ಯುವಶಕ್ತಿ ಸಮಾಜದ ಸದುದ್ದೇಶಕ್ಕಾಗಿ ಸಕಾಲಿಕವಾಗಿ ಸದ್ವಿನಿಯೋಗವಾದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುವುದು ಎಂದು ಉದ್ಯಮಿ ರವಿ ಪೂಜಾರಿ ಚಿಲಿಂಬಿ ತಿಳಿಸಿದರು.
ವಿಟ್ಲ ಶಿವಗಿರಿಯಲ್ಲಿ ಭಾನುವಾರ ವಿಟ್ಲ ಯೂತ್ ಬಿಲ್ಲವ ಅಸೋಸಿಯೇಶನ್ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಯೂತ್ ಬಿಲ್ಲವ ಎಸೋಸಿಯೇಶನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಯೋಧರುಗಳನ್ನು ಸನ್ಮಾನಿಸಿ ಮಾತನಾಡಿದರು.
ಗೌರವ ಸ್ವೀಕರಿಸಿದ ಬಿಲ್ಲವ ಸಮಾಜದ ಸಾಧಕ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇರಾಜೆ ಕೆ.ಪಿ.ಮದನ ಮಾಸ್ಟರ್ ಮಾತನಾಡಿ ನಾವು ಕೇವಲ ನಮಗಾಗಿ ಬದುಕುವುದನ್ನು ಬಿಟ್ಟು, ಈ ನಾಡು, ಮಣ್ಣಿಗಾಗಿ ಬದುಕಿದಾಗ ಆತ್ಮ ಸಂತೋಷದೊಂದಿಗೆ ಶಾಶ್ವತವಾಗಿ ಉಳಿಯುತ್ತೇವೆ. ಯುವಶಕ್ತಿಯನ್ನು ಸ್ವಾರ್ಥಕ್ಕಾಗಿ ಬಳಸದೇ ದೇಶಕ್ಕಾಗಿ ಬದುಕುವಂತೆ ಪ್ರೇರೇಪಿಸಬೇಕು ಎಂದರು.
ವಿಟ್ಲ ಯೂತ್ ಬಿಲ್ಲವ ಎಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಸುವರ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದ್ಯಮಿ ರಾಜೇಶ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಅನಿಲಕಟ್ಟೆ ಶಾಲಾ ಮುಖ್ಯ ಶಿಕ್ಷಕಿ ರಾಜೀವಿ ವೈ. ಬಂಗೇರ ಇನ್ನಿತರರು ಭಾಗವಹಿಸಿದ್ದರು. ವಿಟ್ಲ ಬ್ರಹ್ಮಶ್ರೀ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಸಂಜೀವ ಪೂಜಾರಿ, ಗೌರವಾಧ್ಯಕ್ಷೆ ಪುಷ್ಪಾ ಸುಂದರ ಪೂಜಾರಿ ಉಪಸ್ಥಿತರಿದ್ದರು.
ನಿವೃತ್ತ ಯೋಧರಾದ ರಾಜೀವ ಸುವರ್ಣ, ಬಾಬು ಪೂಜಾರಿ ಬಲ್ನಾಡು, ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಮಾಧವ ಪೂಜಾರಿ ಕೆಂಗುಡೇಲು, ಸಂಜೀವ ಗೌಡ ಪೋಳ್ಯ, ಚಿದಾನಂದ ನಾಡಾಜೆ ಅವರನ್ನು ಸನ್ಮಾನಿಸಲಾಯಿತು. ನೃತ್ಯ ವಿದುಷಿ ನಯನಾ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಕ್ರೀಡಾಪಟುಗಳಿಗೆ ಸನ್ಮಾನ, ನಾನಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಫೆ.೧೯ರಂದು ಗೆಜ್ಜೆಗಿರಿನಂದನ ಬಿತ್ತಿಲ್‌ನಲ್ಲಿ ನಡೆಯುವ ದೇಯಿ ಬೈದೆತಿ ಮೂಲಸ್ಥಾನ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ವಿಟ್ಲ ಬ್ರಹ್ಮಶ್ರೀ ವಿವಿದ್ಧೋದ್ದೇಶ ಸಹಕಾರಿ ಸಂಘದ ಕಾರ್ಯದರ್ಶಿ ಜಯಂತ್ ಪೂರ್ಲಪ್ಪಾಡಿ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಹರೀಶ್ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಾಜಿ ಅಧ್ಯಕ್ಷ ಸಂಜೀವ ಎಂ., ಜಗದೀಶ ಪಾಣೆಮಜಲು, ಜಯಪ್ರಕಾಶ್ ಪಾಣೆಮಜಲು ಸಹಕರಿಸಿದರು.