ವಿಟ್ಲದ ಸಾಮಾಜಿಕ ಮುಂದಾಳು, ರಾಜಕೀಯ ಮುಖಂಡ ಕೊಲ್ಯ ಸೀತಾರಾಮ ಶೆಟ್ಟಿ (63) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.13ರಂದು ನಿಧನ ಹೊಂದಿದರು.
ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಅವರು ಪಕ್ಷದ ಬೆಂಬಲದೊಂದಿಗೆ ವಿಟ್ಲ ಗ್ರಾ.ಪಂ.ಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಅವರು, ಬಂಟ್ವಾಳ ಎಪಿಎಂಸಿ, ವಿಟ್ಲ ಲಯನ್ಸ್, ಬಂಟರ ಸಂಘ, ಪಂಚಲಿಂಗೇಶ್ವರ ದೇವಸ್ಥನ ಜೀರ್ಣೋದ್ಧಾರ ಸಮಿತಿ, ಸರಕಾರಿ ಐಟಿಐನ ಐಎಂಸಿ ಸಮಿತಿ ಹೀಗೆ ಹಲವು ಸಂಘಟನೆಗಳಲ್ಲಿ ದುಡಿದಿದ್ದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ವಿಟ್ಲ ಪ.ಪಂ.ಮಾಜಿ ಅಧ್ಯಕ್ಷ ಅರುಣ ಎಂ.ವಿಟ್ಲ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಮತ್ತು ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೀತಾರಾಮ ಶೆಟ್ಟಿಯವರ ನಿಧನದ ಶೋಕಾರ್ಥವಾಗಿ ವಿಟ್ಲದ ವರ್ತಕರು ಒಂದು ಗಂಟೆ ಕಾಲ ಅಂಗಡಿ ಮುಚ್ಚಿ ವ್ಯಾಪಾರ ಬಂದ್ ಮಾಡಿ ಸಂತಾಪ ಸೂಚಿಸಿದ್ದರು.