ಭಾರತದಲ್ಲಿ ಸ್ವೋದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಮೂಡುಬಿದರೆ ಬನ್ನಡ್ಕದ ಎಸ್.ಕೆ.ಎಫ್. ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥ ರಾಮಕೃಷ್ಣ ಆಚಾರ್ ಹೇಳಿದರು.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭ ಶ್ರೀರಾಮ ಉದ್ಯೋಗ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಶ್ರೀರಾಮ ಮಿಲಿಟರಿ ಮಾರ್ಗದರ್ಶನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಎಸ್ಸೆಲ್ ಬಿಲ್ಡರ್ಸ್ ಮಾಲೀಕ ರಘುನಾಥ ಸೋಮಯಾಜಿ, ತಂದೆ, ತಾಯಿ, ಗುರು, ಅತಿಥಿ, ರಾಷ್ಟ್ರವನ್ನು ನಾವು ನೆನಪಿಸಿಕೊಳ್ಳಬೇಕು. ನಾವು ಕಷ್ಟಪಟ್ಟರೆ ಯಾವುದನ್ನು ಸಾಸಬಹುದು. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಮಾಜದ ಮಧ್ಯೆ ಕೆಲಸ ಮಾಡಬೇಕಾದರೆ ಯಾವ ರೀತಿ ತಯಾರಿ ಬೇಕು ಎಂದು ತಿಳಿದಿರಬೇಕು. ಇಂದು ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೀವನ ನಿರ್ವಹಣೆಗೆ ಬೇಕಾದ ಶಿಕ್ಷಣವನ್ನು ಒದಗಿಸಲಾಗುತ್ತದೆ ಎಂದರು.
ಸಂಸ್ಥೆ ಅಧ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ವಸಂತ ಮಾಧವ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಶಿಧರ ಮಾರ್ಲ ಉಪಸ್ಥಿತರಿದ್ದರು. ಇದೇ ಸಂದರ್ಭ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಪ್ರದೀಪ್ತ ಸಾಂಸ್ಕೃತಿಕ ಸಂಘ ಹಾಗೂ ಪ್ರತಾಪ ಕ್ರೀಡಾ ಸಂಘ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಬಹುಮಾನ ಪಟ್ಟಿಯನ್ನು ಉಪನ್ಯಾಸಕಿ ವಿನುತಲಕ್ಷ್ಮೀ ಹಾಗೂ ದೈಹಿಕ ಶಿಕ್ಷಕ ನಿರ್ದೇಶಕರಾದ ಅರವಿಂದ್ ಪ್ರಸಾದ್ ವಾಚಿಸಿದರು. ಶ್ರೀರಾಮ ಉದ್ಯೋಗ ಮಾಹಿತಿ ಹಾಗೂ ಮಿಲಿಟರಿ ಮಾರ್ಗದರ್ಶನ ಘಟಕದ ಸಂಯೋಜಕ ಶ್ರೀಪ್ರಕಾಶ್ ಕುಕ್ಕಿಲ ಉದ್ಯೋಗ ಮಾಹಿತಿ ಘಟಕದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿದರು. ಉಪನ್ಯಾಸಕ ಯತಿರಾಜ್ ಕಾರ್ಯಕ್ರಮ ನಿರ್ವಹಿಸಿದರು.