ಪಾಕಶಾಲೆಯೇ ವೈದ್ಯಶಾಲೆ

ವೈದ್ಯಕ್ಷೇತ್ರದ ಸಂಜೀವಿನಿ ಅರಸಿನ

  • www.bantwalnews.com
  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಅರಸಿನವು  ನಾವು ತಯಾರಿಸಿದ ಆಹಾರಕ್ಕೆ ಉತ್ತಮ ಬಣ್ಣ ಹಾಗು ರುಚಿಯನ್ನು  ನೀಡುವುದರೊಂದಿಗೆ ಆಹಾರ ಪದಾರ್ಥದಲ್ಲಿನ ನಂಜು ನಿವಾರಕವೂ ಆಗಿದೆ. ಇದನ್ನು  ವದ್ಯಕೀಯ ಕ್ಷೇತ್ರದ  ಸಂಜೀವಿನಿ ಎಂದರೂ ತಪ್ಪಾಗಲಾರದು. ಅರಸಿನವು ವಿಶೇಷವಾಗಿ ವಿಷನಿವಾರಕ, ಕ್ರಿಮಿನಿವಾರಕ, ರಕ್ತಶೋಧಕ ,ಜೀರ್ಣಾಂಗ ಬಲದಾಯಕವಾಗಿದ್ದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ .

  1. ಪ್ರತಿದಿನ ಸೀನು ಮತ್ತು ಶೀತದ ಭಾದೆ ಇದ್ದಲ್ಲಿ ದಿನಕ್ಕೆ ಕಾಲು ಚಮಚದಷ್ಟು ಅರಸಿನ ಹುಡಿಯನ್ನು ನೀರಿಗೆ ಅಥವಾ ಬಿಸಿ ಹಾಲಿಗೆ ಹಾಕಿ ಕುಡಿಯಬೇಕು.
  2. ಶೀತದಿಂದಾಗಿ  ಮೂಗುಕಟ್ಟುವುದು ಮತ್ತು ತಲೆನೋವು ಇದ್ದರೆ ತೆಳ್ಳಗಿನ ಬಟ್ಟೆಗೆ ಅರಸಿನಪುಡಿ ಮತ್ತು ತುಪ್ಪದಿಂದ ಮಾಡಿದ ಪೇಸ್ಟನ್ನು ಹಚ್ಚಿ ಬತ್ತಿಯಂತೆ ಸುತ್ತಬೇಕು. ನಂತರ ಬತ್ತಿಯ ಒಂದು ಬದಿಗೆ ಬೆಂಕಿ ಹಚ್ಚಿ ಅದರಿಂದ ಬರುವ ಧೂಮವನ್ನು ಮೂಗು ಮತ್ತು ಬಾಯಿಯಿಂದ ಎಳೆದುಕೊಳ್ಳಬೇಕು.
  3. ಅರಸಿನ ಪುಡಿಯ ಧೂಮವನ್ನು ಬಾಯಿಯಲ್ಲಿ ಎಳೆದುಕೊಳ್ಳುವುದರಿಂದ ಬಿಕ್ಕಳಿಕೆ ಮತ್ತು ದಮ್ಮುಕಟ್ಟುವುದು   ಶಮನವಾಗುತ್ತದೆ.
  4. ಶೀತ ಮತ್ತು ಕಫದಿಂದ ಗಂಟಲು ಕಿರಿಕಿರಿಯಾಗುತ್ತಿದ್ದರೆ  ಬಿಸಿನೀರಿಗೆ ಸ್ವಲ್ಪ ಅರಸಿನಹುಡಿ ಹಾಕಿ ಬಾಯಿ ಮತ್ತು ಗಂಟಲು  ಮುಕ್ಕಳಿಸಬೇಕು.
  5. ಶರೀರದಲ್ಲಿ ತುರಿಕೆ ಮತ್ತು ಚರ್ಮದಲ್ಲಿ ದಡಿಕೆಯ (urticaria) ತೊಂದರೆ ಇದ್ದರೆ ಅರಸಿನಪುದಡಿಯನ್ನು 2 ರಿಂದ 5 ಗ್ರಾಂ ನಷ್ಟು ನಿತ್ಯ ಸೇವಿಸಬೇಕು ಮತ್ತು ಅರಸಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಸ್ನಾನದ  ಮುಂಚೆ ಇಡೀ ದೇಹಕ್ಕೆ ಹಚ್ಚ ಬೇಕು.
  6. ಬಾಣಂತಿಯರು ಪ್ರತಿನಿತ್ಯ ಅರಸಿನ ಪುಡಿಯನ್ನು ಸೇವಿಸುವುದರಿಂದ ಮೊಲೆಹಾಲು ಮತ್ತು ಗರ್ಭಾಶಯ ಶುದ್ಧಿಯಾಗುತ್ತದೆ.
  7. ಹೊಟ್ಟೆಯಲ್ಲಿ ಹುಳದ ಬಾಧೆ ಇದ್ದವರು ನಿತ್ಯ ಇದನ್ನು ಉಪಯೋಗಿಸುವುದರಿಂದ ಹುಳವು ನಿವಾರಣೆಯಾಗಿ ಬಾಯಿಗೆ ಆಹಾರವು ರುಚಿಸುತ್ತದೆ ಮತ್ತು  ಜೀರ್ಣ ಕ್ರಿಯೆಯು ಸರಿಯಾಗಿ ಆಗುತ್ತದೆ.
  8. ಅರಸಿನ ಪುಡಿಯ ಹಳೆಯದಾದ ಕೆಮ್ಮು ಮತ್ತು ದಮ್ಮು ರೋಗಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಶ್ವಾಸಕೋಶಕ್ಕೆ ಉತ್ತಮ ಬಲವನ್ನು ನೀಡುತ್ತದೆ.
  9. ದೇಹದ ಯಾವುದೇ ಭಾಗಕ್ಕೆ ಏಟು ಬಿದ್ದು ನೋವಾದಾಗ ಅರಸಿನ ಹುಡಿಯನ್ನು ಲೇಪ ಹಾಕಿದಲ್ಲಿ ನೋವು ಶೀಘ್ರವಾಗಿ ಶಮನವಾಗುತ್ತದೆ.
  10. ಸ್ವಲ್ಪ ಸಾಸಿವೆ ಮತ್ತು ಅರಸಿನಪುದಿಯನ್ನು ಎಳ್ಳೆಣ್ಣೆಗೆ ಹಾಕಿ ಕುದಿಸಿ ನಂತರ ಸೋಸಬೇಕು. ಈ ಎಣ್ಣೆಯನ್ನು ಕಿವಿ ನೋವು ಅಥವಾ ಸಿಡಿತ ಇದ್ದಾಗ  2 ರಿಂದ 3 ಬಿಂದುವಿನಷ್ಟು ಕಿವಿಗೆ ಬಿಡಬೇಕು
  11. ಅರಸಿನ ಹುಡಿಯನ್ನು ಗೋಮೂತ್ರದಲ್ಲಿ ಕಲಸಿ ಹುಣ್ಣಿನ ಮೇಲೆ ಹಚ್ಚಿದರೆ  ಹುಣ್ಣಿನ ನಂಜು ಮಾಯವಾಗಿ ಬೇಗನೆ ಹುಣ್ಣು ವಾಸಿಯಾಗುತ್ತದೆ.
  12. ಗುದದ್ವಾರದ ಹೊರಗೆ ಕಾಣಿಸುವ ಮೂಲವ್ಯಾಧಿಯಲ್ಲಿ ಅರಸಿನ ಹುಡಿಯನ್ನು ಲೇಪಿಸಿದರೆ ಮೂಲವ್ಯಾಧಿಯ ಮೊಳೆಯು ವಾಸಿಯಾಗುತ್ತದೆ.
  13. ಚೇಳು, ಇರುವೆ, ಜೇನುನೊಣ, ಶತಪಾದಿ ಇತ್ಯಾದಿಗಳು ಕಚ್ಚಿದಾಗ ಅರಸಿನ ಹುಡಿಯನ್ನು ನೀರು ಅಥವಾ ಗೋಮೂತ್ರದಲ್ಲಿ ಕಲಸಿ ಕಚ್ಚಿದ ಗಾಯ ಮತ್ತು ಬಾವಿನ ಮೇಲೆ ಹಚ್ಚಬೇಕು.
  14. ಅರಸಿನ ಹುಡಿಯನ್ನು ಜೇನುತುಪ್ಪ ಅಥವಾ ಹಾಲಿನಲ್ಲಿ ಕಲಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮೊಡವೆಯ ಕಲೆ ನಿವಾರಣೆಯಾಗುತ್ತದೆ.
  15. ಅರಸಿನ ಮತ್ತು ಕೊತ್ತಂಬರಿಯನ್ನು ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿ ನಂತರ ಅದನ್ನು ಕೊತ್ತಂಬರಿ ನೀರಿನಲ್ಲಿ ಅದ್ದಿ  ಕಣ್ಣಿನ ಮೇಲೆ ಇಟ್ಟರೆ, ಕಣ್ಣಿನ ಉರಿ,ನವೆ,ನೋವು, ಕುರ ಇತ್ಯಾದಿಗಳು ಶಮನವಾಗುತ್ತವೆ ಮತ್ತು ಕಣ್ಣಿನ ಗೊಂಬೆಯು ಶುಭ್ರವಾಗುತ್ತದೆ.
  16. ಉಗುರುಸುತ್ತು (ಉಗುರಿನ ಬುಡದ ನಂಜು) ಆದಾಗ ಅರಸಿನ ಪುಡಿಯನ್ನು ಕಹಿಬೇವಿನ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಕಲಸಿ ಉಗುರಿನ ಸುತ್ತ ಹಚ್ಚಬೇಕು.
  17. ಮಧುಮೇಹಿಗಳಲ್ಲಿ ಇದು ಉತ್ತಮ ಪಥ್ಯಾಹಾರ ಹಾಗು ಮಧುಮೇಹವನ್ನು ಹತೋಟಿಯಲ್ಲಿ ಇಡಲು ಸಹ ಸಹಕಾರಿಯಾಗಿದೆ.
  18. ಇಳಿ ವಯಸ್ಸಿನ ಮರೆಗುಳಿರೋಗ ಹಾಗು ಖಿನ್ನತೆಯಲ್ಲಿ ಅರಸಿನ ಪುಡಿಯು ಲಾಭದಾಯಕವಾಗಿದ್ದು ನಿತ್ಯ ಅರ್ಧ ಚಮಚದಷ್ಟು ಹುಡಿಯನ್ನು  ಹಾಲಿನೊಂದಿಗೆ ಸೇವಿಸಬಹುದಾಗಿದೆ.
  19. ಅರಸಿನವು ಪಿತ್ತಾಶಯದ ನಂಜು ನಿವಾರಕ ಹಾಗು ಬಲದಾಯಕವಾಗಿದ್ದು ಮಧ್ಯಪಾನಿಗಳಿಗೆ ಇದು ಉತ್ತಮ ಪಥ್ಯಹಾರವಾಗಿದೆ.
  20. ತೋಟಕ್ಕೆ ಹೋಗುವಾಗ ಸೊಳ್ಳೆ ಕಚ್ಚದಂತೆ ಮಾಡಲು ಸ್ವಲ್ಪ ಅರಸಿನಪುದಿಯನ್ನು ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಿ ನಂತರ ಕೈ ಕಾಲುಗಳಿಗೆ ಹಚ್ಚ ಬೇಕು.
  21. ಹಲವಾರು ಅಧ್ಯಯನಗಳ ಪ್ರಕಾರ ಅರಸಿನವು ಕ್ಯಾನ್ಸರ್ ರೋಗ ಹರಡದಂತೆ ತದೆಕಟ್ಟಲು ಸಹಕರಿಸುತ್ತದೆ.ಆದುದರಿಂದ ಇದನೂ ರಕ್ತದ ಕ್ಯಾನ್ಸರ್ ,ಶ್ವಾಸಕೋಶ, ಪ್ರಾಸ್ಟೇಟ್ ,ಪಿತ್ತಕೋಶ ಇತ್ಯಾದಿಗಳ ಕ್ಯಾನ್ಸರ್ ರೋಗಗಳಲ್ಲಿ ಬಹುವಾಗಿ ಉಪಯೋಗಿಸಬಹುದಾಗಿದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts