ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಫೆ.5, 6ರಂದು ನಡೆದ ತುಳುವೆರೆ ತುಲಿಪು ಮತ್ತು ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿ ಕಾರ್ಯಕರ್ತರ ಅಭಿನಂದನಾ ಸಭೆ ಒಡಿಯೂರಿನಲ್ಲಿ ನಡೆಯಿತು.
www.bantwalnews.com report
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀ ಗುರುದೇವಾನಂದ ಸ್ವಾಮೀಜಿ, ಕ್ಷಣಿಕವಾದ ಈ ಬದುಕಿನ ಪ್ರತಿಯೊಂದು ನಡೆಯಲ್ಲಿಯೂ ಪರೋಪಕಾರ, ನಿಸ್ವಾರ್ಥಯುಕ್ತ ಕಾರ್ಯ ಮಾಡಿದಾಗ ಮಾತ್ರ ಪರಮಾನಂದ ಪಡೆಯಲು ಸಾಧ್ಯವಿದೆ. ಉಸಿರಿರುವಾಗ ಮಾತ್ರ ಹಸಿರಾಗಿಸುವ, ಹೆಸರು ಉಳಿಯುವ ಸಾಧನೆ ಮಾಡಬಹುದು. ಭಕ್ತರು ತಮ್ಮ ಕರ್ತವ್ಯದಂತೆ ಒಡಿಯೂರ ರಥೋತ್ಸವದ ಸೇವೆಯಲ್ಲಿ ಸಹಭಾಗಿಗಳಾಗಿದ್ದಾರೆ. ಭಗವಂತನ ಸೇವೆಯೆಂಬ ಭಾವನೆಯಲ್ಲಿ ಪಾಲ್ಗೊಂಡಿದ್ದಾರೆ. ಶಿಸ್ತು, ಸಂಯಮವನ್ನು ಕಾಪಾಡಿಕೊಂಡು ಸ್ವಚ್ಛತೆಯ ಕಡೆಗೆ ಗಮನಹರಿಸಿರುವುದು ಈ ಬಾರಿಯ ವಿಶೇಷತೆಯೆನಿಸಿದೆ. ಯಾವುದೇ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಕುಂದುಕೊರತೆಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ಲೋಪಗಳು ಮುಂದಿನ ಬಾರಿ ಯಶಸ್ಸಿ ಪೂರಕವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರದ ಸನಿಹದಲ್ಲಿ ಅಧ್ಯಾತ್ಮ ಭವನ ನಿರ್ಮಾಣವಾಗಲಿದೆ. ಪುಷ್ಕರಿಣಿ ನಿರ್ಮಾಣ, ತುಳು ಸಂಘಟಕರ ಸಮಾವೇಶವನ್ನು ಸಂಘಟಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಶ್ರದ್ಧೆ ಮತ್ತು ಪರಿಶುದ್ಧ ಭಕ್ತಿಯ ರೂಪದಲ್ಲಿ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ ಸಂಪನ್ನಗೊಂಡಿದೆ. ಪ್ರತಿಯೊಂದು ವ್ಯವಸ್ಥೆಗಳಲ್ಲಿಯೂ ಅಚ್ಚುಕಟ್ಟುತನ ಇತ್ತು ಎಂದು ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ತಿಳಿಸಿದರು.
ಸಭೆಯಲ್ಲಿ ನಾನಾ ಸಮಿತಿಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ರಥೋತ್ಸವ ಸ್ವಾಗತ ಸಮಿತಿಯ ಸಂಚಾಲಕ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ವಿವಿಧ್ದೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಪುರುಷೋತ್ತಮ್, ಕ್ಷೇತ್ರದ ಕಾರ್ಯನಿರ್ವಾಹಕ ಉಗ್ಗಪ್ಪ ಶೆಟ್ಟಿ ಕೊಂಬಿಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಪುತ್ತೂರು ಶ್ರೀ ಗುರುದೇವ ಮಹಿಳಾ ವಿಕಾಸ ಸೇವಾ ಸಮಿತಿ ಅಧ್ಯಕ್ಷೆ ನಯನಾ ರೈ, ಪುತ್ತೂರು ಗುರುದೇವ ಸೇವಾ ಬಳಗದ ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಯೋಜನೆಯ ಸುರೇಶ್ ಶೆಟ್ಟಿ ಮುಗೆರೋಡಿ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಯಶೋಧರ ಸಾಲಿಯಾನ್ ವಂದಿಸಿದರು. ಮಂಗಳೂರು ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಮೇಲ್ವೀಚಾರಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.