗಳ ಅವಧಿಯಲ್ಲಿ ಹಲವಾರು ಸಾಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ